ಶಿವಮೊಗ್ಗ, ಮೇ : ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಪ್ರತಿ ಹಳ್ಳಿಯನ್ನೂ ತಲುಪಿದ್ದೇನೆ. ಎಲ್ಲಾ ಕಡೆ ಪ್ರೀತಿಯಿಂದ ನನ್ನನ್ನು ಬರಮಾಡಿಕೊಂಡು ಈ ಬಾರಿ ನಿಮ್ಮನ್ನು ಗೆಲ್ಲಿಸುತ್ತೇವೆ ಎಂಬ ಭರವಸೆ ನೀಡಿದ್ದಾರೆ ಎಂದು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕಿ ಶಾರದಾಪೂರ್ಯನಾಯ್ಕ್ ಅವರು ಹೇಳಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಶಾಸಕರಾಗಿದ್ದ ಅವಧಿಯಲ್ಲಿ ನಾನು ಮಾಡಿದ ಕೆಲಸ, ವಿವಾದ ರಹಿತವಾಗಿ ನಡೆಸಿದ ಆಡಳಿತವೇ ನನಗೆ ಶ್ರೀರಕ್ಷೆಯಾಗಿದೆ. ಪಕ್ಷದ ಪಂಚರತ್ನ ಯೋಜನೆಗಳು ಹೆಚ್.ಡಿ.ಕುಮಾರಸ್ವಾಮಿ ಅವರ ಜನರ ಆಡಳಿತ ನನ್ನ ನೆರವಿಗೆ ಬರಲಿವೆ. ಪ್ರಚಾರ ಸಂದರ್ಭದಲ್ಲಿ ಬಿಜೆಪಿ ಶಾಸಕರು ಹಾಗೂ ಅವರ ಸರಕಾರದ ಆಡಳಿತ ವಿರೋಧಿ ಧೋರಣೆಯಿಂದ ಕ್ಷೇತ್ರದ ಜನ ಬೇಸತ್ತಿದ್ದಾರೆ. ಬಗರ್‌ಹುಕುಂ ಸಮಸ್ಯೆ ಹಾಗೆಯೇ ಇದೆ. ಶರಾವತಿ ಸಂತ್ರಸ್ತರ ಸಮಸ್ಯೆ ಮತ್ತಷ್ಟು ಕಗ್ಗಂಟಾಗಿದ್ದು, ರೈತರು ಆತಂಕಗೊಂಡಿದ್ದಾರೆ. ಕ್ಷೇತ್ರದಲ್ಲಿನ ಏತನೀರಾವರಿ ಯೋಜನೆಗಳು, ಮೂಲಭೂತ ಸೌಕರ್ಯಗಳು, ಕುಡಿಯವ ನೀರಿನ ಯೋಜನೆಗಳು ಆಗಬೇಕಿದೆ ಎಂದರು.
ಎಲ್ಲ ಸಮುದಾಯದ ಬಲ:
ಕ್ಷೇತ್ರದಲ್ಲಿ ಎಲ್ಲ ಸಮುದಾಯದ ಬೆಂಬಲ ನನಗಿದೆ. ಬಹುಸಂಖ್ಯಾತ ಲಿಂಗಾಯತ ಸಮುದಾಯವರು ಈ ಬಾರಿ ಸಂಪೂರ್ಣ ಬೆಂಬಲ ನೀಡಿದ್ದಾರೆ. ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವ ಕಾರಣಕ್ಕೆ ಸ್ವಲ್ಪ ವ್ಯತ್ಯಾಸವಾಗಿತ್ತು. ಯಡಿಯೂರಪ್ಪ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅದೇ ಗೌರವವಿಟ್ಟುಕೊಂಡು ಆ ಸಮುದಾಯ ನನ್ನನ್ನು ಬೆಂಬಲಿಸಲಿದೆ. ಕ್ಷೇತ್ರದಲ್ಲಿರುವ ಈಡಿಗರು ಯಾವತ್ತೂ ನನಗೆ ಬೆಂಬಲ ನೀಡಿದ್ದಾರೆ. ಶರಾವತಿ ಸಂತ್ರಸ್ತರ ಸಮಸ್ಯೆ ಇತ್ಯರ್ಥಕ್ಕೆ ಮೊದಲ ಆದ್ಯತೆ ಕೊಡುವೆ ಎಂದು ಹೇಳಿದರು.
ಇಡೀ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿ, ಶಾಸಕಿಯಾಗಿ ಜನರ ಒಡನಾಟವಿದೆ. ಈ ಬಾರಿ ಜನರು ಗೆಲ್ಲಿಸುವ ವಿಶ್ವಾಸವಿದೆ. ಜನರ ನಿರೀಕ್ಷೆಯಂತೆ ಕೆಲಸ ಮಾಡಿ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡುವೆ. ಶಿವಮೊಗ್ಗ ಗ್ರಾಮಾಂತರ ತಾಲೂಕು ಮಾಡುವ ಬಗ್ಗೆ ಮುಂದಿನ ದಿನಗಳಲ್ಲಿ ನನ್ನ ಕ್ಷೇತ್ರದ ಎಲ್ಲರೊಂದಿಗೆ ಕುಳಿತು ಚರ್ಚೆ ಮಾಡುವೆ ಎಂದರು.
ಆಮಿಷಗಳಿಗೆ ಬಲಿಯಾಗಬೇಡಿ:
ಪ್ರತಿಸ್ಪರ್ಧಿ ಆಭ್ಯರ್ಥಿಗಳು ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ. ಕೋಳಿ ,ಹಣ ಹಂಚುವ ದೂರುಗಳೂ ನಮ್ಮ ಕಾರ್ಯಕರ್ತರ ಕಡೆಯಿಂದ ಬಂದಿವೆ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಮತದಾರರು ಯಾವುದೇ ಆಮಿಷಗಳಿಗೆ ಬಲಿಯಾಗಬಾರದು. ಭ್ರಷ್ಟಾಚಾರದ ಹಣಕ್ಕೆ ಮರುಳಾಗಬೇಡಿ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ನಮ್ಮನ್ನು ಬೆಂಬಲಿಸಿ ಎಂದು ಶಾರದಾಪೂರ್ಯಾನಾಯ್ಕ ಮನವಿ ಮಾಡಿದರು.ಪಕ್ಷದ ಪ್ರಮುಖರಾದ ದಾದಾಪೀರ್, ಕಾಂತರಾಜ್, ಸತೀಶ್, ಓಂಕಾರಪ್ಪ ಮತ್ತಿತರರು ಹಾಜರಿದ್ದರು.
previous post