ಶಿವಮೊಗ್ಗ, ಫೆ.೨೧: ಬಹುನಿರೀಕ್ಷಿತ ಶಿವಮೊಗ್ಗ ವಿಮಾನ ನಿಲ್ದಾಣದಕ್ಕೆ ಮೊದಲ ಲೋಹದ ಹಕ್ಕಿ ಹಾರಿಬಂದಿದ್ದು, ಮಲೆನಾಡಿನ ಜನರನು ಪುಳಕಿತಗೊಳಿಸಿತು. ಶಿವಮೊಗ್ಗದ ಅಭಿವೃದ್ಧಿ ಪರ್ವಕ್ಕೆ ವಿಮಾನ ನಿಲ್ದಾಣವೊಂದು ಕೊರತೆಯಾಗಿತ್ತು. ಆ ಬಯಕೆ ಈಗ ಈಡೇರಿದಂತಾಗಿದೆ. ಶಿವಮೊಗ್ಗ ಹಾಗೂ ಸುತ್ತಮುತ್ತಲ ಜಿಲ್ಲೆಗಳ ಆರ್ಥಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ವಿಮಾನ ನಿಲ್ದಾಣವನ್ನುನಿರ್ಮಿಸುವಲ್ಲಿ ಸರಕಾರ ಯಶಸ್ವಿಯಾಗಿದೆ. ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವರ ಕನಸಿನ ಯೋಜನೆಯಾದ ಈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೊದಲ ವಿಮಾನ ಸಹಜವಾಗಿಯೇ ಸಂತಸ ಮೂಡಿಸಿದೆ. ಪರೀಕ್ಷಾರ್ಥ ಹಾರಟವಾಗಿ ಭಾರತೀಯ ವಾಯುಸೇನೆಯ ಮೊಟ್ಟ ಮೊದಲ ವಿಮಾನವು ಮಂಗಳವಾರ ಮಧ್ಯಾಹ್ನ ೨.೩೦ಕ್ಕೆ ಲ್ಯಾಂಡ್ ಆಯಿತು.
ನಿಲ್ದಾಣಕ್ಕೆ ಆಗಮಿಸಿದ ಮೊಟ್ಟ ಮೊದಲ ವಿಮಾನಕ್ಕೆ ಅಗ್ನಿ ಶಾಮಕದಳದ ಎರಡು ವಾಹನಗಳು ನೀರ ನಮನ(ವಾಟರ್ ಸೆಲ್ಯೂಟ್) ಸಲ್ಲಿಸುವ ಮೂಲಕ ಸ್ವಾಗತ ಕೋರಿದವು.
ವಾಯುಸೇನೆಯ ಬೋಯಿಂಗ್ ೭೩೭-೭ಎಚ್೧ ಮಾದರಿಯ ವಿಮಾನವು ದಿಲ್ಲಿಯಿಂದ ಮಧ್ಯಾಹ್ನ ೧೨ಗಂಟೆಗೆ ಹೊರಟು ಮಧ್ಯಾಹ್ನ ೨.೩೦ಕ್ಕೆ ಶಿವಮೊಗ್ಗಕ್ಕೆ ಬಂದಿಳಿಯಿತು. ಮತ್ತೆ ಮಧ್ಯಾಹ್ನ ೩ಗಂಟೆಗೆ ಟೇಕಾಫ್ ಆಯಿತು. ಹೊಸ ನಿಲ್ದಾಣ ಅಲ್ಲದೆ ಫೆ.೨೭ರಂದು ಪ್ರಧಾನಿ ನರೇಂದ್ರ ಮೋದಿ ಅವರು ದಿಲ್ಲಿಯಿಂದ ವಿಶೇಷ ವಿಮಾನದಲ್ಲಿ ನೇರವಾಗಿ ಶಿವಮೊಗ್ಗಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷಾರ್ಥ ಹಾರಾಟ, ಲ್ಯಾಂಡಿಂಗ್ ಮತ್ತು ಟೇಕಾಫ್ ನಡೆಸಲಾಯಿತು. ಮೊದಲ ವಿಮಾನವಾದ್ದರಿಂದ ಮೊದಲಿಗೆ ಸ್ವಲ್ಪ ದೂಳು ಮೇಲೆದ್ದಿದ್ದು ಬಿಟ್ಟರೆ ಒಟ್ಟಾರೆಯಾಗಿ ವಿಮಾನ ಸ್ಮೂತ್ ಲ್ಯಾಂಡಿಂಗ್ ಆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ಹಾರಾಟಕ್ಕೆ ಪರವಾನಗಿ:
ನೂತನ ವಿಮಾನ ನಿಲ್ದಾಣಕ್ಕೆ ಡಿಜಿಸಿಎ, ಎಎಐ ಸೇರಿದಂತೆ ಕೇಂದ್ರದ ಎಲ್ಲ ಇಲಾಖೆಗಳು ಮತ್ತು ಪ್ರಾಧಿಕಾರಗಳಿಂದ ಅನುಮತಿ ಲಭ್ಯವಾಗಿದೆ. ಹೀಗಾಗಿ ಮಂಗಳವಾರದಿಂದಲೆ ವಾಯುಸೇನೆಯಿಂದ ವಿಮಾನಗಳ ಪರೀಕ್ಷಾರ್ಥ ಹಾರಾಟ ಆರಂಭಿಸಲಾಗಿದೆ. ಮೊದಲ ಪ್ರಯತ್ನವು ಸುಸೂತ್ರವಾಗಿ ನಡೆದಿರುವುದು ನಮ್ಮೆಲ್ಲರಲ್ಲಿ ಸಂತಸ ಮೂಡಿಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ವಿಮಾನ ನಿಲ್ದಾಣದ ನಿರ್ವಹಣೆ ಯಾರಿಗೆ ವಹಿಸಬೇಕೆಂಬ ಚರ್ಚೆ ನಡೆದಿತ್ತು. ಅಂತಿಮವಾಗಿ ರಾಜ್ಯ ಸರಕಾರವೇ ಅದರ ನಿರ್ವಹಣೆ ಹೊಣೆ ಹೊತ್ತುಕೊಂಡಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ತಾಂತ್ರಿಕ ನಿರ್ವಹಣೆ ಜವಾಬ್ದಾರಿಯನ್ನು ತೆಗೆದುಕೊಂಡಿದೆ ಎಂದರು.
ವೈರಲ್ ಆದ ವಿಮಾನ:
ಮೊದಲ ವಿಮಾನವು ಬಂದಿಳಿಯುವ ದೃಶ್ಯವನ್ನು ಸುತ್ತಮುತ್ತಲ ಗ್ರಾಮಸ್ಥರು ನೋಡಿ ಸಂಭ್ರಮಿಸಿದರು. ಕಟ್ಟಡಗಳ ಮೇಲೆ ಹತ್ತಿ ಮೊಬೈಲ್‌ಗಳಲ್ಲಿ ವಿಮಾನ ಇಳಿಯುವ ಮತ್ತು ಮೇಲೇರುವ ದೃಶ್ಯಗಳನ್ನು ಸೆರೆ ಹಿಡಿದು ಸಂಭ್ರಮಿಸಿದರು. ಮೊದಲ ವಿಮಾನದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬಿಜೆಪಿ ಕಾರ್ಯಕರ್ತರು ಪೈಪೋಟಿ ಮೇಲೆ ವಿಡಿಯೊ ಹಂಚಿಕೊಂಡಿದ್ದು, ವಿಶೇಷವಾಗಿತ್ತು.