ಸೊರಬ,ಮೇ ೭: ಸರಕಾರಿ ನೌಕರರನ್ನು ದುರ್ಬಳಕೆ ಮಾಡಿಕೊಂಡು ಜನಸಾಮಾನ್ಯರು ರೈತರ ಮೇಲೆ ದುರಾಡಳಿತ ನಡೆಸಿದ ಕುಮಾರ್ ಬಂಗಾರಪ್ಪ ಅವರನ್ನು ಚುನಾವಣೆಯಲ್ಲಿ ಜನ ಕಿತ್ತೊಗೆಯಬೇಕು, ಪಿಡಿಓ ಉಮೇಶ್ ಗೌಡರ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಂದು ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು.
ಪಟ್ಟಣದ ಬಂಗಾರಧಾಮದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕುಮಾರ್ ಬಂಗಾರಪ್ಪ ಅವರಿಗೆ ಆಪ್ತ ಸಹಾಯಕನಾಗಿ ಕೆಲಸ ನಿರ್ವಹಿಸಿದ ಪಿಡಿಓ ಉಮೇಶ್ ಗೌಡರ್ ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಶಾಸಕರ ಕುಮ್ಮಕ್ಕಿನಿಂದ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡಿದ್ದಕ್ಕೆ ತಕ್ಕ ಪಾಠ ದೊರೆತಿದೆ. ಪುರಸಭೆ ಮುಖ್ಯಾಧಿಕಾರಿಯೂ ಶಾಸಕ ಕುಮಾರ್ ಬಂಗಾರಪ್ಪ ಹೇಳಿದಂತೆ ದುರಾಡಳಿತ ನಡೆಸುತ್ತಿದ್ದು ಅವರಿಗ ತಕ್ಕ ಪಾಠ ಕಲಿಸಲಾಗುವುದು ಎಂದರು.
ಒಮ್ಮೆ ಮಾತ್ರ ಶಾಸಕನಾದ ನಾನು ತಾಲೂಕಿನ ಸಮಗ್ರ ನೀರಾವರಿ ಯೋಜನೆ ಮಂಜೂರಾತಿ, ಬಗರ್ ಹುಕುಂ ರೈತರ ರಕ್ಷಣೆಗೆ ಶಿವಮೊಗ್ಗದ ವರೆಗೂ ಪಾದಯಾತ್ರೆ ಮಾಡುವ ಮೂಲಕ ಹೋರಾಟ ಮಾಡಿದ್ದೇನೆ. ಹೋರಾಟದ ಪ್ರತಿಫಲವೂ ಜನತೆಗೆ ದೊರೆತಿದೆ. ನೂರಾರು ಜನರ ಹೃದಯ ಇನ್ನಿತರೆ ಖಾಯಿಲೆಗಳಿಗೆ ಚಿಕಿತ್ಸೆ ಕೊಡಿಸಿದ ತೃಪ್ತಿಯೂ ನನಗಿದೆ. ನಾನು ಹೃದಯ ಶ್ರೀಮಂತಿಕೆಯ ಎಸ್.ಬಂಗಾರಪ್ಪ ಅವರ ಪುತ್ರ. ಹೀಗಿರುವ ನನ್ನನ್ನು ಆನವಟ್ಟಿ ಬಿಜೆಪಿ ವೇದಿಕೆಯಲ್ಲಿ ಸೊರಬದಲ್ಲಿ ಕಾಂಗ್ರೆಸ್ ಗೆದ್ದರೆ ರೌಡಿಸಂ ಶುರುವಾಗುತ್ತದೆ ಎಂದು ಹೇಳಿರುವುದು ಖಂಡನೀಯ.
ರೌಡಿಸಂ ಬಗ್ಗೆ ಮಾತಾಡಿದ ರಾಜು ತಲ್ಲೂರು ಆನವಟ್ಟಿ ಪಟ್ಟಣದ ಬೀದಿಯಲ್ಲಿ ಚಪ್ಪಲಿ ಹಿಡಿದು ಹೊಡೆದಾಡಿ, ಕೇಸು ಹಾಕಿಸಿಕೊಂಡಿದ್ದು ಮರೆತಂತಿದೆ. ಅಲ್ಲದೆ ಪೊಲೀಸರ ಕೈಗೆ ಸಿಗದಂತೆ ತಲೆಮರಿಸಿಕೊಂಡಿದ್ದನ್ನು ಮರೆತು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಇಂತವರನ್ನು ಯಡಿಯೂರಪ್ಪ ಅವರು ಪಕ್ಕದಲ್ಲಿ ಕೂರಿಸಿಕೊಳ್ಳುವುದರಿಂದ ಘನತೆಗೆ ದಕ್ಕೆ ಬರುವ ಸಾಧ್ಯತೆ ಇರುತ್ತದೆ. ಜೆಡಿಎಸ್, ಕಾಂಗ್ರೆಸ್ ಪಕ್ಷಗಳಲ್ಲಿ ಹಣದ ವ್ಯಾಪಾರ ನಡೆಸಿ ಹೆಸರಾದ ರಾಜು ತಲ್ಲೂರು ಅಂತವರನ್ನೆಲ್ಲಾ ಸೇರಿಸಿಕೊಂಡು ಬಿಜೆಪಿ ನಿಜವಾದ ರೌಡಿಗಳ ಪಕ್ಷವಾಗಿ ರೂಪುಗೊಂಡಿದೆ ಎಂದು ಕುಟುಕಿದರು.
ಶಾಸಕ ಕುಮಾರ್ ಬಂಗಾರಪ್ಪ ಮತ ಕೇಳಲು ಹೋದಲೆಲ್ಲ ಜನರು ಬೈದು ಕಳಿಸಿದ್ದಾರೆ. ಶಿರಸಿ, ಸಾಗರ, ಶಿಕಾರಿಪುರ ಹಾಗೂ ಹಾನಗಲ್‌ನಿಂದ ಜನ ಕರೆಸಿ ಆನವಟ್ಟಿಯಲ್ಲಿ ಸಭೆ ನಡೆಸಿರುವುದು ಎಲ್ಲರಿಗೂ ಗೊತ್ತಿದೆ ಎಂದ ಹೇಳಿದರು.
ತಾಲೂಕು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಮುಖಂಡರಾದ ಎಚ್.ಗಣಪತಿ, ಎಂ.ಡಿ.ಶೇಖರ್, ತಬಲಿ ಬಂಗಾರಪ್ಪ, ಪ್ರಶಾಂತ ಮೇಸ್ತ್ರಿ, ನಾಗರಾಜ್, ಪರಶುರಾಮ್ ಸಣಬೈಲ್, ನಜೀರ್ ಸಾಬ್, ಪ್ರೇಮಾ ಟೀಕಪ್ಪ, ಅನ್ಸರ್ ಅಹ್ಮದ್ ಇತರರಿದ್ದರು.