ಶಿವಮೊಗ್ಗ: ಪ್ರಾಣಿ-ಪಕ್ಷಿ-ವನ ಸೇರಿದಂತೆ ನಮ್ಮ ಪರಿಸರವನ್ನು ಪ್ರೀತಿ ಮತ್ತು ಕಾಳಜಿಯಿಂದ ಉಳಿಸಿ ಮುಂದಿನ ಪೀಳಿಗೆಗೆ ನೀಡಿದರೆ ವಿಶ್ವ ಪರಿಸರ ದಿನ ಸಾರ್ಥಕವಾಗುತ್ತದೆ. ಆದ್ದರಿಂದ ಇಂದೇ ಈ ನಿಟ್ಟಿನಲ್ಲಿ ನಾವು ಸಂಕಲ್ಪ ಮಾಡೋಣ ಎಂದು ತಿರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ, ಪ್ರವಾಸೋದ್ಯಮ ಮಂತ್ರಾಲಯ, ಭಾರತ ಸರ್ಕಾರ, ಬೆಂಗಳೂರು ಮತ್ತು ಅರಣ್ಯ ಇಲಾಖೆ ಶಿವಮೊಗ್ಗ ಇವರ ಸಹಯೋಗದಲ್ಲಿ ಸಕ್ರೆಬೈಲಿನ ಆನೆ ಬಿಡಾರದಲ್ಲಿ ಆಯೋಜಿಸಲಾಗಿದ್ದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ಲಾಸ್ಟಿಕ್ ಮಾಲಿನ್ಯ ತೊಲಗಿಸಿ’ ಎಂಬ ಘೋಷವಾಕ್ಯದಡಿ ಈ ಸಾಲಿನ ಪರಿಸರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಪ್ಲಾಸ್ಟಿಕ್ ಬಳಕೆ ನಮಗೆ ಮಾರಕ. ಪ್ಲಾಸ್ಟಿಕ್ ಇಲ್ಲದ ಕಾಲದಲ್ಲಿಯೂ ನಾವು ನೆಮ್ಮದಿಯಿಂದ ಬದುಕುತ್ತಿದ್ದೆವು. ಮಾರಕವಾಗಿರುವ ಪ್ಲಾಸ್ಟಿಕ್ ಉಪಯೋಗಿಸುವುದಿಲ್ಲವೆಂಬ ಸಂಕಲ್ಪವನ್ನು ಈಗಿನಿಂದಲೇ ಮಾಡೋಣ ಎಂದು ಕರೆ ನೀಡಿದರು.
ಪ್ರಕೃತಿ ನಮ್ಮ ಆಸೆಗಳನ್ನು ಪೂರೈಸುತ್ತದೆ, ದುರಾಸೆಯನ್ನಲ್ಲ ಎಂಬುದನ್ನು ನೆನಪಿಟ್ಟು ಪ್ರಜ್ಞಾವಂತರಾಗಿ ಪರಿಸರದ ಕಾಳಜಿ ವಹಿಸಬೇಕು. ಜಿಲ್ಲೆಯಲ್ಲಿ ಹಿಂದಿದ್ದ ನಿತ್ಯಹರಿದ್ವರ್ಣದ ಕಾಡು ಕಳೆದುಹೋಗುತ್ತಿದೆ. ತಾಪಮಾನ ಏರುತ್ತಿದೆ. ಆದ್ದರಿಂದ ನಮ್ಮನೆಲ್ಲ ರಕ್ಷಿಸುವ ಪರಿಸರವನ್ನು ಉಳಿಸಲು ನಾವು ಕಾಳಜಿಯಿಂದ ವರ್ತಿಸಬೇಕು. ಒಂದೊಂದು ಹನಿ ನೀರು ನಮ್ಮ ದೇಹದ ಒಂದೊಂದು ಹನಿ ರಕ್ತದಂತೆ. ಅದನ್ನು ಕಾಪಾಡಬೇಕು. ಪ್ಲಾಸ್ಟಿಕ್ ಸೇರಿದಂತೆ ಎಲ್ಲ ರೀತಿಯ ಮಾಲಿನ್ಯ ತಡೆದು ಪರಿಸರ ಸಂರಕ್ಷಣೆ ಮಾಡುವ ಪ್ರತಿಜ್ಞೆ ಮಾಡೋಣ ಎಂದರು.
ಪರಿಸರ ತಜ್ಞ ಬಿ.ಎಂ.ಕುಮಾರಸ್ವಾಮಿ ಮಾತನಾಡಿ, ಪ್ಲಾಸ್ಟಿಕ್ ಮಾಲಿನ್ಯಕ್ಕೆ ಕಾರಣ ನಾವೆ. ಪರಿಹಾರವೂ ನಮ್ಮ ಕೈಯಲ್ಲಿದ್ದು ಇನ್ನು ಮುಂದೆ ಪ್ಲಾಸ್ಟಿಕ್ ಕವರ್, ಸ್ಟ್ರಾ ಇತ್ಯಾದಿ ಏಕಬಳಕೆ ಪ್ಲಾಸ್ಟಿಕ್ ಬಳಸುವುದಿಲ್ಲವೆಂದು ಯುವಜನತೆ, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ನಿರ್ಧಾರ ಕೈಗೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಆನೆ ಬಿಡಾರದ ಎರಡು ಆನೆ ಮರಿ ಮತ್ತು ಒಂದು ಆನೆ ಸೇರಿ ಮೂರು ಆನೆಗಳಿಗೆ ಕ್ರಮವಾಗಿ ಕೃಷ್ಣ, ಅಭಿಮನ್ಯು ಮತ್ತು ಧೃವ ಎಂಬುದಾಗಿ ಶಾಸಕರ ಸಮ್ಮುಖದಲ್ಲಿ ನಾಮಕರಣ ಮಾಡಲಾಯಿತು.
ವನ್ಯಜೀವಿ ಉಪವಲಯ ಅಧಿಕಾರಿ ಪ್ರಸನ್ನಕೃಷ್ಣ ಪಟಗಾರ್ ವಿಶ್ವ ಪರಿಸರ ದಿನಾಚರಣೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೆಳಿಗ್ಗೆ ೮.೩೦ ರಿಂದ ೯ ಗಂಟೆವರೆಗೆ ಸಕ್ರೆಬೈಲಿನ ಆನೆಬಿಡಾರದಲ್ಲಿ ಸ್ವಚ್ಚತಾ ಅಭಿಯಾನ ಕೈಗೊಳ್ಳಲಾಗಿತ್ತು. ಆನಂತರ ಅರಣ್ಯ ಇಲಾಖೆ, ಕಾನೂನೂ ಸೇವಾ ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರವಾಸೋದ್ಯ ಇಲಾಖೆಯ ನಿರ್ದೇಶಕರಾದ ಮೊಹಮ್ಮದ್ ಫಾರೂಕ್ ಇಕೋ ಟೂರಿಸಂ ಮತ್ತು ಬಯೋ ಡೈವರ್ಸಿಟಿ ಸಂರಕ್ಷಣೆ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಸಿಸಿಎಫ್ ಡಾ.ಹನುಮಂತಪ್ಪ, ಅರಣ್ಯ ಅಧಿಕಾರಿ ಶಿವಶಂಕರ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಅವಿನ್ ಆರ್, ಎಸ್.ಪಿ.ಶೇಷಾದ್ರಿ, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಪರಿಸರ ಪ್ರೇಮಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.