ಹೊಸನಗರ: ಬಿಜೆಪಿ ಸರ್ಕಾರ ಬಂದ ಬಳಿಕ ದೇಶದ ಪ್ರಗತಿ ಗಣನೀಯವಾಗಿ ಹೆಚ್ಚಿದೆ. ಪ್ರತಿಯೊಂದು ಕುಟುಂಬಕ್ಕೂ ಒಂದಲ್ಲ ಒಂದು ಯೋಜನೆಯ ಸವಲತ್ತು ದೊರಕಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಭಾನುವಾರ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಚುನಾವಣೆಗೆ ಕೇವಲ ೮ ದಿನಗಳು ಬಾಕಿ ಉಳಿದಿವೆ. ಈಗ ಎಲ್ಲವೂ ಕಾರ್ಯಕರ್ತರ ಮೇಲೆ ಅವಲಂಬಿತವಾಗಿದೆ. ಪ್ರಧಾನಿಯಾದ ಬಳಿಕ ನರೇಂದ್ರ ಮೋದಿಯವರು ಒಂದು ದಿನವೂ ವಿಶ್ರಾಂತಿ ತೆಗೆದುಕೊಳ್ಳದೇ, ದೇಶಕ್ಕಾಗಿ ಶ್ರಮಿಸುತ್ತಿರುವರೋ ಅದೇ ರೀತಿ ಅವರ ಹೆಸರನ್ನು ಹೆಮ್ಮೆಯಿಂದ ಹೇಳುವ ಕಾರ್ಯಕರ್ತರು ಸಹ ಚುನಾವಣೆಯಲ್ಲಿ ದಣಿವರಿಯದೇ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಹೇಳಿದರು.
ಬಿಜೆಪಿ ಮಹಿಳೆಯರಿಗೆ ವಿಶೇಷ ಪ್ರಾಧಾನ್ಯತೆ ನೀಡಿದೆ. ದೇಶದ ರಾಷ್ಟ್ರಪತಿ, ಹಣಕಾಸು ಸಚಿವ ಸ್ಥಾನ ಸಹಾ ಮಹಿಳೆಯ ಕೈಯಲ್ಲಿರುವುದು ಇದಕ್ಕೆ ಸಾಕ್ಷಿ. ಒಂದು ಕಾಲದಲ್ಲಿ ಹಣ, ಹೆಂಡ, ತೋಳ್ಬಲ, ಜಾತಿಯನ್ನು ಮುಂದಿಟ್ಟು ಚುನಾವಣೆ ಮಾಡಿ ಕೆಲವರು ಗೆಲವು ಸಾಧಿಸುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದೆ. ಅನ್ಯಾಯವನ್ನು ಸಹಿಸಿಕೊಳ್ಳಲು ಯಾರೂ ತಯಾರಿಲ್ಲ. ಯುವ ಜನತೆ ಎಚ್ಚೆತ್ತುಕೊಂಡಿದೆ. ಕಾಂಗ್ರೆಸ್ ಪಕ್ಷದ ನಾಯಕರು ಮುಂದಿನ ನಾಲ್ಕು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿಟ್ಟುಕೊಂಡಿದ್ದಾರೆ ಎಂದು ಈ ಹಿಂದೆ ಸ್ವತಃ ಕಾಂಗ್ರೆಸ್ ಪಕ್ಷದ ಮುಖಂಡರೇ ಹೇಳಿದ್ದರು ಎಂದು ರೋಪಿಸಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಪಕ್ಷ ನಿರ್ನಾಮ ಆಗುವ ಹಂತ ತಲುಪಿದೆ. ರಾಜ್ಯದಲ್ಲಿಯೂ ಕಾಂಗ್ರೆಸ್ ಮುಕ್ತ ಮಾಡುವ ಕಾಲ ಸನ್ನಿಹಿತವಾಗಿದೆ. ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡ್ ವಿತರಣೆ ಮಾಡುವ ಮೂಲಕ ಜನರಿಗೆ ಪೊಳ್ಳು ಆಶ್ವಾಸನೆ ನೀಡುತ್ತಿದೆ. ಅವರು ನೀಡಿರುವ ಗ್ಯಾರಂಟಿಗಳನ್ನು ಪೂರೈಸಲು ಬೇಕಾಗುವ ಹಣಕಾಸು ರಾಜ್ಯದ ಒಟ್ಟಾರೆ ಬಜೆಟ್‌ನ ಮೊತ್ತಕ್ಕಿಂತಲೂ ಅಧಿಕವಾಗಿದೆ. ಹಾಗಾಗಿ ಇದು ಜನರನ್ನು ಮೋಸಗೊಳಿಸುವ ಯತ್ನ ಎಂದು ಟೀಕಿಸಿದರು.
ಮಾಜಿ ಶಾಸಕ ಬಿ.ಸ್ವಾಮಿರಾವ್, ಪ್ರಮುಖರಾದ ಡಾ. ರಾಜನಂದಿನಿ ಕಾಗೋಡು, ಕೆ.ಎಸ್.ಪ್ರಶಾಂತ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಗಣಪತಿ ಬಿಳಗೋಡು, ಲೋಕನಾಥ ಬಿಳಿಸಿರಿ, ರಾಘವೇಂದ್ರ ಬಾಳೆಬೈಲು, ಗಣೇಶಪ್ರಸಾದ್, ಉಮೇಶ ಕಂಚುಗಾರ್, ಎಂ.ಎನ್.ಸುಧಾಕರ, ಎನ್.ಆರ್.ದೇವಾನಂದ, ಎ.ವಿ.ಮಲ್ಲಿಕಾರ್ಜುನ, ಮನೋಧರ, ವೀರೇಶ್ ಮತ್ತಿತರರು ಇದ್ದರು.
ಚುನಾವಣೆ ಒಂದು ಯುದ್ಧವಿದ್ದಂತೆ. ಬಸವರಾಜ ಬೊಮ್ಮಾಯಿ ಅವರು ಅರ್ಜುನನ ಪಾತ್ರ ವಹಿಸಿದ್ದರೆ, ಯಡಿಯೂರಪ್ಪ ಅವರು ಶ್ರೀಕೃಷ್ಣನ ಪಾತ್ರ ವಹಿಸಿದ್ದಾರೆ. ಗೆಲುವು ನಮ್ಮದೇ, ಮುಂದಿನ ಅವಧಿಗೂ ಬಿಜೆಪಿ ಅಧಿಕಾರ ಶತಸ್ಸಿದ್ಧ. ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಆಗಿವೆ. ಮತದಾರರು ಇದನ್ನು ಗಮನಿಸಿ ನನ್ನನ್ನು ಮತ್ತೊಮ್ಮೆ ಬೆಂಬಲಿಸಲಿದ್ದಾರೆ ಎನ್ನುವ ವಿಶ್ವಾಸವಿದೆ.
-ಹರತಾಳು ಹಾಲಪ್ಪ, ಶಾಸಕ