Malenadu Mitra
ರಾಜ್ಯ ಶಿವಮೊಗ್ಗ ಸೊರಬ

ಸೊರಬ ಜನಕ್ಕೆ ಸ್ವಾಭಿಮಾನಿ ಬದುಕು ಕೊಡುವೆ, ಬಂಗಾರಪ್ಪರ ಅನುಷ್ಠಾನಕ್ಕೆ ಬದ್ಧನಾಗುವೆ: ಪತ್ರಿಕಾ ಸಂವಾದದಲ್ಲಿ ಮಧು ಬಂಗಾರಪ್ಪ ಭರವಸೆ

ಶಿವಮೊಗ್ಗ: ರಾಜ್ಯದ ಶೋಷಿತ ಜನರಿಗೆ ಸ್ವಾಭಿಮಾನ ನೀಡಿದವರು ಬಂಗಾರಪ್ಪ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಜನರ ಶ್ರೇಯೆಸ್ಸಿದೆ. ಅವರ ಚಿಂತನೆಯಲ್ಲಿ ಸಾಗಿ ಅವರ ಆಶಯದ ಕೆಲಸಗಳನ್ನು ಅನುಷ್ಠಾನಗೊಳಿಸುವೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ, ಪ್ರಣಾಳಿಕೆ ಸಮಿತಿ ಸದಸ್ಯ ಹಾಗೂ ಸೊರಬ ಕಾಂಗ್ರೆಸ್ ಅಭ್ಯರ್ಥಿಯೂ ಆದ ಮಧುಬಂಗಾರಪ್ಪ ಹೇಳಿದರು.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಮತ್ತು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರಸಂಘ ಸೋಮವಾರ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಬಂಗಾರಪ್ಪ ಜನಪರ ಕೆಲಸ ಮಾಡಿದವರು. ಯಾವತ್ತೂ ಜನರೊಟ್ಟಿಗೆಯೇ ಇದ್ದವರು. ಅಂತಹವರ ಹೆಸರನ್ನು ಉಳಿಸುವ ಕೆಲಸವನ್ನು ನಾನು ಮಾಡುತ್ತೇನೆ. ನೀರಾವರಿ, ಅರಣ್ಯ ಭೂಮಿ ಸಮಸ್ಯೆ, ಬಗರ್ ಹುಕುಂ ಸಮಸ್ಯೆ ಇತ್ಯರ್ಥಕ್ಕಾಗಿ ಪಾದಯಾತ್ರೆ ಮಾಡಿದ್ದೇನೆ. ನೀರಾವರಿಯನ್ನು ಸೊರಬ ಹೊರತಾಗಿ ಪಕ್ಕದ ಶಿಕಾರಿಪುರ ಕ್ಷೇತ್ರಕ್ಕೂ ಅನುಕೂಲವಾಗುವಂತೆ ಮಾಡಲಾಗಿದೆ. ಅಂದು ಮಾಡಿದ ಪಾದಯಾತ್ರೆಯ ಫಲದಿಂದ ಏತಾ ನೀರಾವರಿ ಯೋಜನೆಗಳು ಅನುಷ್ಠಾನಗೊಂಡಿವೆ ಎಂದರು.
ಬಿಜೆಪಿ ಸರಕಾರ ಯಾವ ಸಮಸ್ಯೆಯನ್ನೂ ಪರಿಹರಿಸಲಿಲ್ಲ. ಅರಣ್ಯ ಭೂಮಿ ಸಮಸ್ಯೆಯನ್ನು ಪರಿಹರಿಸದ ಕಾರಣ ಇಂದಿಗೂ ರೈತರ ಜಮೀನನ್ನು ಅರಣ್ಯ ಇಲಾಖೆಯವರು ವಶಪಡಿಸಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಬಗರ್‌ಹುಕುಂ ಸಮಸ್ಯೆ ಸಹ ಇತ್ಯರ್ಥವಾಗಲಿಲ್ಲ. ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರು ೧೫ ದಿನ, ತಿಂಗಳ ಗಡುವು ಪಡೆದರೂ ಏನನ್ನೂ ಮಾಡಲಿಲ್ಲ ಎಂದ ಮಧು, ಸೊರಬದಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸುತ್ತಿದೆ. ನನ್ನ ಗೆಲುವು ನೂರರಷ್ಟು ಖಚಿತ. ಅಲ್ಲಿನ ನೆಲದ ಚಿಂತನೆಯನ್ನು ಮತ್ತೆ ಬೆಳೆಸುತ್ತೇನೆ ಎಂದರು.
ನಾನು ಕಾಂಗ್ರೆಸ್ ಸೇರಿದ ಮೇಲೆ ಮಹತ್ವದ ಜವಾಬ್ದಾರಿಯನ್ನು ಪಕ್ಷ ನೀಡಿದೆ. ಹಿಂದುಳಿದ ವಿಭಾಗಗಳ ರಾಜ್ಯಾಧ್ಯಕ್ಷನನ್ನಾಗಿ ಮತ್ತು ಪ್ರಣಾಳಿಕೆ ಸಮಿತಿಯ ಸದಸ್ಯನನ್ನಾಗಿ ಮಾಡಿದೆ. ಇದರ ಜೊತೆಗೆ ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಗೆಲ್ಲಿಸುವ ಕೆಲಸವಿದೆ. ಕಾಂಗ್ರೆಸ್ ಪರ ಶೇ. ೮೦ರಷ್ಟು ಹಿಂದುಳಿದವರಿದ್ದಾರೆ. ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವುದರ ಜೊತೆಗೆ ಸರಕಾರ ರಚನೆಯಾಗುವಂತೆ ಮಾಡಬೇಕಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಜನರ ವಿಶ್ವಾಸ ಕಳೆದುಕೊಡಿದೆ. ಕಾಂಗ್ರೆಸ್ ಸಂಘಟನೆ ಈಗ ಉತ್ತಮವಾಗಿದೆ. ಡಿ ಕೆ ಶಿವಕುಮಾರ್ ಅಧ್ಯಕರಾದ ನಂತರ ಚುರುಕಿನಿಂದ ಪಕ್ಷ ಚಿಗುರುತ್ತಿದೆ. ಅನೇಕರು ಪಕ್ಷ ಸೇರುತ್ತಿದ್ದಾರೆ. ಬಿಜೆಪಿಯು ಪ್ರಣಾಳಿಕೆಯಲ್ಲಿ ಸುಳ್ಳು ಭರವಸೆ ನೀಡಿದ್ದು, ಬಹುತೇಕ ಭರವಸೆಯನ್ನು ಈಡೇರಿಸದೇ ಇರುವುದು ಜನರಿಗೆ ಗೊತ್ತಿದೆ. ಇವೆಲ್ಲವೂ ಬಿಜೆಪಿಗೆ ಮುಳುವಾಗಲಿದೆ. ಕಾಂಗ್ರೆಸ್ ಈ ಬಾರಿ ಕರ್ನಾಟಕದ ಐದು ವಿಭಾಗಗಳಿಗೆ ಪ್ರತ್ಯೇಕ ಪ್ರಣಾಳಿಕೆ ರೂಪಿಸಿದೆ. ನಾಲ್ಕಾರು ಪ್ರಮುಖ ಭರವಸೆಯನ್ನು ಈಗಾಗಲೇ ಘೋಷಿಸಿದೆ. ಇವೆಲ್ಲವೂ ಪಕ್ಷ ಅಧಿಕಾರಕ್ಕೆ ಬಂದ ನಂತರ ಅನುಷ್ಠಾನವಾಗಲಿದೆ ಎಂದರು.
ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ, ಕಾರ್ಯದರ್ಶಿ ನಾಗರಾಜ ನೇರಿಗೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ ಯಡಗೆರೆ ಉಪಸ್ಥಿತರಿದ್ದರು.

ಸೊರಬ ಬಿಜೆಪಿ ಖಾಲಿ ಆಗಿದೆ
ಸೊರಬ ಕ್ಷೇತ್ರದಲ್ಲಿ ನಮೋವೇದಿಕೆಯಿಂದ ನಡೆಯುತ್ತಿರುವ ಬಿಜೆಪಿ ಅಭ್ಯರ್ಥಿ ವಿರೋಧಿ ಆಂದೋಲನದ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮಧುಬಂಗಾರಪ್ಪ, ಸೊರಬದಲ್ಲಿ ಬಿಜೆಪಿಯಲ್ಲಿ ಮೊದಲಿಂದಲೂ ಬಣರಾಜಕಾರಣ ಇದೆ ಎಂದು ಮಾಧ್ಯಮಗಳಲ್ಲಿ ಓದಿದ್ದೇನೆ. ಅದು ಅವರ ಆಂತರಿಕ ವಿಚಾರ ಆದರೆ, ಹಲವು ಮಂದಿ ಈಗಾಗಲೇ ಕಾಂಗ್ರೆಸ್ ಸೇರಿದ್ದಾರೆ. ಬಿಜೆಪಿಯಲ್ಲಿ ಯಾವ ಮುಖಂಡರುಗಳು ಉಳಿದಿಲ್ಲ. ಇನ್ನೂ ಸೇರುವವರಿದ್ದಾರೆ ಎಂದರು.

ನಾನು ಶಾಸಕನಾಗಿದ್ದ ಅವಧಿಯಲ್ಲಿ ಬಗರ್‌ಹುಕುಂ ಸಾಗುವಳಿದಾರರಿಗೆ 6 ಸಾವಿರ ಹಕ್ಕು ಪತ್ರ ನೀಡಿದ್ದೆ. ಈಗಿನ ಶಾಸಕರು 2 ಸಾವಿರ ಹಕ್ಕುಪತ್ರ ವಜಾಗೊಳಿಸಿದ್ದಾರೆ. ನಮ್ಮ ತಂದೆ ಬಂಗಾರಪ್ಪ ಅವರು, ಫಾರಂ.ನಂ 50,ಫಾರಂ ನಂ.53 ಜಾರಿಗೆ ತಂದು ರೈತರಿಗೆ ಭೂಮಿ ನೀಡಿದರು. ನಾನೂ ಜನರಿಗೆ ಭೂಮಿ ಕೊಡಬೇಕೆಂದಿದ್ದೇನೆ. ಜನರಿಗೆ ನೆಮ್ಮದಿ ಮತ್ತು ಸ್ವಾಭಿಮಾನದ ಬದುಕು ಬೇಕಾಗಿದೆ.ಅದಕ್ಕೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ

ಮಧು ಬಂಗಾರಪ್ಪ, ಸೊರಬ ಕಾಂಗ್ರೆಸ್ ಅಭ್ಯರ್ಥಿ

Ad Widget

Related posts

ಸುನೀತಾ ಮೇಯರ್, ಗನ್ನಿ ಶಂಕರ್ ಉಪಮೇಯರ್

Malenadu Mirror Desk

ಸರಳ ಸಜ್ಜನಿಕೆ ವ್ಯಕ್ತಿತ್ವದ ಕೆ.ಬಿ.ರಾಮಪ್ಪ ,ಪ್ರೆಸ್ ಟ್ರಸ್ಟ್‌ನಲ್ಲಿ ಅಗಲಿದ ಹಿರಿಯ ಪತ್ರಕರ್ತರಿಗೆ ಸಂತಾಪ

Malenadu Mirror Desk

ನಾವು ಬದುಕಿದ್ದೇವೆ ಅಂದವರ ಬಳಿ ಸ್ಫೋಟದ ಸತ್ಯವಿದೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.