ಸೊರಬ: ತಾಲೂಕಿನಲ್ಲಿ ನಡೆಯುತ್ತಿರುವ ದುರಾಡಳಿತ ಹಾಗೂ ಕುಟುಂಬ ರಾಜಕಾರಣದ ವಿರುದ್ಧವಾಗಿ ಸ್ಪರ್ಧೆ ಮಾಡಿದ್ದು, ಬಹುಮತದೊಂದಿಗೆ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಸಮಾಜವಾದಿ ಪಕ್ಷದ ಅಭ್ಯರ್ಥಿ ವಿ.ಜಿ.ಪರಶುರಾಮ್ ಹೇಳಿದರು.
ಪಟ್ಟಣದ ರಂಗನಾಥ ದೇವಸ್ಥಾನದಿಂದ ಗುರುವಾರ ತಮ್ಮ ಅಪಾರ ಬೆಂಬಲಿಗರ ಜತೆಗೆ ಜನಪದ ಕಲಾಮೇಳಗಳೊಂದಿಗೆ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿ, ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
50 ವರ್ಷಗಳಿಂದ ಒಂದೇ ಕುಟುಂಬದ ವ್ಯಕ್ತಿಗಳು ಕ್ಷೇತ್ರ ಆಳುತ್ತಿದ್ದು, ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲದಾಗಿದೆ. ಕ್ಷೇತ್ರದಲ್ಲಿ ವ್ಯಾಪಕವಾದ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಕಾಮಗಾರಿಗಳಲ್ಲಿ 40 ಪರ್ಸಂಟೇಜ್ ಪಡೆಯಲಾಗುತ್ತಿದೆ ಎಂದು ಆರೋಪಿಸಿದರು.
ರಾಜಕೀಯ ಅನುಭವ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡ ತಾವು ತಾಲೂಕಿನ ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರವನ್ನು ಕಿತ್ತೆಸೆದು ಜನಪರವಾದ ಆಡಳಿತ ನಡೆಸುವ ಉದ್ದೇಶದಿಂದ ಸಮಾಜವಾದಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇವೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಗುರಿ ಹೊಂದಲಾಗಿದ್ದು, ತಾಲೂಕಿನಲ್ಲಿ ಸುಮಾರು ೧೧೮೬ಕ್ಕೂ ಅಧಿಕ ಕೆರೆಗಳು ಇರುವುದರಿಂದ ಕೆರೆಗಳನ್ನು ಪುನಶ್ಚೇತನಗೊಳಿಸಿ ವರ್ಷಪೂರ್ತಿ ನೀರು ತುಂಬಿರುವಂತೆ ನೋಡಿಕೊಳ್ಳುವ ಮೂಲಕ ರೈತರ ಕೃಷಿ ಜಮೀನಿಗೆ ನೀರು ಪೂರೈಕೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಬರ ಎದುರಾಗದಂತೆ ಅಭಿವೃದ್ಧಿಪಡಿಸಲಾಗುವುದು ಎಂದರು.
ಅತ್ಯಂತ ಹಿಂದುಳಿದ ತಾಲೂಕಿನಲ್ಲಿ ಉನ್ನತ ವಿದ್ಯಾಭ್ಯಾಸ ಪಡೆಯಲು ಎಂಜನಿಯರಿಂಗ್, ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಹಾಗೂ ವಿವಿಧ ಪದವಿ ಕೋರ್ಸುಗಳ ಆರಂಭಕ್ಕೆ ಒತ್ತು ನೀಡಲಾಗುವುದು. ಶಿಥಿಲಾವಸ್ಥೆ ತಲುಪಿರುವ ಶಾಲೆಗಳನ್ನು ದತ್ತು ತೆಗೆದುಕೊಂಡು ಕಟ್ಟಡ ಹಾಗೂ ಮೂಲ ಸೌಕರ್ಯಗಳನ್ನು ಈಡೇರಿಸಲಾಗುವುದು ಎಂದ ಅವರು, ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ದೂರದೃಷ್ಟಿ ಯೋಜನೆಗಳನ್ನು ಜಾರಿಗೆ ತರುವ ಚಿಂತನೆ ಹೊಂದಲಾಗಿದೆ. ಮತದಾರರು ಈ ಬಾರಿ ಅವಕಾಶ ನೀಡಿದರೆ ನಂಜುಂಡಪ್ಪ ವರದಿಯನ್ವಯ ಹಿಂದುಳಿದ ತಾಲೂಕು ಎನ್ನುವ ಪಟ್ಟಿಯಿಂದ ಹೊರತರಲಾಗುವುದು ಎಂದು ಭರವಸೆ ನೀಡಿದರು.
ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಎನ್.ಮಂಜಪ್ಪ ಮಾತನಾಡಿ, ಶಿವಮೊಗ್ಗ ಜಿಲ್ಲೆ ಸಮಾಜವಾದಿ ನೆಲೆಗೆ ಭದ್ರ ಬುನಾದಿ ಕಲ್ಪಿಸಿದ್ದು, ದಕ್ಷಿಣ ಭಾರತದಲ್ಲಿ ಸಮಾಜವಾದಿ ಬೇರು ವಿಸ್ತರಿಸಲು ಕಾರಣವಾಗಿದೆ. ನಮ್ಮ ಪಕ್ಷದ ಅಭ್ಯರ್ಥಿ ಪರಶುರಾಮ್ ಅವರು ಹಿರಿಯ ಅನುಭವಿ ರಾಜಕಾರಣಿಯಾಗಿದ್ದು ಜನರು ವ್ಯಾಪಕ ಬೆಂಬಲ ನೀಡುವ ವಿಸ್ವಾಸವಿದೆ ಎಂದರು.
ರಾಜ್ಯದಲ್ಲಿ ಒಟ್ಟು20 ಕ್ಷೇತ್ರದಲ್ಲಿ ಸಮಾಜವಾದಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದ್ದು, ೭ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ಅಭ್ಯರ್ಥಿ ಪರ ಪ್ರಚಾರಕ್ಕೆ ಪಕ್ಷದ ರಾಷ್ಟ್ರಾಧ್ಯಕ್ಷ ಅಖಿಲೇಶ್ ಯಾದವ್ ಸೇರಿದಂತೆ ಪಕ್ಷದ ಪ್ರಮುಖ ೨೦ ಜನರ ತಂಡ ಆಗಮಿಸಲಿದೆ ಎಂದು ತಿಳಿಸಿದರು.
ಪುತ್ರ ಹರ್ಷ ಪರಶುರಾಮ್, ದಿವಾಕರ್, ಜ್ಞಾನೇಶ್, ಅರುಣ್, ಶಿವಲಿಂಗಪ್ಪ, ಉಜ್ಜಪ್ಪ ತೊರವಂದ, ಪ್ರವೀಣ್ ಕಮನವಳ್ಳಿ, ಕೃಷ್ಣ ಬಿಳವಗೋಡು, ದ್ವಾರಳ್ಳಿ ಪ್ರದೀಪ್ ಸೆರಿದಂತೆ ನೂರಾರು ಜನ ಕಾರ್ಯಕರ್ತರು ಪಾಲ್ಗೊಂಡಿದ್ದರು.