ಗೋಪಾಲಗೌಡರ ಚಿಂತನೆಗಳು ಮತ್ತು ಅವರ ರಾಜಕೀಯ,ಚಳವಳಿಯ ಬಗ್ಗೆ ಈಗ ಸಾಕಷ್ಟು ಸಾಹಿತ್ಯ ಲಭ್ಯವಿದೆ. ಈಗಿನ ಜನರಿಗೆ ಅವು ತಲುಪಬೇಕು. ಯುವಜನರ ನಡುವೆ ಅವರ ಚರ್ಚೆಗಳು ನಡೆಯಬೇಕು. ಅಲ್ಲಲ್ಲಿ ಈ ರೀತಿಯ ಚರ್ಚೆಗಳು ನಡೆಯುತ್ತಿರುವುದು ಸುರಂಗದ ತುದಿಯಲ್ಲಿ ಒಂದು ಬೆಳಕು ಕಾಣುವಂತೆ ಆಶಾದಾಯಕ ಬೆಳವಣಿಗೆಯಾಗಿದೆ.
ಶಿವಮೊಗ್ಗ,ಮಾ.೧೪: ಬದ್ಧತೆಯ ರಾಜಕಾರಣ, ಸೈದ್ಧಾಂತಿಕ ಸ್ಪಷ್ಟತೆಯ ಚಳವಳಿಯ ಬೀಜಗಳನ್ನು ಬಿತ್ತಿದ್ದ ಶಾಂತವೇರಿ ಗೋಪಾಲಗೌಡರಂತಹ ಮಾದರಿ ವ್ಯಕ್ತಿಗಳು ರಾಜಕೀಯ ಕ್ಷೇತ್ರದಲ್ಲಿ ಇಂದಿಗೂ ಸಿಕ್ಕಿಲ್ಲ ಎಂದು ರಾಜಕೀಯ ಚಿಂತಕ ಹಾಗೂ ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಅಭಿಪ್ರಾಯಪಟ್ಟರು.
ಪೀಪಲ್ಸ್ ಲಾಯರ್‍ಸ್ ಗಿಲ್ಡ್, ಅಹರ್ನಿಶಿ ಪ್ರಕಾಶನ ಹಾಗೂ ಬೆಂಗಳೂರಿನ ಜನ ಪ್ರಕಾಶನ ಸಂಸ್ಥೆಗಳು ಆಯೋಜಿಸಿದ್ದ ಶಾಂತವೇರಿಗೋಪಾಲಗೌಡರ ಶತಮಾನೋತ್ಸವದಲ್ಲಿ “ಶಾಸನಸಭೆಯಲ್ಲಿ ಶಾಂತವೇರಿ ಹಾಗೂ ಸಮಾಜವಾದದ ಸಹ್ಯಾದಿ’ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಇಂದಿಗೂ ನಾವು ಅಂಬೇಡ್ಕರ್, ಗಾಂಧಿ, ಲೋಹಿಯಾ,ಗೋಪಾಲಗೌಡ, ಲಂಕೇಶ್ ಇಂತಹ ಮಹನೀಯರನ್ನು ಸ್ಮರಿಸುತ್ತೇವೆ ಅಂದರೆ ಅವರನ್ನು ಮೀರಿಸುವಂತಹ ಆದರ್ಶ ವ್ಯಕ್ತಿಗಳು ಮತ್ತೆ ನಮ್ಮ ನಡುವೆ ಬಂದಿಲ್ಲ ಎಂದರ್ಥ. ಈ ಕಾರಣದಿಂದ ಗೋಪಾಲಗೌಡರನ್ನು ನಾವು ಮತ್ತೆ ಮತ್ತೆ ಸ್ಮರಿಸುತ್ತೇವೆ. ಸ್ಮರಿಸುವ ಅಗತ್ಯ ಇಂದಿಗೂ ಇದೆ ಎಂದು ಹೇಳಿದರು.
ಗೋಪಾಲಗೌಡರು ಶಾಸನಸಭೆಯನ್ನು ಪ್ರತಿನಿಧಿಸಿದ ದಿನಮಾನಗಳಿಗೂ ಇಂದಿಗೂ ಭಾರೀ ವ್ಯತ್ಯಾಸವಿದೆ. ಇಂದು ಗಂಭೀರ ಅಪರಾಧಿಕ ಹಿನ್ನೆಲೆಯವರು ತಮಗಿರುವ ಆರ್ಥಿಕ ಶಕ್ತಿಯ ಕಾರಣಕ್ಕೆ ಮತ್ತೆ ಮತ್ತೆ ಗೆಲ್ಲುತ್ತಾರೆ. ರಾಜಕೀಯ ಪಕ್ಷಗಳು ಮತ್ತು ಮತದಾರರು ಕೂಡಾ ಅವರಿಗೇ ಮನ್ನಣೆ ನೀಡುತ್ತವೆ. ರಾಜಕೀಯ ಪಕ್ಷಗಳು ಜಾತೀಯತೆ, ಭ್ರಷ್ಟಾಚಾರ,ಅಜ್ಞಾನ,ಆತ್ಮವಂಚನೆ ಹಾಗೂ ಸೈದ್ಧಾಂತಿಕ ದಿವಾಳಿತನ ಎಂಬ ಪಂಚಮಹಾಘಾತಕಗಳನ್ನು ಹೊಂದಿರುವ ವ್ಯಕ್ತಿಗಳಿಗೇ ಟಿಕೆಟ್ ನೀಡುತ್ತಿರುವುದು ಈಗಿನ ದುರಂತ ಎಂದು ಹೇಳಿದರು.
ರಾಜಕಾರಣಿಯೊಬ್ಬ ಶಾಸಕನಾಗಲು ಜಾತಿಯ ಬಲ ಬೇಕು. ಆತನಲ್ಲಿ ಕೋಟಿ ಕೋಟಿ ಹಣವಿರಬೇಕು, ಈ ಬಂಡವಾಳ ಹೂಡಿದ ಆತ ಮುಂದೆ ಭ್ರಷ್ಟಾಚಾರಮಾಡಿ ಮತ್ತಷ್ಟುಗಳಿಸುತ್ತಾನೆ. ಅಜ್ಞಾನಿಯಾದ ಆತ ಯಾವ ಆತ್ಮವಂಚನೆಗಾದರೂ ಸಿದ್ಧನಿರುತ್ತಾನೆ. ಸೈದ್ಧಾಂತಿಕವಾಗಿ ದಿವಾಳಿಯಾಗಿರುವ ವ್ಯಕ್ತಿಗಳಿಗೇ ಇಂದು ಪಕ್ಷಗಳು ಮಣೆ ಹಾಕುತ್ತವೆ. ಈ ಮಹಾ ಪಾತಕಗಳೇ ಜನಪ್ರತಿನಿಧಿಯಾಗುವವಿನಗಿರಬೇಕಾದ ಮಾನದಂಡಗಳು ಎಂದು ಇಂದು ರಾಜಕೀಯ ಪಕ್ಷಗಳು ನಿರ್ಧರಿಸಿವೆ. ಮತದಾರರು ಕೂಡಾ ಇಂತಹ ವ್ಯಕ್ತಿಗಳಿಗೆ ಆದ್ಯತೆ ನೀಡುತ್ತಾರೆ. ಈ ಕಾರಣದಿಂದಲೇ ಚುನಾವಣೆಯಲ್ಲಿ ಗೆದ್ದು ರಾಜೀನಾಮೆ ನೀಡಿದವರನ್ನು ಜನರು ಮತ್ತೆ ಗೆಲ್ಲಿಸುತ್ತಾರೆ. ಶಾಂತವೇರಿ ಗೋಪಾಲಗೌಡರು ಈ ಪಾತಕಗಳನ್ನು ಮೀರಿ ಬೆಳೆದಿದ್ದರಿಂದಲೇ ಇಂದಿಗೂ ನಮಗೆ ಆದರ್ಶವಾಗಿ ಕಾಣುತ್ತಾರೆ ಎಂದು ಅಮೀನ್‌ಮಟ್ಟು ಹೇಳಿದರು.
ಜಾತಿಯ ಹಿಂದೆ ಹೋಗದ ಗೋಪಾಲಗೌಡರು ಮಾತನಾಡಿದಂತೆ ಬದುಕಿದರು. ಸೈದ್ಧಾಂತಿಕ ಸ್ಪಷ್ಟತೆಯುಳ್ಳ ರಾಜಕಾರಣಿಯಾಗಿದ್ದ ಕಾರಣಕ್ಕೆ ಅವರು ತಮಗೆ ಬಂದ ಹುದ್ದೆಗಳನ್ನು ನಿರಾಕರಿಸಿದರು. ಇಂದು
ಜಾತಿಯ ಬಲ ಮತ್ತು ದುಡ್ಡಿಲ್ಲದೆ ರಾಜಕಾರಣ ಮಾಡಲಾಗದ ಕಾಲಘಟ್ಟದಲ್ಲಿ ಸಮಾಜವಿದೆ. ಶ್ರಮವಿಲ್ಲದ ಸಂಪತ್ತುಗಳಿಸಿ ಅದನ್ನು ಹಾಕಿ ಚುನಾವಣೆ ಗೆಲ್ಲುತ್ತಾರೆ. ಹಣಮಾಡುವ ಎಲ್ಲಾ ಅವಕಾಶ ಇದ್ದರೂ ಅದನ್ನು ನಿರಾಕರಿಸಿ ಸಂತನಾಗುವ ವ್ಯಕ್ತಿ ಈಗಿನ ಕಾಲದಲ್ಲಿ ಸಿಗುವುದಿಲ್ಲ ಎಂದು ಮಟ್ಟು ಹೇಳಿದರು. ಲಾಯರ್‍ಸ್ ಗಿಲ್ಡ್‌ನ ಕೆ.ಪಿ.ಶ್ರೀಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಚೈತ್ರ ಪ್ರಾರ್ಥನೆ, ವೇದಿಕೆಯಲ್ಲಿ ಹಿರಿಯ ಸಮಾಜವಾದಿ ಕೋಣಂದೂರು ಲಿಂಗಪ್ಪ, ಪಿ.ಪುಟ್ಟಯ್ಯ, ಹೊಸತು ಪತ್ರಿಕೆ ಸಂಪಾದಕ ಚಿಂತಕ ಸಿದ್ಧನಗೌಡ ಪಾಟೀಲ್, ಡಿ.ಎಸ್.ಎಸ್.ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ ಇದ್ದರು. ಭಾಸ್ಕರ್ ನಿರೂಪಿಸಿದರೆ, ಚೈತ್ರಾ ಪ್ರಾರ್ಥಿಸಿದರು.
ಗೋಪಾಲಗೌಡರು ಲೋಕಜ್ಞಾನ ಉಳ್ಳವರಾಗಿದ್ದರು. ಅವರು ಓದುತ್ತಿದ್ದರು. ಸಾಹಿತ್ಯಕ್ಕೆ ಮನುಷ್ಯನನ್ನು ಮಾನವೀಯಗೊಳಿಸುವ ಶಕ್ತಿಯಿದೆ. ಇಂದಿನ ರಾಜಕಾರಣಿಗಳಿಗೆ ಓದು ಅತ್ಯಂತ ಅಗತ್ಯವಿದೆ. ಗೋಪಾಲಗೌಡರು ಸಮಾಜವಾದಿ ಚಿಂತನೆಯ ಮೂಲಕ ಸೈದ್ಧಾಂತಿಕ ಬದ್ಧತೆಯ ರಾಜಕಾರಣ ಮತ್ತು ಚಳವಳಿಯ ಬೀಜ ಬಿತ್ತಿದರು. ಆದರೆ ಅದರ ಫಲ ನೋಡಲು ಅವರಿರಲಿಲ್ಲ. ಇಂದು ಸುಳ್ಳು ಇತಿಹಾಸ ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಉರಿಗೌಡ, ನಂಜೇಗೌಡ ಎಂಬ ಕಾಲ್ಪಿನಿಕ ವ್ಯಕ್ತಿಗಳನ್ನು ಹೇರುವ ಮತ್ತು ಆ ಬಗ್ಗೆ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ನಾಡಿನ ಬೌದ್ಧಿಕ ವಲಯ ತಣ್ಣಗೆ ಕುಳಿತಿರುವ ಬಗ್ಗೆ ನನ್ನ ಆಕ್ಷೇಪವಿದೆ.
ದಿನೇಶ್ ಅಮೀನ್ ಮಟ್ಟು