ಸೊರಬ ತಾಲೂಕಿನ ಸಮಗ್ರ ಅಭಿವೃದ್ಧಿ ಜತೆಗೆ ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆ ನಿವಾರಣೆ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುತ್ತೇನೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ಪಟ್ಟಣದ ರಂಗಮಂದಿರದ ಮುಂಭಾಗ ಕಾಂಗ್ರೆಸ್‌ನಿಂದ ಭಾನುವಾರ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ತಂದೆ- ತಾಯಿ ಅವರಿಗೆ ನಾನು ಶಾಸಕ, ಸಚಿವನಾಗಬೇಕು ಎಂಬ ಆಸೆ ಇತ್ತು. ಆ ಆಸೆಯನ್ನು ಸೊರಬ ಕ್ಷೇತ್ರದ ಜನ ಈಡೇರಿಸಿದ್ದಕ್ಕೆ ಚಿರರುಣಿಯಾಗಿರುತ್ತೇನೆ. ಈ ಚುನಾವಣೆ ಬರೀ ನನ್ನ ಗೆಲುವಿನ ಚುನಾವಣೆಯಾಗಿರಲಿಲ್ಲ. ಎಸ್.ಬಂಗಾರಪ್ಪ ಅವರನ್ನು ಎತ್ತರಕ್ಕೆ ಬೆಳೆಸಿದ ಎಲ್ಲರನ್ನೂ ಒಗ್ಗೂಡಿಸಿದ, ರಾಜ್ಯದಲ್ಲಿಯೂ ಎಸ್.ಬಂಗಾರಪ್ಪ ಅವರ ಅಭಿಮಾನಿಗಳನ್ನು ಕಾಂಗ್ರೆಸ್ ಅತ್ತ ಕರೆತರಲು ಸಾಧ್ಯವಾದ ಚುನಾವಣೆಯಾಗಿತ್ತು.
ತಂದೆ ಬಂಗಾರಪ್ಪಾಜಿ ಅವರು ಕುಟುಂಬದ ಹೆಣ್ಣು ಮಕ್ಕಳನ್ನು ಚುನಾವಣೆ ಪ್ರಚಾರಕ್ಕೆ ಕರೆತಂದಿರಲಿಲ್ಲ. ಆದರೆ ನನ್ನ ಮೇಲಿನ ಅತಿಯಾದ ಪ್ರೀತಿಯಿಂದ ಸಹೋದರಿಯರು ಹಾಗೂ ಪತ್ನಿ ಚುನಾವಣೆ ಪ್ರಚಾರದಲ್ಲಿ ತೊಡಗಿ ನನಗೆ ಹೆಚ್ಚಿನ ಶಕ್ತಿ ನೀಡಿದ್ದನ್ನು ಮರೆಯುವಂತದ್ದಲ್ಲ ಎಂದು ಬಾವುಕರಾದರು.
ಶಿವಣ್ಣ ಹಾಗೂ ಗೀತಕ್ಕ ಅವರು ರಾಜ್ಯದ ಅನೇಕ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಂಡು ಕಾಂಗ್ರೆಸ್‌ಗೆ ಶಕ್ತಿ ತುಂಬಿದ್ದಾರೆ. ತಾಲೂಕಿನ ೨೨೯ ಬೂತ್ ಮಟ್ಟದ ಮುಖಂಡರು ಹೆಚ್ಚಿನ ಜವಬ್ದಾರಿ ತೆಗೆದುಗೊಂಡು ಅಭಿವೃದ್ಧಿಗೆ ಒತ್ತು ನೀಡಬೇಕು. ಕಾಂಗ್ರೆಸ್ ಪಕ್ಷ ಹಾಗೂ ವರಿಷ್ಠರು ನನ್ನ ಗುರುತಿಸಿ ಸಚಿವಸ್ಥಾನ ನೀಡಿದ್ದು ಪ್ರಾಮಾಣಿಕ ಸೇವೆ ಸಲ್ಲಿಸುವ ಜತೆಗೆ ಆ ಹುದ್ದೆಯ ಗೌರವ ಕಾಪಾಡುತ್ತೇನೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಮಾತನಾಡಿ, ಮಧು ಬಂಗಾರಪ್ಪ ಅವರು ಸಚಿವರಾಗಿರುವುದು ಹೆಮ್ಮೆಯ ವಿಚಾರ. ಸುಳ್ಳು ಮತ್ತು ಸತ್ಯದ ನಡುವಿನ ಚುನಾವಣೆಯಲ್ಲಿ ಸತ್ಯದ ಪರವಿರುವ ಕಾಂಗ್ರೆಸ್ ಗೆಲುವು ಸಾಧಿಸಿದೆ ಎಂದರು.
ಮಧು ಬಂಗಾರಪ್ಪ ಸಹೋದರಿ ಸುಜಾತಾ ಮಾತನಾಡಿ, ರಾಜ್ಯದಲ್ಲಿ ಬಡವರು ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಕಷ್ಟವಾಗುತ್ತದೆ. ಹೀಗಾಗಿ ಸರಕಾರ ಯಾವೊಂದು ಸರಕಾರಿ ಶಾಲೆಗಳನ್ನು ಬಂದ್ ಮಾಡದೆ, ಶಾಲಾ ಜಾಗವನ್ನು ಇನ್ನೊಂದು ಇಲಾಖೆಗೆ ನೀಡಬಾರದು. ಇರುವ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಿದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ. ಆ ನಿಟ್ಟಿನಲ್ಲಿ ನೂತನ ಶಿಕ್ಷಣ ಸಚಿವ ಮಧು ಬಂಗಾರಪ್ಪ ಒತ್ತು ನೀಡಬೇಕು ಎಂದು ಆಗ್ರಹಿಸಿದರು.
ಅನಿತಾ ಮಧು ಬಂಗಾರಪ್ಪ ಮಾತನಾಡಿ, ನಾನು ಮಧು ಅವರ ಪರವಾಗಿ ಪ್ರಚಾರಕ್ಕೆ ಬಂದಾಗ ಜನತೆಗೆ ಕೊಟ್ಟ ಭರವಸೆಗಳನ್ನು ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ಈಡೇರಿಸುತ್ತೇವೆ ಎಂದರು. ತಾಲೂಕಿನ ಹೆಣ್ಣು ಮಕ್ಕಳು ಸೇರಿದಂತೆ ಮತದಾರರು ನನ್ನ ಪತಿಯನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸಿದಕ್ಕೆ ಕೃತಜ್ಞತೆ ಸಲ್ಲಿಸಿದರು.
ಕೆಪಿಸಿಸಿ ಸದಸ್ಯ ಕೆ.ಪಿ.ರುದ್ರಗೌಡ ಪ್ರಾಸ್ತಾವಿಕ ಮಾತನಾಡಿದರು. ಕಾಂಗ್ರೆಸ್ ಸೊರಬ ಬ್ಲಾಕ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಸದಾನಂದಗೌಡ ಪಾಟೀಲ್, ತಾಳಗುಪ್ಪ ಹೋಬಳಿ ಅಧ್ಯಕ್ಷ ಶಿವಮೂರ್ತಿ, ಸುಜಾತಾ ಜೋತಾಡಿ, ವಿಶಾಲಾಕ್ಷಮ್ಮ, ತಬಲಿ ಬಂಗಾರಪ್ಪ, ಹೆಚ್.ಗಣಪತಿ, ಶ್ರೀಧರ್ ಆರ್.ಹುಲ್ತಿಕೊಪ್ಪ, ಎಲ್.ಜಿ.ರಾಜಶೇಖರ್, ರಮೇಶ್, ಆರ್.ಸಿ.ಪಾಟೀಲ್, ಎ.ಎಸ್.ಹೇಮಚಂದ್ರ, ಹುಚ್ಚಪ್ಪ ಮಂಡಗಳಲೆ, ದರ್ಶನ್, ವೀರೇಶ್ ಕೊಟಗಿ, ಶಿವಲಿಂಗೇಗೌಡ, ಕೆ.ವಿ.ಗೌಡ, ಎಂ.ಡಿ.ಶೇಖರ್ ಮತ್ತಿತರರಿದ್ದರು.
ಕಾರ್ಯಕ್ರಮದ ಮೊದಲು ಸಚಿವ ಮಧು ಬಂಗಾರಪ್ಪ ಅವರು ಕುಟುಂಬ ಹಾಗೂ ಮುಖಂಡರೊಂದಿಗೆ ಬಂಗಾರಧಾಮಕ್ಕೆ ಭೇಟಿ ನೀಡಿ ಎಸ್.ಬಂಗಾರಪ್ಪ ಹಾಗೂ ಶಕುಂತಲಾ ಬಂಗಾರಪ್ಪ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು. ನಂತರ ರಂಗನಾಥ ದೇವಸ್ಥಾನದಿಂದ ಕಾರ್ಯಕ್ರಮ ವೇದಿಕೆ ವರೆಗೂ ಬೃಹತ್ ಮೆರವಣಿಗೆಯಲ್ಲಿ ಸಾಗಿದರು. ತಾಲೂಕಿನ ಅನೇಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಅಧಿಕಾರಿಗಳು, ನೌಕರರು, ನೌಕರ ಸಂಘ, ಕಂದಾಯ ಇಲಾಖೆ ಇನ್ನಿತರೆ ಇಲಾಖೆಯವರು ಹಾಗೂ ಗಣ್ಯರು ಸನ್ಮಾನಿಸಿ ಶುಭಕೋರಿದರು.
ತಾಲೂಕಿನ ಮತದಾರರು ತಂದೆ ಬಂಗಾರಪ್ಪ ಅವರಿಗೆ ನೀಡಿದ ಬೆಂಬಲವನ್ನು ಮಧು ಬಂಗಾರಪ್ಪ ಅವರಿಗೂ ನೀಡಿರುವುದು ಸಂಸತ ನೀಡಿದೆ. ಮಧು ಅವರು ರಾಜ್ಯದ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ೯ ನೇ ತರಗತಿಯಿಂದ ವೃತ್ತಿಪರ ಕೋರ್ಸಿಗೂ ಕೂಡ ಒಂದು ವಿಷಯವನ್ನು ಇಡಬೇಕು ಎಂದರು. ಇದರಿಂದ ವಿದ್ಯಾರ್ಥಿಗಳು ಮೆಡಿಕಲ್, ಇಂಜಿನಿಯರಿಂಗ್ ಆಚೆಗೆ ವಿಭಿನ್ನ ಕ್ಷೇತ್ರದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಅದಕ್ಕೆ ಶಿಕ್ಷಣ ಸಚಿವರು ಮುಂದಾಗಬೇಕು.
ಗೀತಾ ಶಿವರಾಜ್ ಕುಮಾರ್