ಶಿವಮೊಗ್ಗ: ಕಾಂಗ್ರೆಸ್ ಪಕ್ಷ ಹೆಚ್ಚಿನ ಅಂತರದಿಂದ ಶಿವಮೊಗ್ಗ ನಗರ ಕ್ಷೇತ್ರ ಗೆಲ್ಲಲಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಮುಖಂಡ ಆರ್. ಪ್ರಸನ್ನಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭ್ಯರ್ಥಿ ಮನೆಮನೆಗೆ ಭೇಟಿ ನೀಡಿದ್ದಾರೆ. ಮೂರು ನಾಲ್ಕು ಸುತ್ತಿನ ಪ್ರಚಾರ ಮುಗಿದಿದೆ. ನಿನ್ನೆಯಿಂದ ಬೂತ್ ಸ್ಲಿಪ್ ವಿತರಣಾ ಕಾರ್ಯ ಆರಂಭವಾಗಿದೆ. ಮತದಾರರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ ಎಂದರು.
ಮುಸ್ಲಿಂ ಮತದಾರರು ಮತ್ತು ಕಾಂಗ್ರೆಸ್‌ನ ಕೆಲವು ಬಂಡಾಯ ಮತಗಳು ಈ ಬಾರಿ ಕಾಂಗ್ರೆಸ್‌ಗೆ ಹಿನ್ನಡೆಯಾಗುವ ಸಾಧ್ಯತೆ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವು ಪಕ್ಷಾಂತರಿಗಳು ಹೋಗಿದ್ದಾರೆ. ಆದರೆ ಅವರೊಂದಿಗೆ ಮತದಾರರು ಹೋಗಿಲ್ಲ. ಕೆಲವು ಆಯಾರಾಂ ಗಯಾ ರಾಂ ಗಳು ಪಕ್ಷ ಬಿಟ್ಟಿದ್ದರಿಂದ ಯಾವುದೇ ನಷ್ಟವಿಲ್ಲ. ದೇಶದಲ್ಲಿ ಕಾಂಗ್ರೆಸ್ ಪಕ್ಷ ಒಂದೇ ಅಲ್ಪ ಸಂಖ್ಯಾತರ ರಕ್ಷಣೆ ಮಾಡುತ್ತದೆ ಎಂಬ ಅರಿವು ಎಲ್ಲಾ ಅಲ್ಪಸಂಖ್ಯಾತರಿಗಿದೆ. ಇಷ್ಟೊಂದು ಒಳ್ಳೆಯ ವಾತಾವರಣ ಇದುವರೆಗೂ ಕಂಡಿಲ್ಲ. ನಮ್ಮ ಪಕ್ಷದ ಗೆಲುವು ನಿಶ್ಚಿತ ಎಂದರು.
ಮಾಜಿ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಖಾನ್ ಮಾತನಾಡಿ, ಹಿಂದಿನ ಶಾಸಕರು ಶಾಂತಿಭಂಗ ಮಾಡುತ್ತಾ ಶಿವಮೊಗ್ಗದ ನೆಮ್ಮದಿ ಕೆಡಿಸಿದ್ದರು. ಯೋಗೇಶ್ ಒಬ್ಬ ಯುವನಾಯಕನಾಗಿದ್ದು, ಎಲ್ಲಾ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಅವರ ಕಷ್ಟಗಳಿಗೆ ಸ್ಪಂದಿಸುತ್ತಾ ಸಾರ್ವಜನಿಕರೊಂದಿಗೆ ಬೆರೆತು ಬೆಳೆದಿದ್ದಾರೆ. ಊರಿನಲ್ಲಿ ಶಾಂತಿ ಸೌಹಾರ್ದತೆಗಾಗಿ ಯೋಗೇಶ್ ಅವರನ್ನು ಜನ ಬೆಂಬಲಿಸುತ್ತಾರೆ. ಯಾವುದೇ ಕಾರಣಕ್ಕೂ ಮುಸ್ಲಿಂ ಮತಗಳು ಕೋಮುವಾದಿ ಬಿಜೆಪಿ ಪಕ್ಷದ ಜೊತೆಗೆ ಕೈಜೋಡಿಸುವವರಿಗೆ ನೀಡುವುದಿಲ್ಲ ಎಂದು ಅಲ್ಪಸಂಖ್ಯಾತರು ಈಗಾಗಲೇ ತೀರ್ಮಾನಿಸಿದ್ದಾರೆ.ಸಮಯ ಸಾಧಕರು ಮತ್ತು ಪಕ್ಷದಿಂದ ಪಕ್ಷಕ್ಕೆ ಹಾರುವ ವ್ಯಕ್ತಿಗಳಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ ಎಂದರು.
ರಮೇಶ್ ಹೆಗ್ಡೆ ಮಾತನಾಡಿ, ಇದು ನಿರ್ಣಾಯಕ ಚುನಾವಣೆ. ಬಿಜೆಪಿ ಭ್ರಷ್ಟಾಚಾರಕ್ಕೆ ಜನ ರೋಸಿಹೋಗಿದ್ದಾರೆ. ನಾಗರಿಕ ಹಿತರಕ್ಷಣಾ ಸಮಿತಿ ನಗರದಲ್ಲ್ಧಿ ಅವೈಜ್ಞಾನಿಕ ತೆರಿಗೆ ಹೆಚ್ಚಳದ ವಿರುದ್ಧ ಪ್ರತಿಭಟಿಸಿದ್ದಾಗ ಇದೇ ಚನ್ನಬಸಪ್ಪ ಅದನ್ನು ವಿರೋಧಿಸಿದ್ದರು. ಆ ಸಿಟ್ಟು ಜನರಿಗೆ ಇದೆ. ಅಲ್ಲದೆ ಪ್ರತಿಷ್ಠಿತ ಬ್ಯಾರೀಸ್ ಮಾಲನ್ನು ೯೯ ವರ್ಷ ಲೀಸಿಗೆ ನೀಡಲು ಹೊರಟಿದ್ದರು. ಕಾಂಗ್ರೆಸ್ ಸದಸ್ಯರ ಹೋರಾಟದಿಂದ ಅದು ನಿಂತಿದೆ. ಕೊಳಚೆ ನಿವಾಸಿಗಳಿಂದ ಹಣ ಸಂಗ್ರಹಿಸಿ ಅವರಿಗಿನ್ನೂ ಮನೆ ಕೊಟ್ಟಿಲ್ಲ. ನಗರ ಪಾಲಿಕೆಯ ಅಕ್ರಮಗಳಲ್ಲಿ ಬಿಜೆಪಿ ಅಭ್ಯರ್ಥಿಯ ಸಹಕಾರ ಇದ್ದು, ಎಲ್ಲವನ್ನೂ ಮತದಾರರು ಗಮನಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿದವರು ಯಾರೂ ಕೂಡ ಪಕ್ಷ ಬಿಡಲ್ಲ. ಪಕ್ಷದ ಗೆಲುವು ಖಚಿತ ಎಂದರು.
ಎಸ್.ಕೆ. ಮರಿಯಪ್ಪ, ಮಾಜಿ ನಗರಸಭಾ ಸದಸ್ಯ ಸತ್ಯನಾರಾಯಣ ಮಾತನಾಡಿದರು.
ಅಧ್ಯಕ್ಷ ಎನ್. ರಮೇಶ್, ಎಸ್.ಪಿ. ದಿನೇಶ್, ಶಿವಾನಂದ್ ಮತ್ತಿತರರಿದ್ದರು.