Malenadu Mitra
ರಾಜ್ಯ ಶಿವಮೊಗ್ಗ

ಮಲೆನಾಡಿನ ಅಭಿವೃದ್ಧಿ ಪಥ ವಿಸ್ತಾರ
ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಆಶಯ

ಶಿವಮೊಗ್ಗ,ಫೆ.೨೭: ಮಲೆನಾಡು ಮತ್ತು ಕರ್ನಾಟಕ ರಾಜ್ಯದ ಅಭಿವೃದ್ಧಿ ಪಥವನ್ನು ಮತ್ತಷ್ಟು ವಿಸ್ತಾರಗೊಳಿಸುವಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಮಹತ್ತರವಾದ ಪಾತ್ರವಹಿಸಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಬಹುನಿರೀಕ್ಷಿತ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಸೋಮವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ರಾಷ್ಟ್ರಕವಿ ಕುವೆಂಪು ಅವರ ನಾಡಾದ ಮಲೆನಾಡಿಗೆ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕೆಂಬ ಬಹುವರ್ಷದ ಕನಸು ನನಸಾಗಿದೆ. ಬಡವರು, ರೈತರ ಶ್ರೇಯಸ್ಸಿಗಾಗಿ ಜೀವನ ಮುಡುಪಾಗಿಟ್ಟ ಯಡಿಯೂರಪ್ಪ ಅವರ ಶ್ರಮದಿಂದ ಇದು ಸಾಧ್ಯವಾಗಿದೆ. ಹವಾಯಿ ಚಪ್ಪಲಿ ಹಾಕಿಕೊಂಡು ನಡೆವ ಸಾಮಾನ್ಯ ಮನುಷ್ಯ ಕೂಡಾ ವಿಮಾಯಾನ ಮಾಡಬೇಕೆಂಬ ಉದ್ದೇಶದಿಂದ ೨೦೧೪ ಬಳಿಕ ಒಟ್ಟು ೭೪ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಿದೆ. ಭಾರತ ದೇಶವು ವಾಯಯಾನ  ಕ್ಷೇತ್ರದಲ್ಲಿ ವಿಶ್ವದಲ್ಲಿಯೇ ಅತೀವೇಗವಾಗಿ ಮುಂದೆ ಸಾಗುತ್ತಿದೆ ಎಂದು ಅವರು ಹೇಳಿದರು.

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಇಲ್ಲಿನ ಅಡಕೆ. ಕಾಫಿ ಸೇರಿದಂತೆ ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆ ಮತ್ತು ವಹಿವಾಟುಗಳು ವೃದ್ದಿಯಾಗಲಿವೆ. ಇಲ್ಲಿನ ಅಭಿವೃದ್ಧಿಗೆ ಹೊಸ ಅವಕಾಶಗಳು ತೆರೆದು ಕೊಳ್ಳಲಿವೆ. ಈ ಭಾಗದ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ, ಸಿಗಂದೂರು, ಶ್ರೀಧರ್ ಆಶ್ರಮ, ಪ್ರವಾಸಿ ತಾಣಗಳಾದ ಜೋಗ, ಸಕ್ರೆಬೈಲುಗಳ, ಸಿಂಹಧಾಮ, ಈಸೂರು ಹೆಸರುಗಳನ್ನು ಪ್ರಸ್ತಾಪಿಸಿದ ಮೋದಿ ಅವರು, ಇಲ್ಲಿನ ಪರಿಸರ, ಅರಣ್ಯ, ಪಶ್ಚಿಮಘಟ್ಟಗಳ ತಾಣ ಅತಿ ಸುಂದರವಾಗಿವೆ. ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ವಿಮಾನ ನಿಲ್ದಾಣ, ರೈಲ್ವೆ  ಹಾಗೂ ಹೆದ್ದಾರಿ ಯೋಜನೆಗಳಿಂದ ಶಿವಮೊಗ್ಗದ ಚಿತ್ರಣ ಬದಲಾಗಲಿದೆ ಎಂದು ಹೇಳಿದರು.

ತಂತ್ರಜ್ಞಾನ ಮತ್ತು ಸಂಪ್ರದಾಯದ ಸಂಗಮದಂತೆ ಇಲ್ಲಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣ ಕೃಷಿ, ಶಿಕ್ಷಣ,ಉದ್ಯೋಗ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಲಿದೆ. ಶಿವಮೊಗ್ಗ ರಾಣೆಬೆನ್ನೂರು ರೈಲ್ವೆ ಮಾರ್ಗ, ರೈಲ್ವೆ ಕೋಚಿಂಗ್ , ಹೆದ್ದಾರಿ ಅಭಿವೃದ್ಧಿ ಹೀಗೆ ಅನೇಕ ಕಾರ್ಯಕ್ರಮಗಳು ಪ್ರಗತಿಯಲ್ಲಿವೆ. ಸ್ಮಾರ್ಟ್ ಸಿಟಿ ಯೋಜನೆಯಿಂದ ಶಿವಮೊಗ್ಗದ ಚಿತ್ರಣ ಬದಲಾಗಿದೆ. ಮಲೆನಾಡಿನಲ್ಲಿ  ಕಳೆದ ಒಂಬತ್ತು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದ್ದು, ಡಬಲ್ ಎಂಜಿನ್ ಸರಕಾರ ಇದ್ದಾಗ ಮಾತ್ರ ಇದೆಲ್ಲ ಸಾಧ್ಯವಾಗುತ್ತದೆ ಎಂದು ಪ್ರಧಾನಿ ಹೇಳಿದರು.


ಕುವೆಂಪು ಹೆಸರು ಪ್ರಸ್ತಾಪವಿಲ್ಲ:

ಆರಂಭದಲ್ಲಿ ಕನ್ನಡದಲ್ಲಿಯೇ ಮಾತು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಜೈ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ಎಂದು ಭಾಷಣ ಆರಂಭಿಸಿದರು. ಭಾಷಣದಲ್ಲಿ ರಾಷ್ಟ್ರಕವಿ ಕುವೆಂಪು ಹೆಸರು ಪ್ರಸ್ತಾಪ ಮಾಡಿದರಾದರೂ, ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರಿಡಬೇಕೆಂಬ ರಾಜ್ಯ ಸರಕಾರದ ಪ್ರಸ್ತಾಪದ ಬಗೆಗ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇದರಿಂದ ವಿಮಾನ ನಿಲ್ದಾಣಕ್ಕೆ ಮೋದಿ ಅವರು ರಾಷ್ಟ್ರಕವಿ ಹೆಸರು ಘೋಷಣೆ ಮಾಡಬಹುದು ಎಂಬ ನಿರೀಕ್ಷೆ ಹುಸಿಯಾಯಿತು.


ಕಾಡಿದ ಕೆಮ್ಮು:

ಯಡಿಯೂರಪ್ಪ ಅವರು ಭಾಷಣ ಆರಂಭಿಸುತ್ತಿದ್ದಂತೆ ಪದೇ ಪದೇ ಕೆಮ್ಮು ಬರುತಿತ್ತು. ಇದನ್ನು ಗಮನಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕುಡಿಯಲು ನೀರು ಕೊಡುವಂತೆ ಸೂಚಿಸಿದರು. ವೇದಿಕೆಯಲ್ಲಿ ಯಾವುದೇ ನೀರಿನ ಬಾಟಲ್ ಇಡದ ಕಾರಣ ವೇದಿಕೆಯಲ್ಲಿದ್ದವರು ಅತ್ತಿತ್ತ ನೋಡಲಾರಂಭಿಸಿದರು. ಈ ಸಂದರ್ಭ ಮೋದಿ ಅವರು ತಮ್ಮ ಬೆಂಗಾವಲು ಪಡೆಯ ಸಿಬ್ಬಂದಿಗೆ ನೀರು ಕೊಡಲು ಸೂಚಿಸಿದರು. ಯಡಿಯೂರಪ್ಪ ಅವರು, ವಿಶ್ವಮಾನ್ಯ ಮೋದಿಯವರ ಆಶೀರ್ವಾದದಿಂದ ರಾಜ್ಯ ಹಾಗೂ ಜಿಲ್ಲೆಗೆ ಅನೇಕ ಯೋಜನೆಗಳು ಬಂದಿವೆ. ವಿಮಾನ ನಿಲ್ದಾಣ ಮತ್ತು ಶಿವಮೊಗ್ಗದ ಅಭಿವೃದ್ಧಿಯಲ್ಲಿ ಸಂಸದ ರಾಘವೇಂದ್ರ ಅವರ ಶ್ರಮ ತುಂಬಾ ಇದೆ ಎಂದು ಹೇಳಿದರು.

ಇದಕ್ಕೂ ಮೊದಲು ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ೨೦೧೪ ರ ತರುವಾಯ ರಾಜ್ಯ ಮತ್ತು ದೇಶದಲ್ಲಿ ಆದ ಅಭಿವೃದ್ಧಿ  ಅದಕ್ಕೂ ಪೂರ್ವದಲ್ಲಿ  ಆಗಿಲ್ಲ. ನರೇಂದ್ರ ಮೋದಿ ಅವರು ವಿಶ್ವ ಮನ್ನಣೆ ಪಡೆದ ನಾಯಕರಾಗಿದ್ದು, ಅವರ ಮಾರ್ಗದರ್ಶನದಲ್ಲಿ ರಾಜ್ಯ ಅಭಿವೃದ್ಧಿಯಾಗಿದೆ. ಶಿವಮೊಗ್ಗದಲ್ಲಿ ೩೬೦೦ ಕೋಟಿ ರೂ. ಗಳ ವಿವಿಧ ಕಾಮಗಾರಿಗಳಿಗೆ ಇಂದು ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಮಾಡಲಾಗಿದೆ. ಡಬಲ್ ಎಂಜಿನ್ ಸರಕಾರದಿಂದ  ಈ ಕೆಲಸ ಆಗಿದೆ ಎಂದು ಹೇಳಿದರು.


ಸನ್ಮಾನ:


ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಿಲ್ಲಾಡಳಿತದ ಪರವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ವೇದಿಕೆಯಲ್ಲಿದ್ದ ಗಣ್ಯರು ಸನ್ಮಾನಿಸಿದರು. ಸಾಗರದ ಕರಕುಶಲಕರ್ಮಿಯೊಬ್ಬರು ಕೆತ್ತನೆ ಮಾಡಿದ್ದ ಶ್ರೀಗಂಧದ ಸ್ಮರಣಿಕೆಯನ್ನು ಪ್ರಧಾನಿಗೆ ನೀಡಲಾಯಿತು. ಪ್ರಧಾನಿ ಮೋದಿ ಅವರು, ಇಂದು ಹುಟ್ಟು ಹಬ್ಬ ಆಚರಿಸಿಕೊಂಡ ಯಡಿಯೂರಪ್ಪ ಅವರಿಗೆ ಹಸಿರು ಶಾಲು ಹೊದಿಸಿ ಸನ್ಮಾನಿಸಿದರು.

ವೇದಿಕೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ.ಸಚಿವರಾದ ಆರಗಜ್ಞಾನೇಂದ್ರ, ಬೈರತಿ ಬಸವರಾಜ್, ಹೆಚ್.ಟಿ.ಸೋಮಶೇಖರ್, ಸಿಸಿ ಪಾಟೀಲ್, ವಿ.ಸೋಮಣ್ಣ, ಸಂಸದ ಬಿ.ವೈ.ರಾಘವೇಂದ್ರ. ಶಾಸಕರಾದ ಹರತಾಳು ಹಾಲಪ್ಪ, ಕುಮಾರ ಬಂಗಾರಪ್ಪ, ಕೆ.ಬಿ.ಅಶೋಕ್ ನಾಯ್ಕ, ವಿಧಾಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಭಾರತೀ ಶೆಟ್ಟಿ, ಡಿ.ಎಸ್.ಅರುಣ್ ಉಪಸ್ಥಿತರಿದ್ದರು.


ಹರಿದು ಬಂದ ಜನ ಸಾಗರ:

ಬೃಹತ್ ವೇದಿಕೆಯಲ್ಲಿ ಒಂದು ಲಕ್ಷ ಕುರ್ಚಿಗಳನ್ನು ಹಾಕಲಾಗಿತ್ತು. ಅದಕ್ಕೂ ಮಿಕ್ಕಿದ ಜನಸಾಗರ ಹರಿದು ಬಂದಿತ್ತು. ಗ್ರಾಮೀಣ ಪ್ರದೇಶಗಳಿಗೆ ಬಸ್ ವ್ಯವಸ್ಥೆ ಮಾಡಿದ್ದರಿಂದ ಜನರ ಸಾಗರೋಪಾದಿಯಲ್ಲಿ ನೆರೆದಿದ್ದರು. ವೇದಿಕೆ ಹೊರಗೆ ಉರಿಬಿಸಿಲಲ್ಲೆ ನಿಂತು ಪ್ರೊಜೆಕ್ಟರ್‌ಗಳ ಮೂಲಕ ಕಾರ್ಯಕ್ರಮ ವೀಕ್ಷಿಸಿದರು. ಕಾರ್ಯಕ್ರಮಕ್ಕೆ ಬರುವ ವಿವಿಐಪಿ ಪಾಸ್ ಉಳ್ಳ ಜನರ ಸ್ವಾಗತಕ್ಕೆ ಬಿಜೆಪಿಯ ಮುಂಚೂಣಿ ಘಟಕಗಳ ಕಾರ್ಯಕರ್ತರು,ಮುಖಂಡರು ನಿಂತಿದ್ದರು. ಬಂದ ಕಾರ್ಯಕರ್ತರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಮೋದಿ ಮೋದಿ ಘೋಷಣೆ
ಬೆಳಗ್ಗೆ ೧೧.೩೦ ಕ್ಕೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ಬಂದ ಪ್ರಧಾನಿ ಮೋದಿ ಅವರನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಈಶ್ವರಪ್ಪ, ಸಂಸದ ಸಚಿವರುಗಳು ಬರಮಾಡಿಕೊಂಡರು. ಮೋದಿ ಅವರು ವೇದಿಕೆಗೆ ಬರುತ್ತಿದ್ದಂತೆ ಕಾರ್ಯಕರ್ತರು ಮೋದಿ..ಮೋದಿ ಎಂದು ಘೋಷಣೆ ಕೂಗುತ್ತಾ ಬೆಂಬಲಿಸಿದರು.

ಸಮಸ್ಯೆಗಳ ಪ್ರಸ್ತಾಪವೇ ಇಲ್ಲ:
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶಿವಮೊಗ್ಗ ಹಾಗೂ ಮಲೆನಾಡನ್ನು ಕಾಡುತ್ತಿರುವ ಯಾವುದೇ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ವಿಐಎಸ್ಎಲ್, ಎಂಪಿಎಂ ಮುಚ್ಚುವಿಕೆ, ಅಡಕೆ ಎಲೆಚುಕ್ಕಿ ರೋಗ, ಅಡಕೆ ಬೆಲೆ ಏರಿಳಿತು, ಭೂಮಿಯ ಹಕ್ಕುದಾರಿಕೆ ಸಮಸ್ಯೆ, ಶರಾವತಿ, ಚಕ್ರಾ ವರಾಹಿ ಸಂತ್ರಸ್ತರು ಸಮಸ್ಯೆ ಹೀಗೆ ಯಾವುದೇ ಸಮಸ್ಯೆಗಳನ್ನು ಪ್ರಸ್ತಾಪ ಮಾಡದಿರುವುದು ಇಲ್ಲಿನ ಜನರಿಗೆ ತೀವ್ರ ನಿರಾಸೆಯಾಯಿತು. ಭಾಷಣ ತಯಾರು ಮಾಡಿಕೊಟ್ಟ ಮಂದಿ ಶಿವಮೊಗ್ಗ ಸುಬೀಕ್ಷವಾಗಿದೆ ಎಂಬ ಚಿತ್ರಣವನ್ನೇ ಪ್ರಧಾನಿಯವರಿಗೆ ಕೊಟ್ಟಂತಿತ್ತು.

Ad Widget

Related posts

ಹಲವು ಸಂದೇಶ ನೀಡಿದ ಈಡಿಗರ ಹಕ್ಕೊತ್ತಾಯ ಸಮಾವೇಶ, ಸಮುದಾಯದ ಮೇಲೆ ಹಿಡಿತ ಕಳೆದುಕೊಳ್ಳುತ್ತಿರುವ ಸಮುದಾಯದ ನಾಯಕರು ಭ್ರಮೆಯಿಂದ ಹೊರಬರಲಿ

Malenadu Mirror Desk

ಯುವಕನ ಕೊಲೆ, ಕಾರಣ ನಿಗೂಢ!

Malenadu Mirror Desk

ನ. 4,5 ರಂದು ವಿಐಎಸ್ ಎಲ್ ಶತಮಾನೋತ್ಸವ ಮೈಸೂರು ಯುವರಾಜ, ನಿರ್ಮಲಾ ಸೀತಾರಾಮನ್, ಜ್ಯೋತಿರಾದಿತ್ಯ ಸಿಂಧ್ಯಾ, ಸಿದ್ದರಾಮಯ್ಯ, ಡಿಕೆಶಿ, ಮಠಾಧೀಶರ ಆಗಮನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.