ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಫೆ. ೧ ಮತ್ತು ೨ರಂದು ಸಾಹಿತ್ಯ ಗ್ರಾಮದಲ್ಲಿ ೧೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸರ್ವಾಧ್ಯಕ್ಷರಾಗಿ ಖ್ಯಾತ ಸಾಹಿತಿ ಲಕ್ಷ್ಮಣ ಕೊಡಸೆ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಸಂಭ್ರಮದಿಂದ ನಡೆಯಲಿದೆ. ಸುಮಾರು ಐದು ಸಾವಿರ ಆಸಕ್ತರು, ಕನ್ನಡ ಅಭಿಮಾನಿಗಳು ಭಾಗವಹಿಸಲಿದ್ದಾರೆ. ಸುಮಾರು ೮ ಗೋಷ್ಠಿಗಳು ನಡೆಯಲಿವೆ. ಅದರಲ್ಲಿ ಎರಡು ಕವಿಗೋಷ್ಠಿಗಳಿವೆ. ಗೋಷ್ಠಿಗಳು ಕೂಡ ವಿಶೇಷವಾಗಿದ್ದು, ಮಲೆನಾಡಿನ ಬೇಗುದಿಗಳು, ಸಾಹಿತ್ಯ ಸಾಂಸ್ಕೃತಿಕ ಬಿಕ್ಕಟ್ಟುಗಳು, ಪ್ರಚಲಿತ ಸಮಸ್ಯೆ, ಜಾನಪದ ಮರುಓದು ಕುರಿತಂತೆ ಇರುತ್ತವೆ. ಎರಡು ಕವಿಗೋಷ್ಠಿಗಳಲ್ಲಿ ಹಿರಿ ಕಿರಿಯ ಕವಿಗಳು ಭಾಗವಹಿಸಲಿದ್ದಾರೆ ಎಂದರು.
ಫೆ.೧ರ ಬೆಳಗ್ಗೆ ೧೦ಕ್ಕೆ ಗೋಪಾಳ ಬಸ್ ನಿಲ್ದಾಣದಿಂದ ಸಾಹಿತ್ಯ ಗ್ರಾಮದವರೆಗೆ ಸಮ್ಮೇಳನಾಧ್ಯಕ್ಷರ ರಾಜಬೀದಿ ಉತ್ಸವವಿರುತ್ತದೆ. ಉಪ ಮೇಯರ್ ಲಕ್ಷ್ಮಿ ಶಂಕರ ನಾಯ್ಕ್ ಮೆರವಣಿಗೆಗೆ ಚಾಲನೆ ನೀಡುವರು. ಹಲವು ಗಣ್ಯರು ಇದರಲ್ಲಿ ಭಾಗವಹಿಸಲಿದ್ದಾರೆ. ೯-೩೦ಕ್ಕೆ ಧ್ವಜಾರೋಹಣ ಕಾರ್ಯಕ್ರಮವಿರುತ್ತದೆ.
ಬೆಳಗ್ಗೆ ೧೦-೩೦ಕ್ಕೆ ಖ್ಯಾತ ಸಾಹಿತಿ ನಾ.ಡಿಸೋಜ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಈ ಸಮಾರಂಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಪುಸ್ತಕ ಬಿಡುಗಡೆ ಮಾಡುವರು. ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಷಿ ದತ್ತಿ ಸ್ವೀಕಾರ ಮಾಡುವರು. ಶಾಸಕ ಕೆ.ಎಸ್. ಈಶ್ವರಪ್ಪ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಪುಸ್ತಕ ಪ್ರದರ್ಶನ ಉದ್ಘಾಟಿಸುವರು. ಮೇಯರ್ ಎಸ್. ಶಿವಕುಮಾರ್ ಉಪಸ್ಥಿತರಿರುವರು ಎಂದರು.
ಕವಿಗೋಷ್ಠಿ:
ಫೆ.೧ರ ಮಧ್ಯಾಹ್ನ ೨-೩೦ಕ್ಕೆ ಸಿಮ್ಸ್‌ನ ಡಾ. ಗಂಗಾಧರ ಅವರ ಅಧ್ಯಕ್ಷತೆಯಲ್ಲಿ ‘ಹಾಲು ಹಳ್ಳ ಹರಿಯಲಿ’ ಎಂಬ ಶೀರ್ಷಿಕೆಯಡಿ ಕವಿಗೋಷ್ಠಿ ನಡೆಯಲಿದೆ. ಸುಮಾರು ೨೩ಕ್ಕೂ ಹೆಚ್ಚುಕವಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಸಂಜೆ ನಾಲ್ಕು ಗಂಟೆಗೆ ಸಮ್ಮೇಳನಾಧ್ಯಕ್ಷರ ಬದುಕು ಬರಹ ಕುರಿತು ಗೋಷ್ಠಿ ನಡೆಯಲಿದೆ. ಹಿರಿಯ ಸಾಹಿತಿ ಡಿ.ಬಿ. ರಜಿಯಾ ಅಧ್ಯಕ್ಷತೆ ವಹಿಸಲಿದ್ದು, ಲಕ್ಷ್ಮಣ ಕೊಡಸೆಯವರ ಬದುಕು ಬರಹ ಕುರಿತು ಬಿ.ಎನ್. ಮೀನಾಕ್ಷಿ, ಡಾ ಅಣ್ಣಪ್ಪ ಮಳಿಮಠ. ಡಾ. ಶಂಕರ ಶಾಸ್ತ್ರಿ ಮಾತನಾಡುವರು. ೫-೩೦ಕ್ಕೆ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದರು.
೬ ಗಂಟೆಗೆ ಜಾನಪದ ಮರುಓದು ಕುರಿತು ಗೋಷ್ಠಿ ನಡೆಯಲಿದೆ. ಜಾನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ ಅಧ್ಯಕ್ಷತೆ ವಹಿಸಲಿದ್ದು, ಡಾ. ಜಿ.ಕೆ. ಪ್ರೇಮಾ, ಡಾ. ತಿಮ್ಮಪ್ಪ ಕೆ. ಡಾ. ಎಸ್.ಎಂ. ಮುತ್ತಯ್ಯ ಮಾತನಾಡುವರು. ೭-೩೦ರ ಜಿಲ್ಲೆಯ ಕೈಗಾರಿಕಾ ಕಾರ್ಮಿಕರ ತಲ್ಲಣಗಳ ಕುರಿತು ವಿಶೇಷ ಉಪನ್ಯಾಸ ನಡೆಯಲಿದೆ. ಮಾಚೇನಹಳ್ಳಿ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಎಂ.ಎ. ರಮೇಶ್ ಹೆಗಡೆ ಅಧ್ಯಕ್ಷತೆ ವಹಿಸುವರು ಎಂದರು.
ಫೆ.೨ರ ಬೆಳಿಗ್ಗೆ ೯-೩೦ಕ್ಕೆ ಧ್ವಜಾರೋಹಣ ಕಾರ್ಯಕ್ರಮದ ನಂತರ ೧೦-೩೦ಕ್ಕೆ ಸಾಹಿತ್ಯ ಸಾಂಸ್ಕೃತಿಕ ಬಿಕ್ಕಟ್ಟುಗಳು ಕುರಿತು ಸಾಹಿತಿ ಹಾಗೂ ಚಿಂತಕ ಡಾ. ರಾಜೇಂದ್ರ ಚೆನ್ನಿ, ಪ್ರಾಧ್ಯಾಪಕ ಡಾ.ಟಿ. ಅವಿನಾಶ್, ನಮ್ ಟೀಮಿನ ಹೊನ್ನಾಳಿ ಚಂದ್ರಶೇಖರ್ ಮಾತನಾಡುವರು. ಮಧ್ಯಾಹ್ನ ೧೨ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ೧೨-೩೦ಕ್ಕೆ ಮಲೆನಾಡಿನ ಬೇಗುದಿಗಳು ಕುರಿತ ಗೋಷ್ಠಿಯಲ್ಲಿ ಕಲ್ಕುಳಿ ವಿಟ್ಠಲ ಹೆಗಡೆ, ನಾಗರಾಜ್ ನೇರಿಗೆ, ಬಿ.ಎ. ರಮೇಶ್ ಹೆಗ್ಡೆ ಮಾತನಾಡುವರು. ಮಾಜಿ ಸಭಾಪತಿ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆ ವಹಿಸುವರು ಎಂದು ಮಂಜುನಾಥ್ ವಿವರಿಸಿದರು.
ಜೇನು ಮಳೆಸುರಿಯಲಿ:
ಮಧ್ಯಾಹ್ನ ೨.೩೦ ಕ್ಕೆ “ಜೇನು ಮಳೆಯು ಸುರಿಯಲಿ” ಎಂಬ ಶೀರ್ಷಿಕೆಯಡಿಯಲ್ಲಿ ೧೯ ಕವಿಗಳು, ಕವಯತ್ರಿಯರಿಂದ ಕವಿಗೋಷ್ಠಿ ನಡೆಯಲಿದೆ. ಸವಿತಾ ನಾಗಭೂಷಣ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ೪.೩೦ ಕ್ಕೆ ಪ್ರಚಲಿತ ಸಮಸ್ಯೆಗಳು ಕುರಿತು ಗೋಷ್ಠಿ ನಡೆಯಲಿದೆ. ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ರವೀಂದ್ರ ತೋಟಗೆರೆ, ಶಾಂತರಾಮ್ ತೇಜ, ಡಾ. ಸಬಿತಾ ಬನ್ನಾಡಿ ಮಾತನಾಡುವರು. ವಿಶ್ರಾಂತ ನ್ಯಾಯಾಧೀಶ ಮಿಠಲ್ ಕೋಡ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ೫.೩೦ ಕ್ಕೆ ನಡೆಯುವ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಬಿ. ಚಂದ್ರೇಗೌಡ, ನವೀನ್ ಕುಮಾರ್ ಮಾತನಾಡುವರು ಎಂದರು.
ಸಮರೋಪ ಸಮಾರಂಭ ಸಂಜೆ ೬.೩೦ ಕ್ಕೆ ನಡೆಯಲಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ. ಸಿದ್ಧರಾಮಯ್ಯ ಸಮಾರೋಪ ಭಾಷಣ ಮಾಡುವರು. ಶಾಸಕರಾದ ಕೆ.ಎಸ್. ಈಶ್ವರಪ್ಪ, ಎಸ್. ರುದ್ರೇಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಸರ್ವಾಧ್ಯಕ್ಷರಾದ ಲಕ್ಷ್ಮಣ ಕೊಡಸೆ ಉಪಸ್ಥಿತರಿರುವರು ಎಂದರು.
ಗೋಷ್ಠಿಯಲ್ಲಿ ಪ್ರಮುಖರಾದ ಎಂ. ನವೀನ್ ಕುಮಾರ್, ಮಧುಸೂದನ್ ಐತಾಳ್, ಭಾರತಿ ರಾಮಕೃಷ್ಣ, ವಿ.ಆರ್. ಸೋಮಿನಕಟ್ಟೆ ಇದ್ದರು.
ಸುಮಾರು ಐದು ಸಾವಿರ ಆಸಕ್ತರು, ಕನ್ನಡ ಅಭಿಮಾನಿಗಳು ಭಾಗವಹಿಸಲಿದ್ದಾರೆ. ಸುಮಾರು ೮ ಗೋಷ್ಠಿಗಳು ನಡೆಯಲಿವೆ. ಅದರಲ್ಲಿ ಎರಡು ಕವಿಗೋಷ್ಠಿಗಳಿವೆ. ಗೋಷ್ಠಿಗಳು ಕೂಡ ವಿಶೇಷವಾಗಿದ್ದು, ಮಲೆನಾಡಿನ ಬೇಗುದಿಗಳು, ಸಾಹಿತ್ಯ ಸಾಂಸ್ಕೃತಿಕ ಬಿಕ್ಕಟ್ಟುಗಳು, ಪ್ರಚಲಿತ ಸಮಸ್ಯೆ, ಜಾನಪದ ಮರುಓದು ಕುರಿತಂತೆ ಇರುತ್ತವೆ.
ಡಿ. ಮಂಜುನಾಥ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ