Malenadu Mitra
ರಾಜ್ಯ ಶಿವಮೊಗ್ಗ

ಗಂಡನಿಗಾಗಿ ಕಾಯುತ್ತಿದ್ದವಳು ಪತ್ನಿ, ಆದರೆ ಕರೆದೊಯ್ದವನು ಮಾತ್ರ ಜವರಾಯ !, ವಿಧಿ ನೀನೆಷ್ಟು ಕ್ರೂರಿ ?

ಆಕೆ ತನ್ನ ಗಂಡ ಬರುವನೆಂದು ದೂರದ ಅಸ್ಸಾಂನಿಂದ ಬಂದು ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಕಾಯುತ್ತಿದ್ದಳು. ಗಂಡ ಶಿವಮೊಗ್ಗದಿಂದ ರೈಲು ಹತ್ತಿದ್ದ ಮಾಹಿತಿ ಮತ್ತು ವಾಪಸ್ ಶಿವಮೊಗ್ಗಕ್ಕೆ ಬರುವ ಟಿಕೆಟ್ ಕೂಡಾ ಬುಕ್ ಆಗಿರುವ ಎಲ್ಲಾ ಮಾಹಿತಿ ಆಕೆಗಿತ್ತು. ಆದರೆ ತನ್ನನ್ನು ಕರೆದೊಯ್ಯಲು ಕಾತುರದಿಂದ ಬರುತಿದ್ದ ಬಾಳ ಸಂಗಾತಿ ಕಾಲನ ಕರೆಗೆ ಹೋಗಿದ್ದ ಎಂಬುದು ಮಾತ್ರ ಆಕೆಗೆ ಗೊತ್ತಾಗಿರಲಿಲ್ಲ. ಸಾವು ಹೀಗೆಯೇ ಯಾವ ರೂಪದಲ್ಲಿ ಎಲ್ಲಿ ಬರುತ್ತದೆ ಎಂಬುದು ಮಾತ್ರ ಅನಿಶ್ಚಿತ.
ಇದು ಆಶೋಕ್‌ರಾಯ್ (೩೩) ಎಂಬ ಯೂನಿಯನ್ ಬ್ಯಾಂಕ್ ಆಫಿಸರ್ ಒಬ್ಬರ ಕರುಣಾಜನಕ ಕತೆ. ಶಿವಮೊಗ್ಗ ಬಿ.ಹೆಚ್.ರಸ್ತೆ ಯೂನಿಯನ್ ಬ್ಯಾಂಕ್ ಶಾಖೆಯಲ್ಲಿ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಅಶೋಕ್ ರಾಯ್ ಅವರು ಶನಿವಾರ ಮಧ್ಯಾಹ್ನ ಶಿವಮೊಗ್ಗದಿಂದ ರೈಲಿನಲ್ಲಿ ಬೆಂಗಳೂರಿಗೆ ಹೊರಟಿದ್ದರು. ಪತ್ನಿ ಅಸ್ಸಾಂನಿಂದ ಬಂದು ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿದ್ದರು. ಇಬ್ಬರು ಮತ್ತೆ ರಾತ್ರಿ ಹನ್ನೊಂದು ಗಂಟೆ ರೈಲಿಗೆ ಶಿವಮೊಗ್ಗಕ್ಕೆ ಬರುವವರಿದ್ದರು. ಪೂರ್ವನಿರ್ಧಾರದಂತೆ ಅಶೋಕ್ ಮಧ್ಯಾಹ್ನ ಶಿವಮೊಗ್ಗದಿಂದ ಎಸಿ ಕೋಚ್ ರೈಲಿನಲ್ಲಿ ಬೆಂಗಳೂರಿಗೆ ಹೊರಟಿದ್ದರು. ಮುಂಚಿತವಾಗಿಯೇ ಬೆಂಗಳೂರಿಗೆ ಬಂದಿದ್ದ ಅವರ ಪತ್ನಿ ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿದ್ದರು. ಗಂಡ ಹೇಳಿದ್ದ ರೈಲು ರಾತ್ರಿ ಎಂಟೂವರೆಗೇ ನಿಲ್ದಾಣ ತಲುಪಿತ್ತು. ಅದರೆ ಪತಿ ಮಾತ್ರ ಬಾರಲಿಲ್ಲ. ರೈಲು ಹತ್ತಿದ್ದ ಬಗ್ಗೆ ಮೊದಲೇ ತಿಳಿಸಿದ್ದ ಪತಿ ಬಾರದ್ದನ್ನು ಕಂಡು ಪತ್ನಿ ಗಾಬರಿಯಾಗಿದ್ದಾರೆ.


ಬೋಗಿಯಲ್ಲಿ ಪರಿಶೀಲನೆ:

ತಕ್ಷಣ ರೈಲ್ವೆ ಸಿಬ್ಬಂದಿಯಲ್ಲಿ ವಿಚಾರಿಸಿದ್ದಾರೆ. ರೈಲ್ವೆ ಅಧಿಕಾರಿಗಳ ಸೂಚನೆಯಂತೆ ಬೋಗಿ ಚೆಕ್ ಮಾಡಿದರೆ ಅಲ್ಲಿ ಅಶೋಕ್ ಸುಳಿವು ಕಾಣಲಿಲ್ಲ. ಇಷ್ಟಕ್ಕೆ ಕೈಚೆಲ್ಲಿದ್ದ ಸಿಬ್ಬಂದಿ ನಿಮ್ಮ ಪತಿ ಇಲ್ಲ ಎಂದು ಹೇಳಿದ್ದಾರೆ. ಈ ನಡುವೆ ಮೊದಲು ರಿಂಗ್ ಆಗುತಿದ್ದ ಅಶೋಕ್ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅಶೋಕ್ ಪತ್ನಿ ಶಿವಮೊಗ್ಗದ ಬ್ಯಾಂಕ್ ಮ್ಯಾನೇಜರ್ ಮತ್ತು ಸಹೋದ್ಯೋಗಿಗಳಿಗೂ ವಿಷಯ ತಿಳಿಸಿದ್ದಾರೆ. ಅವರು ಬೆಂಗಳೂರಿಗೆ ಹೋಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಸಂದರ್ಭ ಒಂಟಿ ಹೆಣ್ಣು ಪರಊರಲ್ಲಿ ಪರದಾಡಿದ್ದಾರೆ. ಶನಿವಾರ ರಾತ್ರಿ ಪರಿಚಿತರ ಮನೆಗೆ ಹೋಗಿ ಅಲ್ಲಿಯೇ ರಾತ್ರಿಕಳೆದು ಭಾನುವಾರ ಬೆಳಗ್ಗೆಯೇ ಬಂದು ಮಿಸ್ಸಿಂಗ್ ಕಂಪ್ಲೆಂಟ್ ಕೊಟ್ಟಿದ್ದಾರೆ.


ಶೌಚಾಲಯದಲ್ಲಿ ಸಿಕ್ಕ ಶವ:
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೊನೆಗೆ ಶನಿವಾರ ಬೆಂಗಳೂರಿಗೆ ಹೋಗಿದ್ದ ಅದೇ ರೈಲು ಭಾನುವಾರ ಮಧ್ಯಾಹ್ನ ಶಿವಮೊಗ್ಗಕ್ಕೆ ಬಂದಿದೆ. ಅಶೋಕ್ ಅವರನ್ನು ಎಲ್ಲಾ ಕಡೆ ಹುಡಿಕಿದ ಬ್ಯಾಂಕ್‌ನ ಸಿಬ್ಬಂದಿಗಳು ಅನುಮಾನಗೊಂಡು ಅಶೋಕ್ ಶನಿವಾರ ಪ್ರಯಾಣಿಸಿದ್ದ ಎಸಿ ಕೋಚ್‌ನ ವಾಶ್‌ರೂಂ ಪರಿಶೀಲಿಸಿಲು ಮುಂದಾಗಿದ್ದಾರೆ. ಆಗ ಕೋಚ್‌ನ ವಾಶ್‌ರೂಂ ಒಳಗಡೆಯಿಂದ ಲಾಕ್ ಆಗಿರುವುದು ಗೊತ್ತಾಗಿದೆ. ತಕ್ಷಣ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದು,ಅವರು ಬಂದು ಬಾಗಿಲು ತೆಗೆದು ನೋಡಿದಾಗ ಅಶೋಕ್ ಅವರ ಮೃತದೇಹ ಪತ್ತೆಯಾಗಿದೆ.ಮೇಲ್ನೋಟಕ್ಕೆ ಅಶೋಕ್ ಅವರಿಗೆ ಹೃದಯಾಘಾತವಾಗಿರಬಹುದು ಎಂದು ಶಂಕಿಸಲಾಗಿದೆ. ತನಿಖೆಯಿಂದ ವಾಸ್ತವ ತಿಳಿಯಲಿದೆ.

ರೈಲು ಕ್ಲೀನ್ ಮಾಡಿರಲಿಲ್ಲವೇ?
ಸಾಮಾನ್ಯವಾಗಿ ರೈಲುಗಳನ್ನು ಅಂದಿನ ಪ್ರಯಾಣ ಮುಗಿದ ಬಳಿಕ ಮರುದಿನದ ಪ್ರಯಾಣಕ್ಕೂ ಮುನ್ನ ಸ್ವಚ್ಚಗೊಳಿಸಲಾಗುತ್ತದೆ. ಶನಿವಾರ ರಾತ್ರಿ ಸ್ಚಚ್ಚಗೊಳಿಸುವ ಸಿಬ್ಬಂದಿಯೂ ವಾಶ್‌ರೂಂ ಪರಿಶೀಲಿಸಿರುವ ಬಗ್ಗೆ ಅನುಮಾನವಿದೆ. ಶನಿವಾರ ಮಧ್ಯಾಹ್ನ ಹೋದ ರೈಲಿನಲ್ಲಿ ಭಾನುವಾರ ಮಧ್ಯಾಹ್ನ ಶಿವಮೊಗ್ಗದಲ್ಲಿಯೇ ಮೃತ ದೇಹ ಪತ್ತೆಯಾಗಿದೆ. ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ಕೊಂಡೊಯ್ಯಲಾಗಿದೆ. ಮೃತ ಪತ್ನಿ ಸ್ಥಳಕ್ಕೆ ಬಂದ ಬಳಿಕ ಆ ಪ್ರಕ್ರಿಯೆ ನಡೆಯಲಿದೆ. ಮರಣೋತ್ತರ ವರದಿ ಬಂದ ಬಳಿಕ ಅಶೋಕ್ ಸಾವಿನ ಸತ್ಯಾಸತ್ಯತೆ ತಿಳಿಯಲಿದೆ. ಅಶೋಕ್ ಶವ ಪತ್ತೆಯಾಗುತ್ತಿದ್ದಂತೆ ಯೂನಿಯನ್ ಬ್ಯಾಂಕ್ ಸಿಬ್ಬಂದಿಗಳು ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದಿದ್ದಾರೆ. ರೈಲ್ವೆ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಶೋಕ್ ಅವರು ೨೦೧೫ ರಲ್ಲಿ ಯೂನಿಯನ್ ಬ್ಯಾಂಕ್ ಕ್ಲರ್ಕ್ ಆಗಿ ಸೇವೆಗೆ ಸೇರಿದ್ದು, ಬಡ್ತಿ ಹೊಂದಿ ಮುಂಬಯಿನಲ್ಲಿ ಕೆಲಸ ಮಾಡಿದ್ದರು. ಪುನಾ ಮುಂಬಡ್ತಿ ಹೊಂದಿ ಒಂದು ವರ್ಷದ ಹಿಂದೆ ಶಿವಮೊಗ್ಗ ಶಾಖೆಗೆ ಆಫಿಸರ್ ಆಗಿ ನಿಯುಕ್ತಿಗೊಂಡಿದ್ದರು.

Ad Widget

Related posts

ಶಿವಮೊಗ್ಗದಲ್ಲಿ ಮೊದಲ ಲಸಿಕೆ ಯಾರು ತಗೊಂಡ್ರು ಗೊತ್ತಾ ?

Malenadu Mirror Desk

ಕಡಿಮೆ ಮಕ್ಕಳಿರುವ ಶಾಲೆಗಳ ವಿಲೀನ ಶಾಸಕರಿಂದ ಸಲಹೆ: ಶಿಕ್ಷಣ ಸಚಿವ ಮಧುಬಂಗಾರಪ್ಪ

Malenadu Mirror Desk

ಹಿರಿಯ ಸಾಹಿತಿ,ಹೋರಾಟಗಾರ ಚಂಪಾ ನಿಧನ: ಪ್ರಖರ ಬರಹಗಾರ, ನಿಷ್ಠುರ ಸಿದ್ಧಾಂತಿಯನ್ನು ಕಳೆದುಕೊಂಡು ಕರುನಾಡು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.