ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್ ಎಸ್‌ಎಸ್ ಸರಸಂಘಚಾಲಕರು ಸರ್ವಧರ್ಮ ಸಹಿಷ್ಣುತೆಯ ಅನಿವಾರ್ಯ ಮತ್ತು ಸೌಹಾರ್ದತೆಯಿಂದ ದೇಶವನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟಬಹುದು ಎಂದು ಹೇಳಿದ್ದಾರೆ. ಈ ಧೋರಣೆಯಲ್ಲಿಯೇ ನಾನೊಂದು ಶುಭಾಶಯ ಸಲ್ಲಿಸಿರುವ ಜಾಹಿರಾತು ಮತ್ತು ಫ್ಲೆಕ್ಸ್ ಹಾಕಿದ್ದಕ್ಕೆ ಕೆಲವರು ಕನಿಷ್ಠ ಮಟ್ಟದ ನಿಂದನೆ ಮಾಡಿ ಅವರ ಯೋಗ್ಯತೆಯನ್ನು ರುಜುವಾತು ಮಾಡಿಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ರೀತಿಯ ಗೊಡ್ಡು ಬೆದರಿಕೆಗಳಿಗೆ ನಾನು ಬಗ್ಗುವುದಿಲ್ಲ. ೩೨ ವರ್ಷಗಳಿಂದ ಈಶ್ವರಪ್ಪರಿಗೆ ಪಕ್ಷ ಶಿವಮೊಗ್ಗ ಕ್ಷೇತ್ರದಲ್ಲಿ ಅವಕಾಶ ನೀಡಿದೆ. ಈಗ ಅವರ ಬದಲು ಮಗನಿಗೆ ಅವಕಾಶ ಕೊಡುವುದು ಬೇಡ, ಪಕ್ಷಕ್ಕೆ ದುಡಿದ ನಮ್ಮಂತಹ ಅನೇಕರಿದ್ದಾರೆ. ಯಾರಾದೊರಬ್ಬರಿಗೆ ಟಿಕೆಟ್ ನೀಡಿ ಎಂದು ಕೇಳುವುದು ತಪ್ಪಾ ಎಂದು ನಾನು ಪ್ರಶ್ನಿಸುತ್ತೇನೆ. ಮೋದಿಯವರು ಅಲ್ಪಸಂಖ್ಯಾತರನ್ನು ವಿಶ್ವಾಸಕ್ಕೆ ಪಡೆಯಿರಿ ಎಂಬ ಕರೆಕೊಟ್ಟಿದ್ದಾರೆ. ಮೋಹನ್ ಭಾಗವತ್ ಅವರು ಮಸೀದಿ ಮುಖಂಡರೊಂದಿಗೆ ಸಭೆ ನಡೆಸುತ್ತಾರೆ. ನಾನೂ ಕೂಡಾ ಶಿವಮೊಗ್ಗದಲ್ಲಿ ಸೌಹಾರ್ದ ವಾತಾವರಣ ಬಯಸುತ್ತಿದ್ದೇನೆ. ಸರ್ವಜನಾಂಗದ ಶಾಂತಿಯ ನೆಲೆಯಾಗಬೇಕು ಎಂಬ ಆಶಯ ಹೊಂದಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಬಿಸ್ಕೆಟ್ ಹಾಕುವವರ ಪರವಾಗಿ ಬರೆದವರ ಬಗ್ಗೆ ನನಗೆ ಯಾವುದೇ ಬೇಸರವಿಲ್ಲ ಎಲ್ಲರನ್ನೂ ಎದುರಿಸುವ ಶಕ್ತಿ ನನಗಿದೆ ಎಂದು ಹೇಳಿದರು.
ಪಕ್ಷ ನನಗೆ ಎಲ್ಲಾ ಅವಕಾಶವನ್ನು ಮಾಡಿ ಕೊಟ್ಟಿದೆ. ಎಲ್ಲಾ ಸದನಕ್ಕೂ ಹೋಗಿ ಬಂದಿದ್ದೇನೆ. ನನಗೆ ಟಿಕೆಟ್ ಕೇಳುವ ಹಕ್ಕಿಲ್ಲವೇ. ಈ ಹಿಂದೆ ಹೊಸನಗರ ಕ್ಷೇತ್ರದಲ್ಲೂ ಸ್ಫರ್ಧಿಸಿ, ಶಾಸಕನಾಗಿ ಕೆಲಸ ಮಾಡಿದ್ದೆ. ಪಕ್ಷ ಹೇಳಿದ್ದಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದೆ. ಬಂಗಾರಪ್ಪನವರ ವಿರುದ್ದ ಪಕ್ಷದಿಂದ ಸ್ಫರ್ಧಿಸಿ, ಲೋಕಸಭೆಗೆ ಹೋಗಿದ್ದೆ. ಪಕ್ಷ ಹೇಳಿದಂತೆ ಮಾಡಿದ್ದೇನೆ. ಬರೀ ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೇ ಗೂಟ ಹೊಡೆದುಕೊಂಡು ಕೂತಿಲ್ಲ ಆಯನೂರು ಹೇಳಿದರು.
ಶಾಸಕನಾದಾಗ ಸದನದಲ್ಲಿ ಬಂಗಾರಪ್ಪ,ರಮೇಶ್ ಕುಮಾರ್ ಸೇರಿದಂತೆ ಘಟಾನುಘಟಿಗಳ ನಡುವೆ ಅತ್ಯುತ್ತಮ ಸಂಸದೀಯ ಪಟು ಎಂದು ಪ್ರಶಸ್ತಿ ಪಡೆದಿದ್ದೆ. ಬಾಯಿ ಬಿಡದವರ ನಡುವೆ, ಬಿಟ್ಟರೇ ಅನಾಹುತ ಸೃಷ್ಟಿಸವವರ ನಡುವೆ ಉತ್ತಮ ಕೆಲಸ ಮಾಡಿದ್ದೇನೆ. ನನ್ನ ಹೋರಾಟ ಅರ್ಥ ಮಾಡಿಕೊಳ್ಳದ, ಬಿಸ್ಕೆಟ್ ಗಾಗಿ ಬದುಕುವವರಿಗೆ ನಾನು ಉತ್ತರ ಕೊಡಬೇಕಿಲ್ಲ. ಅತ್ಯಂತ ಅಶ್ಲೀಲವಾಗಿ ಮಾತನಾಡೋ ಕೆಲಸ ಬಿಡಿ. ಮೋದಿಯವರ ಆಶಯದಂತೆ ಮಾತನಾಡೋ ಕೆಲಸ ನಾನು ಮಾಡಿದ್ದೇನೆ. ಮೋದಿ ಗೆ ಜೈ ಅಂದು, ಅವರ ಆಶಯಕ್ಕೆ ವಿರುದ್ಧವಾಗಿ ಕೆಲಸ ಮಾಡಿದರೆ, ಅವರೇ ಪಕ್ಷ ಹಾಗೂ ಮೋದಿ ವಿರೋಧಿಯಾಗುತ್ತಾರೆ. ಆರ್ ಎಸ್ ಎಸ್ ಹಿರಿಯ ನಾಯಕರ ಆಶಯವು ಇದೆಯಾಗಿದೆ. ನನಗೆ ಈ ಬಾರಿ ಪಕ್ಷ ಅವಕಾಶ ಕೊಡುತ್ತದೆ ಎಂದರು.
ಪಕ್ಷದ ಮುಖಂಡರು ಮಾತನಾಡಿದ್ದಾರೆ:
ನಾನು ಮಾಧ್ಯಮಗಳಲ್ಲಿ ಮಾತನಾಡಿರುವ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಮಾತನಾಡಿದ್ದಾರೆ. ಯಾರು ಏನು ಮಾತನಾಡಿದರೆಂದು ಇಲ್ಲಿ ಹೇಳುವುದಿಲ್ಲ. ಪಕ್ಷ ಈ ಬಾರಿ ಶಿವಮೊಗ್ಗ ಕ್ಷೇತ್ರದಿಂದ ಟಿಕೆಟ್ ನೀಡುವ ಭರವಸೆ ಇದೆ. ಕೊಡದಿದ್ದಲ್ಲಿ ಯಾವ ನಿರ್ಧಾರ ಮಾಡಬೇಕೆಂಬ ಸ್ಪಷ್ಟ ನಿರ್ಧಾರಕ್ಕೆ ಬಂದಿದ್ದೇನೆ. ಕುಟುಂಬ ರಾಜಕಾರಣಕ್ಕೆ ಶಿವಮೊಗ್ಗದಲ್ಲಿ ತಿಲಾಂಜಲಿ ಹೇಳುವ ಕಾಲ ಬಂದಿದೆ. ಯಾವ ಪಕ್ಷಕ್ಕೂ ನಾನು ಹೋಗುವುದಿಲ್ಲ ಎಂದು ಆಯನೂರು ಮಂಜುನಾಥ್ ಹೇಳಿದರು.


