ಶಿವಮೊಗ್ಗದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಶಿವಮೊಗ್ಗದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಿರುದ್ಯೋಗ ಹೆಚ್ಚಾಗಲು ವಿದ್ಯಾವಂತರ ಪ್ರಮಾಣ ಹೆಚ್ಚಾಗಿದ್ದು ಕಾರಣ. ವರ್ಷದಿಂದ ವರ್ಷಕ್ಕೆ ಪದವೀಧರರು ಹೆಚ್ಚುತ್ತಿದ್ದಾರೆ. ವಿದ್ಯಾವಂತರಿಗೆ ಸ್ವಯಂ ಉದ್ಯೋಗ ಮಾಡಲು ಹಾಗೂ ಸರ್ಕಾರಿ ಉದ್ಯೋಗ ಮಾಡುವುದಕ್ಕೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ೧೦ ಸಾವಿರಕ್ಕೂ ಹೆಚ್ಚು ಸ್ಟಾರ್ಟಪ್‌ಗಳು ಪ್ರಾರಂಭವಾಗಿವೆ ಎಂದರು.
ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಅಂತ ಹೇಳಿದ್ದೀರಿ, ಈಗ ಎಷ್ಟು ಉದ್ಯೋಗ ಸೃಷ್ಟಿ ಮಾಡಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿಖರ ದಾಖಲೆ ಇಲ್ಲ, ಮಾಹಿತಿ ಪಡೆದು ಉತ್ತರಿಸುತ್ತೇನೆ ಎಂದು ಸಮರ್ಪಕ ಉತ್ತರ ನೀಡದೇ ಜಾರಿಕೊಂಡರು.
ಭ್ರಷ್ಟಾಚಾರದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು,ಈ ದೇಶದಲ್ಲಿ ಭ್ರಷ್ಟಾಚಾರದ ತಂದೆ-ತಾಯಿ ಕಾಂಗ್ರೆಸ್. ಭಾರತವನ್ನು ಭ್ರಷ್ಟಾಚಾರದ ದೇಶ ಎಂದು ಕರೆಯಲು ಕಾಂಗ್ರೆಸ್ ಕಾರಣ ಎಂದರು.
ನಿಮ್ಮ ಸರ್ಕಾರದ ಶಾಸಕರ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದಿಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,ನಮ್ಮ ಸರ್ಕಾರ ಬಂದ ಮೇಲೆ ಭ್ರಷ್ಟಾಚಾರಿಗಳಿಗೆ ಶಿಕ್ಷೆಯಾಗುತ್ತಿದೆ ಎಂದರು.
ವಸತಿ, ಕುಡಿಯುವ ನೀರು, ರೈಲ್ವೆ, ಹೆದ್ದಾರಿ, ನೀರಾವರಿ ಯೋಜನೆ, ವಿಮಾನ ನಿಲ್ದಾಣಗಳು ನಿರ್ಮಾಣವಾಗಿವೆ. ರಾಜ್ಯದಲ್ಲಿ ೫೪ ಲಕ್ಷ ರೈತರು ಕಿಸಾನ್ ಸಮ್ಮಾನ್ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ದೇಶದ ರಕ್ಷಣೆ ಅಗತ್ಯವಾಗಿದೆ. ಯಾವುದೇ ಯೋಜನೆಯನ್ನು ಕೇಂದ್ರ ನೇರವಾಗಿ ಜಾರಿ ಮಾಡುವುದಿಲ್ಲ. ರಾಜ್ಯ ಸರ್ಕಾರಗಳು ಭೂಮಿ ನೀಡಬೇಕು. ಈ ನಿಟ್ಟಿನಲ್ಲಿ ಡಬಲ್ ಇಂಜಿನ್ ಸರ್ಕಾರ ಕೆಲಸ ಮಾಡುತ್ತಿದೆ.
ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ