Malenadu Mitra
ರಾಜ್ಯ ಶಿವಮೊಗ್ಗ

ಸಮರ ಕಾಲದಲ್ಲಿ ಮಂಕು ಬಡಿದ ಸಾಗರ ಕಾಂಗ್ರೆಸ್ , ಕಾಗೋಡು ತಿಮ್ಮಪ್ಪರ ನಿರ್ಧಾರವೇ ಕ್ಷೇತ್ರಕ್ಕೆ ದಿಕ್ಸೂಚಿ..

ನಾಗರಾಜ್ ನೇರಿಗೆ, ಶಿವಮೊಗ್ಗ

ಶಿವಮೊಗ್ಗ,ಫೆ.೨೩: ಚುನಾವಣೆ ಇನ್ನೇನು ಬಂದೇ ಬಿಡ್ತು ಎನ್ನುವ ಪರಿಸ್ಥಿತಿ ಇದ್ದರೂ… ಶಿವಮೊಗ್ಗ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಇನ್ನೂ ಗೊಂದಲ ಮುಂದುವರಿದಿದೆ. ಸೊರಬ ಮತ್ತು ಭದ್ರಾವತಿಯಲ್ಲಿ ಅಭ್ಯರ್ಥಿಗಳು ಯಾರು ಎಂಬುದು ಈಗಾಗಲೇ ನಿಕ್ಕಿಯಾಗಿದೆ.  ಉಳಿದ ಕ್ಷೇತ್ರಗಳಲ್ಲಿ ಹಲವು ಹುರಿಯಾಳುಗಳು ನಾವೇ ಕಲಿಗಳು ಎನ್ನುತ್ತಿದ್ದರೂ ಯಾರಲ್ಲೂ ಫೀಲ್ ಗುಡ್ ಎನ್ನುವ ವಾತಾವರಣ ಇಲ್ಲವಾಗಿದೆ.
ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರವಾದ ಸಾಗರ ಕಾಂಗ್ರೆಸ್‌ನ ಕಾರ್ಯಕರ್ತರು ಪರಸ್ಪರ ಸಿಕ್ಕಾಗ ಕೇಳಿಕೊಳ್ಳುವ ಒಂದೇ ಪ್ರಶ್ನೆ… ಅಜ್ಜನ ಕತೆ ಎಂತಂತೆ….ಎಲೆಕ್ಷನ್‌ಗೆ ನಿಲ್ತಾರಂತಾ….ಎಂಬುದಾಗಿದೆ.
ಕಾಗೋಡು ತಿಮ್ಮಪ್ಪ ಅವರು ರಾಜ್ಯದ ಮುತ್ಸದ್ದಿ ರಾಜಕಾರಣಿ. ದೀನ ದಲಿತರು ಮತ್ತು ಶೋಷಿತ ವರ್ಗದ ಬಗ್ಗೆ ಅವರಿಗಿರುವ ಬದ್ಧತೆಯನ್ನು ಯಾರು ಪ್ರಶ್ನೆ ಮಾಡಲಾಗದು. ಎರಡು ಮೂರು ಅವಧಿಯಲ್ಲಿ   ಅವರಿಗುಂಟಾದ ಸೋಲಿನ ವರ್ಷಗಳು ಶಿವಮೊಗ್ಗ ಜಿಲ್ಲೆಯ ರೈತಸಂಕುಲಕ್ಕೊದಗಿದ ಕರಾಳ ದಿನಗಳು ಎಂದೇ ಹೇಳಬಹುದು.
 ಜೀವನ ಸಂಧ್ಯಾಕಾಲವಾದ 90ರ ಹರಯದಲ್ಲಿರುವ ಕಾಗೋಡು ತಿಮ್ಮಪ್ಪ ಅವರ ಉತ್ಸಾಹ ಮಾತ್ರ ಬತ್ತಿಲ್ಲ, ಹೋರಾಟ ಎಂದರೆ ಈಗಲೂ ಮೈ ಕೊಡವಿ ನಿಲ್ಲುತ್ತಾರೆ. ಆದರೆ ಮನಸ್ಸಿಗೆ ಎಷ್ಠೇ ಚೈತನ್ಯ ಇದ್ದರೂ ದೇಹಕ್ಕೆ ಇರಬೇಕಲ್ಲ. ರಾಜ್ಯ ಕಾಂಗ್ರೆಸ್‌ನ ಅತೀ ಹಿರಿಯ ರಾಜಕಾರಣಿಯಾದ ಕಾಗೋಡು ತಿಮ್ಮಪ್ಪ ಅವರು ಸಾಗರ ಕ್ಷೇತ್ರದಲ್ಲಿ ಈ ಬಾರಿ ಚುನಾವಣೆಗೆ ಸ್ಪರ್ಧಿಸಬೇಕೆಂಬುದು ಅವರ ಕೆಲ ಬೆಂಬಲಿಗರ ಹಂಬಲವಾಗಿದೆ. ಆದರೆ ಆಪ್ತವಾಗಿ ಮಾತನಾಡಿದರೆ ನಾನು ಚುನಾವಣೆ ರಾಜಕಾರಣದಿಂದ ಹಿಂದೆ ಸರಿದಿದ್ದೇನೆ ಎಂದು ತಿಮ್ಮಪ್ಪ ಹೇಳುತ್ತಾರೆ.


ಗೊಂದಲ ಯಾಕೆ?

ಸಾಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ತಾವಾಗಬೇಕೆಂದು ಕೆಪಿಸಿಸಿಗೆ ಹಲವರು ಅರ್ಜಿ ಹಾಕಿದ್ದಾರೆ. ಅದರಲ್ಲಿ ಕಾಗೋಡು ತಿಮ್ಮಪ್ಪ ಕೂಡಾ ಒಬ್ಬರು. ಇವರಲ್ಲದೆ  ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಡಾ.ರಾಜನಂದಿನಿ ಕಾಗೋಡು, ಕಲಗೋಡು ರತ್ನಾಕರ, ಮಲ್ಲಿಕಾರ್ಜುನ ಹಕ್ರೆ  ಅರ್ಜಿ ಹಾಕಿದವರಲ್ಲಿ ಪ್ರಮುಖರು. ಕಾಗೋಡು ತಿಮ್ಮಪ್ಪ ಅವರು ಅರ್ಜಿ ಹಾಕಿದ್ದರಿಂದ ಉಳಿದ ಅಭ್ಯರ್ಥಿಗಳು ಈಗ ಕ್ಷೇತ್ರದಲ್ಲಿ ಸಕ್ರಿಯವಾಗಿ ಓಡಾಡುತ್ತಿಲ್ಲ. ನಾವು ಓಡಾಡುತ್ತೇವೆ ಕೊನೆಗೆ ಅಜ್ಜನಿಗೆ ಟಿಕೆಟ್ ಆದರೆ ನಾವೇನು ಮಾಡುವುದು ಎಂಬ ಅಭಿಪ್ರಾಯ ಅವರದ್ದಾಗಿದೆ. ಇತ್ತ ಕಾಗೋಡು ತಿಮ್ಮಪ್ಪ ಅವರಿಗೆ ವಯಸ್ಸಿನ ಕಾರಣಕ್ಕೆ ಚುನಾವಣೆಗೆ ಸ್ಪರ್ಧಿಸುವ ಇಚ್ಚೆ ಇಲ್ಲವಾಗಿದೆ. ಆದರೆ ಮಗಳು ಡಾ.ರಾಜನಂದಿನಿ ಅವರನ್ನು ಶಾಸಕಿ ಮಾಡಬೇಕೆಂಬ ದೃತರಾಷ್ಟ್ರ ಪ್ರೀತಿ ಇದ್ದೇ ಇದೆ. ಈ ಕಾರಣಕ್ಕೆ ಅವರು ಯಾವ ಮಾತನ್ನೂ ಅಷ್ಟೊಂದು ಗಟ್ಟಿಯಾಗಿ ಹೇಳುವುದಿಲ್ಲ. ಇದರಿಂದಾಗಿ ಸಾಗರ ಕಾಂಗ್ರೆಸ್‌ನಲ್ಲಿ ಗೊಂದಲ ನಿರ್ಮಾಣವಾಗಿದೆ.


ಕುಚುಕು ಖರ್ಗೆ:

ಕಾಗೋಡು ತಿಮ್ಮಪ್ಪ ಮತ್ತು ಕಾಂಗ್ರೆಸ್‌ನ ಪರಮೋಚ್ಛ ಹುದ್ದೆಯಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕುಚುಕು ಗೆಳೆಯರು. ನಲವತ್ತು ವರ್ಷಗಳ ರಾಜಕೀಯ ಒಡನಾಡಿಗಳಾದ ಈ ಇಬ್ಬರ ನಡುವೆ ಉತ್ತಮ ಬಾಂಧವ್ಯ ಇದೆ. ಈ ಪ್ರಭಾವ ಬಳಸಿ ಕಾಗೋಡು ತಿಮ್ಮಪ್ಪ ಅವರು ಮಗಳಿಗೆ ಟಿಕೆಟ್ ತರಬಹುದು ಎಂಬ ಹೆದರಿಕೆ ಉಳಿದ ಆಕಾಂಕ್ಷಿಗಳಲ್ಲಿದೆ. ಆದರೆ ಉತ್ತಮ ವ್ಯಕ್ತಿತ್ವ ಮತ್ತು ಸರಳ ಸಜ್ಜನಿಕೆಯ ಡಾ.ರಾಜನಂದಿನಿ ಅವರಿಗೆ ರಾಜಕೀಯಕ್ಕೆ ಬೇಕಾದ ದಾಢಸಿತನವಿಲ್ಲ. ಹಲವು ವರ್ಷಗಳಿಂದ ಸಾಗರದಲ್ಲಿಯೇ ನೆಲೆಸಿರುವ ಅವರು, ಕ್ಷೇತ್ರಾದ್ಯಂತ ಪ್ರವಾಸ ಮಾಡಿದ್ದಾರೆ. ಜನಸಂಪರ್ಕವನ್ನೂ ಹೊಂದಿದ್ದಾರೆ. ಕೆಪಿಸಿಸಿ ಕಾರ್‍ಯದರ್ಶಿಯೂ ಆಗಿದ್ದಾರೆ. ಯಾವತ್ತೂ ಸೈದ್ಧಾಂತಿಕ ಸಂಘರ್ಷದ ರಾಜಕಾರಣದ ನೆಲೆಗಟ್ಟಾಗಿರುವ ಸಾಗರ ಕ್ಷೇತ್ರದಲ್ಲಿಮ ಮಗಳು ಪ್ರಬಲ ಸ್ಪರ್ಧಿಯಾಗುವರೆ ಎಂಬ ಅನುಮಾನ ಸ್ವತಃ ಕಾಗೋಡು ತಿಮ್ಮಪ್ಪ ಅವರಿಗೇ ಇದೆ. ಕೆಳಹಂತದ ರಾಜಕಾರಣದಿಂದ ಅವರು ಬಂದರೆ ಉತ್ತಮ ಎಂಬ ಅಭಿಪ್ರಾಯವಿದೆಯಾದರೂ ಅದನ್ನು ತಿಮ್ಮಪ್ಪ ಅವರ ಬಳಿ ಯಾರೂ ಹೇಳುತ್ತಿಲ್ಲ.

ಮಾಗಿದ ರಾಜಕಾರಣಿ ಹಾಲಪ್ಪ

ಸಾಗರ ಕ್ಷೇತ್ರದಲ್ಲಿ ಶಾಸಕ ಹರತಾಳು ಹಾಲಪ್ಪ ಪ್ರಬಲವಾಗಿದ್ದು, ಬಿಜೆಪಿಯಲ್ಲಿರುವ ಅವರಿಗೆ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿರುವ ಹವ್ಯಕ, ಜೈನ ಹಾಗೂ ಲಿಂಗಾಯತರ ಒಲವಿದೆ. ಈ ವರ್ಗ ಆರಂಭದಲ್ಲಿ ಎಷ್ಟೇ ಕೊಸರಾಡಿದರೂ ಚುನಾವಣೆಯ ಹೊತ್ತಲ್ಲಿ ಕಮಲ ಬಿಡಿಸಿ ಮುಡಿಗೇರಿಸಿಕೊಳ್ಳುವುದು ನಿಶ್ಚಿತ. ಶಾಸಕರಾಗಿ ಹಾಲಪ್ಪ ಅವರು ಮಾಡಿಸಿರುವ ಕಾಮಗಾರಿಗಳೂ ಇದಕ್ಕೆ ಪೂರಕವಾಗಿವೆ ಎನ್ನಲಾಗಿದೆ. ಮೂರು ಕ್ಷೇತ್ರಗಳಲ್ಲಿ ಗೆದ್ದಿರುವ ಮತ್ತು ರಾಜಕೀಯ ಲೆಜೆಂಡ್‌ಗಳಾದ ಮಾಜಿ ಸಿಎಂ ಬಂಗಾರಪ್ಪ ಮತ್ತು ಯಡಿಯೂರಪ್ಪರ ಗರಡಿಯಲ್ಲಿ ಪಳಗಿರುವ ಹಾಲಪ್ಪ ಕೂಡಾ ಈಗ ಮಾಗಿದ ರಾಜಕಾರಣಿ. ಆರ್ಥಿಕವಾಗಿಯೂ ಸಬಲರಾಗಿರುವ ಅವರೆದುರು ಸೆಣಸಲು ಕಾಂಗ್ರೆಸ್‌ನಿಂದ ಸಮಬಲದ ಹುರಿಯಾಳುವೇ ಬೇಕಾಗಿದೆ.

ಇಂತಹ ಸಾಗರ ಕ್ಷೇತ್ರದಲ್ಲಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಇರುವುದರಲ್ಲಿ ಪ್ರಬಲವಾಗಿ ಕಾಣುತ್ತಾರೆ. ಎರಡು ಬಾರಿ ಶಾಸಕರಾಗಿರುವ ಅವರು ತಮ್ಮದೇ ಆದ ಬೆಂಬಲಿಗ ಮತ್ತು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಾಗೋಡು ತಿಮ್ಮಪ್ಪ ಅವರ ಸೋದರಳಿಯನಾದ ಬೇಳೂರು ಪ್ರಬಲ ಆಕಾಂಕ್ಷಿಯೂ ಆಗಿದ್ದಾರೆ. ಹಿಂದೆ ಎರಡು ಬಾರಿ ಮಾವನನ್ನು ಸೋಲಿಸಿದ್ದರಿಂದ ಕಾಗೋಡು ತಿಮ್ಮಪ್ಪ ಅವರು ಬೇಳೂರು ಅವರನ್ನು ಪ್ರತಿಸ್ಪರ್ಧಿಯಾಗಿ ನೋಡುತ್ತಾರೆಯೇ ವಿನಾ, ಅಳಿಯನೆಂಬ ಅಕ್ಕರೆಯಿಂದಲ್ಲ  ಎಂಬ ಆರೋಪ ಮೊದಲಿಂದಲೂ ಇದೆ. ಈಡಿಗೇತರ ಆಕಾಂಕ್ಷಿಗಳಾಗಿ  ಮಲ್ಲಿಕಾರ್ಜುನ ಹಕ್ರೆ ಮತ್ತು ಬಿ.ಆರ್.ಜಯಂತ್ ಇದ್ದರೂ ಕ್ಷೇತ್ರದಲ್ಲಿ ಈಡಿಗರಿಗೇ ಮಣೆ ಹಾಕುವುದು ಕಾಂಗ್ರೆಸ್‌ಗೆ ಅನಿವಾರ್ಯವಾಗಿದೆ.

ಪಕ್ಷದಲ್ಲೊಂದು ಥರ್ಡ್‌ಫ್ರಂಟ್:

ಈ ನಡುವೆ ಸಾಗರ ಕಾಂಗ್ರೆಸ್‌ನಲ್ಲಿ ಒಂದು ತೃತೀಯ ರಂಗವಿದೆ. ಈ ಗುಂಪಿಗೆ ಡಾ.ರಾಜನಂದಿನಿ ಮತ್ತು ಬೇಳೂರು ಗೋಪಾಲಕೃಷ್ಣ ಇಬ್ಬರೂ ಶಾಸಕರಾಗುವುದು ಬೇಡವಾಗಿದೆ. ಈ ಇಬ್ಬರಲ್ಲಿ ಒಬ್ಬರು ಶಾಸಕರಾದರೆ ತಮ್ಮ ರಾಜಕೀಯ ಭವಿಷ್ಯ ಜಿಲ್ಲಾ ಪಂಚಾಯಿತಿಗೆ ಸೀಮಿತವಾಗುತ್ತದೆ ಎಂಬುದು ಇವರ ಆತಂಕ. ಈ ಆಂತರ್ಯದ ಬೇಗುದಿಯನ್ನು ಹೇಳಲಾರದ ತಂಡ, ತೊಂಬತ್ತು ವರ್ಷದ ಕಾಗೋಡು ತಿಮ್ಮಪ್ಪ ಅವರ ಬಳಿ ಹೋಗಿ ಈ ಬಾರಿ ನೀವೆ ಸ್ಪರ್ಧೆ ಮಾಡಬೇಕು ಎಂದು ಅಜ್ಜನನ್ನು ಹುರಿದುಂಬಿಸುತ್ತಿದ್ದಾರೆ. ಅಸಲಿಗೆ ಈ ರಂಗಕ್ಕೆ ಕಾಗೋಡು ತಿಮ್ಮಪ್ಪರ ರಾಜಕೀಯ ಮರುಹುಟ್ಟಿಗಿಂತ ಬೇಳೂರು ಮತ್ತು ರಾಜನಂದಿನಿ ಅವರಿಗೆ ಟಿಕೆಟ್ ಕೈ ತಪ್ಪಬೇಕಾಗಿದೆ ಎಂಬುದು ರಾಜಕೀಯ ಬಲ್ಲ ಯಾರಿಗಾದರೂ ಅರ್ಥವಾಗುತ್ತದೆ.

ಈ ಎಲ್ಲ ಗೋಜಲುಗಳ ನಡುವೆ ಕಾಗೋಡು ತಿಮ್ಮಪ್ಪ ಅವರು ಹಿಂದಿನ ಚುನಾವಣೆಗಳಲ್ಲಿ ಕೈಕೊಟ್ಟ ತೃತೀಯ ರಂಗವನ್ನು ನಂಬಬೇಕೊ ಬಿಡಬೇಕೊ ಎಂಬ ಗೊಂದಲದಲ್ಲಿದ್ದಾರೆ. ನಿಷ್ಟಾವಂತ ಕಾಂಗ್ರೆಸ್ಸಿಗರಾದ ತಿಮ್ಮಪ್ಪರಿಗೆ ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಎನ್ನುವಂತೆ, ಪಕ್ಷದ ಮೇಲೆ ಪ್ರೀತಿ…… ಮಗಳ ಮೇಲೆ ಮಮತೆ ಎರಡೂ ಇದೆ. ಈ ರೀತಿಯ ಹಲವು ಅಪಸವ್ಯಗಳ ನಡುವೆ ಸಾಗರ ಕಾಂಗ್ರೆಸ್‌ನಲ್ಲಿ ಐಕ್ಯತೆ ಮೂಡದೆ ಸಮರಕಾಲದಲ್ಲಿ ಮಂಕು ಬಡಿದಂತಾಗಿದೆ.

Ad Widget

Related posts

ವಕೀಲರ ಮೇಲೆ ನಡೆದ ಹಲ್ಲೆ ಖಂಡಿಸಿ ಶಿವಮೊಗ್ಗದ ವಕೀಲರ ಸಂಘದ ಪ್ರತಿಭಟನೆ

Malenadu Mirror Desk

ಕನ್ನಡ ನಾಡಲ್ಲಿ ಕನ್ನಡಿಗನೇ ಸಾರ್ವಭೌಮ ಕನ್ನಡಕ್ಕೆ ಮೊದಲ ಆದ್ಯತೆ : ಬಿ. ವೈ. ರಾಘವೇಂದ್ರ

Malenadu Mirror Desk

ಜೆಡಿಎಸ್ ನಾಯಕ ಎಂ.ಶ್ರೀಕಾಂತ್ ಕಾಂಗ್ರೆಸ್ ಕಡೆಗೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.