Malenadu Mitra
ರಾಜ್ಯ ಶಿವಮೊಗ್ಗ

ವೀರಶೈವರ ಒಗ್ಗಟ್ಟು ಮುರಿಯಲು ಸಾಧ್ಯವಿಲ್ಲ, ಪ್ರಬುದ್ಧಮತದಾರರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹೇಳಿಕೆ

ಶಿವಮೊಗ್ಗ: ವೀರಶೈವ ಲಿಂಗಾಯತ ಸಮಾಜದ ಪ್ರಬುದ್ಧವಾಗಿದ್ದು, ಇಲ್ಲಿ ಗೊಂದಲ ಮೂಡಿಸುವ ಯಾವುದೇ ಪ್ರಯತ್ನಕ್ಕೆ ಸೊಪ್ಪು ಹಾಕುವ ಅಗತ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ನಗರದ ಯಡಿಯೂರಪ್ಪ ಅವರ ನಿವಾಸದ ಬಳಿ ಆಯೋಜಿಸಿದ್ದ ವೀರಶೈವ ಲಿಂಗಾಯತ ಸಮಾಜದ ಪ್ರಬುದ್ಧ ಮತದಾರರ ಸಭೆಯಲ್ಲಿ ಮಾತನಾಡಿದ ಅವರು, ಎಸ್.ಎನ್.ಚನ್ನಬಸಪ್ಪ ಶಿವಮೊಗ್ಗದ ಅಭ್ಯರ್ಥಿಯಲ್ಲ. ಬಿ.ಎಸ್.ಯಡಿಯೂರಪ್ಪನೇ ಸಿಎಂ ಅಭ್ಯರ್ಥಿ ಎಂದು ಭಾವಿಸಿ ಮತ ಚಲಾಯಿಸಿ, ಚನ್ನಬಸಪ್ಪ ಅವರ ಗೆಲುವಿಗಾಗಿ ಎಲ್ಲರೂ ಇನ್ನು15 ದಿನ ಸಮಯ ಕೊಡಿ. ಅವರಿಗೆ ಸೇವೆ ಮಾಡಲು ಅವಕಾಶ ಕೊಟ್ಟರೆ ಐದು ವರ್ಷಗಳ ಕಾಲ ಶಿವಮೊಗ್ಗದ ನಾಗರಿಕರಿಗೆ ನೆಮ್ಮದಿ ಸಿಗುತ್ತದೆ ಎಂದು ಭರವಸೆ ನೀಡಿದರು.
ಈಗಾಗಲೇ ಶಿವಮೊಗ್ಗದಲ್ಲಿ ಚುನಾವಣೆ ಕೆಲಸ ಆರಂಭವಾಗಿದೆ. ಪ್ರತಿ ಬೂತ್‌ನಲ್ಲೂ ನಮ್ಮ ಸಂಘಟನೆ ಬಲಗೊಳ್ಳಬೇಕು. ನಮ್ಮ ಅಭ್ಯರ್ಥಿಯ ಗೆಲುವಿಗೆ ಯಾವುದೇ ಅಡ್ಡಿಯಾಗುವುದಿಲ್ಲ. ಇಲ್ಲಿ ರೋಡ್‌ಶೋ ನಡೆಸುವ ಯೋಚನೆ ಇದೆ. ಅದಕ್ಕೆ ನಾನೂ ಬರುತ್ತೇನೆ. ಶಿಕಾರಿಪುರದಲ್ಲಿ ಬಿಜೆಪಿ ಅಭ್ಯರ್ಥಿ ೫೦ ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ. ಹಾಗಾಗಿ ಜಿಲ್ಲೆಯ ಬೇರೆ ಕ್ಷೇತ್ರಗಳಲ್ಲಿ ಬಿ.ವೈ.ರಾಘವೇಂದ್ರ ಅವರಿಗೆ ಪ್ರವಾಸ ಮಾಡಲು ಸೂಚಿಸಿದ್ದೇನೆ ಎಂದರು.
ತಿಪ್ಪರಲಾಗ ಹಾಕಿದರೂ ಗೆಲ್ಲುವುದು ನಾವೇ
ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಬಿಜೆಪಿ ಸರ್ಕಾರ ಎಲ್ಲ ಸಮಾಜಕ್ಕೂ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ವೀರಶೈವ ಸಮಾಜದ ಎಲ್ಲ ಉಪಪಂಗಡಗಳ ಬೇಡಿಕೆಯನ್ನೂ ಈಡೇರಿಸಿದೆ. ಹಾಗಾಗಿ ಶಿವಮೊಗ್ಗದಲ್ಲಿ ಯಾರೇ ತಿಪ್ಪರಲಾಗ ಹಾಕಿದರೂ ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಮ್ಮ ಅಭ್ಯರ್ಥಿ ಚನ್ನಬಸಪ್ಪ ಹುಟ್ಟಿನಿಂದ ಲಿಂಗಾಯತ ಎನಿಸಿಕೊಂಡರೂ ಪ್ರಖರ ಹಿಂದುತ್ವವಾದಿ ಎಂದೇ ಗುರುತಿಸಿಕೊಂಡವರು. ಅದರಲ್ಲೂ ವೀರಶೈವ ಲಿಂಗಾಯತ ಸಮಾಜ ಸದಾ ಹಿಂದುತ್ವವನ್ನು ಬೆಂಬಲಿಸಿದೆ ಎಂದರು.
ಕಾಂಗ್ರೆಸ್ ಕೇವಲ ಮುಸ್ಲಿಂ ಸಮುದಾಯದ ಮತ ನೆಚ್ಚಿಕೊಂಡಿದೆ. ರಾಷ್ಟ್ರವಾದಿ ಮುಸ್ಲಿಮರು ಎಂದೂ ಬಿಜೆಪಿ ಕೈ ಬಿಡಲ್ಲ. ಸಾವಿರಾರು ಮುಸ್ಲಿಮರಿಗೆ ನಾವು ಕೆಲಸ ಮಾಡಿಕೊಟ್ಟಿದ್ದೇವೆ. ದೇಶದ್ರೋಹಿ ಮುಸ್ಲಿಮರು ಕಾಂಗ್ರೆಸ್‌ಗೆ ಮತ ಹಾಕಿಕೊಳ್ಳಲಿ ಎಂದು ಹೇಳಿದರು.
ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ಅಭ್ಯರ್ಥಿ ಎಸ್.ಎನ್.ಚನ್ನಬಸಪ್ಪ, ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಪ್ರಮುಖರಾದ ಡಾ.ಧನಂಜಯ ಸರ್ಜಿ, ಬಳ್ಳೇಕೆರೆ ಸಂತೋಷ್, ನಗರ ಪಾಲಿಕೆ ಸದಸ್ಯ ಎಸ್.ಜ್ಞಾನೇಶ್ವರ್ ಮುಂತಾದವರಿದ್ದರು.

ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ

ಶಿವಮೊಗ್ಗ: ರಾಜ್ಯದಲ್ಲಿ 130 ರಿಂದ140 ರವರೆಗೆ ಸೀಟು ಪಡೆದು ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೧೦೦ಕ್ಕೆ ೯೦ ಭಾಗ ವೀರಶೈವರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಬಿಜೆಪಿ ಗೆಲ್ಲುತ್ತದೆ. ಚುನಾವಣಾ ಪ್ರಚಾರ ಈಗಾಗಲೇ ಆರಂಭವಾಗಿದೆ. ಇಡೀ ರಾಜ್ಯದಲ್ಲಿ ಬಿಜೆಪಿಗೆ ಒಳ್ಳೆಯ ವಾತಾವರಣವಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅಮಿತ್ ಶಾ ಸೇರಿದಂತೆ ಕೇಂದ್ರದ ಮತ್ತು ವಿವಿಧ ರಾಜ್ಯಗಳ ಬಿಜೆಪಿ ಮುಖಂಡರು ರಾಜ್ಯಕ್ಕೆ ಚುನಾವಣಾ ಪ್ರಚಾರಕ್ಕಾಗಿ ಬರಲಿದ್ದಾರೆ. ನಾನು ಕೂಡ ಈಗಾಗಲೇ ಪ್ರಚಾರ ಆರಂಭಿಸಿದ್ದೇನೆ. ಕೊನೆಯ ಎರಡು ದಿನಗಳು ಇರುವಾಗ ಶಿವಮೊಗ್ಗದಲ್ಲಿ ಪ್ರಚಾರ ಕೈಗೊಳ್ಳುವೆ ಎಂದರು.
ಬಿ.ಎಲ್. ಸಂತೋಷ್ ಬಗ್ಗಯೂ ಕೂಡ ಆರೋಪಗಳು ಕೇಳಿಬರುತ್ತಿವೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿ.ಎಲ್. ಸಂತೋಷ್ ನಮ್ಮ ನಾಯಕರು. ಅವರ ಬಗ್ಗೆ ಹಗುರವಾಗಿ ಮಾತನಾಡಿದರೆ ಸಹಿಸಲು ಸಾಧ್ಯವಿಲ್ಲ. ಅವರನ್ನು ಟೀಕೆ ಮಾಡುವ ಯೋಗ್ಯತೆ ಕೂಡ ಯಾರಿಗೂ ಇಲ್ಲ. ಸಂಘಟನೆಗಾಗಿ ಅವರು ಕೆಲಸ ಮಾಡುತ್ತಿದ್ದಾರೆ ಎಂದರು.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ಕಾಂಗ್ರೆಸ್‌ನವರಿಗೆ ಶಿವಮೊಗ್ಗದಲ್ಲಿ ಕಾರ್ಯಕರ್ತರೇ ಇಲ್ಲ. ಈಗ ಮನೆಮನೆಗೆ ತೆರಳಿ ಪ್ರಚಾರ ಮಾಡುತ್ತಿರುವವರು ಅಭ್ಯರ್ಥಿಯ ನೆಂಟರೇ ಆಗಿದ್ದಾರೆ. ಬೇರೆ ಬೇರೆ ಕಡೆಯಿಂದ ಅವರು ಸಂಬಂಧಿಕರನ್ನೆಲ್ಲ ಕರೆಸಿ ಕರಪತ್ರ ಹಂಚುತ್ತಿದ್ದಾರೆ ಅಷ್ಟೆ ಎಂದರು.
ಏ.೧೫ರಿಂದ ಮೇ ೭ರವರೆಗೆ ನಾನು ರಾಜ್ಯ ಪ್ರವಾಸ ಮಾಡುತ್ತೇನೆ. ನಡುನಡುವೆ ಶಿವಮೊಗ್ಗದಲ್ಲೂ ಇರುತ್ತೇನೆ. ರಾಜ್ಯಕ್ಕೆ ಪ್ರಧಾನಿ ನರೆಂದ್ರ ಮೋದಿ, ಅಮಿತ್ ಶಾ, ನಡ್ಡಾ ಸೇರಿದಂತೆ ಎಲ್ಲರೂ ಬರುತ್ತಾರೆ. ಕಳೆದ ಬಾರಿ ೪೬ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇವೆ. ಈ ಬಾರಿ ಬಿಜೆಪಿ ಅಭ್ಯರ್ಥಿ ೬೦ ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದರು.

Ad Widget

Related posts

ಯೋಗ ಮಾಡುವಾಗ ಹೃದಯಾಘಾತ: ಸಾವು

Malenadu Mirror Desk

ಬಂಗಾರಪ್ಪ ಕನಸು ನನಸು, ಮಂತ್ರಿಯಾದ ಮಧುಬಂಗಾರಪ್ಪ, ತಂದೆಯಂತೆ ಜನರನ್ನು ಪ್ರೀತಿಸುವ ಪುತ್ರ

Malenadu Mirror Desk

ಬೈಕ್‍ಗೆ ಗುದ್ದಿದ ಕಾರಣ ಜಗಳ, ಯುವಕನ ಕೊಲೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.