Malenadu Mitra
ರಾಜ್ಯ ಶಿಕಾರಿಪುರ ಶಿವಮೊಗ್ಗ ಸಾಗರ ಸೊರಬ

ಸಾಕಾರಗೊಂಡ ಲೋಕಸಭಾ ಕ್ಷೇತ್ರದ ಜನತೆಯ ರೈಲ್ವೆ ಕನಸುಗಳು
ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ ಸಂಸದ ಬಿ.ವೈ.ರಾಘವೇಂದ್ರ

ಶಿವಮೊಗ್ಗ: ಕೇಂದ್ರ ಸರ್ಕಾರವು 2023-24 ರ ಬಜೆಟ್ ನಲ್ಲಿ ಘೋಷಿಸಿದ ’ಅಮೃತ್ ಭಾರತ್ ಯೋಜನೆ” ಯಡಿ, ರೂ. 22.5 ಕೋಟಿಗಳ ವೆಚ್ಚದಲ್ಲಿ ತಾಳಗುಪ್ಪ ರೈಲ್ವೆ ನಿಲ್ದಾಣ  ಮತ್ತು ರೂ. 19.28 ಕೋಟಿಗಳ ವೆಚ್ಚದಲ್ಲಿ ಶಿವಮೊಗ್ಗ ನಗರದ ರೈಲ್ವೆ ನಿಲ್ದಾಣ ಹಾಗೂ ರೂ. ೨೧.೧೦ ಕೋಟಿಗಳ ವೆಚ್ಚದಲ್ಲಿ ಸಾಗರ ರೈಲ್ವೆ ನಿಲ್ದಾಣ ಹಾಗೂ ರೂ. ೩೩.೦೦ ಕೋಟಿಗಳ ವೆಚ್ಚದಲ್ಲಿ ಶಿವಮೊಗ್ಗ ಗೂಡ್ಸ್ ಯಾರ್ಡನ್ನು ಅಭಿವೃದ್ಧಿಪಡಿಸುವ ಸಲುವಾಗಿ ಕೇಂದ್ರ ರೈಲ್ವೆ ಇಲಾಖೆಯು ಅನುದಾನ ಒದಗಿಸಿದೆ.
ಸಂಸದ ಬಿ.ವೈ.ರಾಘವೇಂದ್ರ ಅವರು ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆಯ ಮಹಾಪ್ರಬಂಧಕರಾದ ಸಂಜೀವ್ ಮತ್ತು ಹಿರಿಯ ರೈಲ್ವೆ ಅಧಿಕಾರಿಗಳೊಂದಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ರೈಲ್ವೆ ಯೋಜನೆಗಳ ಕುರಿತು  ಪ್ರಗತಿ ಪರಿಶೀಲನೆ ಸಭೆ ನಡೆಸಿದರು.

ತಾಳಗುಪ್ಪ, ಶಿವಮೊಗ್ಗ ನಗರ, ಸಾಗರ ರೈಲ್ವೆ ನಿಲ್ದಾಣಗಳನ್ನು ಆಧುನೀಕರಣಗೊಳಿಸಲು ಕ್ರಮ ಕೈಗೊಳ್ಳಲು ಮಾನ್ಯ ಸಂಸದರು ರೈಲ್ವೆ ಇಲಾಖೆಯನ್ನು ಒತ್ತಾಯಿಸಿದ್ದರು.ಇದರ ಫಲವಾಗಿ ಕೇಂದ್ರ ರೈಲ್ವೆ ಇಲಾಖೆಯು ಅನುದಾನ ಒದಗಿಸಿದೆ.
ಪ್ರಯಾಣಿಕ ಸ್ನೇಹಿ ಸವಲತ್ತುಗಳಾದ ಗ್ರಾನೇಟ್ ನೆಲಹಾಸಿನ ಪ್ಲಾಟ್ ಫಾರಂ, ಡಿಜಿಟಲ್ ಸಿಗ್ನಲ್ಸ್, ಪ್ಲಾಟ್ ಫಾರಂ ಶೆಲ್ಪರ್, ಪಾಕಿರ್ಂಗ್ ಜಾಗದಲ್ಲಿ ಶೆಡ್ ನಿರ್ಮಾಣ, ಕಾಂಪೌಂಡ್ ವಾಲ್ ನಿರ್ಮಾಣ, ಸರ್ಕುಲೇಟಿಂಗ್ ಏರಿಯಾ ಅಭಿವೃದ್ಧಿ, ಸ್ಪೇಷನ್ ನಿಲ್ದಾಣದ ಸೌಂದರೀಕರಣ, ನಿಲ್ದಾಣದ ಮುಂಭಾಗದ ಉದ್ಯಾವನ, ಫೂಟ್ ಓವರ್ ಬ್ರಿಡ್, ಆಧುನಿಕ ಶೌಚಾಲಯಗಳು, ಉತ್ತಮ ಗುಣಮಟ್ಟದ ವಿದ್ಯುತ್ ಬೆಳಕಿನ ವ್ಯವಸ್ಥೆ, ಸಿ.ಸಿ.ಟಿ.ವಿ. ರೈಲ್ವೆ ಉದ್ಘೋಷಣಾ ವ್ಯವಸ್ಥೆ ಇಂತಹ ಹಲವಾರು ಸವಲತ್ತುಗಳನ್ನು ಒದಗಿಸುವ ಯೋಜನೆಯು ಮಂಜೂರಾತಿ ಗೊಂಡಿದೆ. ಹಾಗೆಯೇ ಶಿವಮೊಗ್ಗ ಗೂಡ್ಸ್ ಯಾರ್ಡನಲ್ಲಿ ಅಗತ್ಯ ಮೂಲ ಸೌಕರ್ಯವನ್ನು ಹೆಚ್ಚಿಸುವ ಮೂಲಕ ಶಿವಮೊಗ್ಗ ಜಿಲ್ಲೆಗೆ ಅಗತ್ಯವಿರುವ ರಸಗೊಬ್ಬರ, ಪಡಿತರ ಧಾನ್ಯ, ಸಿಮೆಂಟ್, ಕಬ್ಬಿಣ ಮತ್ತಿತರ ಅಗತ್ಯ ವಸ್ತುಗಳನ್ನು ಶೀಘ್ರವಾಗಿ ಲಭ್ಯವಾಗುವಂತೆ ಮಾಡಲು ಕ್ರಮಕೈಗೊಳ್ಳುವುದಾಗಿ ಸಭೆಯಲ್ಲಿ ರೈಲ್ವೆ ಉನ್ನತಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

2019-20ರ ಕೇಂದ್ರ ಮುಂಗಡ ಪತ್ರದಲ್ಲಿ ಮಲೆನಾಡಿನಿಂದ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಸಂಪರ್ಕ ಸೇತುವೆಯಾಗುವ ರೂ.೧,೨೦೦ .ಕೋಟಿಗಳ ಅಂದಾಜು ವೆಚ್ಚದಲ್ಲಿ ಮಂಜೂರಾಗಿರುವ ಶಿವಮೊಗ್ಗ- ಶಿಕಾರಿಪುರ -ರಾಣೆಬೆನ್ನೂರು ನೂತನ ರೈಲ್ವೆ ಮಾರ್ಗ ಯೋಜನೆಯ ಮೊದಲನೇ ಹಂತವಾದ ಶಿವಮೊಗ್ಗ-ಶಿಕಾರಿಪುರ (೪೬ ಕಿ.ಮೀ) ನಡುವಿನ ಕಾಮಗಾರಿಗೆ ಅಗತ್ಯವಿರುವ ಸಂಪೂರ್ಣ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿಯನ್ನು ನಿರ್ವಹಿಸಲು ಗುತ್ತಿಗೆದಾರರನ್ನು ಸಹ ನಿಗದಿಪಡಿಸಲಾಗಿದೆ.ಫೆ.27 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯರವರ ಅಮೃತ ಹಸ್ತದಿಂದ ಶಿಲಾನ್ಯಾಸಗೊಂಡಿರುವ ಈ ಯೋಜನೆಯ ಕಾಮಗಾರಿಯ ಪೂರ್ವಭಾವಿ ಸಿದ್ಧತೆಗಳು ಆರಂಭಗೊಂಡಿದ್ದು, ಮುಂದಿನ ವಾರದಿಂದ ಕಾಮಗಾರಿಯನ್ನು ಪ್ರಾರಂಭಿಸಿ ೨೦೨೫ರ ಡಿಸೆಂಬರ್ ವೇಳೆಗೆ ಶಿವಮೊಗ್ಗ-ಶಿಕಾರಿಪುರ ನಡುವಿನ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರಾವತಿಯ ಕಡದಕಟ್ಟೆ ಹತ್ತಿರ ರೈಲ್ವೆ ಎಲ್‌ಸಿ ೩೩, ಶಿವಮೊಗ್ಗ ನಗರದ ಸವಳಂಗ ರಸ್ತೆಯ ಎಲ್‌ಸಿ 49 ಹಾಗೂ ಕಾಶಿಪುರ ಗೇಟ್ ಬಳಿಯ ಎಲ್‌ಸಿ 52 ರ ಬದಲಿಗೆ ನಿರ್ಮಿಸಲಾಗುತ್ತಿರುವ ಆರ್‌ಒಬಿ/ಯುಆರ್‌ಬಿ ಗಳ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಅವಳಿ ನಗರಗಳ ವಾಹನಗಳ ದಟ್ಟಣೆಯ ಸಮಸ್ಯೆಗೆ ಈ ಯೋಜನೆಗಳನ್ನು ಅತ್ಯಂತ ತ್ವರಿತವಾಗಿ ಪೂರ್ಣಗೊಳಿಸುವ ಅಗತ್ಯತೆ ಇದೆ.ಇವುಗಳನ್ನು ಕ್ರಮವಾಗಿ ಡಿಸೆಂಬರ್ 2023 ಅಕ್ಟೋಬರ್ 2023 ಹಾಗೂ ಜೂನ್ 2023ರ ಒಳಗೆ ಪೂರ್ಣಗೊಳಿಸುವುದಾಗಿ ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಮೊದಲ ಕೋಚಿಂಗ್ ಡಿಪೋ ಆದಂತಹ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಅನ್ನು 2020-21 ರ ಮುಂಗಡ ಪತ್ರದಲ್ಲಿ ಸುಮಾರು ೧೦೦.೦೦ ಕೋಟಿಗಳ ಅಂದಾಜು ವೆಚ್ಚದಲ್ಲಿ ಮಂಜೂರು ಮಾಡಲಾಗಿದ್ದು, ರಾಜ್ಯ ಸರ್ಕಾರವು ಈ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಈಗಾಗಲೇ ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ೩ ಪ್ಲ್ಯಾಟ್‌ಫಾರಂಗಳನ್ನೊಳಗೊಂಡ ಕೋಟೆಗಂಗೂರಿನ ನೂತನ ರೈಲ್ವೆ ನಿಲ್ದಾಣ, ೨ ಪಿಟ್‌ಲೈನ್, ೩ ಸಿಕ್‌ಲೈನ್, ೩ ಸ್ಟೇಬಲಿಂಗ್ ಲೈನ್‌ಗಳನ್ನೊಳಗೊಂಡಿದೆ. ಈ ಯೋಜನೆಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. 2024 ರ ಮೇ ಅಥವಾ ಜೂನ್ ಗೂ ಮೊದಲು ಈ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಭವಿಷ್ಯದಲ್ಲಿ ವಂದೇ ಭಾರತ್ ರೈಲುಗಾಡಿಯನ್ನು ಸಹ ಇಲ್ಲಿ ನಿರ್ವಹಣೆ ಮಾಡಲು    ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವಂತೆ ಸಂಸದರು ಸಭೆಯಲ್ಲಿ ಪ್ರಸ್ತಾಪಿಸಿದರು.ಇದಕ್ಕೆ ಜನರಲ್ ಮ್ಯಾನೇಜರ್ ರವರು ಪೂರಕವಾಗಿ ಸ್ಪಂದಿಸಿ ನೂತನ ಯೋಜನಾ ವರದಿಯನ್ನು ಸಿದ್ದಪಡಿಸಿ ರೈಲ್ವೆ ಮಂಡಳಿಯಿಂದ ಮಂಜೂರಾತಿ ಪಡೆಯಲು ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ.
 ತಾಳಗುಪ್ಪ – ತಡಸ – ಹೊನ್ನಾವರ – ಶಿರಸಿ – ಹುಬ್ಬಳ್ಳಿ ನೂತನ ರೈಲ್ವೆ ಮಾರ್ಗ ಯೋಜನೆಯ ಸರ್ವೆ ಕಾಮಗಾರಿಯು ಪೂರ್ಣಗೊಂಡಿದ್ದು, ನೈರುತ್ಯ ರೈಲ್ವೆಯು ಸರ್ವೆ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಿದೆ. ಸಂಸದ ಬಿ.ವೈ ರಾಘವೇಂದ್ರ ಅವರು ಈ ಯೋಜನೆ ಮಂಜೂರು ಮಾಡಲು ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್‌ರವರನ್ನು ಈಗಾಗಲೇ ಮನವಿ ಸಲ್ಲಿಸಿದ್ದು,ನೈರುತ್ಯ ರೈಲ್ವೆಯಿಂದಲು ಸಹ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲು ತಿಳಿಸಲಾಯಿತು.


ಅರಸಾಳು ಮತ್ತು ಹಾರನಹಳ್ಳಿಯಲ್ಲಿ ಮೈಸೂರು-ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಯನ್ನು ಮಾಡಲು ಸಂಸದರು ಒತ್ತಾಯಿಸಿದರು. ಈ ಕುರಿತಂತೆ ಅಗತ್ಯ ಕ್ರಮಕೈಗೊಳ್ಳುವುದಾಗಿ ನೈರುತ್ಯ ರೈಲ್ವೆಯವರು ತಿಳಿಸಿರುತ್ತಾರೆ.
 ಬೆಂಗಳೂರು ಹಾಗು ಶಿವಮೊಗ್ಗ ನಗರಗಳ ನಡುವೆ ವಂದೇ ಭಾರತ ರೈಲು ಸೇವೆಯನ್ನು ಆರಂಭಿಸಲು ಕ್ರಮಕೈಗೊಳ್ಳಬೇಕೆಂದು ಸಂಸದ ಬಿ.ವೈ ರಾಘವೇಂದ್ರ ಅವರು ಒತ್ತಾಯಿಸಿದರು. ಈ ಕುರಿತಂತೆ ರೈಲ್ವೆ ಮಂಡಳಿಯ ಅನುಮೋದನೆ ಪಡೆಯಲು ಕ್ರಮ ಕೈಗೊಳ್ಳುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.


ಶಿವಮೊಗ್ಗ – ಬೆಂಗಳೂರು ಹಾಗೂ ಮೈಸೂರು ನಡುವೆ ಸಂಚರಿಸುತ್ತಿರುವ ರೈಲುಗಳ ವೇಳಾಪಟ್ಟಿಯಲ್ಲಿ ಕೆಲ ಸಣ್ಣ ಪುಟ್ಟ ಬದಲಾವಣೆಯನ್ನು ಅಳವಡಿಸಿಕೊಳ್ಳುವ ಮೂಲಕ ಈ ರೈಲುಗಳ ಸೇವೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸುವಂತೆ ಮಾಡುವಂತೆ ಸಂಸದರು ಮನವಿ ಮಾಡಿದರು. ನೈರುತ್ಯ ರೈಲ್ವೆಯು ಈ ಪ್ರಸ್ತಾವನೆಯನ್ನು ಪರಿಶೀಲಿಸಿ ಸಾಧ್ಯವಿರುವಲ್ಲಿ ಶಿಫಾರಸು ಮಾಡುವಂತೆ ಸೂಕ್ತ ಬದಲಾವಣೆಗಳನ್ನು ಮಾಡುವ ನಿಟ್ಟಿನಲ್ಲಿ ರೈಲ್ವೆ ಉನ್ನತ ಅಧಿಕಾರಿಗಳಿಗೆ ಸಂಸದ ಬಿವೈ ರಾಘವೇಂದ್ರ ಸೂಚನೆ ನೀಡಿದರು.

ಸುಮಾರು ರೂ. 100 ಕೋಟಿಗಳ ಅನುದಾನವನ್ನು ಈ ನಾಲ್ಕು ರೈಲ್ವೆ ನಿಲ್ದಾಣ ಮತ್ತು ಯಾರ್ಡ್ ಗಳ ಅಭಿವೃದ್ಧಿಗಾಗಿ ಒದಗಿಸಿರುವ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್, ಕೇಂದ್ರ ಹಣಕಾಸು ಸಚಿವರಾದ ನಿರ್ಮಲ ಸೀತಾರಾಮನ್ ಹಾಗೂ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರಿಗೆ ವೈಯಕ್ತಿಕವಾಗಿ ಹಾಗೂ ಕ್ಷೇತ್ರದ ಜನತೆಯ ಪರವಾಗಿ ಧನ್ಯವಾದಗಳು.


ಬಿ.ವೈ ರಾಘವೇಂದ್ರ,ಸಂಸದರು

Ad Widget

Related posts

ಈಡಿಗ ಮಹಿಳಾ ಸಂಘದಿಂದ ಸಿಗಂದೂರಲ್ಲಿ ಶ್ರಮದಾನ

Malenadu Mirror Desk

ನಿಶ್ಚಿತಾರ್ಥವಾಗಿದ್ದ ಪ್ರಾಧ್ಯಾಪಕಿ ನೇಣಿಗೆ ಶರಣು

Malenadu Mirror Desk

ಬಲಿಷ್ಠ ಸಂವಿಧಾನದಿಂದ ಬಲಿಷ್ಠ ದೇಶ ನಿರ್ಮಾಣ: ಪ್ರೊ. ವೀರಭದ್ರಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.