ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಘವು ಈ ಬಾರಿಯ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಪ್ರಮುಖ ಅಭ್ಯರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಿವಮೊಗ್ಗ ಹೇಗಿರಬೇಕು, ನಿಮ್ಮಕನಸುಗಳೇನು ಎಂಬ ವಿಚಾರವನ್ನು ಮುಂದಿಟ್ಟುಕೊಂಡು ವಾಣಿಜ್ಯ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿದರು.
ಆಮ್ಆದ್ಮಿ ಪಕ್ಷದ ಅಭ್ಯರ್ಥಿ ನೇತ್ರಾವತಿ ಗೌಡ, ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್, ಬಿಜೆಪಿ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪ, ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ. ಯೋಗೀಶ್ ಅವರುಗಳು ಮಂಡಿಸಿದ ಅಭಿಪ್ರಾಯಗಳು ಇಲ್ಲಿವೆ.
ಶಿವಮೊಗ್ಗದಲ್ಲಿ ಮುಖ್ಯವಾಗಿ ಉದ್ಯೋಗ ನಿರ್ಮಾಣ ಮಾಡಬೇಕಾಗಿದೆ. ಯುವಕರಿಗೆ ಇಲ್ಲಿ ಉದ್ಯೋಗದ ಅವಕಾಶಗಳು ತುಂಬಾ ಕಡಿಮೆ ಇದೆ. ಅದರಲ್ಲೂಮಹಿಳೆಯರಿಗೆ ಉದ್ಯೋಗಗಳೇ ಸಿಗುತ್ತಿಲ್ಲ. ಕಷ್ಟಪಟ್ಟು ಓದಿ ಕೆಲಸವಿಲ್ಲದೆ ಮನೆಯಲ್ಲಿ ಇರಬೇಕಾದ ಪರಿಸ್ಥಿತಿ ಬಂದಿದೆ. ಇವರೆಲ್ಲರಿಗೂ ಉದ್ಯೋಗ ನೀಡುವ ನಿಟ್ಟಿನಲ್ಲಿ ಪ್ರಯತ್ನ ಪಡುತ್ತೇನೆ.
ಮಹಿಳೆಯರಿಗೆ ರಕ್ಷಣೆ ಬೇಕಾಗಿದೆ. ಶಿವಮೊಗ್ಗಕ್ಕೆ ಮತ್ತಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಾಗಿದೆ. ಭ್ರಷ್ಟಾಚಾರ ನಿರ್ಮೂಲನೆಯಾಗಬೇಕು. ನಮ್ಮ ಪಕ್ಷದ ಮೂಲ ಸಿದ್ಧಾಂತವೇ ಭ್ರಷ್ಟಾಚಾರ ತೊಲಗಿಸುವುದು. ಹಣ, ಹೆಂಡ ಹಂಚದೆ ಪ್ರಾಮಾಣಿಕವಾಗಿ ಚುನಾವಣೆ ನಡೆಸುವಂತಗಬೇಕು.ನೇತ್ರಾವತಿಗೌಡ, ಆಮ್ ಆದ್ಮಿ ಪಕ್ಷ
ಶಿವಮೊಗ್ಗಕ್ಕೆ ಮುಖ್ಯವಾಗಿ ಬೇಕಾಗಿರುವುದು ಶಾಂತಿ. ಶಾಂತಿ ಇಲ್ಲದ ಕಾರಣಕ್ಕಾಗಿಯೇ ಇಲ್ಲಿ ಉದ್ಯಮಿಗಳು ಬರುತ್ತಿಲ್ಲ. ಕೈಗಾರಿಕೆಗಳು ಸ್ಥಾಪನೆ ಆಗುತ್ತಿಲ್ಲ. ಉದ್ಯೋಗ ಸಿಗುತ್ತಿಲ್ಲ. ಕೇವಲ ಗಲಾಟೆ, ಅಶಾಂತಿಯಿಂದ ನಲುಗಿದ ಶಿವಮೊಗ್ಗಕ್ಕೆ ಉದ್ಯಮಿಗಳು ಬರುವಂತೆ ಮಾಡಲು ನೆಮ್ಮದಿಗೆ ಭಂಗ ತರುವವರನ್ನು ನಿಯಂತ್ರಿಸಬೇಕು. ನಾನು ಶಾಸಕನಾದರೆ ಖಂಡಿತ ಬದಲಾಯಿಸುವೆ. ಚುನಾವಣೆಯೇ ಪ್ರಜಾಪ್ರಭುತ್ವದ ಉತ್ಸವ. ರಾಜಕಾರಣ ಕೇವಲ ಅಧಿಕಾರದ ರೋಮಾಂಚನವಲ್ಲ. ಆಶೋತ್ತರಗಳನ್ನು ಶಾಂತಿಯ ಫಸಲನ್ನು ಬೆಳೆಯುವ ಅವಕಾಶ ಶಾಸಕನಿಗೆ ಸಿಗುತ್ತದೆ. ನಮ್ಮಲ್ಲಿ ಎಲ್ಲವೂ ಇದೆ. ರಸ್ತೆ, ನೀರು, ವಿದ್ಯುತ್, ವಿಮಾನ, ಆದರೆ ಉದ್ಯಮಿಗಳು ಮಾತ್ರ ಬರುತ್ತಿಲ್ಲ. ಇದು ಬದಲಾಗಬೇಕಾಗಿದೆ.
-ಆಯನೂರು ಮಂಜುನಾಥ್, ಜೆಡಿಎಸ್ ಅಭ್ಯರ್ಥಿ
ಹಿಂದೂ ಸಮಾಜದ ಮೇಲೆ ಹಲ್ಲೆಯಾದರೆ, ಹಿಂದುಗಳನ್ನು ಕೊಂದರೆ ಅದನ್ನು ಪ್ರಶ್ನಿಸುವುದೇ ತಪ್ಪೇ. ಶಾಂತಿಯನ್ನು ಕದಡುವವರು ನಾವಲ್ಲ. ವಿಶ್ವವೇ ಒಂದು ಕುಟುಂಬ ಎಂದು ಹಿಂದು ಸಮಾಜ ಬಯಸುತ್ತದೆ. ಆದರೆ ಅಶಾಂತಿಗೆ ಕಾರಣರಾದವರ ವಿರುದ್ಧ ನಮ್ಮ ಧ್ವನಿ ಸದಾ ಇರುತ್ತದೆ. ಆದರೆ ಈ ಧ್ವನಿಯನ್ನೇ ಕೋಮುವಾದ ಅನ್ನುವುದು ಸರಿಯಲ್ಲ.
ಶಿವಮೊಗ್ಗ ಸಾಂಸ್ಕೃತಿಕ ನಗರ. ಶಾಂತಿಯನ್ನು ಬಯಸುವವರು ನಾವು. ಆದರೆ ಈ ಶಾಂತಿಯನ್ನು ಕದಡುವ ಒಂದು ವರ್ಗವೇ ಇಲ್ಲಿದೆ. ಶಾಂತಿಗಾಗಿ ನಾವು ಯಾವಾಗಲೂ ಪ್ರಯತ್ನಿಸುತ್ತೇವೆ. ಶಾಂತಿಗೆ ಅಡ್ಡಿಪಡಿಸುವವರ ವಿರುದ್ಧ ಕ್ರಮವನ್ನೂ ತೆಗೆದುಕೊಳ್ಳುತ್ತೇವೆ. ಈ ಎಲ್ಲದರ ಮಧ್ಯೆ ಎಲ್ಲರೂ ಒಟ್ಟಾಗಿ ಬಾಳಬೇಕು ಎಂಬುದೇ ನಮ್ಮ ತತ್ವ. ಜೊತೆಗೆ ಶಿವಮೊಗ್ಗದ ಅಭಿವೃದ್ಧಿಗೆ ಯಾವತ್ತಿಗೂ ನಮ್ಮ ಮೊದಲ ಆದ್ಯತೆ.–ಎಸ್.ಎನ್. ಚನ್ನಬಸಪ್ಪ, ಬಿಜೆಪಿ ಅಭ್ಯರ್ಥಿ
ಶಿವಮೊಗ್ಗದಲ್ಲಿ ಇನ್ನು ಗಲಭೆಗಳೇ ಇರಬಾರದು. ಪ್ರಪಂಚದ ಎಲ್ಲಾ ಉದ್ಮಮಿಗಳು ಸಾಂಸ್ಕೃತಿಕ ನಗರಕ್ಕೆ ಕಾಲಿಡಬೇಕು. ಅಂತಹ ವಾತಾವರಣವನ್ನು ನಿರ್ಮಿಸಬೇಕು ಎಂಬುದೇ ನನ್ನ ಉದ್ದೇಶವಾಗಿದೆ. ಕೋಮು ರಾಜಕಾರಣ ಕೊನೆಯಾಗಬೇಕು. ಮಾನವೀಯತೆಯ ರಾಜಕಾರಣ ನೆಲೆಸಬೇಕು. ನಾನು ಮಹಾನಗರ ಪಾಲಿಕೆ ಸದಸ್ಯನಾಗಿ ಉತ್ತಮ ಕೆಲಸ ಮಾಡಿರುವೆ. ಮುಖ್ಯವಾಗಿ ಟ್ರೇಡ್ ಲೈಸೆನ್ಸ್ಗೆ ಹೊಸತನ ನೀಡಿರುವೆ. ನಾನು ಶಾಸಕನಾಗಿ ಆಯ್ಕೆಯಾದರೆ ಶಿವಮೊಗ್ಗದ ಅಭಿವೃದ್ಧಿಗೆ ಶ್ರಮಿಸುವೆ. ಎಲ್ಲಾ ವರ್ಗದ ಜನರ ನೆಮ್ಮದಿಗೆ ಪ್ರಯತ್ನಿಸುವೆ. ಮತ್ತೆಂದೂ ಗಲಭೆಗಳಾಗದಂತೆ ನಿಯಂತ್ರಿಸುವೆ. ಮುಖ್ಯವಾಗಿ ನಮ್ಮ ಪಕ್ಷದ ಗ್ಯಾರಂಟಿಯಂತೆ ಎಲ್ಲಾ ಬಡ ಮತ್ತು ಮಧ್ಯಮ ವರ್ಗದವರ ಬದುಕನ್ನು ಹಸನುಗೊಳಿಸುವೆ. ಉದ್ಯೋಗಕ್ಕೆ ಆದ್ಯತೆ ನೀಡುವೆ.–ಹೆಚ್.ಸಿ.ಯೋಗಿಶ್ ,ಕಾಂಗ್ರೆಸ್ ಅಭ್ಯರ್ಥಿ