Malenadu Mitra
ರಾಜ್ಯ ಶಿವಮೊಗ್ಗ

ಅತ್ತೂ ಕರೆದ ಬಳಿಕ ಔತಣ, ಶ್ರೀನಾರಾಯಣಗುರು ಅಭಿವೃದ್ಧಿ ನಿಗಮ ರಚನೆ ಮಾಡಿದ ರಾಜ್ಯ ಸರಕಾರ

ಶಿವಮೊಗ್ಗ,ಫೆ.೨೦: ಅತ್ತೂ ಕರೆದ ಬಳಿಕ ಔತಣ ಕೊಟ್ಟರು ಎನ್ನುವಂತೆ ರಾಜ್ಯಸರಕಾರ ಕೊನೆಗೂ ಈಡಿಗ ಸಮುದಾಯದ ಬಹುಕಾಲದ ಬೇಡಿಕೆಯಾದ ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ರಚನೆ ಮಾಡಿ ಆದೇಶ ಹೊರಡಿಸಿದೆ.
ಬಜೆಟ್‌ನಲ್ಲಿ ಘೋಷಣೆ ಮಾಡಬಹುದೆಂಬ ನಿರೀಕ್ಷೆ ಹುಸಿಯಾದ ಬಳಿಕ ಸಮುದಾಯ ಪ್ರತಿನಿಧಿಸುವ ಸಚಿವರಾದ ಕೋಟಶ್ರೀನಿವಾಸ ಪೂಜಾರಿ, ವಿ.ಸುನೀಲ್ ಕುಮಾರ್, ಶಾಸಕ ಹರತಾಳು ಹಾಲಪ್ಪ ಹಾಗೂ ಕುಮಾರ ಬಂಗಾರಪ್ಪ ಮತ್ತಿತರರು ಮುಖ್ಯಮಂತ್ರಿ ಬಳಿ ಒತ್ತಡ ಹೇರಿದ್ದರಿಂದ ಸೋಮವಾರ ಈಡಿಗ,ಬಿಲ್ಲವ ಸೇರಿದಂತೆ ೨೬ ಉಪಪಂಗಡಗಳ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಶ್ರೀನಾರಾಯಣಗುರು ಅಭಿವೃದ್ಧಿ ನಿಗಮ ರಚನೆ ಮಾಡಿ ಆದೇಶ ಹೊರಡಿಸಲಾಗಿದೆ.


ಈಡಿಗ ಅಭಿವೃದ್ಧಿ ನಿಗಮ ರಚನೆ ಮಾಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇತ್ತು. ಸಮಾಜದ ಸರ್ವ ಸಂಘಟನೆಗಳು ಶ್ರೀ ನಾರಾಯಣಗುರು ವಿಚಾರವೇದಿಕೆ ಸಾರಥ್ಯದಲ್ಲಿ ಇತ್ತೀಚೆಗೆ ಶಿವಮೊಗ್ಗದಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶವನ್ನು ಮಾಡಿದ್ದವು. ಇತರೆ ಬೇಡಿಕೆಗಳೊಂದಿಗೆ ನಿಗಮದ ಬೇಡಿಕೆಯೂ ಪ್ರಮುಖವಾಗಿತ್ತು. ಕಲ್ಬುರ್ಗಿ ಜಿಲ್ಲೆಯಲ್ಲಿ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್ ನೇತೃತ್ವದಲ್ಲಿಯೂ ಹೋರಟಗಳು ನಡೆದಿದ್ದವು. ಪ್ರಣವಾನಂದ ಸ್ವಾಮೀಜಿ ತಮ್ಮ ಅನುಯಾಯಿಗಳ ಜತೆ ಮಂಗಳೂರಿಂದ ಬೆಂಗಳೂರು ತನಕ ಪಾದಯಾತ್ರೆ ಮಾಡುವ ಮೂಲಕ ನಿಗಮ ರಚನೆಗೆ ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಳೆದ ತಿಂಗಳು ಸಚಿವ ಸುನೀಲ್ ಕುಮಾರ್, ಶಾಸಕ ಹಾಲಪ್ಪ ಅವರು ನೇತೃತ್ವದಲ್ಲಿ ಈಡಿಗ ಸಮುದಾಯ ಶ್ರೀರೇಣುಕಾನಂದ ಸ್ವಾಮೀಜಿ, ವಿಖ್ಯಾತಾನಂದ ಸ್ವಾಮೀಜಿ ಹಾಗೂ ರಾಜ್ಯ ಆರ್ಯ ಈಡಿಗರ ಸಂಘದ ರಾಜ್ಯ ಅಧ್ಯಕ್ಷ ತಿಮ್ಮೇಗೌಡರ ಸಮ್ಮುಖದಲ್ಲಿ ಈಡಿಗ ಸಮುದಾಯಕ್ಕೆ ಪ್ರತ್ಯೇಕ ನಿಗಮ ರಚನೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದರು.
ನಿಗಮ ಘೋಷಣೆ ಆಗಿದ್ದರೂ, ಮೊನ್ನೆ ಮುಖ್ಯಮಂತ್ರಿ ಅವರು ಮಂಡಿಸಿದ್ದ ಬಜೆಟ್‌ನಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲದ ಕಾರಣ ಈಡಿಗ, ಬಿಲ್ಲವ, ನಾಮಧಾರಿ ಸೇರಿದಂತೆ ಈಡಿಗ ಸಮುದಾಯದ  ಉಪಪಂಗಡಗಳಲ್ಲಿ ಸರಕಾರ ಸಮುದಾಯವನ್ನು ಕಡೆಗಣಿಸಿದೆ ಎಂಬ ಭಾವನೆ ಮೂಡುವಂತಾಗಿತ್ತು.


ಅನುದಾನದ ಪ್ರಸ್ತಾಪವಿಲ್ಲ:
ಸೋಮವಾರ ರಾಜ್ಯಸರಕಾರ ಅಧಿಕೃತ ಆದೇಶ(ಹಿಂವಕ ೨೧೪ಬಿಸಿಎ೨೦೨೨,ದಿನಾಂಕ ೨೦.೨.೨೦೨೩) ಹೊರಡಿಸಿ ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮವನ್ನು ರಚನೆ ಮಾಡಿದೆ. ರಾಜ್ಯದ ನಾಲ್ಕನೇ ದೊಡ್ಡ ಸಮುದಾಯವಾದ ಈಡಿಗರ ನಿಗಮಕ್ಕೆ ೫೦೦ ಕೋಟಿ ರೂ. ಅನುದಾನ ಮೀಸಲಿಡಬೇಕೆಂಬ ಬೇಡಿಕೆ ಇತ್ತಾದರೂ ಸರಕಾರ ಹೊರಡಿಸಿರುವ ಆದೇಶದಲ್ಲಿ ಮೀಸಲಿಟ್ಟ ಅನುದಾನದ ಬಗ್ಗೆ ಯಾವುದೇ ಪ್ರಸ್ತಾಪ ಇರುವುದಿಲ್ಲ.
ನಿಗಮ ರಚನೆ ಆದೇಶ ಮಾತ್ರ ಮಾಡಿದರೆ ಸಾಲದು ಅದರ ಸಾಂಸ್ಥಿಕ ರಚನೆಗೆ ಕಾಲಾವಕಾಶದ ಅವಶ್ಯಕತೆ ಇದೆ. ನಿಗಮಕ್ಕೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕ, ಕಚೇರಿ, ಸಿಬ್ಬಂದಿ ಈ ಎಲ್ಲಾ ಪ್ರಕ್ರಿಯೆಗಳನ್ನು ಸರಕಾರ ಮಡಬೇಕಿದೆ. ಆದರೆ ವಿಧಾನ ಸಭೆ ಚುನಾವಣೆ ತಿಂಗಳೊಪ್ಪತ್ತಲ್ಲಿ ಘೋಷಣೆಯಾಗಲಿದ್ದು, ಯಾವ ರೀತಿ ಸಂರಚನೆ ಆಗಲಿದೆ ಎಂಬುದಿಲ್ಲಿ ಕುತೂಹಲದ ಪ್ರಶ್ನೆಯಾಗಿದೆ.

ಬಜೆಟ್‌ನಲ್ಲಿ ನಿಗಮ ಘೋಷಣೆ ಆಗಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಸಮಾಜ ಬಾಂಧವರ ಬಹುದಿನಗಳ ಬೇಡಿಕೆಯನ್ನು ಸರಕಾರ ಪೂರೈಸಿದೆ. ಇದಕ್ಕಾಗಿ ಮುಖ್ಯಮಂತ್ರಿಯನ್ನು ಅಭಿನಂದಿಸುತ್ತೇನೆ. ಈ ಸಂಬಂಧದ ಯಾವುದೇ ವದಂತಿಗಳಿಗೆ ಬಂಧುಗಳು ಕಿವಿಗೊಡಬಾರದು.

ಹರತಾಳು ಹಾಲಪ್ಪ, ಶಾಸಕರು , ಸಾಗರ ಕ್ಷೇತ್ರ

ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ರಚನೆ ಮಾಡಿರುವ ಸರಕಾರ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಸಮಸ್ತ ಕುಲ ಬಾಂಧವರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ. ಈ ಆದೇಶ ಹೊರಡಿಸುವಲ್ಲಿ ಶತಪ್ರಯತ್ನ ಮಾಡಿರುವ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಅಭಿನಂದನೆ ಸಲ್ಲಿಸುವೆ. ಸಮುದಾಯದ ಜನರ ಕೂಗನ್ನು ಕೇಳಿ ಅದನ್ನು ಸಿಎಂ ಅವರಿಗೆ ಮನವರಿಕೆ ಮಾಡಿ ಆದೇಶ ಹೊರಡಿಸಿದ್ದ ಶ್ರೇಯಸ್ಸು ಶ್ರೀನಿವಾಸ್ ಪೂಜಾರಿಯವರಿಗೆ ಸಲ್ಲಬೇಕು. ಸಮುದಾಯದ ಉಳಿದ ಬೇಡಿಕೆಗಳನ್ನು ಸರಕಾರ ಪರಿಗಣಿಸಬೇಕು

ಶ್ರೀ ಪ್ರಣವಾನಂದ ಸ್ವಾಮೀಜಿ, ಶ್ರೀನಾರಾಯಣಗುರು ಶಕ್ತಿ ಪೀಠ

Ad Widget

Related posts

ವಾಹನ ಜಖಂ: ಇಬ್ಬರು ಆರೋಪಿಗಳ ಬಂಧನ

Malenadu Mirror Desk

ಕೊರೊನ ಆರ್ಥಿಕ ಸಂಕಷ್ಟ:ತಾಯಿ ಮಗಳು ಸಾವು

Malenadu Mirror Desk

ಶಿವಮೊಗ್ಗ ಸಾಹಿತ್ಯ ಪರಿಷತ್ ಚುನಾವಣೆ: ಯಾರಿಗೆ ಎಷ್ಟು ಮತ ಗೊತ್ತಾ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.