ಶಿವಮೊಗ್ಗ : ಪಕ್ಷ ನನಗೆ ತಾಯಿ ಇದ್ದಂತೆ ಪಕ್ಷ ಹೇಳಿದ ಜವಾಬ್ದಾರಿಯನ್ನು ನಿರ್ವಹಿಸುವುದಷ್ಟೇ ನನ್ನ ಕೆಲಸ, ಮಗನಿಗೆ ಟಿಕೆಟ್ ನೀಡಿ ಎಂದು ಹಠ ಬಿದ್ದಿದ್ದರೆ ಪ್ರಧಾನಿ ಮೋದಿಯವರು ನನಗೆ ದೂರವಾಣಿ ಕರೆಮಾಡುತ್ತಿದ್ದರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ಪತ್ರಿಕಾಭವನದಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಮತ್ತು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚುನಾವಣೆ ರಾಜಕೀಯದಿಂದ ದೂವಿರುವ ಸಲಹೆ ಬಂದ ಮರುಕ್ಷಣ ಒಪ್ಪಿಕೊಂಡೆ.ಸಾಮಾನ್ಯ ವ್ಯಕ್ತಿಯಾದ ನನಗೆ ಐದು ಬಾರಿ ಶಾಸಕ, ಸಚಿವ, ಪ್ರತಿಪಕ್ಷನಾಯಕ, ಉಪಮುಖ್ಯಮಂತ್ರಿಯಂತಹ ಹುದ್ದೆ ನೀಡಿದ ನನಗೆ ಪಕ್ಷ ದೊಡ್ಡದು. ಸಮಾಜ ಸೇವೆ ಮಾಡಲು ರಾಜಕಾರಣ ಉತ್ತಮ ವೇದಿಕೆ. ಆದರೆ ಇತ್ತೀಚಿನ ದಿನಗಳಲ್ಲಿ ಅಧಿಕಾರದ ಆಸೆಗಾಗಿ ಪಕ್ಷಾಂತರ ಮಾಡುವುದು ಹೆಚ್ಚಾಗುತ್ತಿದ್ದು ಇದು ಸರಿಯಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಹಿಂದೆ ಕಾಂಗ್ರೆಸ್ ಬಲಿಷ್ಠ ಪಕ್ಷವಾಗಿತ್ತು. ಕಾಂಗ್ರೆಸ್ ನಿಂದ ಯಾರೇ ನಿಂತರೂ ಗೆಲ್ಲುತ್ತಿದ್ದರು. ಬಿಜೆಪಿಯಲ್ಲಿ ಸ್ಪರ್ಧಿಸಲೂ ಅಭ್ಯರ್ಥಿ ಹುಡುಕಬೇಕಿತ್ತು. ಆತ್ಮವಿಶ್ವಾಸದಿಂದ ಕಟ್ಟಿದ ಬಿಜೆಪಿ ಇದೀಗ ಸಾಕಷ್ಟು ಬೆಳೆದಿದೆ. ದೇಶದಾದ್ಯಂತ ಬಿಜೆಪಿ ಹೆಮ್ಮರವಾಗಿ ಬೆಳೆದಿದೆ ಎಂದು ಹೇಳಿದರು.
ಆಪರೇಷನ್ ಕಮಲ ಎನ್ನುತ್ತಾರೆ. ಆದರೆ ನಮ್ಮ ಪಾರ್ಟಿಗೆ ಬರುತ್ತೇವೆ ಅನ್ನುವವರಿಗೆ ಬೇಡ ಅನ್ನಲಿಕ್ಕೆ ಆಗುತ್ತದೆಯೇ? ನಾವಾಗಿ ಯಾರನ್ನೂ ಕರೆದಿರಲಿಲ್ಲ. ಅವರಾಗೇ ರಾಜೀನಾಮೆ ನೀಡಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಆಮೇಲೆ ಅವರನ್ನು ಗೆಲ್ಲಿಸಿದ್ವಿ. ಬಿಜೆಪಿಗೆ ಆದರ್ಶವಿದೆ, ಹೀಗಾಗಿ ಬೆಳೆದಿದೆ ಎಂದರು.
೧೯೮೯ರಲ್ಲಿ ನನಗೆ ಚುನಾವಣೆಗೆ ನಿಲ್ಲುವ ಆಸೆ ಇರಲಿಲ್ಲ. ಗೆಲುವು ಸಾಧಿಸುವ ವಿಶ್ವಾಸವೂ ಇರಲಿಲ್ಲ. ಆದರೆ ಮುಖಂಡರ ಸೂಚನೆಯಂತೆ ನಿಲ್ಲಬೇಕಾಯಿತು. ಆದರೆ ಮೊದಲ ಚುನಾವಣೆಯಲ್ಲೇ ಗೆಲುವು ಸಾಧಿಸಿದೆ. ಅಲ್ಲಿಂದ ಇಲ್ಲಿಯವರೆಗೆ ಹಿರಿಯರ ಸೂಚನೆ ಪಾಲಿಸಿಕೊಂಡು ಬಂದಿದ್ದೇನೆ ಎಂದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೈಗೊಂಡ ತೀರ್ಮಾನದಿಂದ ತೀವ್ರ ಆಘಾತವಾಗದೆ. ಹೀಗಾಗಿ ಅವರಿಗೆ ಬಹಿರಂಗ ಪತ್ರ ಬರೆದೆ. ಈ ಬೆಳವಣಿಗೆ ನಮ್ಮ ಪಕ್ಷಕ್ಕೆ ವಿಶೇಷ ಅನ್ನಿಸಿದೆ ನಿಜ. ನಾನು ಸಾಮಾನ್ಯ ಕಾರ್ಯಕರ್ತನಂತೆ ವರ್ತಿಸಿದ್ದೇನೆ ಅಷ್ಟೇ. ಸಂಘ ಪರಿವಾರದ ಹಿರಿಯರೂ ಮನೆಗೆ ಬಂದು ಶ್ಲಾಘಿಸಿದರು. ನಿನ್ನೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ತಮಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದಾರೆ. ಇದು ಬಿಜೆಪಿ ಸಂಸ್ಕೃತಿ ಎತ್ತಿ ತೋರಿಸುತ್ತದೆ ಎಂದರು.
ಯಡಿಯೂರಪ್ಪ ಜಾತಿವಾದಿಯಲ್ಲ:
ರಾಯಣ್ಣ ಬ್ರಿಗೇಡ್ ಮಾಡಿದ್ದು ಹಿಂದುಳಿದವರ ಸಂಘಟನೆಗಾಗಿ. ಅದು ಕೂಡ ರಾಜಕೀಯೇತರ ಸಂಘಟನೆಯಾಗಿತ್ತು. ಎಲ್ಲಾ ಪಕ್ಷದವರೂ ಆ ಸಂಘಟನೆಯಲ್ಲಿ ಇದ್ದರು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಎಂದೂ ಜಾತಿ ಪರ ರಾಜಕೀಯ ಮಾಡಿಲ್ಲ. ಅವರು ಎಂದಿಗೂ ಜಾತಿವಾದಿಯಾಗಿಲ್ಲ. ನರೇಂದ್ರ ಮೋದಿ ಅವರ ನೀತಿಯೇ ಯಡಿಯೂರಪ್ಪ ಅವರದ್ದು ಆಗಿದೆ. ಎಲ್ಲಾ ಧರ್ಮದವರು ಒಟ್ಟಾಗಿ ಹೋಗಬೇಕು ಅನ್ನೋದು ಮೋದಿ ನಿಲುವು. ಅದನ್ನೇ ಯಡಿಯೂರಪ್ಪನವರು ಕೂಡ ಪಾಲಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಸುರ್ಜೇವಾಲಾ ಟೀಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಕೋರ್ಟ್, ತನಿಖೆ ಬಗ್ಗೆ ಕಾಂಗ್ರೆಸ್‌ಗೆ ನಂಬಿಕೆ ಇದೆಯೇ ? ರಾಹುಲ್ ಗಾಂಧಿ ವಿರುದ್ಧ ಕೋರ್ಟ್ ತೀರ್ಪು ನೀಡಿದೆ. ನನಗೆ ಕ್ಲೀನ್ ಚಿಟ್ ನೀಡಿದೆ. ಇದ್ಯಾವುದಕ್ಕೂ ನಿಮಗೆ ನಂಬಿಕೆ ಇಲ್ಲ. ಕಾಂಗ್ರೆಸ್ ಟೀಕೆಗೆ ನಾನು ಜಗ್ಗುವುದು ಇಲ್ಲ, ಬಗ್ಗುವುದು ಇಲ್ಲ ಎಂದು ತಿರುಗೇಟು ನೀಡಿದರು.
ಸೊಸೆಗೆ ಟಿಕೆಟ್ ಕೇಳಿದ್ದು ನಿಜ:
ಈ ಬಾರಿ ಚುನಾವಣೆಯಲ್ಲಿ ತಮ್ಮ ಸೊಸೆಗೆ ಟಿಕೆಟ್ ನೀಡಲು ಪಕ್ಷ ಮುಂದಾಗಿದ್ದು ನಿಜ. ಹಿರಿಯರು ನನ್ನ ಸೊಸೆಗೆ ಸ್ಪರ್ಧಿಸುವಂತೆ ಹೇಳಿದ್ದರು. ಆದರೆ ನಾನು ಬೇಡ ಅಂದೆ. ನಮ್ಮ ಪಕ್ಷ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ಬಾರಿ ಹಲವು ಮಹಿಳೆಯರಿಗೆ ಅವಕಾಶ ನೀಡಿದೆ. ನನ್ನ ವೈಯಕ್ತಿಕ ತೀರ್ಮಾನ ಬೇರೆಯಿರಬಹುದು. ಆದರೆ ಹಿರಿಯರ ಸೂಚನೆ ಪಾಲಿಸಲೇ ಬೇಕು ಎಂದರು.
ನಾನು ದೇಶದ್ರೋಹಿಗಳ ವಿರೋಧಿ:
ಹಿಂದುತ್ವ ಜೀವನ ಪದ್ಧತಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಭಾವನೆ ಬಿಜೆಪಿಯಲ್ಲಿ ಇದೆ. ಆದರೆ ರಾಷ್ಟ್ರದ್ರೋಹಿ ಮುಸ್ಲಿಂ ಗೂಂಡಾಗಳಿಗೆ ನನ್ನ ಧಿಕ್ಕಾರವಿದೆ. ನನ್ನ ಮನೆಗೆ ಮುಸ್ಲಿಮರೂ ಬರ್ತಾರೆ, ಕ್ರಿಸ್ತರೂ ಬರ್ತಾರೆ. ಮುಸಲ್ಮಾನರ ಟೋಪಿ ಹಾಕಿದರೆ ಮಾತ್ರ ಮುಸಲ್ಮಾನರ ಪರವಲ್ಲ. ನಾನು ಮಸಲ್ಮಾನರ ವಿರೋಧಿಯಲ್ಲ, ಕ್ರಿಶ್ಚಿಯನ್ನರ ವಿರೋಧಿಯಲ್ಲ. ನಾನು ದೇಶದ್ರೋಹಿಗಳ ವಿರೋಧಿಯಷ್ಟೇ. ದೇಶ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುವವರನ್ನು ತಿಳಿಸಲು ಸಾಧ್ಯವಿಲ್ಲ ಎಂದರು.
ಟ್ರಸ್ಟ್ ಅಧ್ಯಕ್ಷ ಎನ್ ಮಂಜುನಾಥ್, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಎಸ್. ಯಡಗೆರೆ, ನಾಗರಾಜ್ ನೇರಿಗೆ ಮತ್ತಿತರರು ಉಪಸ್ಥಿತರಿದ್ದರು.
ಮೊನ್ನೆ ತನಕ ಮುಸ್ಲಿಂರನ್ನು ಓಲೈಸಿ ಟೋಪಿ ಹಾಕಿಕೊಂಡವರು ಮತ್ತು ರಾಜಕೀಯಕ್ಕಾಗಿ ಶಾಂತಿ ಸೌಹಾರ್ದತೆ ಎಂದು ನಾಟಕವಾಡುವವರನ್ನು ಶಿವಮೊಗ್ಗ ಜಿಲ್ಲೆ ಜನ ನಂಬುವುದಿಲ್ಲ. ನಮ್ಮದು ರಾಷ್ಟ್ರೀಯವಾದದ ಪಕ್ಷ, ಇಲ್ಲಿ ವ್ಯಕ್ತಿಗಿಂತ ದೇಶ ಮುಖ್ಯ. ದೇಶ ಮತ್ತು ರಾಜ್ಯದ ಹಿತಕ್ಕಾಗಿ ನಮ್ಮ ಅಭ್ಯರ್ಥಿಯನ್ನು ಜನ ಗೆಲ್ಲಿಸುತ್ತಾರೆ
-ಕೆ.ಎಸ್.ಈಶ್ವರಪ್ಪ