ಶಿವಮೊಗ್ಗ: “ಪಠ್ಯಪುಸ್ತಕ ತಿದ್ದುಪಡಿ ಮಾಡುವ ವಿಚಾರದಲ್ಲಿ ಬಿಜೆಪಿ ಸಾಕಷ್ಟು ಟೀಕೆ ಮಾಡುತ್ತಿದೆ. ಆದರೆ ನಾವು ಅವರ ಟೀಕೆಗಳಿಗೆ ಸೊಪ್ಪು ಹಾಕುವುದಿಲ್ಲ, ತಿದ್ದುಪಡಿ ಮಾಡಿಯೇ ತೀರುತ್ತೇವೆ” ಎಂದು ಸೋಮವಾರ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು, ಇದರ ವಿರುದ್ಧ ಬಿಜೆಪಿ ನಾಯಕರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಮಧು ಬಂಗಾರಪ್ಪ, “ಬಿಜೆಪಿ ಸ್ವಾರ್ಥದ ರಾಜಕಾರಣದಿಂದ ತನ್ನ ಆಡಳಿದ ಅಂತ್ಯಕ್ಕೆ ನಾಂದಿ ಹಾಡಿಕೊಂಡಿದೆ. ಕೇವಲ ಹಿಂದುತ್ವ, ದ್ವೇಷದ ರಾಜಕಾರಣದಿಂದ ರಾಜ್ಯದಲ್ಲಿ ಚಿಂತನೆಯ ತನ್ನ ಅಸ್ತಿತ್ವ ಕಳೆದುಕೊಂಡಿದೆ” ಎಂದರು.
“ಬಿಜೆಪಿಯವರು ಕಾಂಗ್ರೆಸ್ ಸರ್ಕಾರದ ಬಗ್ಗೆ ಚಿಂತನೆ ಮಾಡುವುದನ್ನು ಬಿಟ್ಟು, 2024ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಕುರ್ಚಿಯ ಉಳಿಸಿಕೊಳ್ಳುವ ಬಗ್ಗೆ ಚಿಂತನೆ ಮಾಡಲಿ” ಎಂದು ಸಲಹೆ ನೀಡಿದರು.
ಮಕ್ಕಳಿಗೆ ಸೂಕ್ತ ಶಿಕ್ಷಣದ ಅವಶ್ಯಕತೆ ಇದೆ. ಅದಕ್ಕೆ ಪೂರಕವಾಗಿ ಶಾಲಾ ಮಟ್ಟದಿಂದಲೇ ಸಂವಿಧಾನ ಓದು ಮಕ್ಕಳಿಗೆ ಮನದಟ್ಟಾಗಬೇಕು. ಆಗ ಸಂವಿಧಾನದ ಪರಿಕಲ್ಪನೆ ಮಕ್ಕಳ ಮನಸ್ಸಿನಲ್ಲಿ ಬೇರೂರುತ್ತದೆ. ಈ ಎಲ್ಲಾ ವಿಚಾರಗಳಿಂದ ಪಠ್ಯ ಪುಸ್ತಕ ತಿದ್ದುಪಡಿ ಅವಶ್ಯಕ” ಎಂದು ಸಚಿವರು ಹೇಳಿದರು.
ಇದೇ ವೇಳೆ ಸರ್ಕಾರದ 5 ಗ್ಯಾರೆಂಟಿಗಳ ಬಗ್ಗೆ ಬಿಜೆಪಿಯ ಟೀಕೆಗಳಿಗೆ ಪ್ರತಿಕ್ರಿಯಿಸಿ, “ಮಾಧ್ಯಮಗಳಲ್ಲಿ ಮಾತ್ರ ಬಿಜೆಪಿಯವರು ಬಾಲ ಬಿಚ್ಚುತ್ತಿದ್ದಾರೆ. ಬಡವರಿಗೆ ಸೇರಬೇಕಿರುವ ಅನ್ನ ಭಾಗ್ಯಕ್ಕೆ ಕೇಂದ್ರದ ಬಿಜೆಪಿ ಸರ್ಕಾರ ಕನ್ನ ಹಾಕುತ್ತಿದೆ. ಕೇಂದ್ರಕ್ಕೆ ತೆರಿಗೆ ಪಾವತಿಸುವಲ್ಲಿ ಕರ್ನಾಟಕ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ ಎಂದ ಅವರು, ಹೃದಯ ಇಲ್ಲದವರು ಮಾತ್ರ ಈ ರೀತಿಯ ಯೋಜನೆಗಳನ್ನು ದ್ವೇಷ ಮಾಡಲು ಸಾಧ್ಯ” ಎಂದು ಬಿಜೆಪಿ ನಾಯಕರಿಗೆ ಛಾಟಿ ಬೀಸಿದರು.
ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಕುರಿತು ಬಿಜೆಪಿ ನಾಯಕರು ಅಪಪ್ರಚಾರ ಮಾಡಿ, ಜನರನ್ನು ದಿಕ್ಕು ತಪ್ಪಿಸಲು ಹೊರಟಿದ್ದಾರೆ. ಜನರಿಗೆ ಅನುಕೂಲವಾಗುವಂತಹ ಕಾರ್ಯಗಳ ಅನುಷ್ಠಾನ ಮಾಡುವುದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಗುರಿಯಾಗಿದೆ” ಎಂದರು.
“ಶಿಕ್ಷಣ ಇಲಾಖೆಯಲ್ಲಿಯೇ ಶೇ 40 ರಷ್ಟು ಸರ್ಕಾರಿ ನೌಕರರು ಇದ್ದಾರೆ. ಎಲ್ಲರನ್ನೂ ಉತ್ತಮ ಹಾದಿಯಲ್ಲಿ ಕೊಂಡೊಯ್ಯುವ ಜವಾಬ್ದಾರಿ ನನ್ನ ಮೇಲಿದೆ. ಖಾಸಗಿ ಶಾಲೆಗಳ ಭರಾಟೆಯ ಮಧ್ಯೆ ಸರ್ಕಾರಿ ಶಾಲೆಗಳು ಅಭಿವೃದ್ಧಿ ಕಾಣುವ ಅವಶ್ಯಕತೆ ಇದೆ. ಅದು ಈ ಸರ್ಕಾರದ ಅವಧಿಯಲ್ಲಿ ನೆರವೇರುತ್ತದೆ” ಎಂದು ಭರವಸೆ ನೀಡಿದರು.
ಶಿಕ್ಷಕರ ನೇಮಕಾತಿ ವಿಚಾರ ನ್ಯಾಯಾಲಯದಲ್ಲಿದೆ. ಈ ಬಗ್ಗೆ ಅಡ್ವೋಕೇಟ್ ಜನರಲ್ ಅವರ ಜೊತೆ ಚರ್ಚೆ ಮಾಡಿದ್ದೇನೆ. ಶೀಘ್ರದಲ್ಲೇ ಸರಿಯಾಗುವ ನಿರೀಕ್ಷೆ ಇದೆ. ಈ ಸಮಸ್ಯೆ ಸರಿಯಾಗಿ ನೇಮಕಾತಿ ಆದೇಶ ಕೊಟ್ಟರೆ ಸ್ವಲ್ಪಮಟ್ಟಿಗೆ ಶಿಕ್ಷಕರ ಕೊರತೆ ಕಡಿಮೆ ಆಗ್ತದೆ ಎಂದರು.
ಜಿಲ್ಲೆಯಲ್ಲಿ ನೀರಿಲ್ಲದಂತಹ ಸಂದರ್ಭ ಸೃಷ್ಠಿಯಾಗಿಲ್ಲ. ಅಧಿಕಾರಿಗಳ ಮಾಹಿತಿ ಪ್ರಕಾರ ಇರುವ ನೀರು ೨೦ ದಿನಗಳವರೆಗೆ ಆಗುತ್ತದೆ. 20 ದಿನಗಳಲ್ಲಿ ಮಳೆಯಾದರೆ ಅಭಾವ ಕಡಿಮೆಯಾಗಲಿದೆ. ಬೇಗ ಮಳೆ ಬರುವ ವಾತಾವರಣ ಕಾಣಿಸುತ್ತಿದೆ. ಪ್ರತಿ ವರ್ಷ ಅತಿವೃಷ್ಟಿ, ಅನಾವೃಷ್ಟಿ ಎರಡು ಆಗುತ್ತದೆ. ಕುಡಿಯುವ ನೀರಿಗೆ ಆದ್ಯತೆ ಕೊಡಬೇಕಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ೮೪ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.ಮೋಡ ಬಿತ್ತುವ ಯೋಜನೆಯ ಪ್ರಸ್ತಾಪ ಸರ್ಕಾರದ ಮುಂದೆ ಇದೆ. ಮಳೆ ಬರದಿದ್ದರೆ ಮೋಡ ಬಿತ್ತನೆ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದರು.
ಸಂಸದರಿಗೆ ತಿರುಗೇಟು:
ಕಾಂಗ್ರೆಸ್ ಸರಕಾರ ಬಂದಾಗಲೆಲ್ಲ ರಾಜ್ಯದಲ್ಲಿ ಬರ ಬರುತ್ತದೆ ಎಂಬ ಸಂಸದ ರಾಘವೇಂದ್ರರ ಹೇಳಿಕೆಯ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸಚಿವರು ಗರಂ ಆಗಿದ್ದಾರೆ. ರಾಜ್ಯದ ಜನರು ಅದಕ್ಕೆ ಅವರಿಗೆ ಬರೆ ಹಾಕಿದ್ದಾರೆ ಎಂದು ಬಿಜೆಪಿ ಸೋಲನ್ನು ಉಲ್ಲೇಖಿಸಿ ಟಾಂಗ್ ನೀಡಿದರು.
10-12 ವರ್ಷದಿಂದ ಬರಿ ವಿಮಾನ ನಿಲ್ದಾಣ ಅಂತಿದ್ದಾರೆ. ಮೊದಲು ವಿಮಾನ ತಂದು ನಿಲ್ಲಿಸಲು ಹೇಳಿ ಅವರಿಗೆ ಎಂದು ತಿರುಗೇಟು ನೀಡಿದರು.
ಶಕ್ತಿಯೋಜನೆಯಲ್ಲಿ ರೂಲ್ಸ್ ಇರೋದು ಬಸ್ ನಲ್ಲಿ ಮಹಿಳೆಯರಿಗೆ ಫಿಪ್ಟಿ ಪರ್ಸೆಂಟ್ಅವಕಾಶ ಇರೋದು. ಫಿಫ್ಟಿ ಪರ್ಸೆಂಟ್ ಮಹಿಳೆಯರು ಭರ್ತಿಯಾದರೆ ಪುರುಷರಿಗೆ ಬಿಟ್ಟು ಕೊಡಬೇಕು ಎಂದು. ಆದರೆ ಫ್ರೀ ಎನ್ನುವ ಕಾರಣದಿಂದ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣ ಮಾಡ್ತಿದ್ದಾರೆ. ಫ್ರೀ ಸಿಕ್ಕಿದಾಗ ಉಪಯೋಗ ಆಗುವ ರೀತಿ ಓಡಾಡಬೇಕು. ಬಡವರಿಗೆ ಸಹಕಾರ ಆಗಲಿ ಅಂತಾ ಮಾಡಿದ್ದಾರೆ ಎಂದರು.
ಖಾಸಗಿ ಬಸ್ ನಲ್ಲಿ ಉಚಿತ ಪ್ರಯಾಣ ಮಾಡಿ ಬಿಜೆಪಿ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದ ಸಚಿವರು, ಹೌದು, ರಾಜ್ಯದಲ್ಲಿ ಕೆಲವರಿಗೆ ಮನೆ ಇಲ್ಲ. ಬಿಜೆಪಿಯವರ ಮನೆಯನ್ನು ಮನೆ ಇಲ್ಲದವರಿಗೆ ಬಿಟ್ಟು ಕೊಡಲು ಹೇಳಿ. ಖಾಸಗಿ ಬಸ್, ಟ್ಯಾಕ್ಸಿ ಅವರಿಗೆ ಸರಕಾರದ ಮಟ್ಟದಲ್ಲಿ ಸ್ಪಂದನೆ ಮಾಡಬೇಕಿದೆ.ಮಧು ಬಂಗಾರಪ್ಪ