ಸೊರಬ,: ಮನುಷ್ಯ ಕುಲಕ್ಕೆ ಮಾರಕವಾಗಿರುವ ಎಚ್‌ಐವಿ, ಏಡ್ಸ್‌ನಿಂದ ಸುರಕ್ಷಿತವಾಗಿರುವ ನಿಟ್ಟಿನಲ್ಲಿ ಯುವ ಸಮುದಾಯ ಎಚ್ಚರಿಕೆ ವಹಿಸಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ.ಪ್ರಭು ಸಾಹುಕಾರ್ ಹೇಳಿದರು.
ಪಟ್ಟಣದ ಸರಕಾರಿ ಪದವಿ ಕಾಲೇಜಿನಲ್ಲಿ ರೆಡ್ ರಿಬ್ಬನ್, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ರಕ್ತದಾನ, ಎಚ್‌ಐವಿ, ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಾಣಿ ವರ್ಗದಲ್ಲಿ ಕಂಡು ಬಂದ ಎಚ್‌ಐವಿ ಸೋಂಕು ಕಾಲ ಕ್ರಮೇಣ ಮನುಷ್ಯರಲ್ಲಿ ಇರುವುದನ್ನು ಪತ್ತೆ ಹಚ್ಚಲಾಯಿತು. ೧೯೮೧ರಲ್ಲಿ ಎಚ್‌ಐವಿ ಸೋಂಕು ಮೊದಲ ಬಾರಿಗೆ ಅಮೆರಿಕಾದಲ್ಲಿ ಕಂಡು ಬಂದಿತು. ಭಾರತದಲ್ಲಿ ೧೯೮೬ರಲ್ಲಿ ಚೆನ್ನೈನಲ್ಲಿ ಕಂಡು ಬಂದಿತು ಎಂದು ಮಾಹಿತಿ ನೀಡಿದರು.
ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಎಚ್‌ಐವಿ ಸೋಂಕು ಹರಡುತ್ತಿದೆ. ಸೋಂಕಿತವುಳ್ಳ ವ್ಯಕ್ತಿಯ ರಕ್ತವನ್ನು ಮತ್ತೊಬ್ಬರಿಗೆ ವರ್ಗಾವಣೆ ಮಾಡುವುದರಿಂದ ಹಾಗೂ ಎಚ್‌ಐವಿ ಸೋಂಕುವುಳ್ಳ ತಾಯಿ ಮಗುವಿಗೆ ಜನ್ಮ ನೀಡುವುದರಿಂದಲೂ ಮಗುವಿಗೆ ಎಚ್‌ಐವಿ ಸೋಂಕು ಹರಡುವ ಸಾಧ್ಯತೆ ಅಧಿಕವಾಗಿರುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಕಾಲೇಜು ದಿನಗಳಲ್ಲಿ ಕೆಟ್ಟ ಹವ್ಯಾಸಗಳಿಗೆ ಬಲಿಯಾಗದೆ ಅಧ್ಯಾಪಕರ ಮಾರ್ಗದರ್ಶನದಲ್ಲಿ ಉತ್ತಮ ಜೀವನ ಭವಿಷ್ಯ ರೂಪಿಸಿಕೊಳ್ಳುವತ್ತ ಚಿತ್ತ ಹರಿಸಬೇಕು. ಇದರಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಹೇಮಲತಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೇಹಾ ಪ್ರಾರ್ಥಿಸಿ, ಲಕ್ಷ್ಮೀಶ ಸ್ವಾಗತಿಸಿ, ವಿರೇಶ್ ವಂದಿಸಿದರು. ಮೇಘರಾಜ ಚನ್ನಾಪುರ, ಆರೋಗ್ಯ ಆಪ್ತ ಸಮಾಲೋಚಕ ಆರ್.ವಿ.ಬಸವರಾಜ, ಎನ್‌ಎಸ್‌ಎಸ್ ಶಿಬಿರಾಧಿಕಾರಿಗಳಾದ ಶಂಕರ್ ನಾಯ್ಕ್, ಮೋಹನಕುಮಾರ್, ಉಪನ್ಯಾಸಕರಾದ ರಾಜಶೇಖರಗೌಡ, ಟಿ.ರಾಘವೇಂದ್ರ, ರವಿ ಕಲ್ಲಂಬಿ, ಸಂತೋಷ್, ನೇತ್ರಾವತಿ, ಪವಿತ್ರಾ, ಮಹೇಶ್ವರಿ ಹಾಗೂ ವಿದ್ಯಾರ್ಥಿಗಳಿದ್ದರು
next post