ಶಿವಮೊಗ್ಗ ನಗರದಲ್ಲಿ ಅಭಿವೃದ್ದಿ ಮತ್ತು ಹಿಂದುತ್ವದ ಮೇಲೆ ಚುನಾವಣೆ ನಡೆಯಲಿದೆ ಎಂದು ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಪ್ರೆಸ್ ಟ್ರಸ್ಟಿನಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಸಂವಾದದಲ್ಲಿ ಮಾತನಾಡಿದ ಅವರು,ಶಿವಮೊಗ್ಗ ಮಲೆನಾಡಿನ ಹೆಬ್ಬಾಗಿಲು.ಸಾಂಸ್ಕೃತಿಕ ನಗರ ಆದರೆ ರಾಜಕೀಯ ಕಾರಣಕ್ಕೆ ನಗರವನ್ನು ಆಶಾಂತಿಗೆ ತಳ್ಳಲಾಗಿದೆ ಎಂದರು.
ನಮ್ಮ ಪಕ್ಷಕ್ಕೂ ಬೇರೆ ಪಕ್ಷಕ್ಕೂ ಸಾಕಷ್ಟು ವ್ಯತ್ಯಾಸವಿದೆ. ನಮ್ಮದು ರಾಜಕೀಯ ಸಂಘಟನೆ ಪಕ್ಷ ಅಲ್ಲಿ ನಾವು ಅದೇ ರೀತಿ ಬೆಳೆದುಕೊಂಡು ಬಂದಿದ್ದೇವೆ.ಕಾರ್ಯಕರ್ತರ ಆಧಾರಿತ ಪಕ್ಷ ನಮ್ಮದು ಎಂದ ಅವರು, ಈ ಬಾರಿಯ ಚುನಾವಣೆಯಲ್ಲಿ ೭೬ ಹೊಸ ಮುಖಗಳಿಗೆ ಪಕ್ಷ ಅವಕಾಶ ನೀಡಿದೆ ಎಂದರು.
ನನ್ನನ್ನು ರಾಜಕೀಯವಾಗಿ ಕೆ.ಎಸ್ ಈಶ್ವರಪ್ಪನವರು ಬೆಳೆಸಿದ್ದಾರೆ. ನಾನು ಮೂಲತಃ ಆರ್ ಎಸ್ ಎಸ್ ನ ಸ್ವಯಂ ಸೇವಕ. ಸಂಘಟನೆಗೆ ಚ್ಯುತಿ ಬಾರದ ರೀತಿಯಲ್ಲಿ ನಾನು ಕೆಲಸ ನಿರ್ವಹಿಸುತ್ತೇನೆ ಎಂದರು.
ಕೆಲವರು ರಾಜಕೀಯ ಕಾರಣಕ್ಕೆ ನಗರವನ್ನು ಆಶಾಂತಿಗೆ ತಳ್ಳಿದ್ದಾರೆ. ಶಿವಮೊಗ್ಗ ನಗರದ ಜನರು ಶಾಂತಿ ಪ್ರಿಯರು. ಗಣೇಶೋತ್ಸವ ಉತ್ಸವ ಸಂದರ್ಭದಲ್ಲಿ ಆನೇಕ ಸಲ ಗಲಾಟೆ ನಡೆದಿದೆ. ಅವು ಕೋಮು ಗಲಭೆ ಗಲಾಟೆಗಳಲ್ಲ. ಗಲಭೆ ಹೆಸರಲ್ಲಿ ರಾಜಕಾರಣ ಮಾಡುತ್ತಾ ಸುಳ್ಳು ಹೇಳುವವರಿಗೆ ಜನರು ತಕ್ಕಪಾಠ ಕಲಿಸಿದ್ದಾರೆ ಎಂದರು.
ರಾಷ್ಟ್ರೀಯತೆ ಆಧಾರದಲ್ಲಿ ದೇಶ ಕಟ್ಟುವುದಕ್ಕೆ ಹೊರಟಿದ್ದೇವೆ. ರಾಜಕಾರಣಕ್ಕೆ ಸುಳ್ಳು ಹೇಳುವುದು ಅಕ್ಷಮ್ಯ ಎಂದ ಅವರು, ಶಿವಮೊಗ್ಗದಲ್ಲಿ ಮೂಲ ಸೌಕರ್ಯ ಕೊಟ್ಟಿದ್ದೇವೆ. ಇಲ್ಲಿ ಹಿಂದೆಯೂ ಅನೇಕ ಕಂಪನಿಗಳು , ಕೈಗಾರಿಕೆಗಳು ಸ್ಥಾಪಿತವಾಗಿವೆ. ಆಗಲೂ ಕೋಮುಗಲಭೆಗಳು ಇದ್ದವು. ಆದರೆ ಈಗ ಹೂಡಿಕೆದಾರರ ಸಮಾವೇಶದಲ್ಲಿ ನಗರಕ್ಕೆ ಉದ್ಯಮಿಗಳು ಬಾರದಿರುವುದು ಗಲಭೆ ಕಾರಣಕ್ಕೆ ಎಂದು ಸುಳ್ಳು ಹೇಳಲಾಗುತ್ತಿದೆ ಎಂದರು.
ಶಿವಮೊಗ್ಗದ ಸುತ್ತಲ ಬೆಟ್ಟಗುಡ್ಡಗಳನ್ನು ಹಾಗೆಯೇ ಉಳಿಸಿಕೊಂಡು ಇಲ್ಲಿನ ಪರಿಸರ ರಕ್ಷಣೆಗೆ ಆದ್ಯತೆ. ತುಂಗಾನದಿ ಮಲಿನವಾಗುವುದನ್ನು ತಡೆಯಬೇಕು. ಶಿವಮೊಗ್ಗ ನಗರದ ಅಭಿವೃದ್ಧಿಯ ಕುರಿತಂತೆ ನಮ್ಮದೇ ಆದ ಅನೇಕ ಸಂಘಟನೆಗಳಿಗೆ ಒಂದು ಕಲ್ಪನೆ ಇದೆ. ಆ ಎಲ್ಲರ ಅಭಿಪ್ರಾಯ ಪಡೆದು ಮಾದರಿ ನಗರ ಮಾಡುವ ಉದ್ದೇಶವಿದೆ ಎಂದರು.
ಸಂವಾದದಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ, ಕಾರ್‍ಯದರ್ಶಿ ನಾಗರಾಜ ನೇರಿಗೆ, ಶಿವಮೊಗ್ಗ ಕಾರ್‍ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ ಯಡಗೆರೆ, ಕಾರ್‍ಯದರ್ಶಿ ಸಂತೋಷ ಕಾಚಿನಕಟ್ಟೆ ಉಪಸ್ಥಿತರಿದ್ದರು.
ಹಿಂದುತ್ವ ಎಂದರೆ ಮುಸಲ್ಮಾನರ ವಿರೋಧಿಸುವುದಲ್ಲ. ನಮ್ಮ ಪಕ್ಷಕ್ಕೂ ಅನೇಕ ಮುಸ್ಲಿಂ ಸಮುದಾಯದ ಜನರು ಮತ ನೀಡುತ್ತಾರೆ. ದೇಶ ವಿರೋಧಿ ಯಾರೇ ಆಗಿದ್ದರೂ ನಾವು ವಿರೋಧಿಸುತ್ತೇವೆ. ರಾಷ್ಟ್ರೀಯವಾದಿ ಮುಸ್ಲಿಂರನ್ನು ನಾವೂ ಪ್ರೀತಿಸುತ್ತೇವೆ. ದೇಶ ಪ್ರೀತಿಸುವ ಎಲ್ಲರನ್ನೂ ಬಿಜೆಪಿ ಗೌರವಿಸುತ್ತದೆ.
–ಚನ್ನಬಸಪ್ಪ, ಬಿಜೆಪಿ ಅಭ್ಯರ್ಥಿ