ಶಿವಮೊಗ್ಗ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ, ಶಾಸಕಿಯಾಗಿ ನಾನು ಮಾಡಿರುವ ಕೆಲಸಗಳು, ಕ್ಷೇತ್ರದ ಜನರೊಂದಿಗೆ ನನ್ನ ಒಡನಾಟ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಮಾಜಿ ಸಿಎಂ ಕುಮಾರಣ್ಣರ ರೈತಪರ ಕಾಳಜಿಯಂತಹ ಪೂರಕ ಅಂಶಗಳು ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುತ್ತವೆ ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್‍ಯಾ ನಾಯ್ಕ ವಿಶ್ವಾಸ ವ್ಯಕ್ತಪಡಿಸಿದರು.
ಶಿವಮೊಗ್ಗ ಪ್ರೆಸ್‌ಟ್ರಸ್ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಯೋಜಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಪ್ರಸ್ತುತ ರಾಷ್ಟ್ರೀಯ ಪಕ್ಷಗಳು ತಮ್ಮ ಜವಾಬ್ದಾರಿಗಳನ್ನು ಮರೆತಿವೆ. ಜನರನ್ನು ತಲುಪುವಲ್ಲಿ ವಿಫಲವಾಗಿವೆ. ಸಮಸ್ಯೆಗಳು ಹೆಚ್ಚಾಗುತ್ತಿವೆ. ಇಂತಹ ಸಂದಿಗ್ಧ ಸಮಯದಲ್ಲಿ ಪ್ರಾದೇಶಿಕ ಪಕ್ಷಗಳು ಗಟ್ಟಿಗೊಳ್ಳಬೇಕಾಗಿದೆ ಈ ನಿಟ್ಟಿನಲ್ಲಿ ಜೆಡಿಎಸ್ ಪಕ್ಷ ಜನರ ಬಳಿ ಹೋಗಿದ್ದು, ನಮ್ಮ ನಾಯಕ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ ಎಂದರು.
ನನ್ನ ಪತಿ ಪೂರ್ಯನಾಯ್ಕರ ಆದರ್ಶ ಮತ್ತು ಜನಪರ ಕೆಲಸಗಳು ನನ್ನನ್ನು ರಾಜಕೀಯಕ್ಕೆ ತಂದವು. ಬಳಿಕ ಕ್ಷೇತ್ರದ ಜನರು ನನ್ನನ್ನು ಬೆಳೆಸಿದರು. ಜಿಲ್ಲಾ ಪಂಚಾಯಿತಿಯಿಂದ ಶಾಸಕಿಯಾಗುವ ತನಕ ಕೈ ಹಿಡಿದು ನಡೆಸಿದ್ದಾರೆ. ಅವರಿಗೆ ಕೆಟ್ಟ ಹೆಸರು ತರುವ ಕೆಲಸ ಮಾಡದೆ ವಿಶ್ವಾಸ ಉಳಿಸಿಕೊಂಡಿದ್ದೇನೆ. ಅದೇ ವಿಶ್ವಾಸದಿಂದ ಈ ಬಾರಿ ಸ್ಪರ್ಧೆ ಮಾಡಿರುವ ನನ್ನ ಕೆಲಸಗಳು ಈ ಬಾರಿಯೂ ಕೈ ಹಿಡಿಯುತ್ತವೆ ಎಂದು ಹೇಳಿದರು.
ಕಳೆದ ಬಾರಿ ತಮ್ಮ ಸೋಲಿಗೆ ಕಾರಣ ಏನಿರಬಹುದು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಬಾರಿ ಬಿಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿ ಎಂದು ಬಿಜೆಪಿಯಲ್ಲಿ ಬಿಂಬಿಸಲಾಗಿತ್ತು. ಯಡಿಯೂರಪ್ಪ ಸಿಎಂ ಆಗಬೇಕು ಎಂಬ ಕಾರಣಕ್ಕೆ ಆ ಪಕ್ಷದ ಅಭ್ಯರ್ಥಿಗೆ ಮತ ಹಾಕಿದರು. ಆದರೆ ಈ ಬಾರಿ ಪರಿಸ್ಥಿತಿ ಹಾಗಿಲ್ಲ ಅವರ ನಿರ್ಧಾರ ಸ್ಪಷ್ಟವಾಗಿದೆ. ಅಷ್ಟಾದರೂ ಕಳೆದ ಬಾರಿ ತಾವು ೬೫ ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದೇನೆ. ಈ ಬಾರಿ ಆಡಳಿತ ಪಕ್ಷದ ವಿರೋಧದ ಅಲೆಯೂ ನನ್ನ ಸಹಾಯಕ್ಕೆ ಬರಲಿದೆ. ಕ್ಷೇತ್ರದಲ್ಲಿ ನನ್ನನ್ನು ರಾಜಕಾರಣಕ್ಕೆ ತಂದ ವೀರಶೈವ ಸೇರಿದಂತೆ ಎಲ್ಲ ಸಮುದಾಯದ ಮುಖಂಡರು ನನ್ನನ್ನು ಗೆಲ್ಲಿಸುವ ಪಣತೊಟ್ಟಿದ್ದಾರೆ ಎಂದರು.
ಸಮಸ್ಯೆಗಳ ಅರಿವಿದೆ:
ಕ್ಷೇತ್ರದಲ್ಲಿ ನೀರಾವರಿ, ಬಗರ್‌ಹುಕುಂ ಭೂಮಿಗೆ ಹಕ್ಕುಪತ್ರ, ಏತ ನೀರಾವರಿ ಯೋಜನೆಗಳ ಸಮಸ್ಯೆ ಇನ್ನೂ ಇದ್ದು, ಅವುಗಳ ಇತ್ಯರ್ಥಕ್ಕೆ ಆದ್ಯತೆ ನೀಡುವೆ. ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಹಾಗೆಯೇ ಇದೆ. ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ. ನಾನು ಶಾಸಕಿಯಾದ ಕ್ಷಣದಿಂದಲೂ ಈ ಸಮಸ್ಯೆ ಹಾಗೇ ಇದೆ. ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪನವರ ನೆರವಿನಿಂದ ನಮ್ಮ ಭಾಗದಲ್ಲಿ ಕಂದಾಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದ ಅನೇಕರಿಗೆ ಹಕ್ಕುಪತ್ರ ನೀಡಿದ್ದೇನೆ. ಈಗ ತಾಂತ್ರಿಕ ತೊಂದರೆ ಇದೆ. ನಾನು ಗೆದ್ದು ಬಂದರೆ ಶರಾವತಿ ಮುಳುಗಡೆ ಸಂತ್ರಸ್ತ ರೈತರ ಸiಸ್ಯೆ ಬಗೆಹರಿಸುತ್ತೇನೆ ಎಂದರು.
ಜನಸ್ಪಂದನೆಯೇ ರಾಜಕಾರಣ, ಜನರ ಪ್ರೀತಿಯ ಮುಂದೆ ಹಣ, ಜಾತಿಯ ನಂಟು ಸಾಧ್ಯವಾಗುವುದಿಲ್ಲ . ಆದರೆ ಹಣವಂತರ ಮುಂದೆ ಗೆಲ್ಲುವುದು ಕೂಡ ಅಷ್ಟು ಸುಲಭವಲ್ಲ. ನನ್ನ ಕ್ಷೇತ್ರದಲ್ಲಿ ಜಾತಿ, ಹಣ ಪ್ರಭಾವ ಬೀರುತ್ತದೆ ಎಂಬ ನಂಬಿಕೆ ನನಗಿಲ್ಲ. ಜನರ ಪ್ರೀತಿಯಂತೂ ನನ್ನ ಮೇಲಿದೆ. ಅವರ ಪ್ರೀತಿಯೇ ನನ್ನನ್ನು ಈ ಬಾರಿ ಗೆಲ್ಲಿಸುತ್ತದೆ ಎಂದರು.
ಪ್ರೆಸ್ ಟ್ರಸ್ಟ್ ಅಧ್ಯಕ್ಷ, ಎನ್.ಮಂಜುನಾಥ್, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ, ಪ್ರೆಸ್‌ಟ್ರಸ್ಟ್ ಕಾರ್ಯದರ್ಶಿ ನಾಗರಾಜ್ ನೇರಿಗೆ, ಹೊನ್ನಾಳಿ ಚಂದ್ರಶೇಖರ್, ಸಂತೋಷ್ ಕಾಚಿನಕಟ್ಟೆ ಇದ್ದರು.
ಸಧ್ಯದ ಮಟ್ಟಿಗೆ ಬಿಜೆಪಿ ನನ್ನ ಎದುರಾಳಿ ಅನ್ನುವ ವಾತಾವರಣ ಇದೆ. ಆ ಪಕ್ಷವೂ ಹಣದ ಪ್ರಾಬಲ್ಯ ತೋರುವ ಸಾಧ್ಯತೆ ಇದೆ. ಆದರೆ ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿಯ ಮುಂದೆ ಅವರ ಧನದರ್ಪ ನಡೆಯುವುದಿಲ್ಲ
ಶಾರದಾಪೂರ್ಯನಾಯ್ಕ್