ಶಿವಮೊಗ್ಗ,ಮಾ.24: ವಿಧಾನಸಭೆ ಚುನಾವಣೆ ಇನ್ನೇನು ಘೋಷಣೆಯಾಗುತ್ತಿದೆ ಎನ್ನುವಾಗಲೇ ಸಾಗರ ಕಾಂಗ್ರೆಸ್‌ನಲ್ಲಿ ಕೆಲವು ನಾಟಕೀಯ ಬೆಳವಣಿಗೆಗಳು ನಡೆಯುತ್ತಿರುವುದು ಬಹುಚರ್ಚಿತ ವಿಷಯವಾಗಿದೆ. ಹಿರಿಯ ಮುತ್ಸದ್ದಿ ರಾಜಕಾರಣಿ ಸಮಾಜವಾದಿ ಚಿಂತನೆಯ ಕಾಗೋಡು ತಿಮ್ಮಪ್ಪ ಅವರ ನಡೆಯ ಬಗ್ಗೆ ವ್ಯಾಪಕ ಟೀಕೆಯೂ ಕೇಳಿಬರುತ್ತಿದೆ. ೯೦ ರ ಹರಯದ ಕಾಗೋಡು ತಿಮ್ಮಪ್ಪ ಅವರ ಪ್ರಭಾವವನ್ನು ಬಳಸಿಕೊಂಡು ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂಬ ಇಚ್ಚೆಯನ್ನು ಅವರ ಮಗಳು ಡಾ.ರಾಜನಂದಿನಿ ಹೊಂದಿದ್ದಾರೆ. ವಂಶಾವಳಿ ರಾಜಕಾರಣವೇ ಮೇಳೈಸಿರುವ ಈ ಹೊತ್ತಿನಲ್ಲಿ ರಾಜನಂದಿಯ ಆಸೆ ಸಹಜ ಕೂಡಾ. ಆದರೆ ಬಹಳಷ್ಟು ಸಂದರ್ಭದಲ್ಲಿ ನಾನು ಸಮಾಜವಾದಿ ಎಲ್ಲ ಜಾತಿ, ಧರ್ಮವನ್ನು ಸಮಾನತೆಯಿಂದಲೇ ನೋಡುವೆ ಎಂದು ಭಾಷಣ ಹೊಡೆಯುವ ಕಾಗೋಡು ತಿಮ್ಮಪ್ಪ ಅವರು ಸ್ವ ಇಚ್ಚೆಯಿಂದ ಮಗಳ ಪರವಾಗಿ ಲಾಬಿ ಆರಂಭಿಸಿದ್ದಾರೊ, ಅಥವಾ ಕಿಚನ್ ಕಿರಿಕಿರಿಗೆ ಮಣಿದು ಈ ರೀತಿ ನಡೆದುಕೊಳ್ಳುತ್ತಿದ್ದಾರೊ ಎಂಬುದು ಅವರ ಅಭಿಮಾನಿ ವಲಯದಲ್ಲಿ ಚರ್ಚೆಯಾಗುತ್ತಿದೆ. ಡಾ.ರಾಜನಂದಿನಿ ತಮ್ಮ ಸರಳ ನಡೆನುಡಿ ಮತ್ತು ಸಾಮಾಜಿಕ ಸೇವಾ ಕಾರ್ಯಗಳಿಂದ ಕ್ಷೇತ್ರದಲ್ಲಿ ಉತ್ತಮ ಹೆಸರು ಹೊಂದಿದ್ದಾರೆ. ಆದರೆ ಈ ಹೆಸರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವಷ್ಟು ದೊಡ್ಡದಾಗಿ ಇನ್ನೂ ಬೆಳೆದಿಲ್ಲ ಎಂಬುದು ವಾಸ್ತವ.
ಕಾಗೋಡು ಬೆಂಬಲಿಗರ ಗುನ್ನ
ಸಾಗರ ಕ್ಷೇತ್ರದಲ್ಲಿಯೂ ಎಲ್ಲಾ ಕ್ಷೇತ್ರಗಳಲ್ಲಿರುವಂತೆ ಎರಡನೇ ಹಂತದ ಪ್ರಬಲ ನಾಯಕರು ಬೆಳೆಯಲಿಲ್ಲ ಅಥವಾ ಬೆಳೆಸಲಿಲ್ಲ ಎಂಬ ವಾತಾವರಣ ಇದೆ. ಬಹುಷಃ ಕಾಗೋಡು ತಿಮ್ಮಪ್ಪ ಅವರಿಗೆ ಗಂಡುಮಕ್ಕಳಿದ್ದರೆ, ಅಥವಾ ಡಾ.ರಾಜನಂದಿನಿ ಅವರು ಮೊದಲೇ ಸಾಗರ ಕ್ಷೇತ್ರದಲ್ಲಿ ಇದ್ದಿದ್ದರೆ ತಿಮ್ಮಪ್ಪ ಅವರ ಉತ್ತರಾಧಿಕಾರಿ ಸಮಸ್ಯೆ ಇರುತ್ತಿರಲಿಲ್ಲವೇನೊ. ತಿಮ್ಮಪ್ಪರ ಈಗಿನ ನಡೆ ನೋಡಿದರೆ ಹಾಗೇ ಅನ್ನಿಸುವುದು ಸಹಜ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪರ ಕೃಪೆಯಿಂದ ಸೋದರಳಿಯ ಬೇಳೂರು ಗೋಪಾಲಕೃಷ್ಣ ಎದುರಾಳಿಯಾಗಿದ್ದರು. ಹೀಗೆ ಉತ್ತರಾಧಿಕಾರಿ ಕ್ರೈಸಿಸ್‌ನಲ್ಲಿದ್ದ ಸಾಗರ ಕ್ಷೇತ್ರದಲ್ಲಿ ಹಾಳೂರಿಗೆ ಉಳಿದವನೇ ಗೌಡ ಎನ್ನುವಂತೆ ಹಲವು ಮುಖಂಡರು ತಮ್ಮ ಭವಿಷ್ಯದ ಕನಸು ಕಾಣುತಿದ್ದರು. ಈ ಎಲ್ಲಾ ಕನಸಿಗೆ ಡಾ.ರಾಜನಂದಿನಿ ಪ್ರವೇಶದಿಂದ ತಿಲಾಂಜಲಿ ಬಿದ್ದಿತು. ಈ ನಡುವೆ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಜನ ಬೆಂಬಲ ಇರುವ ಬೇಳೂರು ಗೋಪಾಲಕೃಷ್ಣ ಕಾಂಗ್ರೆಸ್‌ಗೆ ಬಂದಿದ್ದರೂ ಕಾಗೋಡು ಹಿಂಬಾಲಕರು ಇಂದಿಗೂ ಬೇಳೂರು ಅವರನ್ನು ಮಲತಾಯಿ ಮಗನಂತೆ ನೋಡುತ್ತಿದ್ದಾರೆ. ಈ ಧೋರಣೆ ಮುಖಂಡರ ಹಂತದಲ್ಲಿದೆಯೇ ವಿನಾ ಕಾರ್ಯಕರ್ತರಲ್ಲಿಲ್ಲ.
ಉಲ್ಟಾ ಹೊಡೆದ ತಿಮ್ಮಪ್ಪ:
ಸಾಗರ ಕಾಂಗ್ರೆಸ್ ಈ ನಿರ್ವಾತ ಸ್ಥಿತಿಯಲ್ಲಿರುವಾಗಲೇ ಈ ಬಾರಿ ಹೇಗಾದರೂ ಮಾಡಿ ನಾವೇ ಅಭ್ಯರ್ಥಿಯಾಗಬೇಕೆಂಬ ಇಚ್ಚೆ ಹೊಂದಿದ್ದ ಕೆಲ ಮುಖಂಡರು, ಬೇಳೂರು ವಿರುದ್ಧ ಒಂದು ಸಿಂಡಿಕೇಟ್ ರಚಿಸಿಕೊಂಡಿದ್ದರು. ಕಾಗೋಡು ತಿಮ್ಮಪ್ಪ ಅವರ ಬಳಿ ದಿನವೂ ಹೋಗುತ್ತಿದ್ದ ಈ ತಂಡ, ಬೇಳೂರಿಗೆ ಟಿಕೆಟ್ ಕೊಡುವ ಬದಲು ನೀವೇ ಸ್ಪರ್ಧಿಸಿ ಒಂದು ಗೆಲುವಿನ ವಿದಾಯ ಹೇಳಬಹುದು ಎಂದು ತಿದಿಯೊತ್ತಿತು. ಆದರೆ ದೈಹಿಕ ಹಾಗೂ ಮಾನಸಿಕವಾಗಿ ಚುನಾವಣೆ ರಾಜಕೀಯದಿಂದ ದೂರವಾಗಲು ನಿರ್ಧಾರ ಮಾಡಿರುವ ಕಾಗೋಡು ತಿಮ್ಮಪ್ಪ ಒಲ್ಲೆ ಎಂದಿದ್ದಾರೆ. ಇದರಿಂದ ಮತ್ತೆ ಗೊಂದಲಕ್ಕೊಳಗಾದ ಸಿಂಡಿಕೇಟ್ ಕಾಗೋಡು ತಿಮ್ಮಪ್ಪ ಅವರಿಗಿರುವ ಪ್ರಭಾವವನ್ನು ಬಳಸಿಕೊಳ್ಳಲು ನಿರ್ಣಯಿಸಿದೆ. ಇದರ ಭಾಗವಾಗಿ ಡಾ.ರಾಜನಂದಿನಿ, ಬಿ.ಆರ್.ಜಯಂತ್, ಕಲಗೋಡು ರತ್ನಾಕರ್, ಮಲ್ಲಿಕಾರ್ಜುನ ಹಕ್ರೆ, ಹುನಗೋಡು ರತ್ನಾಕರ್ ಅವರಲ್ಲಿ ಯಾರಿಗಾದರೂ ಒಬ್ಬರ ಪರ ಕಾಗೋಡು ತಿಮ್ಮಪ್ಪ ಅವರಿಂದ ಶಿಫಾರಸು ಮಾಡಿಸಬೇಕು. ಗುಂಪಿನಲ್ಲಿ ಯಾರಿಗೇ ಪಕ್ಷ ಅವಕಾಶ ನೀಡಿದರೂ ಒಟ್ಟಾಗಿ ಕೆಲಸ ಮಾಡಬೇಕು ಎಂಬ ನಿರ್ಣಯ ಕೈಗೊಂಡಿದೆ
ಸಿಂಡಿಕೇಟ್ ತೀರ್ಮಾನದಂತೆ ಬೆಂಗಳೂರಿಗೆ ಹೋಗಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಬಿ.ಕೆ.ಹರಿಪ್ರಸಾದ್ ಅವರನ್ನು ಭೇಟಿ ಮಾಡಿದ್ದಾರೆ. ಎಲ್ಲರೂ ಒಟ್ಟಾಗಿಯೇ ಬೇಳೂರು ಗೋಪಾಲಕೃಷ್ಣರಿಗೆ ಟಿಕೆಟ್ ಕೊಟ್ಟರೆ ಉಪಯೋಗವಿಲ್ಲ ಎಂದು ಹೇಳಿದ್ದಾರೆ. ಇದಾದ ಬಳಿಕ ಕಾಗೋಡು ತಿಮ್ಮಪ್ಪ ಅವರು ತಮ್ಮ ಪುತ್ರಿಗೆ ಈ ಬಾರಿ ಟಿಕೆಟ್ ಕೊಡಿ ಎಂದು ಒಂದೇ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಕಾಗೋಡು ತಿಮ್ಮಪ್ಪ ಅವರ ಈ ನಡೆಯಿಂದ ಅವರೊಂದಿಗೆ ಹೋಗಿದ್ದ ಸಿಂಡಿಕೇಟ್‌ನ ಎಲ್ಲರೂ ಕಕ್ಕಾಬಿಕ್ಕಿಯಾಗಿದ್ದಾರೆ. ಲಿಂಗಾಯತರಿಗೆ ಕೊಡುವುದಾದರೆ, ಮಲ್ಲಿಕಾರ್ಜುನ ಹಕ್ರೆ, ಬ್ರಾಹ್ಮಣರಿಗಾದರೆ ಜಯಂತ್, ಈಡಿಗರಿಗಾದರೆ ಕಲಗೋಡು ರತ್ನಾಕರ್ ಹೆಸರು ಹೇಳಬೇಕೆಂಬ ವಿಚಾರವನ್ನೇ ಕೈಬಿಟ್ಟ ಕಾಗೋಡು, ಮಗಳ ಹೆಸರನ್ನು ಮಾತ್ರ ಹೇಳಿದ್ದರಿಂದ ಎಲ್ಲರ ಯೋಜನೆ ತಲೆಕೆಳಗಾಗಿದೆ.
ಶಿಷ್ಯರ ಪ್ರತಿತಂತ್ರ:
ತಮ್ಮ ನಾಯಕರು ಯಾವಾಗ ಉಲ್ಟಾ ಹೊಡೆದರೊ ಈ ಚಾಣಾಕ್ಷ ಶಿಷ್ಯರು ಸುಮ್ಮನೇ ಬರಲಿಲ್ಲ. ಸಿಂಡಿಕೇಟ್‌ನ ಕೆಲವರು ಮತ್ತೆ ಯಥಾ ಪ್ರಕಾರ ಎಲ್ಲಾ ನಾಯಕರನ್ನು ಭೇಟಿ ಮಾಡಿ, ಕಾಗೋಡು ತಿಮ್ಮಪ್ಪ ಅವರ ಪುತ್ರಿಗೆ ಪಕ್ಷ ಟಿಕೆಟ್ ನೀಡಿದರೆ, ಎದುರಾಳಿ ಪ್ರಚಾರ ಮಾಡುವುದೇ ಬೇಡ ಎಂದು ಪುಕಾರು ಹೇಳಿದ್ದಾರೆ. ಒಂದು ಕಾಲದಲ್ಲಿ ಕಾಗೋಡು ತಿಮ್ಮಪ್ಪರಿಂದ ಎಲ್ಲಾ ಅವಕಾಶ ಮತ್ತು ಅಧಿಕಾರ ಪಡೆದ ಶಿಷ್ಯರೇ ಗುರುವಿಗೆ ತಿರುಮಂತ್ರ ಹಾಕಿದ್ದಾರೆ. ರಾಜಕಾರಣದಲ್ಲಿ ಎಂತಹ ಮಿತ್ರನೂ ಶತ್ರುವಾಗುತ್ತಾನೆ ಎಂಬುದಕ್ಕೆ ಸಾಗರ ಕಾಂಗ್ರೆಸ್‌ನ ಈ ಬೆಳವಣಿಗೆ ಸಾಕ್ಷಿಯಾಗಿದೆ. ಕೆಪಿಸಿಸಿ ಪಡೆದುಕೊಂಡಿರುವ ಗುಪ್ತ ವರದಿಯಂತೆ ಬೇಳೂರು ಗೋಪಾಲಕೃಷ್ಣ ಅವರೇ ಪ್ರಬಲ ಅಭ್ಯರ್ಥಿ ಎಂಬ ಮಾಹಿತಿ ಇದೆ. ಹೀಗಿರುವಾಗ ತಮ್ಮ ಅನುಕೂಲಕ್ಕಾಗಿ ಕಾಗೋಡು ತಿಮ್ಮಪ್ಪರನ್ನು ಬಳಸಿಕೊಂಡಿದ್ದು, ಅವರು ಬಳಕೆ ಆಗಿದ್ದು ಮಾತ್ರ ಬಿಜೆಪಿಯವರಿಗೆ ಮಲ್ನಾಡ್ ಎಲೆಅಡಿಕೆ ಜಗಿದಷ್ಟು ಖುಷಿಯಾಗಿದೆಯಂತೆ.