ಭದ್ರಾವತಿ: ವಿಎಸ್‌ಐಎಲ್ ಕಾರ್ಖಾನೆಗೆ ಜೀವ ತುಂಬಲು ಸಿದ್ದರಾಮಯ್ಯನವರ ಬಳಿ ಶಾಸಕ ಸಂಗಮೇಶ್ ಕಾಡಿ ಬೇಡಿ, ಗಣಿ ಭೂಮಿ ಮಂಜೂರು ಮಾಡಿಸಿದ್ದರು. ಯಡಿಯೂರಪ್ಪ ಹಾಗೂ ರಾಘವೇಂದ್ರ ಅವರಿಗೆ ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸಲು ಆಗಲಿಲ್ಲ. ಕೇಂದ್ರ ಮಂತ್ರಿ ಬಂದು ೬ ಸಾವಿರ ಕೋಟಿ ಕೊಡಿಸುವುದಾಗಿ ಹೇಳಿಸಿದ್ದರು. ಇದು ಸುಳ್ಳಿನ ಭರವಸೆ. ಸುಳ್ಳಿನ ಕಾರ್ಖಾನೆಯ ಮತ್ತೊಂದು ಹೆಸರು ಬಿಜೆಪಿ. ಅವರಿಗೆ ನುಡಿದಂತೆ ನಡೆಯಲು ಆಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದರು.
ಭದ್ರಾವತಿಯಲ್ಲಿ ಬುಧವಾರ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು,ಈ ಕ್ಷೇತ್ರದಲ್ಲಿ ಒಕ್ಕಲಿಗರು, ಲಿಂಗಾಯತರು, ಮುಸಲ್ಮಾನರು, ಪರಿಶಿಷ್ಟ ಜಾತಿ, ಪಂಗಡದವರು ಸೇರಿದಂತೆ ಎಲ್ಲ ವರ್ಗದವರೂ ಇದ್ದಾರೆ. ಇಲ್ಲಿ ಜಾತಿ ಮೇಲೆ ರಾಜಕಾರಣ ಮಾಡಿದರೆ ಪ್ರಯೋಜನವಿಲ್ಲ. ನೀತಿ ಮೇಲೆ ರಾಜಕಾರಣ ಮಾಡಬೇಕು. ಕಾಂಗ್ರೆಸ್ ಎಲ್ಲ ಜಾತಿ ಹಾಗೂ ವರ್ಗದ ಪಕ್ಷ. ಎಲ್ಲರಿಗೂ ರಕ್ಷಣೆ ನೀಡುತ್ತಾ ಬಂದಿದೆ ಎಂದರು.
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದರು. ಈ ಜಿಲ್ಲೆಯಲ್ಲಿ ಬೇಕಾದಷ್ಟು ಕೆಲಸ ಮಾಡಿದ್ದಾರೆ ಎಂದು ಹೇಳುತ್ತಾರೆ. ಆದರೆ ರಾಜ್ಯ ಸರ್ಕಾರ ನಡೆಸಿದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ೧೦ ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಅದರಲ್ಲಿ ಎಷ್ಟು ಕೋಟಿ ಬಂಡವಾಳ ಶಿವಮೊಗ್ಗ ಜಿಲ್ಲೆಯಲ್ಲಿ ಹೂಡಿಕೆಯಾಗಲಿದೆ ಎಂದು ಬಿಜೆಪಿಯವರು ಉತ್ತರಿಸಬೇಕು ಎಂದು ಹೇಳಿದರು.
ಈ ಕ್ಷೇತ್ರದಲ್ಲಿ ವಿಐಎಸ್‌ಎಲ್ ಹಾಗೂ ಎಂಪಿಎಂ ಕಾರ್ಖಾನೆ ಉಳಿಸುವ ವಿಚಾರದಲ್ಲಿ ಹೋರಾಟ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ವಿಐಎಸ್‌ಎಲ್ ಕಾರ್ಖಾನೆ ಮಾರಲು ಆಹ್ವಾನ ನೀಡಿದರೂ ಯಾರೊಬ್ಬರೂ ಮುಂದೆ ಬಂದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಕಾರ್ಖಾನೆಗಳನ್ನು ಉಳಿಸಲಿದ್ದೇವೆ. ಕುವೆಂಪು, ಬಸವಣ್ಣ, ಶಿಶುನಾಳ ಷರೀಫರ, ಕನಕದಾಸರ ನಾಡಲ್ಲಿ ನಾವು ನುಡಿದಂತೆ ನಡೆಯುತ್ತೇವೆ, ನಿಮ್ಮ ಸೇವೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಜಿಲ್ಲೆಯಲ್ಲಿ ಶುದ್ಧವಾದ ವಾತಾವರಣ ನಿರ್ಮಾಣವಾಗಬೇಕು. ಎಲ್ಲ ವರ್ಗದವರಿಗೆ ಗೌರವ ಸಿಗಬೇಕು. ಬಿಜೆಪಿಯವರು ನಾವು ಹಿಂದೂ ನಾವು ಮುಂದು ಎಂದು ಹೇಳುತ್ತಾರೆ. ಆದರೆ ಕಾಂಗ್ರೆಸ್ ಪಕ್ಷ ಹಿಂದೂ, ಮುಸಲ್ಮಾನ, ಕ್ರೈಸ್ತ, ಸಿಖ್, ಒಕ್ಕಲಿಗರು, ಲಿಂಗಾಯತರು, ಪರಿಶಿಷ್ಟರು ಸೇರಿದಂತೆ ಎಲ್ಲ ಸಮಾಜ ಒಂದು ಎನ್ನುತ್ತದೆ. ಸರ್ವರಿಗೂ ಸಮಬಾಳು, ಸಮಪಾಲು ಎಂಬ ತತ್ವದ ಮೇಲೆ ಪಕ್ಷ ಕೆಲಸ ಮಾಡಿಕೊಂಡು ಬಂದಿದೆ ಎಂದರು.
ಕೈ ಅಧಿಕಾರದಲ್ಲಿದ್ದರೆ ಚೆಂದ
ಕಮಲ ಕೆರೆಯಲ್ಲಿದ್ದರೆ ಚೆನ್ನ, ತೆನೆ ಹೊಲದಲ್ಲಿದ್ದರೆ ಚೆನ್ನ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಅದಕ್ಕಾಗಿ ರಾಜ್ಯದಲ್ಲಿ ಬದಲಾವಣೆ ಮಾಡಬೇಕು. ನಿಮ್ಮ ಹೃದಯದಲ್ಲಿ ಜಾತ್ಯಾತೀತ ತತ್ವವಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ನಿಮಗೆ ಗೊತ್ತಿದೆ. ಕುಮಾರಣ್ಣ ಏನಾದರೂ ಹೇಳಲಿ. ನೀವು ಕಾಂಗ್ರೆಸ್ ಪಕ್ಷ ಬೆಂಬಲಿಸಿದರೆ ರಾಜ್ಯ, ಎಲ್ಲ ಸಮಾಜದವರು ಉಳಿಯುತ್ತಾರೆ. ೫೦ ದಿನಗಳ ನಂತರ ಈ ಜನ ಬಿಜೆಪಿಯನ್ನು ಗಂಟು ಮೂಟೆ ಕಟ್ಟಿಸಿ ಮನೆಗೆ ಕಳುಹಿಸಿದರೆ, ಕಾಂಗ್ರೆಸ್ ನಾಯಕರನ್ನು ವಿಧಾನಸೌಧಕ್ಕೆ ಕಳುಹಿಸಲಿದ್ದಾರೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಬಿಜೆಪಿಯಲ್ಲಿ ಲಂಚಕ್ಕೊಬ್ಬ, ಮಂಚಕ್ಕೊಬ್ಬ ಅಧಿಕಾರ ಕಳೆದುಕೊಂಡರು. ಇದೊಂದು ಬಿ ರಿಪೋರ್ಟ್ ಸರ್ಕಾರ. ಬಿ ರಿಪೋರ್ಟ್ ಕೊಟ್ಟರೂ ಯಾಕೆ ಮಂತ್ರಿಗಿರಿ ನೀಡಲಿಲ್ಲ. ಆ ಗುತ್ತಿಗೆದಾರ ಕೆಲಸ ಮಾಡಿದ್ದ ಎಂದು ಬಿಜೆಪಿ ನಾಯಕರೇ ಒಪ್ಪಿಕೊಂಡಿದ್ದಾರೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಈ ಸರ್ಕಾರದಲ್ಲಿ ೪೦% ಕಮಿಷನ್ ಇಲ್ಲದೆ ಯಾವ ಕೆಲಸವೂ ನಡೆಯುವುದಿಲ್ಲ ಎಂದು ಹೇಳಿದ್ದಾರೆ. ಇತ್ತೀಚೆಗೆ ಗೂಳಿಹಟ್ಟಿ ಶೇಖರ್ ೨೨ ಸಾವಿರ ಕೋಟಿಯಷ್ಟು ಅಕ್ರಮ ನಡೆದಿದೆ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಇದೊಂದು ಭ್ರಷ್ಟ ಸರ್ಕಾರ.
– ಡಿ ಕೆ ಶಿವಕುಮಾರ್
.