ಸಾಗರ:
ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಜನರ ಗಮನಕ್ಕೆ ತಾರದೇ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾವಣೆ ಮಾಡುತ್ತಾ ಜನರು ಸಂಕಷ್ಟಕ್ಕೆ ಸಿಗುತ್ತಾ ಇದ್ದರೆ ಸಾಗರ ಕ್ಷೇತ್ರದ ಶಾಸಕರು ಕೆರೆ ಹಬ್ಬದಲ್ಲಿ ಕಳೆದು ಹೋಗಿದ್ದಾರೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಆರೋಪಿಸಿದರು.
ದ್ವೀಪದ ಹೊಸಕೊಪ್ಪ ಸಭಾಂಗಣದಲೀ ಕಾಂಗ್ರೆಸ್ ಸ್ಥಳೀಯ ಘಟಕ ಆಯೋಜಿಸಿದ್ದ ಆಂಬಾರಗುಡ್ಡ ಪಾದಯಾತ್ರೆ ಪೂರ್ವಭಾವಿ ಸಭೆಯಲ್ಲಿ ಕರ ಪತ್ರ ಬಿಡುಗಡೆ ಮಾಡಿ ಅವರು ಮಾತಾಡಿದರು.
ಜನಪ್ರತಿಗಳು ಜನರ ನಿಜ ಸಂಕಟಗಳಿಗೆ ದ್ವನಿ ಆಗಬೇಕು. ಅಂಬಾರಗುಡ್ಡ ವಿಚಾರದಲ್ಲಿ ಜನವಸತಿ ಪ್ರದೇಶಗಳನ್ನು ಸೇರಿಸಿ ಕಂದಾಯ ಭೂಮಿಯನ್ನು ಜೈವಿಕ ವೈವಿಧ್ಯ ವಲಯ ಭಾಗವಾಗಿ ಅರಣ್ಯ ಇಲಾಖೆಗೆ ಹಕ್ಕು ಬದಲಾವಣೆ ಮಾಡಲಾಗಿದೆ. ಸರ್ಕಾರದ ಮೇಲೆ ಒತ್ತಡ ತರಬೇಕಾದ ಶಾಸಕರು ಮೌನವಾಗಿದ್ದಾರೆ ಎಂದರು.
ರಾಜಕೀಯ ಎನ್ನುವುದು ಜನರ ಹೋರಾಟದ ಭಾಗ ಆಗಬೇಕು ಹೊರತಾಗಿ ವ್ಯವಹಾರಿಕ ಆಗಕೂಡದು ಭೂಮಿ ಹೋರಾಟ ಹೊತ್ತಿನಲ್ಲಿ ಲೋಹಿಯಾ ನಮಗೆ ಇದನ್ನೇ ಪಾಠವಾಗಿ ಭೋದನೆ ಮಾಡಿದರು. ಅದನ್ನೇ ಇಂದಿಗೂ ಜಾರಿಯಲ್ಲಿ ಇಟ್ಟಿದ್ದೇನೆ ಎಂದು ವಿವರಿಸಿದರು.
ಅಂಬಾರಗುಡ್ಡ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡ ತೀರ್ಮಾನ ವಿರುದ್ದ ಜನತಾ ಹೋರಾಟ ಸಂಘಟಿಸಿ ಉತ್ತರ ನೀಡಬೇಕಾಗಿದ್ದು ಜನರು ಸ್ವಯಂ ಪ್ರೇರಣೆಯಿಂದ ಫೆಬ್ರವರಿ 16 ರ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ಆರ್ ಜಯಂತ್ ಮಾತನಾಡಿ ಅಂಬಾರಗುಡ್ಡ ತಪ್ಪಲಿನಲ್ಲಿ ಇರುವ 3750 ಎಕರೆ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾವಣೆ ಮಾಡುವ ಮುನ್ನ ನಿಯಮಾವಳಿಗಳನ್ನ ಪಾಲನೆ ಮಾಡದೇ ಸ್ಥಳೀಯ ನಿವಾಸಿಗಳ ವಂಚಿಸಲಾಗಿದೆ ಎಂದರು.
ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರ ಈ ರೀತಿ ಜನ ವಿರೋಧಿ ನಿಲುವು ತಾಳಿದೆ. ಹದಿನೈದು ವರ್ಷಗಳ ಹಿಂದೆ ಅಂಬಾರಗುಡ್ಡ ಗಣಿಗಾರಿಕೆ ಆರಂಭ ಆದಾಗ ಸರ್ಕಾರ ಸುಮ್ಮನೆ ಇತ್ತು. ಆದರೆ ಜನ ಹೋರಾಟ ಮಾಡಿ ಗುಡ್ಡ ಉಳಿಸಿಕೊಂಡರು. ಈಗ ಅದೇ ಜನರನ್ನ ಸರಕಾರ ಅನಾಥ ಮಾಡುತ್ತಾ ಇದೆ ಎಂದು ಆರೋಪಿಸಿದರು.
ವೇದಿಕೆಯಲ್ಲಿ ಮಾಜಿ ತಾ ಪಂ ಅಧ್ಯಕ್ಷರಾದ ನಾಗರಾಜ್ ಗೌಡ, ಹರೀಶ್ ಗಂಟೆ, ಪಂಚಾಯತ್ ಘಟಕ ಅಧ್ಯಕ್ಷ ರಾದ ಓಂಕಾರ ಜೈನ್, ರವಿ ಅಳೂರು , ಗಣೇಶ್ ಜಾಕಿ, ವಿಜಯ ಅಡಗಳಲೆ ಹಾಜರಿದ್ದರು.
.