ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಫಲಪ್ರದ ಸಂಧಾನ
ಶಿವಮೊಗ್ಗ: ತೀರ್ಥಹಳ್ಳಿ ವಿಧಾನ ಸಭೆ ಕ್ಷೇತ್ರಕ್ಕೆ ಕಿಮ್ಮನೆ ರತ್ನಾಕರ್ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಬಹುತೇಖ ಖಚಿತವಾಗಿದ್ದು, ಘೋಷಣೆ ಒಂದೇ ಬಾಕಿಯಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಆಕಾಂಕ್ಷಿಗಳಾಗಿದ್ದ ಕಿಮ್ಮನೆ ರತ್ನಾಕರ್ ಮತ್ತು ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡರನ್ನು ಬೆಂಗಳೂರಿಗೆ ಕರೆಸಿ ಇಬ್ಬರ ನಡುವೆ ಸಂಧಾನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮಂಜುನಾಥ್ ಗೌಡ ಅವರು ತೀರ್ಥಹಳ್ಳಿ ಕ್ಷೇತ್ರಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದು, ಕೆಜೆಪಿಯಿಂದ ೨೦೧೩ ರಲ್ಲಿ ಸ್ಪರ್ಧಿಸಿ ಗೆಲುವಿಗೆ ಸಮೀಪ ಬಂದಿದ್ದರು. ಬಳಿಕ ಜೆಡಿಎಸ್‌ಗೂ ಹೋಗಿ ಬಳಿಕ ಕಾಂಗ್ರೆಸ್ ಸೇರಿದ್ದರು. ಗೌಡರು ಕಾಂಗ್ರೆಸ್‌ಗೆ ಬಂದಾಗಿಂದಲೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಅವರ ನಡುವೆ ಪಕ್ಷದ ಟಿಕೆಟ್‌ಗಾಗಿ ಪೈಪೋಟಿ ನಡೆಯುತಿತ್ತು.
ಪಕ್ಷದ ಕಾರ್ಯಕ್ರಮಗಳನ್ನೂ ಎರಡು ಬಣಗಳಾಗಿಯೇ ನಡೆಸುತ್ತಿದ್ದರು. ಮಂಜುನಾಥ್ ಗೌಡ ಅವರು ತಮ್ಮದೇ ಒಂದು ಬಣ ಕಟ್ಟಿಕೊಂಡು ಹೋರಾಟ ಪಾದಯಾತ್ರೆ ಮಾಡಿದರೆ, ಕಿಮ್ಮನೆ ಅವರು ಬ್ಲಾಕ್ ಕಾಂಗ್ರೆಸ್ ಒಡಗೂಡಿ ಪ್ರತ್ಯೇಕ ಚಟುವಟಿಕೆಯಲ್ಲಿ ತೊಡಗುತಿದ್ದರು.
ಈ ಇಬ್ಬರು ಪ್ರಬಲ ಆಕಾಂಕ್ಷಿಗಳ ಕಾರಣದಿಂದ ಕಾಂಗ್ರೆಸ್ ನಾಯಕರಿಗೆ ಇರುಸುಮುರುಸಾಗಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಿಮ್ಮನೆ ಪರವಾಗಿ ಹೆಚ್ಚು ಒಲವು ಹೊಂದಿದ್ದರು. ಡಿಕೆಶಿವಕುಮಾರ್ ಅವರು ಮಂಜುನಾಥ ಗೌಡರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.ಈ ಕಾರಣದಿಂದ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ತೀರ್ಥಹಳ್ಳಿ ಕ್ಷೇತ್ರದ ಹೆಸರು ಪ್ರಕಟವಾಗಿರಲಿಲ್ಲ. ಈಗ ಕೆಪಿಸಿಸಿ ಅಧ್ಯಕ್ಷರು ಉಭಯ ನಾಯಕರ ನಡುವೆ ಮಾತುಕತೆ ನಡೆಸಿದ್ದು ಒಟ್ಟಾಗಿ ಕೆಲಸ ಮಾಡಲು ಸೂಚಿಸಿದ್ದಾರೆ. ಸರಕಾರ ಬಂದಲ್ಲಿ ಮಂಜುನಾಥ್‌ಗೌಡರಿಗೂ ಉತ್ತಮ ಸ್ಥಾನಮಾನ ನೀಡುವ ಭರವಸೆಯನ್ನೂ ಆವರು ನೀಡಿದ್ದಾರೆ.
ಡಿಕೆಶಿ ಸಂಧಾನ ಸಭೆಯ ಬಳಿಕ ಈ ಬಾರಿ ಕಿಮ್ಮನೆಯವರಿಗೆ ಟಿಕೆಟ್ ನೀಡಲು ನಿರ್ಣಯ ಕೈಗೊಳ್ಳಲಾಗಿದೆ. ಮಂಜುನಾಥ್ ಗೌಡರು ಕಿಮ್ಮನೆ ಗೆಲ್ಲಿಸುವಲ್ಲಿ ಶಕ್ತಿ ಮೀರಿ ಕೆಲಸ ಮಾಡುವುದಾಗಿ ವಾಗ್ದಾನ ಮಾಡಿ ಬಂದಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.