ಬಣಜಾರ ಸಮುದಾಯದ ಶೈಕ್ಷಣಿಕ ಪ್ರಗತಿಗಾಗಿ ರಾಜ್ಯ ಸರಕಾರದಿಂದ ಭೂಮಿ ಒದಗಿಸಲು ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಲಾಗುವುದು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.
ಜಿಲ್ಲಾ ಬಂಜಾರ ಸಂಘದಿಂದ ನಿರ್ಮಾಣವಾದ ಬಂಜಾರ ಕನ್ವೆನ್ಷನ್ ಹಾಲ್ ಉದ್ಘಾಟಿಸಿದ ಬಳಿಕ ಎನ್‌ಇಎಸ್ ಮೈದಾನದಲ್ಲಿ ನಡೆದ ವೇದಿಕೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಶೈಕ್ಷಣಿಕವಾಗಿ ಹಿಂದುಳಿದಿರುವ ಬಂಜಾರ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಅವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವಂತಹ ಶೈಕ್ಷಣಿಕ ಸಂಸ್ಥೆ ಆರಂಭಕ್ಕೆ ಭೂಮಿ ಒದಗಿಸಲು ಸಿಎಂ ಜತೆಗೆ ಚರ್ಚಿಸಲಾಗುವುದು. ಸಂಘದ ಕನ್ವೆನ್ಷನ್ ಹಾಲ್ ನಿರ್ಮಾಣಕ್ಕೆ ಸರಕಾರದಿಂದ ಅನುದಾನ ಒದಗಿಸಲಾಗಿತ್ತು. ಇನ್ನು ಮುಂದೆಯೂ ಸಮಾಜದ ಅಭಿವೃದ್ಧಿಗಾಗಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ರಾಜ್ಯದೆಲ್ಲೆಡೆಯ ಸಮುದಾಯದ ಅಭಿವೃದ್ಧಿಗಾಗಿ ಬಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಿ ಎಲ್ಲ ಇಲಾಖೆಗಳ ಮೂಲಕ ಅನುದಾನ ಒದಗಿಸಲಾಗಿತ್ತು. ಬಂಜಾರ ಸಮುದಾಯದವರು ವಾಸಿಸುವ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು ಜಿಲ್ಲೆಯಲ್ಲಿ ೫ ಸಾವಿರ ಹಕ್ಕುಪತ್ರಗಳನ್ನು ವಿತರಿಸಲು ಸಿದ್ಧತೆ ನಡೆದಿದೆ ಎಂದರು.
ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಕಷ್ಟಸಹಿಷ್ಣುಗಳಾದ ಬಂಜಾರ ಸಮುದಾಯದವರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಗುಣಮಟ್ಟದ ಶಿಕ್ಷಣ ಒದಗಿಸುವ ತೀರ್ಮಾನ ಮಾಡಬೇಕು ಎಂದರು.
ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷರೂ ಆದ ಶಾಸಕ ಕೆ.ಬಿ.ಅಶೋಕ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕ ಆಯನೂರು ಮಂಜುನಾಥ್, ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಬಳಿಗಾರ್, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಮಹಾನಗರ ಪಾಲಿಕೆ ಸದಸ್ಯ ಆರ್.ಸಿ.ನಾಯ್ಕ, ಡಾ. ಧನಂಜಯ ಸರ್ಜಿ, ಸಂಘದ ಗೌರವಾಧ್ಯಕ್ಷ ಟಿ.ರಾಮನಾಯ್ಕ, ಪ್ರೊ. ಭೋಜ್ಯಾನಾಯ್ಕ, ನಾನ್ಯಾನಾಯ್ಕ ಮತ್ತಿತರರು ಇದ್ದರು.
ಮಂಗ್ಲಿಬಾಯಿ ಮತ್ತು ತಂಡದಿಂದ ರಸಮಂಜರಿ
ಸಮಾರಂಭದಲ್ಲಿ ಜಿಲ್ಲೆಯ ವಿವಿಧೆಡೆಯ ಬಂಜಾರ ಸಮುದಾಯದ ಸಾವಿರಾರು ಜನರು ಪಾಲ್ಗೊಂಡಿದ್ದರು. ವೇದಿಕೆ ಸಮಾರಂಭ ಬಳಿಕ ಖ್ಯಾತ ಗಾಯಕಿ ಮಂಗ್ಲಿಬಾಯಿ ಮತ್ತು ತಂಡದಿಂದ ರಸಮಂಜರಿ ನಡೆಯಿತು.
ವೇದಿಕೆ ಸಮಾರಂಭಕ್ಕೆ ಮುನ್ನ ಬಂಜಾರ ಕನ್ವೆನ್ಷನ್ ಹಾಲ್ ಅನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು. ಬಳಿಕ ಕಲಾ ತಂಡಗಳು ಮತ್ತು ಬಂಜಾರ ಸಮುದಾಯದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವೇಷಭೂಷಣಗಳೊಂದಿಗೆ ಎನ್‌ಇಎಸ್ ಮೈದಾನದವರೆಗೆ ಬೃಹತ್ ಮೆರವಣಿಗೆ ನಡೆಯಿತು. ಕಳಶಗಳನ್ನು ಹೊತ್ತ ಬಂಜಾರ ಯುವತಿಯರು, ಬಂಜಾರ ಉಡುಪುಗಳನ್ನು ಧರಿಸಿದ ಮಹಿಳೆಯರು ಮೆರವಣಿಗೆಯ ಆಕರ್ಷಣೆಯಾಗಿದ್ದರು.
ಸೂರಗೊಂಡನಕೊಪ್ಪದ ಬಳಿ ಇರುವ ಸಂತ ಸೇವಾಲಾಲ್ ಮರಿಯಮ್ಮ ಕ್ಷೇತ್ರದ ಬಳಿ ನಿರ್ಮಾಣವಾಗಲಿರುವ ರೈಲು ನಿಲ್ದಾಣಕ್ಕೆ ಭಾಯ್‌ಗಡ್ ಹೆಸರು ಇಡಲಾಗುವುದು. ಅದಕ್ಕೆ ವಿಮಾನ ನಿಲ್ದಾಣ ಉದ್ಘಾಟನೆ ಸಮಯದಲ್ಲಿ ಪ್ರಧಾನಿ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸುವರು.
ಬಿ.ವೈ.ರಾಘವೇಂದ್ರ,ಸಂಸದರು