ತುಮರಿ,ಜ.೧೪: ನಾಡಿನ ಪ್ರಸಿದ್ಧ ಶಕ್ತಿಕೇಂದ್ರವಾದ ಶ್ರೀ ಕ್ಷೇತ್ರ ಸಿಗಂದೂರು ಚೌಡಮ್ಮದೇವಿ ದೇವಾಲಯದಲ್ಲಿ ಎರಡು ದಿನಗಳ ಸಂಕ್ರಾಂತಿ ಜಾತ್ರೆಯು ವಿಜೃಂಬಣೆಯಿಂದ ಆರಂಭವಾಯಿತು. ಶನಿವಾರ ದೇವಿಯ ಮೂಲಸ್ಥಳವಾದ ಸೀಗೆ ಕಣಿವೆಯಲ್ಲಿ ವಿವಿಧ ಪೂಜೆ, ಹೋಮಗಳನ್ನು ನೆರವೇರಿಸಲಾಯಿತು.
ಕಳೆದೆರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಜಾತ್ರೆಯ ಸಂಭ್ರಮಕ್ಕೆ ಸಾಕಷ್ಟು ಅಡ್ಡಿ ಹಿನ್ನೆಲೆಯಲ್ಲಿ ಈ ಭಾರಿ ಸಾಕಷ್ಟು ಅಚ್ಚುಕಟ್ಟಾಗಿ ವೈಭವಯುತವಾಗಿ ಮೊದಲ ದಿನದ ಉತ್ಸವ ನಡೆಯಿತು.
ಮುಂಜಾನೆ ಸುಮಾರು ೪ ಗಂಟೆಗೆ ಸಿಗಂದೂರಿನಲ್ಲಿ ಆಲಯ ಶುದ್ದಿಯೊಂದಿಗೆ ಪ್ರಾತಃಕಾಲ ಪೂಜೆ ನೆರವೇರಿಸಲಾಯಿತು. ಧರ್ಮದರ್ಶಿ ಡಾ. ಎಸ್ ರಾಮಪ್ಪ ನವರ ನೇತೃತ್ವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೇವಿಯ ಮುಡಿ ಗಂಧ ಸ್ವೀಕರಿಸಿದರು.
ಸೀಗೆ ಕಣಿವೆಯಲ್ಲಿ ಬೆಳಗಿದ ಜ್ಯೋತಿ
ಬೆಳಿಗ್ಗೆ ೮ಗಂಟೆಯಿಂದದಲೇ ಸೀಗೆ ಕಣಿವೆಯಲ್ಲಿ ಆನುವಂಶಿಕ ಧರ್ಮದರ್ಶಿಗಳ ಕುಟುಂಬ ಸದಸ್ಯರು ಆಗಮಿಸಿ ಶರಾವತಿ ನದಿ ದಂಡೆಯಲ್ಲಿರುವ ಮೂಲ ಸ್ಥಾನದಲ್ಲಿ ಚಂಡಿಕಾ ಹೋಮ, ನವ ಚಂಡಿಕಾ ಹವನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರುಇ. ಬೆಳಿಗ್ಗೆ ೧೦ ಗಂಟೆಗೆ ಚಂಡಿಕಾ ಹವನ ಪೂರ್ಣಾಹುತಿಯ ಬಳಿಕ ದೇವಿಯ ಮೂಲಸ್ಥಾನದಲ್ಲಿ ಕಲ್ಪೋಕ್ತ ಪೂಜೆ ನೇರವೇರಿತು. ಅಖಂಡ ಜ್ಯೋತಿಯ ಮೂಲಕ ಶ್ರೀದೇವಿಗೆ ವಿಶೇಷ ರಥದ ಮೂಲಕ ಸಿಗಂದೂರಿಗೆ ಆಗಮಿಸುವ ಮಾರ್ಗದುದ್ದಕ್ಕೂ ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು.
ಜ್ಯೋತಿ ರೂಪದ ಮೆರವಣಿಗೆಗೆ ಚಾಲನೆ:
ಕಾರ್ಗಲ್ ಸಮೀಪದ ವಡನ್‌ಬೈಲ್ ಪದ್ಮಾವತಿ ದೇವಸ್ಥಾನ ಧರ್ಮದರ್ಶಿ ವೀರರಾಜಯ್ಯ ಜೈನ್ ದೇವಿಯ ಜ್ಯೋತಿ ರೂಪದ ಮೆರವಣಿಗೆಗೆ ಚಾಲನೆ ನೀಡಿದರು ಈ ಮೂಲಕ ಜಾತ್ರೆಗೆ ಕರೂರು, ಬಾರಂಗಿ ಹೋಬಳಿಯ ಸುಮಾರು ೧೨೦೦ಕ್ಕೂ ಹೆಚ್ಚು ಮಹಿಳೆಯರು ಪೂರ್ಣ ಕುಂಭ ಕಳಶ ಹೊತ್ತು ಸೀಗೆ ಕಣಿವೆಯಿಂದ ದೇವಾಲಯಯಕ್ಕೆ ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆ ಉದ್ದಕ್ಕೂ ಚಂಡೆ, ವಾದ್ಯ, ವೀರಗಾಸೆ,ಕಂಸಾಳೆ, ಕೋಲಾಟ, ಗೊಂಬೆಯಾಟದ ವಿವಿಧ ಕಲಾಪ್ರಾಕಾರಗಳು ಜನಮನ ಸೆಳೆದವು. ವೀಪರಿತ ಬಿಸಿಲಿನ ನಡುವೆಯೂ ಭಕ್ತರು ದಾರಿಯುದ್ದಕ್ಕೂ ಚೌಡೇಶ್ವರಿಗೆ ಉಘೇ ಉಘೇ ಎಂದು ಘೋಷಣೆ ಹಾಕಿ ಭಕ್ತಿಭಾವ ತೋರಿದರು.
ಹರಿದು ಬಂದ ಭಕ್ತಸಾಗರ
ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿಸಿಗಂದೂರು ಚೌಡೇಶ್ವರಿ ದೇವಿಗೆ ಜಾತ್ರಾ ಮಹೋತ್ಸವದ ಮೊದಲ ದಿನದ ಅಂಗವಾಗಿ ಮೆರವಣಿಗೆಯಲ್ಲಿ ಕರೂರು, ಬಾರಂಗಿ ಸಾಗರ, ಮೈಸೂರು, ದಾವಣಗೆರೆ, ಬೆಂಗಳೂರು ರಾಜ್ಯದ ನಾನಾ ಭಾಗಗಳಿಂದ ಅಪಾರ ಪ್ರಮಾಣದ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ಜಾತ್ರೆಯ ಬೆಳಗಿನ ಜಾವ ೪ ಗಂಟೆಯಿಂದ ಸಂಜೆ ೭ಗಂಟೆಯ ವರೆಗೆ ನಿರಂತರವಾಗಿ ದೇವಿಯ ದರ್ಶನಕ್ಕೆ ಆಡಳಿತ ಅವಕಾಶ ಕಲ್ಪಿಸಿದ್ದು ಭಕ್ತರು ತಂಡೋಪ ತಂಡವಾಗಿ ದೇವಿ ದರ್ಶನ ಪಡೆದರು.
ವಿಶೇಷ ಅನ್ನ ದಾಸೋಹ
ಜಾತ್ರಾಮಹೋತ್ಸವ ಪ್ರಯುಕ್ತ ಭಕ್ತಾದಿಗಳಿಗೆ ಮಧ್ಯಾಹ್ನ ವಿಶೇಷವಾಗಿ ಹೋಳಿಗೆ, ಜೋಳದ ರೊಟ್ಟಿ, ಪಾಯಸ ಪ್ರಸಾದ ವಿನಿಯೋಗ ನಡೆಯಿತು. ಸಾವಿರಾರು ಭಕ್ತರು ತಂಡೋಪ ತಂಡವಾಗಿ ಬಂದು ದೇವಿಯ ಪ್ರಸಾದ ಸ್ವೀಕರಿಸಿದರು.
ವೇದಿಕೆ ಕಾರ್ಯಕ್ರಮ:
ಸಂಜೆ ೪ ಗಂಟೆಯಿಂದ ವೇದಿಕೆ ಕಾರ್ಯಕ್ರಮ ಆರಂಭವಾಯಿತು. ವಡನ್‌ಬೈಲ್ ಪದ್ಮಾವತಿ ದೇವಸ್ಥಾನ ಧರ್ಮದರ್ಶಿ ವೀರರಾಜಯ್ಯ ಜೈನ್ ಮಾತನಾಡಿ, ದೇವಿಯ ಸನ್ನಿಧಿಯಲ್ಲಿ ಡಾ ಎಸ್ ರಾಮಪ್ಪನವರ ನೇತೃತ್ವದಲ್ಲಿ ಉತ್ತಮ ಕೆಲಸ ನಡೆಯುತ್ತಿದೆ ದೇವಿಯ ಆಶಯದಂತೆ ಇನ್ನು ಹೆಚ್ಚು ಹೆಚ್ಚು ಸಾಮಾಜಿಕ ಕಾರ್ಯಗಳು ನೆರವೇರಲಿ ಎಂದು ಅಭಿಪ್ರಾಯಪಟ್ಟರು. ಧರ್ಮದರ್ಶಿ ಎಸ್ ರಾಮಪ್ಪ ಮಾತನಾಡಿ ದೇವಿಯ ಸೇವೆಗೆ ನಾವು ಬದ್ಧರಾಗಿ ನಿಸ್ವಾರ್ಥ ಸೇವೆ ಮಾಡಿದಾಗ ಮಾತ್ರ ಮಾನವನ ಜನ್ಮ ಸಾರ್ಥಕತೆ ಪಡೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಕೃಷಿ, ಶಿಕ್ಷಣ, ಧಾರ್ಮಿಕ, ಈ ಭಾಗದ ನಿವೃತ್ತ ಸರ್ಕಾರಿ ನೌಕರರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು. ಸಂಜೆ ೫ ರಿಂದ ಸಾಂಸ್ಕೃತಿಕ ಹಾಗೂ ಗಂಗಾರತಿ, ಸಿಡಿಮದ್ದು ಪ್ರದರ್ಶನ ನಡೆಯಿತು ಸಾವಿರಾರು ಮಹಿಳೆಯರು ಕಾರ್ಯಕ್ರಮ ಕಣ್ತುಂಬಿಕೊಂಡರು. ರಾತ್ರಿ ೧೦:೩೦ ರಿಂದ ಶ್ರೀ ಕ್ಷೇತ್ರದ ಮೇಳದಿಂದ ಯಕ್ಷಗಾನ ಪ್ರದರ್ಶನ ನಡೆಯಿತು.
ಕೋವಿಡ್ ಜಾಗೃತಿ:
ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಬಂದ ಭಕ್ತರಿಗೆ ದೇವಸ್ಥಾನದ ಮುಖ್ಯ ಮಹಾ ದ್ವಾರದಲ್ಲಿ ಪ್ರತ್ಯೇಕ ಕೌಂಟರ್ ತೆರೆದು ಮಾಸ್ಕ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದ್ದು ಧ್ವನಿವರ್ಧಕಗಳ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ದೇವಳ ಆಡಳಿತ ಮಂಡಳಿ ಗಮನ ಹರಿಸಿದ್ದು ವಿಶೇಷವಾಗಿತ್ತು.
ವಿವಿಧ ಗಣ್ಯರ ಭೇಟಿ:
ಸಿಗಂದೂರು ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಶಾಸಕ ಹರತಾಳು ಹಾಲಪ್ಪ ಕುಟುಂಬ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ ಮತ್ತಿತರರು ಆಗಮಿಸಿ ದೇವಿಯ ದರ್ಶನ ಪಡೆದರು.