Malenadu Mitra
ರಾಜ್ಯ ಶಿವಮೊಗ್ಗ

ಬಂಗಾರಪ್ಪ ಹೆಸರೇ ಒಂದು ಚುಂಬಕ ಶಕ್ತಿ, ಪ್ರತಿಮೆಗೆ ಮುಸುಕು ಹಾಕಿದರೆ, ಜನರ ಮನಸಲ್ಲಿ ಅವರು ಮಸುಕಾಗಿಲ್ಲ

ಶಿವಮೊಗ್ಗ, ಆ ಒಂದು ಹೆಸರು ಕೇಳಿದರೆ ಕೆಲವು ರಾಜಕಾರಣಿಗಳಿಗೆ ಮೈ ಬೆವರುತ್ತದೆ. ಅಭಿಮಾನಿಗಳಿಗೆ ಆ ಹೆಸರೇ ಒಂದು ಮೈ ಪುಳಕಗೊಳ್ಳುವ ಶಕ್ತಿ. ಹೌದು! ಮಲೆನಾಡಿನ ರಾಜಕಾರಣವನ್ನು ಮೂರುವರೆ ದಶಕಗಳ ಕಾಲ ತಮ್ಮ ಅಂಕೆಯಲ್ಲಿಟ್ಟುಕೊಂಡಿದ್ದ ಸಾರೇಕೊಪ್ಪ ಬಂಗಾರಪ್ಪ ಅವರ ಹೆಸರಿಗೆ ಅಂತಹ ದಿವ್ಯಶಕ್ತಿಯಿದೆ. ಸಾಮಾನ್ಯ ಜನರ ಹೃದಯದಲ್ಲಿ ಯಾವತ್ತೂ ಮನೆ ಮಾಡಿರುವ ಅವರ ಹೆಸರು ಗತಿಸಿ ದಶಕ ಕಳೆದರೂ ಇಂದಿನ ರಾಜಕಾರಣದಲ್ಲಿ ಪ್ರಭಾವ ಬೀರಬಲ್ಲದು ಎಂದರೆ ಅತಿಶಯೋಕ್ತಿಯೇ ಸರಿ.
ವಿಧಾನಸಭೆ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸೊರಬದಲ್ಲಿರುವ ಅವರ ಪ್ರತಿಮೆಗೆ ಮುಸುಕು ಹಾಕಲಾಗಿತ್ತು. ಅಂದರೆ ಒಂದು ಕಾಲದಲ್ಲಿ ರಾಜಕೀಯದ ಚುಂಬಕ ಶಕ್ತಿಯಾಗಿದ್ದ ಬಂಗಾರಪ್ಪ ಅವರ ಪ್ರತಿಮೆಯೂ ಈ ಬಾರಿಯ ಚುನಾವಣೆಯ ಮೇಲೆ ಮತದಾರರ ಮೇಲೆ ಪ್ರಭಾವ ಬೀರಲಿದೆ ಎಂದು ಚುನಾವಣೆ ಆಯೋಗಕ್ಕೆ ಅರಿವಾಗಿಬಿಟ್ಟಿದೆ. ನೆರೆಯ ಜಿಲ್ಲೆಗಳಲ್ಲಿ ಎಲ್ಲಿಯೂ ಪ್ರತಿಮೆಗೆ ಬಟ್ಟೆ ಮುಚ್ಚಿರಲಿಲ್ಲ ಆದರೆ ಸೊರಬದಲ್ಲಿ ಮಾತ್ರ ಹಾಗೆ ಮಾಡಿದ್ದು,ಅವರ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿತ್ತು. ಆಯೋಗದ ಕ್ರಮಕ್ಕೆ ಪ್ರತಿರೋಧ ವ್ಯಕ್ತವಾಗುತ್ತಿದ್ದಂತೆ ಪ್ರತಿಮೆಗೆ ಹಾಕಿದ್ದ ಮುಸುಕು ತೆರವು ಮಾಡಲಾಗಿದೆ. ಸೊರಬ ಕ್ಷೇತ್ರದಲ್ಲಿ ಪ್ರತಿಮೆಗೆ ಮುಸುಕು ಹಾಕಿದರೇನು ಜನಮಾನಸದಲ್ಲಿ ಅವರು ಅಜರಾಮರವಾಗಿದ್ದಾರೆ.


1999 ರಚುನಾವಣೆ ಭಯ:


ಬಂಗಾರಪ್ಪ ಎಂದರೆ ಶಾಸಕರನ್ನು ಉತ್ಪಾದಿಸುವ ಕಾರ್ಖಾನೆ ಎಂದೇ ಹೇಳಲಾಗುತಿತ್ತು.ಮಲೆನಾಡು ಹಾಗೂ ಕರಾವಳಿಯ ಈಗಿನ ಬಹುತೇಕ ಹಿರಿಯ ರಾಜಕಾರಣಿಗಳ ಬೆಳವಣಿಗೆಯಲ್ಲಿಅವರ ಪ್ರತ್ಯಕ್ಷ ಮತ್ತು ಪರೋಕ್ಷ ಪಾತ್ರವಿದೆ. ಅವರು ಮನಸು ಮಾಡಿದರೆ ಸಾಮಾನ್ಯ ವ್ಯಕ್ತಿಯನ್ನೂ ಶಾಸಕರನ್ನಾಗಿ ಮಾಡುತ್ತಿದ್ದರು. ಇಂತಹ ಹಲವು ಪ್ರಯೋಗಗಳಲ್ಲಿ ಅವರು ಯಶಸ್ವಿಯಾಗಿದ್ದರು. ೧೯೯೯ ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಯಡಿಯೂರಪ್ಪ ಸಿಎಂ,ಈಶ್ವರಪ್ಪ ಹೋಂ ಮಿನಿಸ್ಟರ್ ಎಂದೇ ಬಿಂಬಿಸಲಾಗಿತ್ತು. ಆದರೆ ರಾಜಕೀಯ ತಂತ್ರಗಾರಿಕೆಗೆ ಹೆಸರಾಗಿದ್ದ ಬಂಗಾರಪ್ಪ ಅವರು ಆ ಚುನಾವಣೆಯಲ್ಲಿ ಶಿಕಾರಿಪುರದಲ್ಲಿ ಯಡಿಯೂರಪ್ಪ ಮತ್ತು ಶಿವಮೊಗ್ಗದಲ್ಲಿ ಈಶ್ವರಪ್ಪರನ್ನು ಸೋಲಿಸಿದ್ದರು. ಹೆಚ್.ಎಂ.ಚಂದ್ರಶೇಖರಪ್ಪ ಮತ್ತು ಬಿ.ಎನ್.ಮಹಾಲಿಂಗಪ್ಪ ಎಂಬ ಸಾಮಾನ್ಯ ಕಾರ್ಯಕರ್ತರನ್ನು ಶಾಸಕರನ್ನಾಗಿಸಿದ್ದರು.
ಈ ಬಾರಿಯ ಚುನಾವಣೆಯಲಿಯಲ್ಲಿ ಬಂಗಾರಪ್ಪ ತಂತ್ರಗಾರಿಕೆ ಮರುಕಳಿಸಲಿದೆಯೇ ಎಂಬ ಭಯ ಆಡಳಿತ ಪಕ್ಷದ ನಾಯಕರುಗಳಿಗಿದೆ. ಶಿವಮೊಗ್ಗದಲ್ಲಿ ಈಶ್ವರಪ್ಪ ವಿರುದ್ಧ ಲಿಂಗಾಯತ ಅಭ್ಯರ್ಥಿ ಹಾಕುವ ಪ್ರಯತ್ನ ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ. ಶಿಕಾರಿಪುರದಲ್ಲಿ ಬಿ.ವೈ.ವಿಜಯೇಂದ್ರ ಅವರ ಎದುರು ಸಾದರ ಲಿಂಗಾಯತ ಅಭ್ಯರ್ಥಿ ಕಣಕ್ಕಿಳಿಸುವ ಚಿಂತನೆಯೂ ಆ ಪಕ್ಷದ ನಾಯಕರಲ್ಲಿದೆ. ಈ ನಡುವೆ ಕಾಂಗ್ರೆಸ್‌ನ ಪ್ರಭಾವಿ ನಾಯಕರ ಮೂಲಕ ಈ ಎರಡೂ ಕ್ಷೇತ್ರಗಳಲ್ಲಿ ಡಮ್ಮಿ ಅಭ್ಯರ್ಥಿ ಹಾಕಿಸುವ ಯತ್ನವೂ ಸಾಗಿದೆ ಎಂಬ ವದಂತಿಯೂ ಇದೆ.

ಫೀಲ್ಡಿಗಿಳಿದ ಯಡಿಯೂರಪ್ಪರ ಕುಟುಂಬ

ಶಿಕಾರಿಪುರ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಿದ ಕೀರ್ತಿ ಯಡಿಯೂರಪ್ಪ ಅವರದ್ದು, ತಾಲೂಕಲ್ಲಿ ಮಾಡಿರುವ ನೀರಾವರಿ ಯೋಜನೆಗಳಿಂದಾಗಿ ಅಲ್ಲಿನ ಜನರ ಯಡಿಯೂರಪ್ಪ ಅವರನ್ನು ಆಧುನಿಕ ಭಗೀರಥ ಎಂದೇ ಕರೆಯುತ್ತಾರೆ. ಹೀಗಿದ್ದೂ, ಯಡಿಯೂರಪ್ಪ ಕುಟುಂಬಕ್ಕೆ ಈ ಬಾರಿಯ ಚುನಾವಣೆಯಲ್ಲಿ ಒಂದು ಸಣ್ಣ ಅಳಕಂತೂ ಇದೆ. ಇದಕ್ಕೆ ಪೂರಕ ಎಂಬಂತೆ ಒಳಮೀಸಲಾತಿ ಮರುಹಂಚಿಕೆ ಮಾಡಿ ಕೇಂದ್ರಕ್ಕೆ ಶಿಫಾರಸು ಮಾಡುವ ತೀರ್ಮಾನವನ್ನು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಪ್ರಕಟಿಸಿದ ಬಳಿಕ ಶಿಕಾರಿಪುರದಲ್ಲಿ ಯಡಿಯೂರಪ್ಪ ಅವರ ಮನೆಗೆ ಕಲ್ಲುತೂರುವ ಪ್ರಯತ್ನ ಮಾಡಲಾಗಿದೆ.
ಕ್ಷೇತ್ರದ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರನಿರ್ವಹಿಸುವ ಸಾಮರ್ಥ್ಯ ಇರುವ ಲಂಬಾಣಿ ಸಮುದಾಯ ಆಕ್ರೋಶಗೊಂಡಿದೆ. ಕಾಂಗ್ರೆಸ್‌ನಿಂದ ಸಾದರ ಲಿಂಗಾಯತ ಅಭ್ಯರ್ಥಿ ಹಾಕಿದರೆ ವಿಜಯೇಂದ್ರರಿಗೆ ವಿಜಯ ಅಷ್ಟು ಸುಲಭವಲ್ಲ. ಈ ಕಾರಣದಿಂದಾಗಿಯೇ ಮೊನ್ನೆ ಯಡಿಯೂರಪ್ಪ ಅವರು, ಲಂಬಾಣಿ ಸಮುದಾಯದ ನಾಯಕ ಹಾಗೂ ತಾಂಡ ಅಭಿವೃದ್ಧಿ ನಿಗಮದ ಕುಡುಚಿ ರಾಜೀವ್ ಅವರನ್ನು ಕರೆಸಿ ಲಂಬಾಣಿ ಸಮುದಾಯದ ಮನವೊಲಿಸುವ ಪ್ರಯತ್ನ ಮಾಡಲಾಗಿದೆ. ನೆರೆಯ ತಾಲೂಕಿನ ಸಚಿವ ಬಿ.ಸಿ.ಪಾಟೀಲ್ ಕೂಡಾ ಕ್ಷೇತ್ರದ ಹಲವು ಮುಖಂಡರನ್ನು ಮಾತನಾಡಿಸಿದ್ದಾರೆ. ಪಕ್ಷದ ಟಿಕೆಟ್ ಅಧಿಕೃತವಾಗಿ ಘೋಷಣೆಯಾಗದಿದ್ದರೂ, ಯಡಿಯೂರಪ್ಪಕುಟುಂಬ ಈಗಾಗಲೇ ಫೀಲ್ಡಿಗಿಳಿದಿದೆ. ಶಿವಮೊಗ್ಗ ಹಾಗೂ ಶಿಕಾರಿಪುರ ಕ್ಷೇತ್ರದಲ್ಲಿ ೧೯೯೯ ರ ವಿಧಾನ ಸಭೆ ಚುನಾವಣೆ ಫಲಿತಾಂಶದ ಕರಿನೆರಳು ಕಾಡಲಾರಂಭಿಸಿದೆ.

Ad Widget

Related posts

ರಾಜ್ಯ ಬಿಜೆಪಿಗೆ ಮತ್ತೆ ಶಿವಮೊಗ್ಗವೇ ಶಕ್ತಿ ಕೇಂದ್ರ

Malenadu Mirror Desk

ಬೇಳೂರು ಪರ ಶಿವಣ್ಣ ಮತಯಾಚನೆ
ಭರ್ಜರಿ ರೋಡ್ ಶೋನಲ್ಲಿ ನೆಚ್ಚಿನ ನಟನ ನೋಡಲು ಮುಗಿಬಿದ್ದ ಜನ

Malenadu Mirror Desk

ಚುನಾವಣಾ ರಾಜಕೀಯಕ್ಕೆ ಈಶ್ವರಪ್ಪ ಗುಡ್‌ಬೈ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರಬರೆದ ಫೈರ್ ಬ್ರಾಂಡ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.