ಶಿವಮೊಗ್ಗ,ಮೇ.7: ಶಿಕಾರಿಪುರದಲ್ಲಿ ನಡೆಯುತ್ತಿರುವುದು ಬರೀ ಚುನಾವಣೆಯಲ್ಲ ಅದೊಂದು ಸ್ವಾಭಿಮಾನದ ಹೋರಾಟ ಎಂದು ವಿಧಾನ ಸಭೆಗೆ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ನಾಗರಾಜ್ ಗೌಡ ಹೇಳಿದರು.
ಶಿವಮೊಗ್ಗ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಸಹಯೋಗದಲ್ಲಿ ಭಾನುವಾರ ನಡೆದ ಪತ್ರಿಕಾ ಸಂವಾದದಲ್ಲಿ ಅವರು ಮಾತನಾಡಿದರು. ಶಿಕಾರಿಪುರ ಕ್ಷೇತ್ರದ ಜನರೇ ನನ್ನನ್ನು ಅಭ್ಯರ್ಥಿ ಮಾಡಿದ್ದು, ಗೆಲ್ಲಿಸುವ ಹೊಣೆ ಅವರೇ ಹೊತ್ತುಕೊಂಡಿದ್ದಾರೆ. ನಾನು ನಿಮಿತ್ತ ಮಾತ್ರ. ಜನರಿಗೆ ಕೈಗೆ ಸಿಗುವ ಒಬ್ಬ ಜನಪ್ರತಿನಿಧಿ ಬೇಕಾಗಿದೆ. ಈಗಿನ ಬಿಜೆಪಿ ಅಭ್ಯರ್ಥಿ ಈತನಕ ಸತತವಾಗಿ ಒಂದು ವಾರವೂ ಕ್ಷೇತ್ರದಲ್ಲಿ ಇದ್ದ ಉದಾಹರಣೆ ಇಲ್ಲ. ಅವರಿಗೆ ಕ್ಷೇತ್ರದ ಪರಿಚಯವೇ ಇಲ್ಲ. ರೈತರು, ಭೂಮಿ, ಬೆಳೆ, ಕಳೆ, ನೀರು ನೀರಾವರಿ, ಒಕ್ಕಲುತನ ಯಾವುದರ ಮಾಹಿತಿಯೂ ಇಲ್ಲ. ಕ್ಷೇತ್ರದಲ್ಲಿರುವ ಸಮಸ್ಯೆಗಳಿಗೆ ಅವರು ಪರಿಹಾರವಲ್ಲ ಎಂದು ಜನ ತೀರ್ಮಾನಿಸಿದ್ದಾರೆ.
ಜನ ತಮ್ಮ ಖರ್ಚನ್ನು ತಾವೇ ನೋಡಿಕೊಂಡು, ಮುಖಂಡರ ಪ್ರವಾಸಕ್ಕೆ ದೇಣಿಗೆನೂ ಕೊಟ್ಟು ಪ್ರಚಾರ ಮಾಡುತ್ತಿದ್ದಾರೆ. ನಾವು ಯಾರಿಗೂ ಒಂದು ಪೈಸೆ ಹಣ ಕೊಟ್ಟಿಲ್ಲ. ಎದುರಾಳಿಗಳು ಶಿಕಾರಿಪುರ ಕ್ಷೇತ್ರದ ಜನರಿಂದ ಬಲಾಢ್ಯವಾಗಿ ಬೆಳೆದಿದ್ದು,ಹಣದ ಹೊಳೆಯನ್ನೇ ಹರಿಸಲು ಸಜ್ಜಾಗಿದ್ದಾರೆ. ಆದರೆ ಸ್ವಾಭಿಮಾನಿ ಶಿಕಾರಿಪುರ ಕ್ಷೇತ್ರದ ಜನ ಹಣಕ್ಕೆ ಬೆಲೆಕೊಡದೆ ಗುಣಕ್ಕೆ ಬೆಲೆ ನೀಡಿ ನನ್ನನ್ನು ಗೆಲ್ಲಿಸುವ ವಿಶ್ವಾಸ ನನಗಿದೆ ಎಂದು ನಾಗರಾಜ್ ಗೌಡ ಹೇಳಿದರು.
ಅತೀ ಹೆಚ್ಚು ಬಗರ್‌ಹುಕುಂ ಭೂಮಿ:
ಶಿಕಾರಿಪುರದದಲ್ಲಿ ಜೀತವಿಮುಕ್ತಿ ಹಾಗೂ ಬಗರ್‌ಹುಕುಂ ಹೋರಾಟದ ಮೂಲಕ ಯಡಿಯೂರಪ್ಪ ಅವರು ರಾಜಕೀಯವಾಗಿ ಬೆಳೆದು ಮುಖ್ಯಮಂತ್ರಿಯಾದರು. ಸಂಸದರೂ ಸೇರಿದಂತೆ ಜನತೆ ಎಲ್ಲಾ ಅಧಿಕಾರ ಕೊಟ್ಟಿದ್ದಾರೆ. ಆದರೆ ಶಿಕಾರಿಪುರದಲ್ಲಿ ಬಗರ್‌ಹುಕುಂ ಸಾಗುವಳಿದಾರರು ಅತೀ ಹೆಚ್ಚು ಮಂದಿ ಇದ್ದಾರೆ ಎಂದರೆ ಸಮಸ್ಯೆ ಎಲ್ಲಿ ಪರಿಹಾರವಾಗಿದೆ. ಅವರಿಗೆ ಬಿಜೆಪಿ ಸರಕಾರ ಬಂದ ಮೇಲೆ ಒಂದೂ ಹಕ್ಕುಪತ್ರ ಕೊಟ್ಟಿಲ್ಲ. ಶಿಕಾರಿಪುರದಲ್ಲಿ ನೀರಾವರಿ ಯೋಜನೆ ಮಾಡಿದ್ದಾರೆ. ಆದರೆ ಕೆರೆಗಳ ಹೂಳೆತ್ತುವ ಕೆಲಸ ಮಾಡಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆ ಮಾಡಿಕೊಂಡಿದ್ದಾರೆ. ಬಡವರ ಮಕ್ಕಳು ಅಲ್ಲಿ ದುಬಾರಿ ಹಣ ಕೊಟ್ಟು ಶಿಕ್ಷಣ ಪಡೆಯಲಾಗಲ್ಲ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕೊಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದರು.
ಕಾಂಗ್ರೆಸ್ ನಿಷ್ಠ:
ನಾನು ಮೊದಲಿಂದಲೂ ಟ್ರಾಕ್ಟರ್‌ನಲ್ಲಿ ಭೂಮಿಯ ಕೆಲಸ ಮಾಡಿಕೊಂಡು ಇಡೀ ಕ್ಷೇತ್ರದಲ್ಲಿ ಪರಿಚಿತನಾಗಿದ್ದೇನೆ. ಯಡಿಯೂರಪ್ಪ ಅವರ ಪರವಾಗಿ ನನ್ನ ಹಣ ಖರ್ಚುಮಾಡಿಕೊಂಡು ಕೆಲಸ ಮಾಡಿದ್ದೆ. ಕಾಂಗ್ರೆಸ್‌ಗೆ ಬಂದ ಮೇಲೆ ಇಡೀ ಕ್ಷೇತ್ರದಲ್ಲಿ ಬೂತ್‌ಕಮಿಟಿ ಮಾಡಿ ನಿಷ್ಟಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಈಗ ಟಿಕೆಟ್ ಕೊಟ್ಟಿಲ್ಲ ಎಂದು ಬೇಸರ ಮಾಡಿಕೊಂಡಿಲ್ಲ. ಸ್ವಾಭಿಮಾನಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ. ಈಗ ಮತ್ತು ಮುಂದೆ ನಾನು ಕಾಂಗ್ರೆಸ್ ಮನುಷ್ಯನೇ ಹೊರತು ಅನ್ಯ ಪಕ್ಷದವನಲ್ಲ. ಕ್ಷೇತ್ರದ ಜನರ ಪ್ರೀತಿಗೆ ತಕ್ಕ ಹಾಗೆ ಅವರ ಸೇವೆ ಮಾಡುತ್ತೇನೆ ಎಂದು ಹೇಳಿದರು.
ಹಣದ ಪ್ರಭಾವ:
ಶಿಕಾರಿಪುರ ಕ್ಷೇತ್ರದಲ್ಲಿ ನಲವತ್ತು ವರ್ಷಗಳ ಕಾಲ ಯಡಿಯೂರಪ್ಪರಿಗೆ ಗೆಲ್ಲಿಸಿ ಅವರು ಮುಖ್ಯಮಂತ್ರಿಯೂ ಆದರು. ಮಗ ರಾಘವೇಂದ್ರ ಅವರು ಸಂಸದರೂ ಅಗಿದ್ದಾರೆ. ಇಷ್ಟು ವರ್ಷ ಅವರ ಕುಟುಂಬಕ್ಕೆ ಶಕ್ತಿ ನೀಡಿದ್ದೇವೆ. ರಾಜಕೀಯವಾಗಿ ಬೆಳೆದ ಮೇಲೆ ಅವರು ಕ್ಷೇತ್ರದ ಜನಕ್ಕೆ ಸಿಗುತ್ತಿಲ್ಲ. ಕೋಟೆ ದಾಟಿಕೊಂಡು ಅವರನ್ನು ತಲುಪುವುದು ಸಾಮಾನ್ಯ ಜನರಿಗೆ ಸಾಧ್ಯವಿಲ್ಲ. ವಿಜಯೇಂದ್ರ ಗೆದ್ದರೆ ಮತ್ತೇ ಅನಾಥ ಭಾವ ಜನರಿಗೆ ಆಗುತ್ತದೆ. ಜನರಿಗೆ ತಮ್ಮ ಕಷ್ಟ-ನಷ್ಟಗಳಿಗೆ ಸಾಂತ್ವನ ಹೇಳುವ ಅಭ್ಯರ್ಥಿ ಬೇಕಾಗಿದೆ. ನಾನು ಸರಳ ಹಾಗೂ ಪ್ರಾಮಾಣಿಕವಾಗಿ ಜನ ಸೇವೆ ಮಾಡಿಕೊಂಡು ಬಂದಿದ್ದೇನೆ. ಜನರ ನಡುವೆಯೇ ಇದ್ದು, ಜನರ ಸೇವೆ ಮಾಡುತ್ತೇನೆ ಈ ಕಾರಣದಿಂದ ನನ್ನನ್ನು ಗೆಲ್ಲಿಸಬೇಕೆಂದು ಜನರಲ್ಲಿ ಮನವಿ ಮಾಡುತ್ತಿದ್ದೇನೆ. ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ಹೇಳಿದರು.
ಹೊರಗಿನಿಂದ ಜನ ಬಂದಿದ್ದಾರೆ:
ಶಿಕಾರಿಪುರ ಜನರ ಚುನಾವಣೆಯಲ್ಲಿ ಇಲ್ಲಿಯವರೇ ಸಾರ್ವಭೌಮರು ಇಲ್ಲಿನ ಜನ ಚುನಾವಣೆ ಮಾಡಬೇಕು. ಆದರೆ ವಿಜಯೇಂದ್ರ ಪರ ಕೆಲಸ ಮಾಡಲು ಹೊರಗಿನಿಂದ ಸಾವಿರಾರು ಜನ ಬಂದಿದ್ದಾರೆ. ಆಯಕಟ್ಟಿನ ಜಾಗದಲ್ಲಿ ಕೊನೇ ಕ್ಷಣದಲ್ಲಿ ಜನರ ಮತದ ಮೇಲೆ ಎಲ್ಲಾ ರೀತಿಯ ಪರಿಣಾಮ ಬೀರಲು ಸಜ್ಜಾಗಿದ್ದಾರೆ. ಆದರೆ ಈ ಯಾವ ತಂತ್ರಗಳೂ ಸ್ವಾಭಿಮಾನಿ ಶಿಕಾರಿಪುರ ಜನತೆಯ ಮೇಲೆ ಪರಿಣಾಮ ಬೀರುವುದಿಲ್ಲ. ಸರ್ವ ಜಾತಿಯ ಜನರೂ ನನ್ನೊಂದಿಗೆ ಇದ್ದಾರೆ. ಹಳ್ಳಿಗಳಿಗೆ ಹೋದಾಗ ಮನೆ ಮಗನಂತೆ ಕರೆದು ಸ್ವಾಗತಿಸಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೊಂದಿಗೆ ಇದ್ದ ಅನೇಕ ಮುಖಂಡರು ಪದಾಧಿಕಾರಿಗಳು ನನ್ನೊಂದಿಗೆ ಇದ್ದಾರೆ. ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷದ ಮುಖಂಡರು ಅಂತರಂಗದಲ್ಲಿ ನನ್ನ ಮೇಲೆ ಪ್ರೀತಿ ಇಟ್ಟುಕೊಂಡಿದ್ದಾರೆ ಮಾತ್ರವಲ್ಲದೆ ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆ ತರಬೇಕೆಂದು ಬಯಸಿದ್ದಾರೆ. ಶಿಕಾರಿಪುರ ಕ್ಷೇತ್ರ ಕೃಷಿ ಪ್ರಧಾನ ಕ್ಷೇತ್ರದಲ್ಲಿ ಇಲ್ಲಿ ವ್ಯಾಪಾರಿ ಮನೋಭವಕ್ಕಿಂತ ನೆಲದ ಪ್ರೀತಿಯ ಭಾವನೆಗೆ ಬೆಲೆ ಇದೆ. ನಾನು ಗೆದ್ದರಿ ಶಿಕಾರಿಪುರ ಕ್ಷೇತ್ರದ ಜನರೊಂದಿಗಿದ್ದು, ಅವರ ಸೇವೆ ಮಾಡುವೆ ಎಂದು ನಾಗರಾಜ್ ಗೌಡ ಹೇಳಿದರು.
ಹೃದಯದಲ್ಲಿದ್ದೇನೆ:
ಜನರ ಮತಗಳು ಖರೀದಿಯಾಗುತ್ತವೆ ಎಂಬ ಭಾವನೆಯಿಂದ ನಾನು ಇಷ್ಟೇ ಸಾವಿರ ಮತಗಳ ಅಂತರದಿಂದ ಗೆಲ್ಲುವೆ ಎಂದು ನಾನು ಹೇಳಲಾರೆ. ಜನರ ಹೃದಯಲ್ಲಿದ್ದೇನೆ. ಅವರು ನನ್ನನ್ನು ಆಶೀರ್ವದಿಸುತ್ತಾರೆ ಎಂಬ ನಂಬಿಕೆಯಿದೆ ಎಂದು ಮತಗಳ ಅಂತರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಜನ ನನ್ನ ಮೇಲೆ ಪ್ರೀತಿಯಿಟ್ಟಿದ್ದಾರೆ. ಅವರ ಬೆನ್ನಿಗೆ ನಾನು ಯಾವತ್ತೂ ನಿಲ್ಲುತ್ತೇನೆ ಎಂದು ಹೇಳಿದರು.