ಶಿವಮೊಗ್ಗ, ಫೆ:೨೮ :ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಶಿವಮೊಗ್ಗಕ್ಕೆ ಮಂಜೂರಾಗಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಕಾರ್ಯಾರಂಭಗೊಳ್ಳಲಿದೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿವಿ ಆರಂಭಿಸಲು ತಾತ್ಕಾಲಿಕವಾಗಿ ರಾಗಿಗುಡ್ಡದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಕಟ್ಟಡವನ್ನು ಗುರುತಿಸಲಾಗಿದೆ. ಶಾಶ್ವತ ಕಟ್ಟಡ ನಿರ್ಮಿಸಲು ಅಗತ್ಯವಿರುವ ೮ ಎಕರೆ ನಿವೇಶನವನ್ನು ಶಿವಮೊಗ್ಗ ನಗರಕ್ಕೆ ಹೊಂದಿಕೊಂಡಂತಿರುವ ನವುಲೆಯ ಸರ್ವೆ ನಂ.೧೧೨ ರಲ್ಲಿ ಗುರುತಿಸಲಾಗಿದೆ. ಸ್ಥಳವನ್ನು ವಿಶ್ವವಿದ್ಯಾಲಯ ಮಂಜೂರಾತಿ ಪ್ರಾಧಿಕಾರದ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ತಜ್ಞರ ತಂಡ ಭೇಟಿ ನೀಡಿ ಪರಿಶೀಲಿಸಿ, ಒಪ್ಪಿಗೆ ಸೂಚಿಸಿದೆ ಎಂದರು.
ಜಿಲ್ಲಾಕಾರಿ ಭೂಮಿ ಮಂಜೂರಾತಿ ಮಾಡಿ ಆದೇಶ ಹೊರಡಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯದ ನೂತನ ಕಟ್ಟಡ ನಿರ್ಮಾಣ ಕಾರ್ಯ ಹಂತಹಂತವಾಗಿ ಆರಂಭಗೊಳ್ಳಲಿದೆ. ಆರಂಭದ ಹಂತದಲ್ಲಿ ಡಿಪ್ಲೊಮಾ ಇನ್ ಪೊಲೀಸ್ ಸೈನ್ಸ್, ಬೇಸಿಕ್ ಕೋರ್ಸ್ ಇನ್ ಕಾರ್ಪೊರೇಟ್ ಸೆಕ್ಯೂರಿಟಿ ಮ್ಯಾನೇಜ್‌ಮೆಂಟ್, ಡಿಪ್ಲೊಮಾ ಇನ್ ಕ್ರಿಮಿನಲ್ ಇನ್ವೆಸ್ಟಿಗೇಷನ್, ಪಿ.ಜಿ.ಡಿಪ್ಲೊಮಾ ಇನ್ ಸೈಬರ್ ಸೆಕ್ಯೂರಿಟಿ ಅಂಡ್ ಸೈಬರ್ ಲಾ, ರೋಡ್ ಟ್ರಾಫಿಕ್ ಸೇಫ್ಟಿ ಮ್ಯಾನೇಜ್‌ಮೆಂಟ್, ದೈಹಿಕ ಸಾಮರ್ಥ್ಯಕ್ಕೆ ಸಂಬಂಸಿದಂತೆ ಎರಡು ವಾರಗಳ ಸರ್ಟಿಫಿಕೇಟ್ ಕೋರ್ಸ್, ಪೋಸ್ಟ್ ಗ್ರಾಜುಯೇಶನ್ ಡಿಪ್ಲೋಮಾ ಇನ್ ಕೋಸ್ಟಲ್ ಸೆಕ್ಯುರಿಟಿ ಅಂಡ್ ಲಾ ಎನ್‌ಫೋರ್ಸ್‌ಮೆಂಟ್ ಸೇರಿದಂತೆ ದೀರ್ಘಾವಧಿಯ ಹಾಗೂ ಅಲ್ಪಾವಧಿಯ ತರಗತಿಗಳು ನಡೆಯಲಿವೆ ಎಂದರು.
ಪಿ.ಯು.ಸಿ. ವಿದ್ಯಾರ್ಹತೆ ಹೊಂದಿ, ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಹಾಗೂ ನಿಗದಿಪಡಿಸಿದ ನಿಬಂಧನೆಗಳಿಗೆ ಅರ್ಹರಾಗಿರುವ ಅಭ್ಯರ್ಥಿಗಳನ್ನು ಡಿಪ್ಲೋಮಾ ಮತ್ತು ಪದವಿ ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗುವುದು. ಪದವಿ ವಿದ್ಯಾರ್ಥಿಗಳನ್ನು ಸ್ನಾತಕೋತ್ತರ ಪದವಿಗೆ ಆಯ್ಕೆ ಮಾಡಿಕೊಳ್ಳಲಾಗುವುದು ಎಂದರು.
ಇಲ್ಲಿನ ವಿದ್ಯಾರ್ಥಿಗಳು ಕೇವಲ ಡಿಪ್ಲೊಮಾ, ಪದವಿ ಮತ್ತು ಸ್ನಾತಕೋತ್ತರ ಪದವಿಗಳ ವಿವಿಧ ವಿಷಯಗಳಲ್ಲಿ ಅಧ್ಯಯನ ಮಾಡುತ್ತಿರುವವರಿಗೆ ಬೇರೊಂದು ಹಾಗೂ ಉದ್ಯೋಗದ ಭದ್ರತೆ ಒದಗಿಸುವ ವಿಷಯವೊಂದು ಪರಿಚಯಿಸಿದಂತಾಗಲಿದೆ. ಈ ತರಬೇತಿಯಿಂದಾಗಿ ದೇಶದ ಸೈನಿಕ ಸೇವೆಗೆ, ದೇಶದ ಆಂತರಿಕ ಭದ್ರತಾ ವಿಭಾಗದಲ್ಲಿ ಸೇವೆ ಸಲ್ಲಿಸಲಿಚ್ಚಿಸುವವರಿಗೆ ಸಹಕಾರಿಯಾಗಲಿದೆ. ಜಿಲ್ಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಹೊಸದಿಕ್ಕನ್ನು ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದರು.
ಪ್ರಮುಖ ಅಂಶಗಳು
* ಅಹ್ಮದಾಬಾದ್‌ನಲ್ಲಿ ಇದೇ ರೀತಿಯ ವಿವಿ ಇದ್ದು, ಶಿವಮೊಗ್ಗದ್ದು ಎರಡನೆಯದ್ದಾಗಲಿದೆ.
* ರಾಜ್ಯ ಸರಕಾರದ ಕೋರಿಕೆಯ ಮೇರೆಗೆ ಇದನ್ನು ಕೇಂದ್ರ ಮಂಜೂರು ಮಾಡಿದೆ. ಡಿಜಿ-ಐಜಿ ಅವರೊಂದಿಗೆ ಚರ್ಚಿಸಿ ಶಿವಮೊಗ್ಗದಲ್ಲಿ ಈ ವಿವಿ ಸ್ಥಾಪಿಸಲು ಸಿದ್ದತೆ ನಡೆದಿದೆ.
* ಸದ್ಯ ತಾತ್ಕಾಲಿಕ ಕಟ್ಟಡದಲ್ಲಿ ಶೈಕ್ಷಣಿಕ ತರಗತಿ ನಡೆಯಲಿದೆ. ಎರಡು ವರ್ಷಗಳಲ್ಲಿ ೮ ಎಕ್ರೆ ಜಾಗದಲ್ಲಿ ಸುಸಜ್ಜಿತ ವಿವಿ ತಲೆಎತ್ತಲಿದೆ.
* ಇಲ್ಲಿ ೭ ವಿಷಯಗಳನ್ನು ಕಲಿಸಲಾಗುವುದು.
* ಸಂಪೂರ್ಣ ಉದ್ಯೋಗಾಧಾರಿತ ವಿವಿ ಇದಾಗಲಿದೆ.
* ಈ ವರ್ಷದ ಮೇ ನಿಂದ ಆರಂಭವಾಗಲಿದೆ.
ಸೈಬರ್ ಮತ್ತು ಅಪರಾಧ ವಿಭಾಗದಲ್ಲಿ ಸಂಶೋಧನೆ ಮಾಡುವವರಿಗೆ ಇದೊಂದು ಉತ್ತಮ ಅವಕಾಶ.