ಶಿವಮೊಗ್ಗ ನಗರ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರು ಮನೆ ಮನೆಗೆ ತೆರಳಿ ಮತಯಾಚನೆ ಮಾಡುವ ಮೂಲಕ ಅಧಿಕೃತವಾಗಿ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.
ನವುಲೆಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ನಡೆ ಗೆಲುವಿನ ಕಡೆ. ನನ್ನ ಗೆಲುವು ಹತ್ತಿರವಾಗುತ್ತಿದೆ ಎಂದು ಹೇಳಿದರು.
ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಪ್ರಚಾರ ಕಾರ್ಯ ಜೋರಾಗಿ ನಡೆಯುತ್ತಿದೆ. ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದೆ. ಪಕ್ಷಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ಸಮುದಾಯಗಳ ಒಗ್ಗೂಡಿಸುವಿಕೆಯ ಕಾರ್ಯ ನಡೆಯುತ್ತಿದೆ. ಹೀಗಾಗಿ ನಾವು ಗೆಲುವಿಗೆ ತುಂಬಾ ಹತ್ತಿರ ಇದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ರಾಷ್ಟ್ರೀಯ ಪಕ್ಷಗಳ ನಡುವೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಈ ಬಾರಿ ರಾಜ್ಯದಲ್ಲಿಯೇ ಅತಿಹೆಚ್ಚು ಸ್ಥಾನ ಗಳಿಸಲಿದೆ. ಕುಮಾರಸ್ವಾಮಿಯವರ ಸರ್ಕಾರ ಆಡಳಿತ ನಡೆಸುತ್ತದೆ ಎಂಬ ಬಲವಾದ ವಿಶ್ವಾಸವಿದೆ. ಮೋದಿಯ ಅಲೆ ಸ್ಥಳೀಯವಾಗಿ ನಡೆಯದು. ಲೋಕಸಭಾ ಚುನಾವಣೆಯೇ ಬೇರೆ. ವಿಧಾನಸಭೆ ಚುನಾವಣೆಯೇ ಬೇರೆ ಎಂದರು.
ಪ್ರಮುಖರಾದ ನಾಗರಾಜ್ ಕಂಕಾರಿ, ಪಾಲಾಕ್ಷಿ, ಧೀರರಾಜ್ ಹೊನ್ನವಿಲೆ, ದೀಪಕ್ ಸಿಂಗ್, ಮಹೇಶ್, ಉದಯ್, ಸುಬ್ಬೇಗೌಡ, ಬೊಮ್ಮನಕಟ್ಟೆ ಮಂಜು, ಮುಜೀಬ್, ನವಾಬ್, ಗಾಡಿಕೊಪ್ಪ ರಾಜಣ್ಣ, ಗೋವಿಂದಪ್ಪ, ಪುಷ್ಟಾ, ದಿವ್ಯಾ ಪ್ರವೀಣ್, ಡಾ. ಶಾಂತಾ ಸುರೇಂದ್ರ ಸೇರಿದಂತೆ ಹಲವರಿದ್ದರು.
ಆಯನೂರು ಮಂಜುನಾಥ್ ಗೆದ್ದೇ ಗೆಲ್ಲುತ್ತಾರೆ. ಕಾಂಗ್ರೆಸ್ ಪಕ್ಷದಿಂದ ಜೆಡಿಎಸ್‌ಗೆ ಸೇರಿದ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮತ್ತವರ ತಂಡ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ತಮ್ಮ ಬಹುದೊಡ್ಡ ತಂಡವನ್ನೇ ಕರೆದುಕೊಂಡು ಬರುತ್ತಿದ್ದಾರೆ. ಈ ಬಾರಿ ಜೆಡಿಎಸ್‌ಗೆ ಬಹುದೊಡ್ಡ ಅವಕಾಶವಿದೆ. ಶಿವಮೊಗ್ಗ ನಗರವಲ್ಲದೆ ಗ್ರಾಮಾಂತರ, ಭದ್ರಾವತಿ ಸೇರಿದಂತೆ ಜಿಲ್ಲೆಯಲ್ಲಿ ಮೂರರಿಂದ ನಾಲ್ಕು ಸ್ಥಾನವನ್ನು ನಾವು ಪಡೆದೇ ಪಡೆಯುತ್ತೇವೆ.
-ಎಂ. ಶ್ರೀಕಾಂತ್, ಜೆಡಿಎಸ್ ಜಿಲ್ಲಾಧ್ಯಕ್ಷ
ಜೆಡಿಎಸ್‌ಗೆ ಬೆಂಬಲ ಘೋಷಿಸಿದ ವಿಪ್ರ ಸಮಾಜ
ಶಿವಮೊಗ್ಗ: ವಿಪ್ರ ಸಮಾಜದ ಪ್ರಭಾವಿ ನಾಯಕ ಕೆ.ಬಿ. ಪ್ರಸ್ನನಕುಮಾರ್ ಅವರು ಇತ್ತೀಚೆಗೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ವಿಪ್ರ ಸಮಾಜದ ಯುವ ವೇದಿಕೆಯ ಮುಖಂಡ ರಾಘವೇಂದ್ರ ಉಡುಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಪ್ರ ಸಮಾಜವನ್ನು ಎಲ್ಲಾ ರಾಜಕೀಯ ಪಕ್ಷಗಳು ಕಡೆಗಣಿಸುತ್ತಿವೆ. ಇಷ್ಟು ವರ್ಷ ವಿಪ್ರ ಸಮಾಜವನ್ನು ಬಳಸಿಕೊಂಡು ಯಾವುದೇ ರಾಜಕೀಯ ಸ್ಥಾನಮಾನ ನೀಡದೆ ಕಡೆಗಣಿಸುತ್ತಿವೆ ಹಾಗೂ ಇತರೆ ಜನಾಂಗದ ಅಭ್ಯರ್ಥಿಗಳನ್ನು ಗೆಲ್ಲಿಸುವ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿವೆ ಎಂದು ದೂರಿದರು.
ಎಲ್ಲಿ ನಮ್ಮ ಸಮಾಜದ ಸಂಖ್ಯೆ ಹೆಚ್ಚಿದೆಯೋ ಅಲ್ಲೂ ಕೂಡ ನಮ್ಮ ಸಮಾಜವನ್ನು ಪರಿಗಣಿಸಿಲ್ಲ. ಸಮಾಜದ ಪ್ರಭಾವಿ ರಾಜಕಾರಣಿ ಕೆ.ಬಿ. ಪ್ರಸನ್ನಕುಮಾರ್. ತೆಗೆದುಕೊಂಡ ನಿಲುವಿಗೆ ನಾವೆಲ್ಲ ಬದ್ದರಾಗಿರುತ್ತೇವೆ. ಜೆಡಿಎಸ್ ಪಕ್ಷಕ್ಕೆ ಶಕ್ತಿ ತುಂಬಲು ಪ್ರಸನ್ನಕುಮಾರ್ ಅವರು ಸೇರ್ಪಡೆಗೊಂಡಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗ ಹೆಚ್.ಡಿ.ಕುಮಾರಸ್ವಾಮಿಯವರು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಕಾರಣರಾಗಿದ್ದು, ಅದೇ ರೀತಿ ಅಖಿಲ ಭಾರತ ಬ್ರಾಹ್ಮಣ iಹಾಸಭಾದ ಗಾಯತ್ರಿ ಭವನ ನಿರ್ಮಾಣಕ್ಕೆ ನಿವೇಶನ ಸಹ ಮಂಜೂರು ಮಾಡಿದ್ದರು. ಕೆ.ಬಿ.ಪ್ರಸನ್ನಕುಮಾರ್ ಅವರು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆಯಲು ಪ್ರಯತ್ನಿಸಿದರೂ ಸಹ ಅವರಿಗೆ ಚುನಾವಣೆಯಲ್ಲಿ ಸ್ಪಽಸುವ ಅವಕಾಶ ನೀಡಲಿಲ್ಲ. ಇದರಿಂದಾಗಿ ಆ ಪಕ್ಷ ವಿಪ್ರ ಸಮಾಜವನ್ನು ಕಡೆಗಣಿಸಿರುವುದರಿಂದ ಬೇಸತ್ತು ಕೆ.ಬಿ. ಪ್ರಸನ್ನಕುಮಾರ್ ಜೆಡಿಎಸ್ ಸೇರ್ಪಡೆಗೊಂಡಿರುವ ಅವರನ್ನು ಬೆಂಬಲಿಸಿ ನಾವೆಲ್ಲರೂ ಆ ಪಕ್ಷದ ಅಭ್ಯರ್ಥಿಯ ಪರವಾಗಿ ನಿಲ್ಲುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಭಾನುಪ್ರಕಾಶ್ ಶರ್ಮಾ. ಮಧುಸೂದನ್ ಭಟ್, ಸಂತೋಷ್ ಭಾರದ್ವಾಜ್, ರಾಘವೇಂದ್ರ ಕಾರಂತ್, ಸುಮುಖ್ ಭಟ್ ಉಪಸ್ಥಿತರಿದ್ದರು.