ಶಿವಮೊಗ್ಗ ವಿಮಾನ ನಿಲ್ದಾಣ ಫೆ.೨೭ರಂದು ಉದ್ಘಾಟನೆಯಾಗಲಿದ್ದು, ಇದು ಬಿಜೆಪಿ ಕಾರ್ಯಕ್ರಮವಾಗದೆ ಜಿಲ್ಲಾಡಳಿತದ ಕಾರ್ಯಕ್ರಮವಾಗಬೇಕು. ಪಕ್ಷಾತೀತವಾಗಿ ನಡೆಯಬೇಕು ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎನ್. ರಮೇಶ್ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗಕ್ಕೆ ವಿಮಾನ ನಿಲ್ದಾಣ ಸ್ಥಾಪನೆಯಾಗಿರುವುದು ಮತ್ತು ಅದರ ಉದ್ಘಾಟನೆ ಆಗುತ್ತಿರುವುದು ಸಂತೋಷದ ವಿಷಯವೇ. ಆದರೆ ಈ ಕಾರ್ಯಕ್ರಮವನ್ನು ಬಿಜೆಪಿಯ ನಾಯಕರು ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಲು ಹೊರಟಿದ್ದಾರೆ. ಇದಕ್ಕಾಗಿ ಈಗಾಗಲೇ ಬೂತ್ ಮಟ್ಟದಿಂದ ಜನರನ್ನು ಮತದಾನಕ್ಕೆ ಕರೆತರುವಂತೆ ಕರೆತರುತ್ತಿದ್ದಾರೆ. ಜಿಲ್ಲೆಯ ತುಂಬಾ ಮೂರು ಸಾವಿರ ಬಸ್‌ಗಳನ್ನು ಜನರನ್ನು ಕರೆತರಲೆಂದೇ ಬಿಟ್ಟಿದ್ದಾರೆ. ಜಿಲ್ಲಾಡಳಿತದಿಂದ ಆಗಬೇಕಾದ ಕಾರ್ಯಕ್ರಮ ಬಿಜೆಪಿ ಕಾರ್ಯಕರ್ತರಿಂದ ಆಗುತ್ತಿರುವುದು ಖಂಡನೀಯ ಎಂದರು.
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗುತ್ತಿರುವುದು ಸ್ವಾಗತಾರ್ಹ. ಆದರೆ ಈ ಬಿಜೆಪಿಯವರು ಇದನ್ನೇ ಬಹುದೊಡ್ಡ ಸಾಧನೆಯೆಂದು ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಬಿಂಬಿಸಲು ಹೊರಟಿದ್ದಾರೆ. ಇದೇ ಶಿವಮೊಗ್ಗದಲ್ಲಿ ಕಾಂಗ್ರೆಸ್ ಆಡಳಿತದ ಕಾಲದಲ್ಲಿ ಬೇಕಾದಷ್ಟು ಅಭಿವೃದ್ಧಿ ಕಾಮಗಾರಿಗಳಾಗಿವೆ. ತುಂಗಾ ಅಣೆಕಟ್ಟು, ಭದ್ರಾ ಅಣೆಕಟ್ಟು, ಮೆಗ್ಗಾನ್ ಆಸ್ಪತ್ರೆ ಉನ್ನತೀಕರಣ, ಕುವೆಂಪು ವಿವಿ, ಕುವೆಂಪು ರಂಗಮಂದಿರ, ಪಶುಸಂಗೋಪನೆ, ನವೋದಯ ಶಿಕ್ಷಕಣ ಕೇಂದ್ರ ಹೀಗೆ ಹಲವು ಅಭಿವೃದ್ಧಿಗಳು ನಡೆದಿವೆ ಎಂದರು.
ಇಡೀ ದೇಶದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಎಲ್ಲರಿಗೂ ಗೊತ್ತಿದೆ ಸ್ವಾತಂತ್ರ್ಯ ಬಂದಾಗ ದೇಶದ ಸ್ಥಿತಿ ಹೇಗಿತ್ತು ಎಂಬುದನ್ನು ಬಿಜೆಪಿಯವರು ಮರೆತಂತಿದೆ. ಕೈಗಾರಿಕಾ ಕ್ರಾಂತಿ, ಹಸಿರು ಕ್ರಾಂತಿ, ದೊಡ್ಡದೊಡ್ಡ ನೀರಾವರಿ ಯೋಜನೆಗಳು, ಸಂಪರ್ಕ ಕ್ರಾಂತಿ ಹೀಗೆ ಹಲವು ಕ್ರಾಂತಿಗಳೇ ಕಾಂಗ್ರೆಸ್ ಸರ್ಕಾರದಲ್ಲಿನಡೆದಿವೆ. ಕಾಂಗ್ರೆಸ್ ಹಾಕಿದ ಅಭಿವೃದ್ಧಿ ಎಂಬ ಭದ್ರ ತಳಪಾಯದಲ್ಲಿ ಇವರು ಕಳಪೆ ಮಟ್ಟದ ಕಟ್ಟಡ ಕಟ್ಟಲು ಹೊರಟಿದ್ದಾರೆ ಅಷ್ಟೆ ಎಂದು ವ್ಯಂಗ್ಯವಾಡಿದರು.
ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದ ಕೀರ್ತಿ ಕಾಂಗ್ರೆಸ್‌ನದ್ದು. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡಿದ ಅಪಕೀರ್ತಿ ಬಿಜೆಪಿಯವರದ್ದು. ಕಾರ್ಖಾನೆಗಳು ಮುಚ್ಚಿದವು. ಈಗ ಸರ್ಕಾರದ ಅಂಗ ಎಂದು ಹೇಳಿಕೊಳ್ಳುವ ಯಾವ ಸಂಸ್ಥೆಯೂ ಇಲ್ಲ. ಬಿಎಸ್‌ಎನ್‌ಎಲ್ ಸೇರಿದಂತೆ ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು ಮಾರಾಟ ಮಾಡಲು ಹೊರಟಿದೆ. ಈಗ ಭದ್ರಾವತಿಯ ವಿಐಎಸ್‌ಎಲ್ ಕೂಡ ಸೇರಿಕೊಂಡಿದೆ. ಸಂಸದರು, ಮುಖ್ಯಮಂತ್ರಿಗಳು ಪ್ರಧಾನಿಗೆ ಮನವಿ ಮಾಡಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚಲು ಬಿಡಬಾರದು ಎಂದರು.ಕೇವಲ ವಿಮಾನ ನಿಲ್ದಾಣ ಆದರೆ ಮಾತ್ರ ಸಾಲದು. ಶಿವಮೊಗ್ಗ ಶಾಂತಿಯ ನಿಲ್ದಾಣವಾಗಬೇಕು. ಧರ್ಮದ ನಿಲ್ದಾಣವಾಗಬೇಕು. ಕೋಮುವಾದದ ನಿಲ್ದಾಣವಾಗಬಾರದು. ಉದ್ಯೋಗಗಳು ಸೃಷ್ಟಿಯಾಗಬೇಕು. ಉದ್ದಿಮೆದಾರರು ಬರಲು ಭಯದ ವಾತಾವರಣ ಇರಬಾರದು. ಆಗ ಮಾತ್ರ ವಿಮಾನ ನಿಲ್ದಾಣಕ್ಕೆ ಅರ್ಥ ಬರುತ್ತದೆ. ಈ ನಿಟ್ಟಿನಲ್ಲಿ ಫೆ.೨೭ರಂದು ಉದ್ಘಾಟನೆಯಾಗಲಿರುವ ವಿಮಾನ ನಿಲ್ದಾಣವನ್ನು ಪಕ್ಷಾತೀತವಾಗಿ ಹಬ್ಬದಂತೆ ಆಚರಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಇದು ಬಿಜೆಪಿ ಕಾರ್ಯಕ್ರಮ ಆಗಬಾರದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರುಗಳಾದ ಕೆ.ಬಿ. ಪ್ರಸನ್ನಕುಮಾರ್, ಆರ್. ಪ್ರಸನ್ನಕುಮಾರ್, ಪ್ರಮುಖರಾದ ಎಸ್.ಪಿ. ದಿನೇಶ್, ಚಂದ್ರಭೂಪಾಲ್, ಇಕ್ಕೇರಿ ರಮೇಶ್, ಎ.ಬಿ. ಮಾರ್ಟಿಸ್, ಆನಂದರಾವ್ ಇದ್ದರು.