ನವದೆಹಲಿ: ಕರ್ನಾಟಕ ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕಗ್ಗಂಟು ಬಗೆಹರಿದಿದ್ದು ಸಿದ್ದರಾಮಯ್ಯ ಅವರನ್ನೇ ಮೊದಲ ಅವಧಿಗೆ ಮುಖ್ಯಮಂತ್ರಿ ಮಾಡಲು ಹೈಕಮಾಂಡ್ ನಿರ್ಧಾರ ಮಾಡಿದೆ ಎನ್ನಲಾಗಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಿಕೊಂಡು ದೆಹಲಿ ತಲುಪಿದ ವೀಕ್ಷಕರು ಶಾಸಕರ ಮನದಿಂಗಿತವನ್ನು ಹೈಕಮಾಂಡ್‌ಗೆ ತಲುಪಿಸಿದ್ದಾರೆ. ಈ ನಡುವೆ ಕಾಂಗ್ರೆಸ್ ಹೈಕಮಾಂಡ್ ಕೋರ್ ಕಮಿಟಿಯಲ್ಲಿಯೂ ಭಿನ್ನ ಅಭಿಪ್ರಾಯ ಬಂದಿದ್ದ ಹಿನ್ನೆಲೆಯಲ್ಲಿ ಅಂತಿಮ ನಿರ್ಣಯಕ್ಕೆ ಬರುವುದು ಕಷ್ಟವಾಗಿತ್ತು ಎನ್ನಲಾಗಿದೆ. ಸರಣಿ ಸಭೆಗಳ ಬಳಿಕ ಒಮ್ಮತಕ್ಕೆ ಬಂದಿರುವ ಕಾಂಗ್ರೆಸ್ ನಾಯಕರು ಅಂತಿಮವಾಗಿ ಸಿದ್ದರಾಮಯ್ಯ ಹೆಸರು ಅಂತಿಮಗೊಳಿಸಿದ್ದಾರೆಂದು ಹೇಳಲಾಗಿದೆ.
ಡಿಕೆಶಿ ಪ್ರವಾಸ ರದ್ದು:
ಹೈಕಮಾಂಡ್ ನಾಯಕರು ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರನ್ನು ಹೊಸದಿಲ್ಲಿಗೆ ಆಹ್ವಾನಿಸಿದ್ದರು. ಸಿದ್ದರಾಮಯ್ಯ ಅವರು ಮಧ್ಯಾಹ್ನವೇ ದಿಲ್ಲಿಗೆ ಹೋಗಿದ್ದರು. ಕೆಪಿಸಿಸಿ ಅಧ್ಯಕ್ಷರಾದ ಶಿವಕುಮಾರ್ ಅವರು ಹುಟ್ಟು ಹಬ್ಬದ ಪ್ರಯುಕ್ತ ಖಾಸಗಿ ಕಾರ್ಯಕ್ರಮವಿದ್ದು, ದೆಹಲಿಗೆ ಹೋಗುವುದು ವಿಳಂಬವಾಗಲಿದೆ ಎಂದು ಹೇಳಿದ್ದರು. ಆದರೆ ಸಂಜೆ ಹೊತ್ತಿಗೆ ಡಿಕೆಶಿ ಅವರ ದಿಲ್ಲಿ ಪ್ರವಾಸವೂ ರದ್ದಾಯಿತು.
ಶಾಸಕರ ಒಲವು ಸಿದ್ದರಾಮಯ್ಯಗೆ:
ಸಿಎಲ್‌ಪಿ ಸಭೆಯಲ್ಲಿ ಬಹುತೇಕ ಶಾಸಕ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಲಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಈ ಸುಳಿವು ಅರಿತ ಡಿ.ಕೆ.ಶಿವಕುಮಾರ್ ಅವರು ನಾನು ಪಕ್ಷದ ಅಧ್ಯಕ್ಷ ನನಗೆ ೧೩೫ ಶಾಸಕರ ಬೆಂಬಲವಿದೆ ಎಂದು ಹೇಳುವ ಮೂಲಕ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ನನಗೆ ತಾಳ್ಮೆಯಿದೆ ಧರ್ಮರಾಯನ ಸಹನೆ, ಅರ್ಜುನನ ಚಾಣಾಕ್ಷತೆ , ಶ್ರೀಕೃಷ್ಣನ ತಂತ್ರ, ವಿಧುರನ ನೀತಿ, ಭೀಮನ ಬಲ ಎಲ್ಲವೂ ಬೇಕು. ಆ ಎಲ್ಲ ಇರುವ ನಾನು ಕಾಯುವೆ ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ.
ರಾಹುಲ್ ಗಾಂಧಿ ಬೆಂಬಲ
ದೆಹಲಿಗೆ ಭೇಟಿ ನೀಡಿರುವ ಸಿದ್ದರಾಮಯ್ಯ ಅವರೊಂದಿಗೆ ದಿಲ್ಲಿಯಲ್ಲಿ ಹಲವು ಸುತ್ತಿನ ಸಭೆಯನ್ನು ನಡೆಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣಜಿತ್ ಸಿಂಗ್ ಸುರ್ಜೇವಾಲಾ ಅವರು ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಸಿಎಲ್‌ಪಿ ಸಭೆಗೆ ಬಂದಿದ್ದ ವೀಕ್ಷಕರು ಶಾಸಕರ ಅಭಿಪ್ರಾಯವನ್ನು ಸಭೆಗೆ ಮಂಡಿಸಿದ್ದಾರೆ. ಈ ಎಲ್ಲಾ ಮಾಹಿತಿಯನ್ನು ಪಡೆದ ರಾಹುಲ್‌ಗಾಂಧಿ ಅವರು ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿಯಾಗಿ ನೇಮಕ ಮಾಡಲು ಹಸಿರುನಿಶಾನೆ ತೋರಿಸಿದ್ದಾರೆ ಎನ್ನಲಾಗಿದೆ.
ಸೋನಿಯಾಗಾಂಧಿ ಅವರು ಮಂಗಳವಾರ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ. ಈ ಸಭೆಗೆ ಡಿ.ಕೆ.ಶಿವಕುಮಾರ್ ಅವರನ್ನೂ ಕರೆಸಿಕೊಳ್ಳುವ ಸಾಧ್ಯತೆಯಿದ್ದು, ಅದೇ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆ ಇದೆ.
ಮೇ ೧೭ ಅಥವಾ ೧೮ ಕ್ಕೆ ಪ್ರಮಾಣ
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಮೇ ೧೭ ಅಥವಾ ೧೮ ರಂದು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಈ ನಡುವೆ ದಿಲ್ಲಿ ಕರ್ನಾಟಕ ಭವನದಲ್ಲಿ ಉಳಿದುಕೊಂಡಿರುವ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಲು ದೇಶದ ವಿವಿಧ ರಾಜ್ಯಗಳ ಕಾಂಗ್ರೆಸ್ ನಾಯಕರು ದಿಲ್ಲಿಗೆ ಆಗಮಿಸಿದ್ದಾರೆ ಎಂದು ಮಾಧ್ಯಮಗಳು ವರದಿಮಾಡಿವೆ.
ಶಾಸಕರ ಸಾಥ್:
ದಿಲ್ಲಿಯಲ್ಲಿರುವ ಸಿದ್ದರಾಮಯ್ಯ ಅವರೊಂದಿಗೆ ಎಂ.ಬಿ.ಪಾಟೀಲ್, ಜಮೀರ್ ಅಹಮದ್, ಕೆ.ಜೆ.ಜಾರ್ಜ್ ಸೇರಿದಂತೆ ಹಲವು ಶಾಸಕರು ದಿಲ್ಲಿಯಲ್ಲಿ ತಂಗಿದ್ದಾರೆ. ಸಿಎಂ ಆಯ್ಕೆ ಸಂಬಂಧ ಗೊಂದಲಗಳಿದ್ದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಆಪ್ತ ಶಾಸಕರೊಂದಿಗೆ ಸಭೆ ನಡೆಸಿದ್ದರು.
ಮಂಗಳವಾರ ಸೋನಿಯಾ ಭೇಟಿ
ಬಿಡುವಿಲ್ಲದ ಚುನಾವಣೆ, ಸಭೆಯ ನಡುವೆ ಸೋಮವಾರ ಸಂಜೆ ಡಿಕೆ ಶಿವಕುಮಾರ್ ಅವರ ರಕ್ತದೊತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿ ಆರೋಗ್ಯ ತಪಾಸಣೆ ನಡೆಸಲಾಯಿತು. ನಾಲ್ಕು ತಾಸು ವಿಶ್ರಾಂತಿ ಬಳಿಕ ಹೇಳಿಕೆ ನೀಡಿರುವ ಡಿ.ಕೆ.ಶಿವಕುಮಾರ್ ಮಂಗಳವಾರ ದಿಲ್ಲಿಗೆ ಭೇಟಿ ನೀಡಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ.