ಶಿವಮೊಗ್ಗ,ಮಾ.೨೮: ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಮೊಗ್ಗ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆಯೇ ?, ಹೀಗೊಂದು ಸುದ್ದಿ ಈಗ ಕ್ಷೇತ್ರದಲ್ಲಿ ಹರಿದಾಡುತ್ತಿದೆ. ಕಳೆದ ಕೆಲ ತಿಂಗಳಿಂದ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸುತ್ತಿದ್ದ ಆಯನೂರ್, ಕಾಂಗ್ರೆಸ್ ಸೇರಲು ಎಲ್ಲಾ ತಯಾರಿಗಳು ನಡೆದಿವೆ. ಕಾಂಗ್ರೆಸ್ ರಾಜ್ಯ ನಾಯಕರು ಕೂಡಾ ಗ್ರೀನ್ ಸಿಗ್ನಲ್ ತೋರಿದ್ದಾರೆ ಎನ್ನಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಅವರ ಒಪ್ಪಿಗೆಯೂ ಸಿಕ್ಕಿದೆ ಎನ್ನಲಾಗಿದೆ. ಲೋಕಸಭೆ, ರಾಜ್ಯಸಭೆ,ವಿಧಾನ ಸಭೆ ಮತ್ತು ವಿಧಾನ ಪರಿಷತ್ ಹೀಗೆ ನಾಲ್ಕು ಮನೆಗಳನ್ನು ಪ್ರತಿನಿಧಿಸಿರುವ ಅಪರೂಪದ ರಾಜಕಾರಣಿ ಆಯನೂರು ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿ ಶಾಂತಿ ಮಂತ್ರ ಜಪಿಸುತ್ತಿದ್ದರು. ಶಿವಮೊಗ್ಗದಲ್ಲಿ ಕೋಮುಸಾಮರಸ್ಯದ ಕೊರತೆಯಿಂದ ಈ ನಗರಕ್ಕಿದ್ದ ಹೆಸರು ಮಾಯವಾಗುತ್ತಿದೆ. ಇಲ್ಲಿ ಪ್ರೀತಿ ಸೌಹಾರ್ದತೆಯ ವಾತಾವರಣ ಬೇಕಾಗಿದೆ ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದರು.
ಯುಗಾದಿ ಮತ್ತು ರಂಜಾನ್ ಹಬ್ಬದ ಶುಭಾಶಯ ಕೋರಿ ಜಾಹಿರಾತು ನೀಡಿದ್ದ ಆಯನೂರು ಮಂಜುನಾಥ್ ಅವರು, ಹರಕು ಬಾಯಿಗೆ ಹೊಲಿಗೆ ಹಾಕಬೇಕು. ಒಡೆದ ಮನಸುಗಳನ್ನು ಬೆಸೆಯಬೇಕೆಂಬ ಸಂದೇಶ ನೀಡಿದ್ದರು. ಆಯನೂರು ಸೌಹಾರ್ದ ಸಂದೇಶದ ಬಗ್ಗೆ ಬಿಜೆಪಿ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ಟಿಪ್ಪಣಿ ಮಾಡಿದ್ದರು.
ಶಿವಮೊಗ್ಗದಲ್ಲಿ ಪ್ರಬಲ ಲಿಂಗಾಯತ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂಬ ಚರ್ಚೆ ಮೊದಲಿಂದಲೂ ಇತ್ತು. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಬ್ರಾಹ್ಮಣ ಸಮುದಾಯದ ಕೆ.ಬಿ.ಪ್ರಸನ್ನಕುಮಾರ್, ಲಿಂಗಾಯತ ಸಮುದಾಯದ ಎಸ್.ಪಿ.ದಿನೇಶ್, ಹೆಚ್.ಸಿ.ಯೋಗಿಶ್ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಅವರು ಸ್ಪರ್ಧಾಕಾಂಕ್ಷಿಯಾಗಿದ್ದರು. ಆದರೆ ಈಗ ಪಕ್ಷ ಮೇಲ್ಮಟ್ಟದಲ್ಲಿಯೇ ಆಯನೂರು ಅವರನ್ನು ಕಣಕ್ಕಿಳಿಸಲು ನಿರ್ಣಯಿಸಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಬಿಜೆಪಿಯಿಂದ ಕೆ.ಎಸ್.ಈಶ್ವರಪ್ಪರೇ ಈ ಬಾರಿಯೂ ಕಣಕ್ಕಿಳಿಯಲಿದ್ದು, ಕ್ಷೇತ್ರದಲ್ಲಿ ಪ್ರಬಲ ಪೈಪೋಟಿಯನ್ನು ನಿರೀಕ್ಷಿಸಬಹುದಾಗಿದೆ.