ಶಿರಸಿ: ಸಮಾಜದಲ್ಲಿ ಬೆಳೆಯುತ್ತಿರುವ ವಿಕೃತತೆ ತೊಡೆದುಹಾಕಲು ಸಾಮಾಜಿಕರಣ ಅಗತ್ಯವಿದೆ ಎಂದು ಶಿರಸಿ ಡಿಡಿಪಿಐ ಬಸವರಾಜಪ್ಪ ಪ್ರತಿಪಾದಿಸಿದರು.
ಹೆಗಡೆಕಟ್ಟಾ ಗ್ರಾಮದಲ್ಲಿ ಶಿರಸಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳನ್ನು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿ ಸಮಾಜಮುಖಿ ವ್ಯಕ್ತಿಗಳನ್ನಾಗಿ ರೂಪಿಸಲು ಶಿಕ್ಷಣ ಇಲಾಖೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದ್ದು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಆಧುನಿಕತೆ ಹಾಗೂ ಇಂಗ್ಲೀಷ್ ಭಾಷೆಯ ಪ್ರಭಾವದಿಂದ ಸಾಂಸ್ಕೃತಿಕ ಪಲ್ಲಟವಾಗುತ್ತಿದೆ. ಅಲ್ಲದೆ ಪಾಶ್ಚಾತ್ಯೀಕರಣದಿಂದ ಬಹುಪಾಲು ಮನೆಗಳು ವೃದ್ಧಾಶ್ರಮಗಳಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ದಾಕ್ಷಾಯಣಿ ಜಿ.ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಬಿರದ ಯಶಸ್ಸಿಗೆ ಸಹಕಾರಿಯಾದ ಮಹನೀಯರಿಗೆ ಕೃತಜ್ಞತೆ ಸಲ್ಲಿಸುವ ಜತೆಗೆ ಶಿಬಿರದಿಂದ ಪಡೆದುಕೊಂಡ ಜ್ಞಾನವನ್ನು ಕಾಲೇಜಿನ ಸಹಪಾಠಿಗಳಿಗೂ ಹಂಚಬೇಕು ಎಂದು ಸಲಹೆ ನೀಡಿದರು.
ಎನ್‌ಎಸ್‌ಎಸ್ ಯೋಜನಾಧಿಕಾರಿ ಸತೀಶ್ ಎನ್.ನಾಯ್ಕ್ ಶಿಬಿರದ ವರದಿ ವಾಚಿಸಿದರು. ಎನ್‌ಎಸ್ ಎಸ್ ಯೋಜನಾಧಿಕಾರಿ ವಸಂತ್ ಎಸ್.ನಾಯ್ಕ್, ಸಹ ಅಧಿಕಾರಿಗಳಾದ ಮಮತಾ ನಾಯ್ಕ್, ಸಹಾಯಕ ಪ್ರಾಧ್ಯಾಪಕ ಡಾ.ಲೋಕೇಶ್, ಮಹಾಲಕ್ಷ್ಮಿ ನಾಯ್ಕ್, ಗ್ರಾ.ಪಂ ಉಪಾಧ್ಯಕ್ಷೆ ಶಶಿಕಲಾ ನಾಗೇಂದ್ರ ನಾಯ್ಕ್, ಧಾರವಾಡ ಕೆಎಂಎಫ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ, ಗಜಾನನ ಪ್ರೌಢಶಾಲೆ ಉಪಾಧ್ಯಕ್ಷೆ ವನಿತಾ ಹೆಗಡೆ, ಸಹಿಪ್ರಾ ಶಾಲೆ ಅಧ್ಯಕ್ಷ ದೇವರು ಹೆಗಡೆ, ಮುಖ್ಯ ಶಿಕ್ಷಕರಾದ ಸತೀಶ್ ಹೆಗಡೆ, ಶೈಲೇಂದ್ರ, ಉಪನ್ಯಾಸಕ ಎಸ್.ಎಂ.ನೀಲೇಶ್, ಮತ್ತಿತರರಿದ್ದರು.
ದಿವ್ಯಾ ಸಂಗಡಿಗರು ಪ್ರಾರ್ಥಿಸಿ, ಸ್ನೇಹ ಸ್ವಾಗತಿಸಿ, ನೇಹ ನಿರೂಪಿಸಿ, ಅಮಿತ್ ವಂದಿಸಿದರು. ಶಿಬಿರಾರ್ಥಿಗಳು ಅನಿಸಿಕೆ ನುಡಿಗಳನ್ನಾಡಿದರು. ಅತಿಥಿಗಳನ್ನು ಸನ್ಮಾನಿಸಲಾಯಿತು.