ಶಿವಮೊಗ್ಗ : ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದಾಗಿ ಹೊತ್ತಿಕೊಂಡಿದ್ದ ಬೆಂಕಿಯಿಂದ ಕರುಳಕುಡಿಯನ್ನು ರಕ್ಷಿಸಿದ ಉದ್ಯಮಿಯೊಬ್ಬರು ಜೀವತೆತ್ತ ಹೃದಯ ವಿದ್ರಾವಕ ಘಟನೆ ಭಾನುವಾರ ಶಿವಮೊಗ್ಗದಲ್ಲಿ ನಡೆದಿದೆ.
ಪ್ರತಿಷ್ಠಿತ ಭೂಪಾಳಂ ಫ್ಯಾಮಿಲಿಯ ಶರತ್ (೩೯) ಮೃತ ದುರ್ದೈವಿಯಾಗಿದ್ದಾರೆ. ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ಎದುರು ಇರುವ ಬಂಗಲೆಯಲ್ಲಿ ಶನಿವಾರ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಮಾತ್ರದಲ್ಲಿ ದಟ್ಟ ಹೊಗೆ ಮನೆಯಲ್ಲಿ ಆವರಿಸಿದೆ. ಶರತ್ ಅವರು ತಮ್ಮ ಕೋಣೆಯಿಂದ ಮಗ ಸಂಚಿತ್‌ನನ್ನು ರಕ್ಷಣೆ ಮಾಡಿದ್ದಾರೆ. ಈ ಸಂದರ್ಭ ದೇಹ ಸೇರಿದ್ದ ಹೊಗೆಯಿಂದ ತೀವ್ರ ಉಸಿರಾಟದ ತೊಂದರೆಯಾಗಿದೆ. ತಕ್ಷಣ ಅವರನ್ನು ಪಕ್ಕದಲ್ಲಿಯೇ ಇರುವ ನಂಜಪ್ಪ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದ್ದರೂ ಅದು ಫಲಕಾರಿಯಾಗದೆ ಅವರು ಅಸುನೀಗಿದರು.
ಮನೆಯ ಕೊಠಡಿಯೊಂದು ಸಂಪೂರ್ಣ ಭಸ್ಮವಾಗಿದೆ. ಅವಘಡದಲ್ಲಿ ಮನೆಯಲ್ಲಿದ್ದ ಶಶಿಧರ್ ಸೇರಿದಂತೆ ನಾಲ್ವರು ಪಾರಾಗಿದ್ದಾರೆ. ಶರತ್ ಅವರು ಮಕ್ಕಳನ್ನು ರಕ್ಷಣೆ ಮಾಡಿ, ತಾವು ಬದುಕುಳಿಯಲಿಲ್ಲ. ಸ್ವಾತಂತ್ರ್ಯ ಸೇನಾನಿ ಭೂಪಾಳಂ ಚಂದ್ರಶೇಖರಯ್ಯ ಕುಟುಂಬದವರಾಗಿದ್ದ ಶರತ್ ಅವರು ಮಾಚೇನಹಳ್ಳಿಯಲ್ಲಿ ಕೈಗಾರಿಕೆ ನಡೆಸುತ್ತಿದ್ದರು.
ಸ್ಥಳಕ್ಕೆ ಅಗ್ನಿಶಾಮಕದಳದವರು ಧಾವಿಸಿ ಬೆಂಕಿ ಆರಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.