ಜಿಲ್ಲೆಯ ಹಿರಿಯ ರಾಜಕಾರಣಿ ಹಾಗೂ ಬಿಜೆಪಿಯ ರಾಜ್ಯ ನಾಯಕ ಕೆ.ಎಸ್.ಈಶ್ವರಪ್ಪ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ರಾಜ್ಯ ಬಿಜೆಪಿಯ ಪ್ರಮುಖ ನಾಯಕರು, ಮಾಜಿ ಉಪಮುಖ್ಯಮಂತ್ರಿಯೂ ಆಗಿರುವ ಈಶ್ವರಪ್ಪ ಅವರು ಚುನಾವಣೆ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿದ್ದರಿಂದ ಶಿವಮೊಗ್ಗ ಜಿಲ್ಲೆಯ ಹಿರಿಯ ರಾಜಕಾರಣಿ ಯಡಿಯೂರಪ್ಪ ಅವರೊಂದಿಗೆ ರಾಜ್ಯದಲ್ಲಿ ಬಿಜೆಪಿ ಕಟ್ಟಲು ಶ್ರಮಿಸಿದ್ದರು.ಈ ಬಾರಿ ಶಿವಮೊಗ್ಗ ನಗರ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಈಶ್ವರಪ್ಪ ಅವರು, ಪಕ್ಷದ ಹೈಕಮಾಂಡ್‌ನಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಾರದ ಕಾರಣ ಈ ನಿರ್ಧಾರ ತೆಗೆದು ಕೊಂಡಿದ್ದಾರೆ ಎನ್ನಲಾಗಿದೆ.
ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಈಶ್ವರಪ್ಪ ಅವರು ಬರೆದಿರುವ ಪತ್ರದಲ್ಲಿ ಯಾವುದೇ ಕ್ಷೇತ್ರಕ್ಕೆ ತಮ್ಮ ಹೆಸರನ್ನು ಪರಿಗಣಿಸಬೇಡಿ ಎಂಬ ಮನವಿ ಮಾಡಿದ್ದಾರೆ. ಶಿವಮೊಗ್ಗ ನಗರ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿದ್ದ ಈಶ್ವರಪ್ಪ ಅವರು, ಸಚಿವರು ಹಾಗೂ ಡಿಸಿಎಂ ಹುದ್ದೆ ಅಲಂಕರಿಸಿದ್ದರು.
ಸಾಮಾನ್ಯ ಕಾರ್ಯಕರ್ತರಾಗಿ ಬಿಜೆಪಿಯಲ್ಲಿ ಸೇರಿದ್ದ ಅವರು ಪಕ್ಷದ ರಾಜ್ಯ ಅಧ್ಯಕ್ಷರಾಗಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿಯೇ ಸೇವೆ ಸಲ್ಲಿಸಿದ್ದರು. ತಮಗೆ ಟಿಕೆಟ್ ನೀಡದಿದ್ದಲ್ಲಿ ತಮ್ಮ ಪುತ್ರ ಕೆ.ಇ.ಕಾಂತೇಶ್ ಅವರಿಗಾದರು ಶಿವಮೊಗ್ಗ ಕ್ಷೇತ್ರದಿಂದ ಟಿಕೆಟ್ ಕೊಡಿ ಎಂದು ಈಶ್ವರಪ್ಪ ಕೇಳಿದ್ದರು. ಕುಟುಂಬದ ಯಾರಿಗೂ ಟಿಕೆಟ್ ಸಿಗುವ ಲಕ್ಷಣ ಕಾಣದಿದ್ದಾಗ ಈಶ್ವರಪ್ಪ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಶಿವಮೊಗ್ಗ ಕ್ಷೇತ್ರದಿಂದ ಈಶ್ವರಪ್ಪ ಅವರಿಗೆ ಟಿಕೆಟ್ ನೀಡಬಾರದೆಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಬಹಿರಂಗವಾಗಿ ವಿರೋಧ ಮಾಡಿದ್ದರು. ಬಿಜೆಪಿ ಈ ಬಾರಿ ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರದ ಆರೋಪ ಹೊತ್ತವರಿಗೆ ಅವಕಾಶ ನೀಡುವುದಿಲ್ಲ ಎಂಬ ಸಂದೇಶ ಈಶ್ವರಪ್ಪರ ರಾಜೀನಾಮೆಯಿಂದ ಮನದಟ್ಟಾಗಿದೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ವಿಳಂಬವಾಗುತ್ತಿರುವುದು ರಾಜ್ಯಲ್ಲಿಯೂ ಹೊಸ ಮುಖಗಳಿಗೆ ಅವಕಾಶ ಸಿಗಲಿದೆಯೇ ಎಂಬ ಕುತೂಹಲವನ್ನು ಹೆಚ್ಚಿಸಿದೆ.