ಶಿವಮೊಗ್ಗ,ಏ.೧೭: ಮೂರನೇ ಪಟ್ಟಿಯಲ್ಲಿಯೂ ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡುವಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕತ್ವ ವಿಫಲವಾಗಿದೆ. ಈಶ್ವರಪ್ಪ ನಿವೃತ್ತಿ ಬಳಿಕ ಕ್ಷೇತ್ರದ ಟಿಕೆಟ್ ಹಂಚಿಕೆ ಕಗ್ಗಂಟಾಗಿದ್ದು, ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ನಡುವಿನ ಬಣ ಜಗಳವೇ ಇದಕ್ಕೆ ಕಾರಣ ಎನ್ನಲಾಗಿದೆ. ನಾಮಪತ್ರ ಸಲ್ಲಿಸಲು ಕೇವಲ ಮೂರು ದಿನ ಇದ್ದರೂ ಕ್ಷೇತ್ರದ ಅಭ್ಯರ್ಥಿ ಅಖೈರುಗೊಳಿಸದಿರುವುದು ಕಾರ್ಯಕರ್ತರಲ್ಲೂ ಗೊಂದಲ ನಿರ್ಮಾಣಕ್ಕೆ ಕಾರಣವಾಗಿದೆ.
ಕ್ಷೇತ್ರದ ಮೇಲೆ ಹಿಡಿತ ಹೊಂದಿದ್ದು, ಗೆಲ್ಲುವ ಅವಕಾಶ ಇದ್ದ ಈಶ್ವರಪ್ಪರನ್ನು ಒತ್ತಾಯ ಪೂರ್ವಕವಾಗಿ ಚುನಾವಣಾ ಕಣದಿಂದ ಹಿಂದೆ ಸರಿಸಿದ ಹೈಕಮಾಂಡ್ ಈಗ ಯಾರನ್ನು ಅಭ್ಯರ್ಥಿ ಮಾಡಬೇಕೆಂಬ ಪೇಚಿಗೆ ಸಿಲುಕಿಸಿದೆ. ಈಶ್ವರಪ್ಪ ಅವರು ತಮ್ಮ ಪುತ್ರನಿಗೇ ಟಿಕೆಟ್ ನೀಡಬೇಕೆಂಬ ಒತ್ತಡ ಹಾಕಿದ್ದರು. ಅದಾಗದಿದ್ದಲ್ಲಿ ತಾವು ಹೇಳಿದವರಿಗಾದರೂ ಟಿಕೆಟ್ ನೀಡಬೇಕೆಂಬ ನಿಲುವು ಹೊಂದಿದ್ದಾರೆ. ತಮ್ಮ ಪಕ್ಷ ಮತ್ತು ಸಂಘ ನಿಷ್ಠೆಯನ್ನೇ ಮುಂದಿಟ್ಟುಕೊಂಡು ಹೈಕಮಾಂಡ್‌ಗೆ ಸವಾಲು ಹಾಕಿದ್ದಾರೆ. ತಮ್ಮ ಮಗ ಕೆ.ಇ.ಕಾಂತೇಶ್ ಅವರಿಗೆ ಟಿಕೆಟ್ ನೀಡಬೇಕು. ಇಲ್ಲವಾದಲ್ಲಿ ತಮ್ಮ ಬೆಂಬಲಿಗ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಪಾಲಿಕೆ ಸದಸ್ಯ ಎಸ್.ಎನ್.ಚೆನ್ನಬಸಪ್ಪ(ಚೆನ್ನಿ) ಅವರಿಗೆ ಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಿವಮೊಗ್ಗ ಕ್ಷೇತ್ರದಲ್ಲಿ ತಮ್ಮ ಹಿಂಬಾಲಕ ಜ್ಯೋತಿಪ್ರಕಾಶ್ ಅಥವಾ ಡಾ.ಧನಂಜಯ ಸರ್ಜಿ ಅವರಿಗೆ ಟಿಕೆಟ್ ನೀಡಬೇಕೆಂಬ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ. ಈ ನಡುವೆ ಸಂಘಪರಿವಾರದವರು ಶಿವಮೊಗ್ಗ ಕ್ಷೇತ್ರವನ್ನು ಬ್ರಾಹ್ಮಣರಿಗೆ ಬಿಟ್ಟುಕೊಡಬೇಕೆಂಬ ಒತ್ತಡ ಹಾಕುತ್ತಿದ್ದಾರೆನ್ನಲಾಗಿದೆ. ಶಿಕಾರಿಪುರ ಹಾಗೂ ಶಿವಮೊಗ್ಗದಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರು ಚುನಾವಣೆ ಕಣದಿಂದ ಹಿಂದೆ ಸರಿದಿರುವುದರಿಂದ ಈ ಅವಕಾಶವನ್ನು ಬಳಸಿಕೊಳ್ಳಲು ಪ್ರತಿಪಕ್ಷ ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿಯೇ ಗೊಂದಲ ಸೃಷ್ಟಿಸಿಕೊಂಡಿರುವ ಬಿಜೆಪಿ ಕೊನೇ ಕ್ಷಣದಲ್ಲಿ ಯಡಿಯೂರಪ್ಪ ಬಣಕ್ಕೆ ಮಣೆ ಹಾಕುತ್ತದೊ ಅಥವಾ ಈಶ್ವರಪ್ಪ ಬಣಕ್ಕೆ ಮನ್ನಣೆ ನೀಡುವುದೊ ಕಾದುನೋಡಬೇಕಿದೆ.
ReplyForward |