Malenadu Mitra
ರಾಜ್ಯ ಶಿವಮೊಗ್ಗ ಹೊಸನಗರ

ನಾರಾಯಣಗುರು ಅಭಿವೃದ್ಧಿ ನಿಗಮ ರಚನೆ: ಸರಕಾರಕ್ಕೆ ರೇಣುಕಾನಂದ ಶ್ರೀ ಅಭಿನಂದನೆ, ಹೋರಾಟಕ್ಕೆ ಸಂದ ಜಯ ಎಂದ ಸ್ವಾಮೀಜಿ, ಅನುದಾನ ಬಿಡುಗಡೆಗೆ ಸರಕಾರಕ್ಕೆ ಒತ್ತಾಯ

ಶಿವಮೊಗ್ಗ,ಫೆ.೨೧: ರಾಜ್ಯದ ನಾಲ್ಕನೇ ಅತಿದೊಡ್ಡ ಸಮುದಾಯವಾದ ಈಡಿಗ ಸಮುದಾಯದ ಎಲ್ಲಾ ೨೬ ಒಳಪಂಗಡಗಳನ್ನು ಪ್ರತಿನಿಧಿಸುವ ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮವನ್ನು ರಚನೆ ಮಾಡಿರುವ ರಾಜ್ಯಸರಕಾರವನ್ನು ಹೊಸನಗರ ತಾಲೂಕು ನಿಟ್ಟೂರಿನ ಶ್ರೀ ನಾರಾಯಣಗುರು ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ರೇಣುಕಾನಂದ ಸ್ವಾಮೀಜಿ ಅಭಿನಂದಿಸಿದ್ದಾರೆ.

ಮಂಗಳವಾರ ಶಿವಮೊಗ್ಗ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಈಡಿಗ,ಬಿಲ್ಲವ,ದೀವರು, ನಾಮಧಾರಿ ಸೇರಿದಂತೆ ೨೬ ಒಳಪಂಗಡಗಳನ್ನು ಒಳಗೊಂಡ ಈಡಿಗ ಸಮುದಾಯದ ಅಭಿವೃದ್ಧಿಗೆ ಅಭಿವೃದ್ಧಿ ನಿಗಮ ಮಾಡಿರುವ ಸರಕಾರದ ನಿರ್ಧಾರವನ್ನು ಸಮಸ್ತ ಕುಲಬಾಂಧವರ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ.

ಅನೇಕ ವರ್ಷಗಳ ಬೇಡಿಕೆಯಾದ ನಿಗಮವನ್ನು ಸರಕಾರ ರಚನೆ ಮಾಡಿ ಆದೇಶ ಹೊರಡಿಸಿರುವುದು ಹರ್ಷ ತಂದಿದೆ. ರಾಜ್ಯಸರಕಾರದ ಮೇಲೆ ಒತ್ತಡ ಹಾಕಿರುವ ಮಂತ್ರಿಗಳಾದ ಶ್ರೀಯುತ ಸುನೀಲ್ ಕುಮಾರ್, ಕೋಟ ಶ್ರೀನಿವಾಸ್ ಪೂಜಾರಿ, ಶಾಸಕರಾದ ಹರತಾಳು ಹಾಲಪ್ಪ, ಕುಮಾರ ಬಂಗಾರಪ್ಪ, ಸಹಕರಿಸಿದ ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಸಂಸದರಾದ ಬಿ.ವೈರಾಘವೇಂದ್ರ, ಕೆ.ಎಸ್.ಈಶ್ವರಪ್ಪ ಅವರುಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಸ್ವಾಮೀಜಿ ಹೇಳಿದರು.

ಕಳೆದ ತಿಂಗಳು ನಾವು ರಾಜ್ಯ ಈಡಿಗ ಸಂಘ, ಬಿಲ್ಲವ ಸಂಘ ಸೇರಿದಂತೆ ಹಲವು ಸಂಘಟನೆಗಳು ಶಾಸಕರಾದ  ಹರತಾಳು ಹಾಲಪ್ಪ, ಸಚಿವ ಸುನೀಲ್ ಕುಮಾರ್ ಅವರೊಡಗೂಡಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆವೆ. ಅಂದೇ ನಿಗಮ ಘೋಷಣೆ ಆಗಿತ್ತಾದರೂ ಆದೇಶ ಆಗಿರಲಿಲ್ಲ. ಸೋಮವಾರ ಈ ಸಂಬಂಧ ಆದೇಶ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ನಿಗಮಕ್ಕೆ ಕನಿಷ್ಟಪಕ್ಷ ೫೦೦ ಕೋಟಿ ರೂ.ಗಳನ್ನು ಮೀಸಲಿಡಬೇಕು. ನಿಗಮ ಬೇಕೆಂದು ಸಮಾಜ ಬಾಂಧವರು ರಾಜ್ಯದಾದ್ಯಂತ ಹೋರಾಟ ಮಾಡಿದ್ದಾರೆ. ಸ್ವಾಮೀಜಿಗಳು ಸರಕಾರದ ಮೇಲೆ ಒತ್ತಡ ಹಾಕಿದ್ದರು. ಎಲ್ಲರ ಹೋರಾಟದ ಫಲವಾಗಿ ಸರಕಾರ ಈಗ ನಿಗಮ ಘೋಷಣೆ ಮಾಡಿದೆ. ರಾಜ್ಯದ ಸಮಸ್ತ ಈಡಿಗ ಸಮುದಾಯದ ಧ್ವನಿಗೆ ಸರಕಾರ ಮನ್ನಣೆ ನೀಡಿರುವುದು ನಮಗೆ ಸಂತೋಷ ತಂದಿದೆ. ನಿಗಮದ ಕಾರ್ಯಚಟುವಟಿಕೆಯನ್ನು ಸರಕಾರ ಶೀಘ್ರ ಆರಂಭಿಸಬೇಕು ಎಂದು ರೇಣುಕಾನಂದ ಸ್ವಾಮೀಜಿ ಒತ್ತಾಯಿಸಿದರು.

ಉದ್ಯಮಿ ಹಾಗೂ ಈಡಿಗ ಸಮಾಜದ ಪ್ರಮುಖರಾದ ಸುರೇಶ್‌ಬಾಳೆಗುಂಡಿ ಅವರು ಮಾತನಾಡಿ, ಸರಕಾರ ಚುನಾವಣೆ ಹೊಸ್ತಿಲಲ್ಲಿ ನಿಗಮ ಘೋಷಣೆ ಮಾಡಿರುವುದು ರಾಜಕೀಯ ಕಾರಣ ಎಂದು ಹೇಳಲಾಗುವು. ಸರಕಾರಿ ಆದೇಶ ಆದ ಮೇಲೆ ಮುಂದೆ ಯಾವ ಸರಕಾರ ಬಂದರೂ ಮುಂದಿನ ಪ್ರಕ್ರಿಯೆಗಳನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.
ರಾಜ್ಯಸರಕಾರ ದೊಡ್ಡ ಸಮುದಾಯದ ಬೇಡಿಕೆಗೆ ಸ್ಪಂದಿಸಿರುವುದು ಸಮಾಜಕ್ಕೆ ನೀಡಿದ ಗೌರವ. ಇದಕ್ಕೆ ಕಾರಣರಾದ ಹೋರಾಟಗಾರರು, ಜನಪ್ರತಿನಿಧಿಗಳು ಹಾಗೂ ಸಮಾಜದ ವಿವಿಧ ಸಂಘಟನೆಗಳಿಗೆ ನಾವು ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದರು.

ಬ್ರಹ್ಮಶ್ರೀ ನಾರಾಯಣಗುರು ಜಿಲ್ಲಾ ಆರ್ಯ ಈಡಿಗ ಮಹಿಳಾಸಂಘದ ಅಧ್ಯಕ್ಷೆ ಗೀತಾಂಜಲಿ ದತ್ತಾತ್ರೇಯ ಅವರು ಮಾತನಾಡಿ, ಈಡಿಗ ಸಮಾಜದ ಹಲವು ಬೇಡಿಕೆಗಳಲ್ಲಿ ನಿಗಮ ಬೇಡಿಕೆಯನ್ನು ಈಡೇರಿಸಿರುವುದು ಸಂತಸ ತಂದಿದೆ ಎಂದು ಹೇಳಿದರು
ಈಡಿಗ ಸಮಾಜದ ಪ್ರಮುಖರಾದ ಎ.ಬಿ.ರುದ್ರಪ್ಪ, ಡಿ.ದೇವಪ್ಪ, ಸುದರ್ಶನ, ಕೃಷ್ಣಪ್ಪ, ವೀಣಾ ವೆಂಕಟೇಶ್, ಮಹೇಶ್ ಬ್ಲೂಮನ್, ಬಂಡಿ ದಿನೇಶ್, ರಮೇಶ್‌ಬಿದರಹಳ್ಳಿ, ಹೊಸಮನೆ ಉಮೇಶ್ ಮತ್ತಿತರರಿದ್ದರು.

ಸಮಾಜದ ನೇತರರಾದ ಎಸ್.ಬಂಗಾರಪ್ಪ, ಕಾಗೋಡು ತಿಮ್ಮಪ್ಪ , ಸ್ವಾಮಿರಾವ್ ಅವರು ಅನೇಕ ರೈತರಿಗೆ ಹಕ್ಕುಪತ್ರ ಕೊಡಿಸಲು ಹೋರಾಟ ಮಾಡಿದ್ದಾರೆ. ಆದರೆ ಶರಾವತಿ ಸಂತ್ರಸ್ತರ ಸಮಸ್ಯೆ ಇನ್ನೂ ಹಾಗೆಯೇ ಇದೆ. ಈ ಬಗ್ಗೆ ಸರಕಾರ ಆದ್ಯತೆ ನೀಡಿ ರೈತರಿಗೆ ಉಳುವ ಭೂಮಿಗೆ ಹಕ್ಕುದಾರಿಕೆ ಕೊಡಬೇಕು

ಶ್ರೀ ರೇಣುಕಾನಂದ ಸ್ವಾಮೀಜಿ

ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ನಮ್ಮ ಸಮಾಜದ ಪ್ರಶ್ನಾತೀತ ನಾಯಕರು, ಈಡಿಗ ಸಮಾಜದ ಅಸ್ಮಿತೆಯಾದ ಎಸ್.ಬಂಗಾರಪ್ಪ ಅವರ ಹೆಸರನ್ನು ಇಡಬೇಕೆಂಬ ಬೇಡಿಕೆ ಸಮಾಜದ್ದಾಗಿತ್ತು. ಈ ಸಂಬಂಧ ಈಗಾಗಲೇ ಸರಕಾರದ ಮೇಲೆ ಒತ್ತಡ ಹಾಕಲಾಗಿತ್ತು. ಸಮುದಾಯದ ನಾಯಕರ ನಾಮಕರಣ ಮಾಡಿದ್ದರೆ, ಸಂತೋಷವಾಗುತಿತ್ತು. ಸರಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ.

ಸುರೇಶ್‌ಬಾಳೆಗುಂಡಿ

Ad Widget

Related posts

ಕಮಲಾಂಕೃತ ಶಿವಮೊಗ್ಗೆ, ಹಾಡಿ ಕುಣಿದ ನಾಯಕರು

Malenadu Mirror Desk

ಶಾರದಾ ಪೂರ್‍ಯಾನಾಯ್ಕ್ ನೇತೃತ್ವದಲ್ಲಿಜೆಡಿಎಸ್ ಪ್ರತಿಭಟನೆ

Malenadu Mirror Desk

ದೇವಸ್ಥಾನಕ್ಕೆ ದೇಣಿಗೆ ನೀಡಿದ ಬಿಕ್ಷುಕಿ,ಆಂಜನೇಯನಿಗೆ ಬೆಳ್ಳಿ ಮುಖವಾಡ ಮಾಡಿಸಿ ಎಂದು ಅಜ್ಜಿ ನೀಡಿದ ಹಣ ಎಷ್ಟು ಗೊತ್ತಾ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.