Malenadu Mitra
ರಾಜ್ಯಶಿವಮೊಗ್ಗ

ಒಳಮೀಸಲಾತಿಯಲ್ಲಿ ಬಂಜಾರರಿಗೆ ನ್ಯಾಯ ಸಿಕ್ಕಿದೆ: ಶಾಸಕ ಅಶೋಕ್ ನಾಯ್ಕ್

ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಸಚಿವ ಸಂಪುಟದಲ್ಲಿ ಅಂಗೀಕರಿಸಿ, ಕೇಂದ್ರದ ಅನುಮತಿಗೆ ಶಿಫಾರಸು ಮಾಡಿರುವುದನ್ನು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಕೆ.ಬಿ ಆಶೋಕ್‌ನಾಯ್ಕ್ ಸ್ವಾಗತಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಜಾರ, ಬೋವಿ, ಕೊರಚ, ಕೊರಮ ಸಮಾಜಕ್ಕೆ ನಿರೀಕ್ಷೆಗೂ ಮೀರಿ ಮೀಸಲಾತಿ ಸಿಕ್ಕಿದ್ದು, ಆದರೆ ಕೆಲವರ ಚಿತಾವಣೆಯಿಂದ ಪ್ರತಿಭಟನೆ ನಡೆಯುತ್ತಿದ್ದು, ಇಲ್ಲಿಗೆ ಈ ವಿಷಯವನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.
 ಬಿಜೆಪಿ ಎಲ್ಲಾ ವರ್ಗದವರ ಹಿತವನ್ನು ಕಾಪಾಡುತ್ತಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಒಳಮೀಸಲಾತಿಯ ಗೊಂದಲಗಳನ್ನು ಸರಿಪಡಿಸಿದೆ. ತುಳಿತಕ್ಕೆ ಒಳಗಾದ ಎಲ್ಲಾ ಪರಿಶಿಷ್ಟರಿಗೆ ನ್ಯಾಯವಾದ ಮೀಸಲಾತಿ ಸಿಕ್ಕಿದೆ. ಆದರೆ ಬಂಜಾರ ಸಮುದಾಯದವರು ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಕೆಲವರ ಕುಮ್ಮಕ್ಕಿನಿಂದ ಪ್ರತಿಭಟನೆ ಮಾಡಲು ಹೊರಟಿದ್ದಾರೆ. ಇದು ಸರಿಯಲ್ಲ. ನಮ್ಮ ಸಮುದಾಯದವರು ಎಚ್ಚರಗೊಳ್ಳಬೇಕು ಎಂದರು.
ಈ ಹಿಂದೆ ಬಂಜಾರ ಮತ್ತು ಇತರ ಜಾತಿಯವರಿಗೆ ಶೇ.೨ರಷ್ಟು ಮೀಸಲಾತಿ ಇತ್ತು. ನಾವು ಶೇ.೩ರಷ್ಟು ಹೆಚ್ಚಿಸಬಹುದು ಎಂದುಕೊಂಡಿದ್ದೆವು. ಆದರೆ ಶೇ.೪.೫ರಷ್ಟು ಹೆಚ್ಚಿಸಲಾಗಿದೆ. ಇದು ನಮ್ಮ ನಿರೀಕ್ಷೆ ಮೀರಿ ನಮಗೆ ಮೀಸಲಾತಿ ಸಿಕ್ಕಿದೆ. ಆದ್ದರಿಂದ ಸರ್ಕಾರಕ್ಕೆ ನಾನು ಸಮಾಜದ ಪರವಾಗಿ ಅಭಿನಂದಿಸುತ್ತೇನೆ. ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪನವರ ನಿವಾಸದ ಮೇಲೆ ಕಲ್ಲು ತೂರಾಟ ಮಾಡಿದ್ದು ನಮಗೆ ಬೇಸರ ತಂದಿದೆ. ಇದೊಂದು ಕಹಿ ಘಟನೆ. ಈ ರೀತಿಯ ಘಟನೆಗಳು ಸಂವಿಧಾನ ಬಾಹಿರ ವಾಗಿದೆ. ಬಿಜೆಪಿ ಸರ್ಕಾರ ಅಧ್ಯಯನ ವರದಿಯನ್ನು ನೋಡಿಯೇ ಮೀಸಲಾತಿ ಪ್ರಕಟಿಸಿದೆ. ಶೇ.೧೫ರಷ್ಟು ಮೀಸಲಾತಿಯಲ್ಲಿ ಎಡಗೈನವರಿಗೆ ಶೇ.೬, ಬಲಗೈನವರಿಗೆ ಶೇ.೫.೫, ಬಂಜಾರ ಸೇರಿದಂತೆ ನಾಲ್ಕು ಜಾತಿಗಳಿಗೆ ಶೇ.೪.೫ ಹಾಗೂ ಇತರರಿಗೆ ಶೇ.೧ರಷ್ಟು ಮೀಸಲಾತಿ ನೀಡಿದೆ ಎಂದರು.
ಬಿ.ಎಸ್ ಯಡಿಯೂರಪ್ಪನವರು ಲಂಬಾಣಿ ಸಮುದಾಯಕ್ಕೆ ಅನೇಕ ರೀತಿಯ ನೆರವು ನೀಡಿದ್ದಾರೆ. ತಾಂಡಾಗಳ ಅಭಿವೃದ್ಧಿಪಡಿಸಿದ್ದಾರೆ. ಬಂಜಾರ ಧಾರ್ಮಿಕ ಕೇಂದ್ರವಾದ ಸೂರಗೊಂಡನಕೊಪ್ಪವನ್ನು ಅಭಿವೃದ್ಧಿಪಡಿಸಲಾಗಿದೆ. ಬಂಜಾರ ಸಮುದಾಯ ಅವರನ್ನು ಸ್ಮರಿಸಬೇಕು. ಆದರೆ ಕೆಲವರು ಇದನ್ನು ಅರಿಯದೆ ಅವರ ವಿರುದ್ಧ ಪ್ರತಿಭಟನೆ ಮಾಡಿರುವುದು ತರವಲ್ಲ ಎಂದರು.  
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಾಧಾಕೃಷ್ಣ, ಕುಮಾರ ನಾಯ್ಕ, ಭೋಜಾ ನಾಯ್ಕ, ಲೋಕೇಶ್ ನಾಯ್ಕ ಮತ್ತಿತರರಿದ್ದರು.

Ad Widget

Related posts

ಮಲೆನಾಡಿಗೆ ಮತ್ತೊಂದು ಕೇಂದ್ರೀಯ ವಿದ್ಯಾಲಯ

Malenadu Mirror Desk

ಶಿವಮೊಗ್ಗದಲ್ಲಿ ೪೫ ಸ್ಮಾರ್ಟ್ ಸ್ಕೂಲ್ ಲೋಕಾರ್ಪಣೆ, ನೂರಾರು ಕೋಟಿ ಮೊತ್ತದ ಕಾಮಗಾರಿಗೆ ಅಡಿಗಲ್ಲು

Malenadu Mirror Desk

ತ್ಯಾವರೆಕೊಪ್ಪ ಮೃಗಾಲಯದ ‘ಅಂಜನಿ’ ಸಾವು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.