ಶಿವಮೊಗ್ಗ,ಜ.೨೫: ಸೊರಬದಲ್ಲಿ ೧೪ ತಹಶೀಲ್ದಾರ್‌ಗಳನ್ನು ವರ್ಗಾವಣೆ ಮಾಡಿದ್ದೇನೆ ಎಂಬ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಸೊರಬ ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸೊರಬದ ವಿಚಾರದಲ್ಲಿ ಕೆಲವು ಸಂಘಟನೆಗಳು ತಮ್ಮ ಅಭಿಪ್ರಾಯ ಹೇಳುತ್ತಿವೆ. ರಾಜಕೀಯ, ಆಡಳಿತಾತ್ಮಕವಾಗಿ ಸಹ ಮಾತನಾಡುತ್ತಿದ್ದಾರೆ. ಕಂದಾಯ ಇಲಾಖೆ ನೌಕರರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಅದರಲ್ಲೂ ಸೊರಬದ ಕಂದಾಯ ಇಲಾಖೆ ವರ್ಗಾವಣೆ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಶಿವಮೊಗ್ಗದ ಬಹುತೇಕ ತಾಲೂಕುಗಳಲ್ಲಿ ಗ್ರೇಡ್-೧ ತಹಶೀಲ್ದಾರ್ ಗಳೇ ಇಲ್ಲ. ಎಲ್ಲಾ ಕಡೆಯಲ್ಲೂ ಗ್ರೇಡ್-೨ ತಹಶೀಲ್ದಾರ್‌ಗಳೇ ಕೆಲಸ ಮಾಡುತ್ತಿದ್ದಾರೆ. ನಾನು ೧೪ ತಹಶೀಲ್ದಾರ್ ಗಳನ್ನು ವರ್ಗಾವಣೆ ಮಾಡಿಸಿದ್ದೇನೆಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷರು ಹೇಳುತ್ತಿದ್ದಾರೆ. ಈವರೆಗೆ ನಾನು ಒಬ್ಬ ತಹಶೀಲ್ದಾರ್ ಅನ್ನು ವರ್ಗಾವಣೆ ಮಾಡಿ ಎಂದು ಪತ್ರ ಕೊಟ್ಟಿಲ್ಲ.ಈ ಸಂಬಂಧ ಕಂದಾಯ ಸಚಿವರು, ಸಿಎಂ ಅವರನ್ನು ಕೂಡ ಭೇಟಿ ಮಾಡಿಲ್ಲ ಎಂದು ತಿಳಿಸಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ರಾಜಕೀಯ ಅಜೆಂಡಾ ಇಟ್ಟುಕೊಂಡು ಮಾತನಾಡುತ್ತಿದ್ದಾರೆ. ಇತ್ತೀಚೆಗೆ ಸಾಗರದಲ್ಲಿ ಬಂದು ಪಕ್ಕದ ತಾಲೂಕು ಎಂದು ಹೇಳಿ ಹೋಗಿದ್ದರು. ವರ್ಗಾವಣೆ ಸಂಬಂಧ ನನ್ನ ಪತ್ರಗಳಿದ್ದರೆ ಅವರು ಪ್ರೂವ್ ಮಾಡಲಿ. ಇಲ್ಲವಾದ್ರೇ ಎಲ್ಲರೂ ರಾಜೀನಾಮೆ ಕೊಡಲಿ ಎಂದು ಸವಾಲು ಹಾಕಿದರು.
ಈಗ ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದಾರೆ.ಕಂದಾಯ ನೌಕರರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಅವರೇ ಸ್ವತಃ ತಪ್ಪು ಮಾಡುತ್ತಿದ್ದಾರೆ. ಅಧ್ಯಕ್ಷ ಅರುಣ್‌ಕುಮಾರ್ ಕಂದಾಯ ಇಲಾಖೆಯಲ್ಲಿ ಆರ್‌ಐ ಹುದ್ದೆಯಲ್ಲಿ ಕೆಲಸ ಮಾಡಬೇಕು. ಖಾಲಿ ಇದೆ ಎಂದು ಪ್ರಭಾವ ಬಳಸಿ, ಶಿರೆಸ್ತೇದಾರ್ ಹುದ್ದೆಯಲ್ಲಿ ಕೆಲಸ ಮಾಡ್ತಿದ್ದಾರೆ. ಶಿರೆಸ್ತೇದಾರ್ ಹುದ್ದೆಗೆ ಕಾಯುತ್ತಿರುವವರಿಗೆ ಬಿಟ್ಟು ಕೊಡದೆ ಪ್ರಭಾವ ಬಳಸಿದ್ದಾರೆ. ಸರ್ಕಾರ ಮೊದಲು ಇವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸೊರಬದಲ್ಲಿ ಕೆಲವು ಅಧಿಕಾರಿಗಳು ೮-೧೦ ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ೯೪ ಸಿ ಇರುವ ಆಯಕಟ್ಟಿನ ಹುದ್ದೆಯೇ ಬೇಕು.ಬೇರೆ ಯಾವುದು ಆಗಲ್ಲ.ಸೊರಬ, ಸಾಗರಕ್ಕೆ ಅವರೇ ಕೇಳಿಕೊಂಡು ಹೋಗ್ತಾ ಇದ್ದಾರೆ. ನಾನು ಕಂದಾಯ ಸಚಿವರಿಗೆ ಖಾಲಿ ಇರುವ ಸ್ಥಾನ ಭರ್ತಿ ಮಾಡುವಂತೆ ಪತ್ರ ಬರೆದಿದ್ದೇನೆ ಎಂದು ಸ್ಪಷ್ಟೀಕರಣ ನೀಡಿದರು.
ಸೊರಬ ತಾಲೂಕಿಗೆ ಬಂದಿದ್ದೇ ಮೂವರು ಗ್ರೇಡ್ -೧ ತಹಶೀಲ್ದಾರ್ ಗಳು. ಉಳಿದವರು ಪ್ರೊಬೆಶನರಿ ಹಾಗೂ ಗ್ರೇಡ್ -೨ ತಹಶೀಲ್ದಾರ್‌ಗಳು. ಪ್ರಿನ್ಸಿಪಲ್ ಸೆಕ್ರೆಟರಿಗಳು ಎಷ್ಟು ಜನ ಟ್ರಾನ್ಸ್‌ಫರ್ ಆಯ್ತು. ಯಾಕೆ ರಾಜ್ಯ ಸಂಘ ಪ್ರತಿಭಟನೆ ಮಾಡಲಿಲ್ಲ. ವರ್ಗಾವಣೆ ಸರ್ಕಾರದ ಪರಮಾಧಿಕಾರ ಅದು. ಚಾಲೆಂಜ್ ಮಾಡೋಕೆ ಹೈಕೋರ್ಟ್ ಇದೆ, ಕೆಎಟಿ ಇದೆ. ನೀವು ಸರಿಯಾಗಿದ್ದರೆ ಮತ್ತೇ ಅದೇ ಸ್ಥಾನಕ್ಕೆ ಬರಬಹುದು. ನಾನು ನನ್ನ ತಾಲೂಕಿನ ಕಂದಾಯ ಇಲಾಖೆ ನೌಕರರಿಗೆ ಅಭಿನಂದನೆ ಸಲ್ಲಿಸುತ್ತೇನೆ.ಸೊರಬದಿಂದ ಯಾರು ಕೂಡ ಪ್ರತಿಭಟನೆಗೆ ಬಂದಿಲ್ಲ. ಅವರಿಗೆ ಸತ್ಯ ಗೊತ್ತು ಎಂದರು.
ವರ್ಗಾವಣೆ ಮಾಡೋದು ನನ್ನ ಕೈಯಲ್ಲಿ ಇಲ್ಲ.ಅದು ಒಂದು ಸರ್ಕಾರದ ಪ್ರಕ್ರಿಯೆ. ಸರ್ಕಾರ ಕೊಟ್ಟ ಅಧಿಕಾರಿಗಳ ಜೊತೆ ನಾವು ಕೆಲಸ ಮಾಡಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಳದ ಅಧ್ಯಕ್ಷ ಪ್ರಕಾಶ್ ತಲಕಾಲುಕೊಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕಡಸೂರು, ಮಲ್ಲಿಕಾರ್ಜುನ ಇದ್ದರು.
ಈ ಹಿಂದೆ ಸೊರಬ ತಾಲೂಕಿನಲ್ಲಿದ್ದ ತಹಶೀಲ್ದಾರ್ ಅನಧಿಕೃತ ಬೋಗಸ್ ದಾಖಲೆ ಸೃಷ್ಟಿಸಿ ಅಮಾನತ್ತಾಗಿದ್ದರು. ಪತ್ನಿಯ ಹೆಸರಿನಲ್ಲಿ ಆಸ್ತಿ ಮಾಡಿಕೊಂಡಿದ್ದರು. ಶ್ರೀಮಂತರಿಗೆ ಹತ್ತಾರು ಎಕರೆ ಬಗರ್‌ಹುಕುಂ ಜಮೀನನ್ನು ನೀಡಿ ಸರ್ಕಾರದ ಆಸ್ತಿಯನ್ನು ದುರುಪಯೋಗಪಡಿಸಿಕೊಂಡಿದ್ದರು. ಆಗ ಏಕೆ ಈ ಕಂದಾಯ ಇಲಾಖೆ ನೌಕರರು ಪ್ರತಿಭಟನೆ ಮಾಡಲಿಲ್ಲ. ರಾಜ್ಯಾಧ್ಯಕ್ಷರಾಗಲಿ, ಜಿಲ್ಲಾಧ್ಯಕ್ಷರಾಗಲಿ ಏಕೆ ಕೇಳಲಿಲ್ಲ.
ಕುಮಾರ್ ಬಂಗಾರಪ್ಪ, ಶಾಸಕ
ವರ್ಗಾವಣೆ ಪಟ್ಟಿಕೊಡಿ: ಇಲ್ಲ ಹಕ್ಕುಚ್ಯುತಿ ಎದುರಿಸಿ
ಕೆಡಿಪಿ ಸಭೆಯಲ್ಲಿ ಕುಮಾರ್ ಬಂಗಾರಪ್ಪ ಆಕ್ರೋಶ
ಶಿವಮೊಗ್ಗ,ಜ.೨೫: ಸೊರಬ ತಾಲೂಕಿನಲ್ಲಿ ೧೪ ತಹಶೀಲ್ದಾರ್ ಗಳನ್ನು ವರ್ಗಾವಣೆ ಮಾಡಲಾಗಿದೆ ಎಂಬ ಕಂದಾಯ ಇಲಾಖೆ ನೌಕರರ ಸಂಘದ ಆರೋಪ, ಪ್ರತಿಭಟನೆ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಇದರಿಂದ ಸೊರಬ ಕ್ಷೇತ್ರದ ಶಾಸಕ ಕುಮಾರ ಬಂಗಾರಪ್ಪ ಕೆರಳಿ ಕೆಂಡವಾಗಿದ್ದಾರೆ.
ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ ನಾರಾಯಣ ಗೌಡ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.
ಸಭೆ ಆರಂಭವಾಗುತ್ತಿದ್ದಂತೆ ವಿಚಾರ ಪ್ರಸ್ತಾಪಿಸಿದ ಶಾಸಕ ಕುಮಾರ್ ಬಂಗಾರಪ್ಪ , ತಹಶೀಲ್ದಾರ್ ವರ್ಗಾವಣೆ ವಿಚಾರವಾಗಿ ಕಂದಾಯ ಇಲಾಖೆ ನೌಕರರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಅದರಲ್ಲೂ ಸೊರಬದ ಕಂದಾಯ ಇಲಾಖೆ ವರ್ಗಾವಣೆ ಬಗ್ಗೆ ಪ್ರತಿಭಟನೆ ಮಾಡಿದ್ದಾರೆ. ೧೪ ಜನ ತಹಶೀಲ್ದಾರ್ ವರ್ಗಾವಣೆ ಆಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಕ್ಷರಿ ಆರೋಪ ಮಾಡಿದ್ದಾರೆ. ಈವರೆಗೆ ನಾನು ಒಬ್ಬ ತಹಶೀಲ್ದಾರ್ ಅನ್ನು ವರ್ಗಾವಣೆ ಮಾಡಿ ಎಂದು ಪತ್ರ ಕೊಟ್ಟಿಲ್ಲ. ವರ್ಗಾವಣೆ ಮಾಡಿದ್ದರೆ ಪಟ್ಟಿ ಕೊಡಿ ಎಂದು ಸಭೆಯಲ್ಲಿ ಆಗ್ರಹಿಸಿದರು.