ಸೊರಬ ತಾಲೂಕಿನ ಕುಬಟೂರು ಗ್ರಾಮ ದಲ್ಲಿ ೧೫ ವರ್ಷಗಳಿಗೊಮ್ಮೆ ಆಚರಿಸುವ ದ್ಯಾಮವ್ವ ದೇವಿಯ ಮಹಾ ರಥೋತ್ಸವವು ಸಕಲ ಭಕ್ತಾದಿ ಗಳೊಂದಿಗೆ ವಿಜೃಂಭಣೆಯಿಂದ ಜರುಗಿತು. ಜಾತ್ರೋತ್ಸವದಲ್ಲಿ ಭಾಗವಹಿಸಿದ್ದ ಎಸ್. ಬಂಗಾರಪ್ಪ ಅವರ ಪುತ್ರದ್ವಯರ ಹಾಡು, ನೃತ್ಯಕ್ಕೆ ಅಭಿಮಾನಿ ಬಳಗ ಫಿದಾ ಆದರು.
ಬಂಗಾರಪ್ಪ ಅವರು ದ್ಯಾಮವ್ವನ ಜಾತ್ರೆಗೆ ಪ್ರತಿಸಾರಿ ಬರುತಿದ್ದರು. ಅವರು ಇದ್ದಾಗ ಇಡೀ ಊರೇ ಒಂದಾಗಿ ನಲಿದಾಡುತಿತ್ತು… ಬಂಗಾರಪ್ಪ ಅವರು ಕಲಾವಿದರೊಂದಿಗೆ ಡೊಳ್ಳಿಗೆ ಹೆಜ್ಜೆಹಾಕುತಿದ್ದರು. ಈ ಬಾರಿ ಜಾತ್ರೆಯಲ್ಲಿಯೂ ಅವರ ಮಕ್ಕಳು ಡೊಳ್ಳು ಕುಣಿತ, ಹಾಡು ಹಾಡಿದರು. ಆದರೆ ಸೋದರರ ಗುಂಪು ಮಾತ್ರ ಪ್ರತ್ಯೇಕವಾಗಿತ್ತು.
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಹುಟ್ಟೂರು ಮತ್ತು ಶಾಸಕ ಕುಮಾರ ಬಂಗಾರಪ್ಪ, ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಅವರ ಸ್ವಗ್ರಾಮವಾದ ಕುಬಟೂರಿಗೆ ವಿವಿಧ ತಾಲೂಕು ಮತ್ತು ಗ್ರಾಮಗಳಿಂದ ಎಸ್. ಬಂಗಾರಪ್ಪ ಕುಟುಂಬದ ಅಭಿಮಾನಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸಿ, ದ್ಯಾಮವ್ವ ದೇವಿ ದರ್ಶನ ಪಡೆದು ಪುನೀತರಾದರು.
ಶಾಸಕ ಕುಮಾರ ಬಂಗಾರಪ್ಪ ಮತ್ತು ಪತ್ನಿ ವಿದ್ಯುಲ್ಲತಾ, ಪುತ್ರಿ ಲಾವಣ್ಯ, ಪುತ್ರ ಅರ್ಜುನ್ ರಥೋತ್ಸವದಲ್ಲಿ ಭಾಗವಹಿಸಿದ್ದರು ಮತ್ತು ದ್ಯಾಮವ್ವ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.ಮಧು ಬಂಗಾರಪ್ಪ ಸಹ ತಮ್ಮ ಕುಟುಂಬ ಸಮೇತರಾಗಿ ಆಗಮಿಸಿ, ರಥೋತ್ಸವದಲ್ಲಿ ಭಾಗವಹಿಸಿ, ಪೂಜೆ ಸಲ್ಲಿಸಿದರು.
ಮಧು ಬಂಗಾರಪ್ಪ ಮೆರವಣಿಗೆಯಲ್ಲಿ ಪಾಲ್ಗೊಂಡು ಎಸ್. ಬಂಗಾರಪ್ಪ ಅವರು ಪ್ರೀತಿಸಿ, ಆಹ್ವಾದಿಸುತ್ತಿದ್ದ ಜಾನಪದ ಕಲೆ ಡೊಳ್ಳು ನೃತ್ಯ ತಂಡದೊಂದಿಗೆ ಸೊಂಟಕ್ಕೆ ಡೊಳ್ಳು ಕಟ್ಟಿ ಹೆಜ್ಜೆ ಹಾಕಿದರು. ಇವರ ಜೊತೆಗೆ ಎಸ್. ಬಂಗಾರಪ್ಪನವರ ಹಿರಿಯ ಪುತ್ರಿ ಸುಜಾತಾ ತಿಲಕ್‌ಕುಮಾರ್ ಅವರ ಪುತ್ರಿ ಸೌಭಾಗ್ಯಲಕ್ಷ್ಮೀ ಕೂಡಾ ಹೆಜ್ಜೆ ಹಾಕಿದರು. ಮೆರವಣಿಗೆಯ ಬ್ಯಾಂಡ್‌ಸೆಟ್‌ನ ರನ್ನಿಂಗ್ ಆರ್ಕೆಸ್ಟ್ರಾ ದಲ್ಲಿ ಶಾಸಕ ಕುಮಾರ ಬಂಗಾರಪ್ಪ ಅಶ್ವಮೇಧ ಚಲನಚಿತ್ರದ ಹೃದಯ ಸಮುದ್ರ ಕಲಕಿ, ಹೊತ್ತಿದೆ ದ್ವೇಷದ ಬೆಂಕಿ… ಗೀತೆಯನ್ನು ಹಾಡಿದರು.
ಎಸ್. ಬಂಗಾರಪ್ಪ ಅವರ ಇಡೀ ಕುಟುಂಬ ಮತ್ತು ಅಭಿಮಾನಿ ಬಳಗ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ನೃತ್ಯ, ಹಾಡು, ಡೊಳ್ಳು ಕುಣಿತ ದೊಂದಿಗೆ ೧೫ ವರ್ಷಗಳಿಗೊಮ್ಮೆ ನಡೆಯುವ ದ್ವಾಮವ್ವ ಜಾತ್ರೆಗೆ ಮೆರಗು ತಂದರು.