ಸೊರಬ: ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಏ.೧೭ರಂದು ನಾಮಪತ್ರ ಸಲ್ಲಿಸಲಿದ್ದು,ಹಿರೇಶಕುನದ ಗ್ರಾಮದ ಅವರ ಅಭಿಮಾನಿಗಳು ನಾಮಪತ್ರ ಸಲ್ಲಿಸಲು ಠೇವಣಿ ಹಣ ನೀಡಲಿದ್ದಾರೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಗಣಪತಿ ಹೇಳಿದರು.
ಪಟ್ಟಣದ ಬಂಗಾರ ಧಾಮದಲ್ಲಿ ಏ.೧೭ರಂದು ನಾಮಪತ್ರ ಸಲ್ಲಿಸುವ ಬಗ್ಗೆ ಶುಕ್ರವಾರ ಹಮ್ಮಿಕೊಂಡಿದ್ದ ಬೂತ್ ಮಟ್ಟದ ಅಧ್ಯಕ್ಷರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಅವರ ದುರಾಡಳಿತ ಕೊನೆಗಾಣಿಸಲು ಮಧು ಬಂಗಾರಪ್ಪ ಅವರಿಗೆ ಈ ಬಾರಿ ಗೆಲ್ಲಿಸುವ ನಿಟ್ಟಿನಲ್ಲಿ ಹಿರೇಶಕುನ ಗ್ರಾಮಸ್ಥರು ಹಣ ಸಂಗ್ರಹಿಸಿ
ನಾಮಪತ್ರ ಸಲ್ಲಿಸಲು ಠೇವಣಿ ಹಣ ನೀಡುತ್ತಿರುವುದು ಹೊಸ ಅಧ್ಯಾಯಕ್ಕೆ ಸಾಕ್ಷಿಯಾಗಲಿದೆ ಎಂದು ತಿಳಿಸಿದರು.ಏ.೧೭ರಂದು ಮಧ್ಯಾಹ್ನ ೧೨ಗಂಟೆಗೆ ನಾಮಪತ್ರ ಸಲ್ಲಿಸಲಿದ್ದು ಸಾಗರ ತಾಲೂಕಿನ ತಾಳಗುಪ್ಪ ಹೋಬಳಿ ಸೇರಿದಂತೆ ತಾಲೂಕಿನ ಮೂಲೆ ಮೂಲೆಗಳಿಂದ ಸಾವಿರಾರು ಜನರು ಭಾಗವಹಿಸಲಿದ್ದು, ಮಧು ಬಂಗಾರಪ್ಪ ಅವರ ಪತ್ನಿ ಹಾಗೂ ಸಹೋದರಿಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಜೋತಾಡಿ, ತಾಳಗುಪ್ಪ ಬ್ಲಾಕ್ ಅಧ್ಯಕ್ಷ ಶಿವಮೂರ್ತಿ, ಜಿಲ್ಲಾಉಪಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಮುಖಂಡರಾದ ಕೆ.ಮಂಜುನಾಥ್ ಹಳೇಸೊರಬ, ಕೆ.ವಿ.ಗೌಡ, ತಾರಾ ಶಿವಾನಂದಪ್ಪ, ಹುಚ್ಚಪ್ಪ ಮಂಡಗಳಲೆ, ಶಿವಕುಮಾರ್
ಕಾಸ್ವಾಡಿಕೊಪ್ಪ, ಪ್ರಭಾಕರ್, ಕೋಟೆ ಬಸವಂತಪ್ಪ, ಎಂ.ಡಿ.ಶೇಖರ್, ಹುಚ್ಚಪ್ಪ, ಸುಲ್ತಾನ ಬೇಗಂ, ಪ್ರಕಾಶ್ ಇತರರಿದ್ದರು.