ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗದ ಅಮಿಷವೊಡ್ಡಿ ಯುವಕನೊಬ್ಬನಿಗೆ ೭೨ ಸಾವಿರ ರೂ. ವಂಚನೆ ಮಾಡಲಾಗಿದೆ. ಈ ಸಂಬಂಧ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಳಲೂರಿನ ಯುವಕನೊಬ್ಬ ವಂಚನೆಗೊಳಗಾಗಿದ್ದಾರೆ. ‘ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಗ್ರೌಂಡ್ ಸ್ಟಾಫ್ ಆಗಿ ನೇಮಕವಾಗಿದ್ದೀರ’ ಎಂದು ತಿಳಿಸಿ, ಹಣ ಪಡೆಯಲಾಗಿದೆ.
ವಂಚನೆ ಆಗಿದ್ದು ಹೇಗೆ?
ಮೊಬೈಲ್ ನಲ್ಲಿ ಏರ್ ಪೋರ್ಟ್ ಅಥಾರಿಟಿ ಅಪ್ಲಿಕೇಷನ್ ಓಪನ್ ಮಾಡಿ ಹೊಳಲೂರಿನ ಯುವಕ ತನ್ನ ಆಧಾರ್ ಕಾರ್ಡ್, ಮೊಬೈಲ್ ನಂಬರ್, ಹೆಸರು ದಾಖಲಿಸಿದ್ದರು. ಫೆ.೨ರಂದು ಮಧ್ಯಾಹ್ನ ಅಪರಿಚಿತ ಮೊಬೈಲ್ ನಂಬರಿನಿಂದ ಮಹಿಳೆಯೊಬ್ಬರು ಕರೆ ಮಾಡಿ, ತನ್ನನ್ನು ಮೋನಿಕಾ ಎಂದು ಪರಿಚಯಿಸಿಕೊಂಡಿದ್ದಾಳೆ. ತಾನು ಶಿವಮೊಗ್ಗ ಏರ್ ಪೋರ್ಟ್ (ಚಿiಡಿಠಿoಡಿಣ ರಿobs) ಅಥಾರಿಟಿಯ ಹೆಚ್.ಆರ್ ಎಂದು ಹೇಳಿಕೊಂಡು ಯುವಕನನ್ನು ನಂಬಿಸಿದ್ದಾಳೆ.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೀವು ಗ್ರೌಂಡ್ ಸ್ಟಾಫ್ ಆಗಿ ನೇಮಕವಾಗಿದ್ದೀರ. ಇದರ ರಿಜಿಸ್ಟ್ರೇಷನ್ ಗೆ ಹಣ ಪಾವತಿಸಬೇಕು ಎಂದು ತಿಳಿಸಿದ್ದಾಳೆ. ಹಂತ ಹಂತವಾಗಿ ಫೋನ್ ಪೇ ಮೂಲಕ ೭೨,೯೦೦ ರೂ. ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾಳೆ. ಆ ಬಳಿಕ ಯುವಕನಿಗೆ ತಾನು ವಂಚನೆಗೊಳಾಗಿರುವುದು ಗೊತ್ತಾಗಿದೆ. ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.
ಇದೆ ಮೊದಲ ಕೇಸ್
ವಿಮಾನ ನಿಲ್ದಾಣ ಕಾಮಗಾರಿ ಮುಕ್ತಾಯದ ಹಂತಕ್ಕೆ ಬರುತ್ತಿದ್ದಂತೆ ಉದ್ಯೋಗವಕಾಶವಿದೆ ಎಂಬ ಪೋಸ್ಟರ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭವಾದವು. ಇದನ್ನು ನಂಬಿ, ವಿಮಾನ ನಿಲ್ದಾಣದಲ್ಲಿ ಕೆಲಸ ಪಡೆಯುವ ಆಸೆಯಲ್ಲಿ ಹಲವರು ವಂಚಕರಿಗೆ ಹಣ ಕೊಟ್ಟು ಸಂಕಷ್ಟಕ್ಕೀಡಾಗಿದ್ದಾರೆ.
ಸಂಸದ ರಾಘವೇಂದ್ರ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ವಿಮಾನ ನಿಲ್ದಾಣದ ಉಸ್ತುವಾರಿ ವಹಿಸಿಕೊಂಡಿರುವ ಅಧಿಕಾರಿಗಳು ಹಲವು ಭಾರಿ ಜಾಗೃತಿ ಸಂದೇಶ, ಎಚ್ಚರಿಕೆ ನೀಡಿದ್ದಾರೆ. ಹೀಗಿದ್ದು ಉದ್ಯೋಗದ ನಿರೀಕ್ಷೆಯಲ್ಲಿ ಹಲವರು ವಂಚಕರ ಬಲೆಗೆ ಬೀಳುತ್ತಿದ್ದಾರೆ.
ನೇಮಕಾತಿ ಆದೇಶ ಆಗಿಲ್ಲ
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗವಕಾಶದ ಬಗ್ಗೆ ಈತನಕ ಯಾವುದೆ ನೇಮಕಾತಿ ಆದೇಶ ಹೊರಬಿದ್ದಿಲ್ಲ. ಒಂದು ವೇಳೆ ನೇಮಕಾತಿ ಮಾಡಿಕೊಳ್ಳಬೇಕಿದ್ದರೆ ಸರ್ಕಾರ, ಜಿಲ್ಲಾಡಳಿತ ಅಥವಾ ವಿಮಾನ ನಿಲ್ದಾಣ ಪ್ರಾಧಿಕಾರವೆ ಅಧಿಕೃತವಾಗಿ ಸರ್ಕಾರಿ ವೆಬ್ ಸೈಟ್ ಅಥವಾ ಪತ್ರಿಕೆಗಳಲ್ಲಿ ನೇಮಕಾತಿ ಆದೇಶ ಹೊರಡಿಸಲಿವೆ. ಆದ್ದರಿಂದ ಜಾಲತಾಣಗಳಲ್ಲಿನ ಸುಳ್ಳು ಉದ್ಯೋಗ ಮಾಹಿತಿ ನಂಬಬಾರದು.