Malenadu Mitra
ರಾಜ್ಯ ಶಿವಮೊಗ್ಗ

ಮಹಿಳೆ ಕೊಲೆ ಮಾಡಿ 35 ಲಕ್ಷ ಲಟಪಾಯಿಸಿದ ಗ್ಯಾಂಗ್ ಅಂದರ್, ಚಾಲಕನಾದರೂ ಮಗನಂತೆ ನೋಡಿಕೊಂಡ ಮನೆಯೊಡತಿಯನ್ನೇ ಕೊಲೆಮಾಡಿದ ಪಾತಕಿಗಳು

ಶಿವಮೊಗ್ಗ: ಒಂಟಿ ಮಹಿಳೆಯನ್ನು ಕೊಲೆ ಮಾಡಿ ಭಾರೀ ಹಣ ಲಪಟಾಯಿಸಿದ ಖದೀಮರ ತಂಡವನ್ನು ಹೆಡೆಮುರಿಕಟ್ಟುವಲ್ಲಿ ಶಿವಮೊಗ್ಗ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ವಿಜಯನಗರ ಬಡಾವಣೆಯ ನಿವಾಸಿ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಮಲ್ಲಿಕಾರ್ಜುನ್ ಅವರ ಪತ್ನಿ ಕಮಲಮ್ಮ ಅವರನ್ನು ಕೊಲೆಗೈದು ಹಣ ಕದ್ದಿದ್ದ ಪ್ರಕರಣ ನಗರದ ನಿವಾಸಿಗಳನ್ನು ಬೆಚ್ಚಿಬೀಳಿಸಿತ್ತು.
ವಿವಿಧ ತಂಡಗಳನ್ನು ರಚಿಸಿದ್ದ ಪೊಲೀಸರು ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಆರೋಪಿಗಳನ್ನು ಪೊಲೀಸರು ಬಂಧಿಸಿ ಅವರಿಂದ 33,74,800 ರೂ. ನಗದು ಸೇರಿದಂತೆ 2 ಬೈಕ್, ಒಂದು ಕಾರು ಹಾಗೂ 7 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಜಿನಿಯರ್ ಮಲ್ಲಿಕಾರ್ಜುನ್ ಅವರ ಕಾರು ಚಾಲಕನಾಗಿದ್ದ ಹುಣಸೋಡು ತಾಂಡಾದ ಹನುಮಂತನಾಯ್ಕ(22), ಗುಂಡಪ್ಪ ಶೆಡ್ನ ಪ್ರದೀಪ್ ವಿ. ಯಾನೆ ಮೊದಲಿಯಾರ್(21), ಅನುಪಿನಕಟ್ಟೆ ತಾಂಡಾದ ಅಪ್ಪುನಾಯ್ಕ ಸಿ. ಯಾನೆ ಅಪ್ಪು(21), ಗುಂಡಪ್ಪ ಶೆಡ್‌ನ ಸತೀಶ್ ವಿ.(26), ಅನುಪಿನಕಟ್ಟೆ ತಾಂಡಾದ ರಾಜು ವೈ. ಯಾನೆ ತೀತಾ(24) ಬಂಧಿತ ಆರೋಪಿಗಳಾಗಿದ್ದಾರೆ ಎಂದ ಅವರು, ಈ ಕೃತ್ಯಕ್ಕೆ ಕಾರು ನೀಡಿದ್ದ ಕೌಶಿಕ್ ಎಂಬ ೭ನೇ ಆರೋಪಿಯನ್ನು ಕೂಡ ಗುರುವಾರ ಬಂಧಿಸಲಾಗಿದೆ ಎಂದರು.
ಇಂಜಿನಿಯರ್ ಕೆ.ವಿ. ಮಲ್ಲಿಜಕಾರ್ಜುನ ಅವರು ತಮ್ಮ ಮಗನ ವೈದ್ಯಕೀಯ ಶಿಕ್ಷಣಕ್ಕೆ ಶುಲ್ಕ ಕಟ್ಟುವ ಸಲುವಾಗಿ 35 ಲಕ್ಷ ರೂ. ಕೈ ಸಾಲ ಪಡೆದು ಮನೆಯಲ್ಲಿ ತಂದಿಟ್ಟಿದ್ದರು. ಈ ಎಲ್ಲಾ ಹಣವನ್ನು ಚಾಲಕ ಹನುಮಂತನಾಯ್ಕ ಮೂಲಕವೇ ಸ್ನೇಹಿತರ ಬಳಿಯಿಂದ ತರಿಸಿ ಮನೆಯಲ್ಲಿಟ್ಟಿದ್ದರು. ಹೀಗಾಗಿ ಈ ಹಣ ಲಪಟಾಯಿಸುವ ಉದ್ದೇಶದಿಂದ ಹನುಮಂತನಾಯ್ಕ ಸ್ನೇಹಿತರೊಂದಿಗೆ ಸೇರಿ ತಂತ್ರ ರೂಪಿಸಿದ್ದ ಎಂದು ಎಸ್ಪಿ ಮಾಹಿತಿ ನೀಡಿದರು.
ಮಲ್ಲಿಕಾರ್ಜುನ ಅವರು ಗೋವಾಕ್ಕೆ ತೆರಳಿದ ಸಂದರ್ಭ ನೋಡಿಕೊಂಡ ಆರೋಪಿ ಹನುಮಂತನಾಯ್ಕ ತನ್ನ ಸೋದರನಿಗೆ ಅಪಘಾತವಾಗಿದ್ದು, ಆತನ ಚಿಕಿತ್ಸೆಗೆ ೨ ಸಾವಿರ ಹಣ ಬೇಕೆಂದು ಜೂ.16 ರ ರಾತ್ರಿ ಮಲ್ಲಿಕಾರ್ಜುನ ಅವರ ಮನೆಗೆ ಹೋಗಿ ಕಮಲಮ್ಮನವರ ಬಳಿ ಕೇಳಿದ್ದ. ಆ ಸಂದಭದಲ್ಲಿ ಹಣ ನೀಡದೆ ಮಾರನೇ ದಿನ ಬರುವಂತೆ ಹೇಳಿದ್ದರು ಎಂದರು.
ಇದನ್ನು ತನ್ನ ಸ್ನೇಹಿತರಿಗೆ ತಿಳಿಸಿದ ಆರೋಪಿ ಹನುಮಂತನಾಯ್ಕ ಜೂ.17 ರಂದು ಜೊಮ್ಯಾಟೋ ಕಂಪನಿಯ ಟೀ ಶರ್ಟ್ ಖರೀದಿಸಿ ಮೂವರೂ ಧರಿಸಿಕೊಂಡು ಮನೆಯ ಬಳಿ ಹೋಗಿ ಚಿಕಿತ್ಸೆಗೆ ಹಣ ಕೇಳಿದ್ದಾರೆ. ಕೊಡಲು ಅವರು ನಿರಾಕರಿಸಿದ್ದಾರೆ. ನೀರು ಕೊಡಲು ಕಮಲಮ್ಮ ಒಳಗೆ ಹೋಗಲು ತಿರುಗುತ್ತಿದ್ದಂತೆ ಅಪ್ಪುನಾಯ್ಕ ಹಿಂದೆಯೇ ಒಳಗೆ ಹೋಗಿ ಬಾಯಿ ಒತ್ತಿ ಹಿಡಿಯಲು ಮುಂದಾದಾಗ ಕಮಲಮ್ಮ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಆಗ ಕಬ್ಬಿಣದ ಚೂಪಾದ ರಾಡಿನಿಂದ ಕುತ್ತಿಗೆಗೆ ಹೊಡೆದು ಸಾಯಿಸಿದ್ದಾನೆ. ಬಳಿಕ ಹಣ ತೆಗೆದುಕೊಂಡು ಎಲ್ಲರೂ ಪರಾರಿಯಾಗಿದ್ದಾಗಿ ತನಿಖೆ ವೇಳೆ ಒಪ್ಪಿಕೊಂಡಿರುವುದಾಗಿ ತಿಳಿಸಿದರು.
ಬಳಿಕ ಎಲ್ಲರೂ ಬೇರೆ ಬೇರೆ ಕಡೆ ತೆರಳಿದ್ದರು. ಹೋಟೆಲ್‌ನಲ್ಲಿ ಉಳಿದು, ಹೊಸ ಮೊಬೈಲ್‌ಗಳನ್ನು ಖರೀದಿ ಮಾಡಿದ್ದರು. ಇನ್ನೋರ್ವ ಕೌಶಿಕ್ ಎಂಬಾತ ಇವರಿಗೆ ಕಾರು ನೀಡಿ ಸಹಾಯ ಮಾಡಿದ್ದು, ಆತನ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ ಎಂದರು.

35 ಲಕ್ಷ ರೂ.ನಲ್ಲಿ 33,74,800 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಜೊತೆಗೆ ಕೃತ್ಯಕ್ಕೆ ಬಳಸಿದ್ದ ಇಂಡಿಕಾ ಕಾರು, 7 ಮೊಬೈಲ್, 3 ಬೈಕ್, ಕೊಲೆ ಮಾಡಿದ ಆಯುಧ ಸೇರಿದಂತೆ ಸುಮಾರು 41,14,800 ಮೌಲ್ಯದ ಹಣ ಮತ್ತು ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದರು.
ಆರೋಪಿಗಳೆಲ್ಲರೂ ಕೂಲಿ ಹಾಗೂ ಗಾರೆ ಕೆಲಸ ಮಾಡುವವರಾಗಿದ್ದಾರೆ. ಇವರೆಲ್ಲರೂ ಟೀ, ಮದ್ಯದಂಗಡಿಗಳನ್ನು ಅಡ್ಡೆಯಾಗಿ ಮಾಡಿಕೊಂಡಿದ್ದರು. ಇವರ ಪರಿಚಯ ಮಾಡಿಕೊಂಡ ಡ್ರೈವರ್ ಹನುಮಂತನಾಯ್ಕ್ ಮನೆಯಲ್ಲಿ ಹಣ ಇರುವುದು ಖಚಿತ ಇದನ್ನು ದೋಚಬೇಕು ಎಂದು ಪ್ಲಾನ್ ಮಾಡಿದ್ದರು. ಹನುಂತನಾಯ್ಕ್ ಒಂದು ವರ್ಷದಿಂದ ಇಂಜಿನಿಯರ್ ಮಲ್ಲಿಕಾರ್ಜುನಪ್ಪ ಅವರ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಪ್ರತಿದಿನ ಅವರನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ. ಹಾಗಾಗಿ ಇವರ ಕುಟುಂಬಕ್ಕೆ ಹತ್ತಿರವಾಗಿದ್ದು, ಅವರ ವಿವರಗಳನ್ನು ತಿಳಿದುಕೊಂಡಿದ್ದ ಮತ್ತು ಹಣವನ್ನು ದೋಚಲು ಮುಂಚೆಯೇ ಉಪಾಯ ಮಾಡಿದ್ದ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಬಾಲರಾಜು, ತುಂಗಾನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮಂಜುನಾಥ್, ಪಿಎಸ್‌ಐ ಕುಮಾರ್, ರಘುವೀರ್, ಸಿಬ್ಬಂದಿಗಳಾದ ಕಿರಣ್, ರಾಜು, ಅರುಣ್ ಕುಮಾರ್, ಅಶೋಕ್, ಮೋಹನ್, ಕೇಶವ್ ಕುಮಾರ್, ಕಾಂತರಾಜ್, ನಾಗಪ್ಪ, ಹರೀಶ್‌ನಾಯ್ಕ್ ಮತ್ತಿತರರು ಇದ್ದರು.

ದೋಚಿದ ಹಣದಲ್ಲಿ ಎಲ್ಲರು ಒಂದೊಂದು ಹೊಸ ಮೊಬೈಲ್ ತೆಗೆದುಕೊಂಡಿದ್ದರು. ಬೇರೆ ಬೇರೆ ಕಡೆ ಪರಾರಿಯಾಗಿ ಲಾಡ್ಜ್‌ಗಳಲ್ಲಿ ವಾಸವಾಗಿದ್ದರು. ತುಂಗಾನಗರ ಪೊಲೀಸರು ಮತ್ತು ಅಧಿಕಾರಿಗಳ ತನಿಖಾ ತಂಡ ಉತ್ತಮವಾಗಿ ಕೆಲಸ ನಿರ್ವಹಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಅಭಿನಂದಿಸಲಾಗುವುದು

ಮಿಥುನ್ ಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕ

Ad Widget

Related posts

ಕೋವಿಡ್ ವಿಷಯದಲ್ಲಿ ಸಂಸದರ ಸಾಧನೆ ಶೂನ್ಯ

Malenadu Mirror Desk

ಮಲೆನಾಡಿನಲ್ಲಿ ಹಿಜಾಬ್- ಕೇಸರಿ ಶಾಲ್ ವಿವಾದ ತಾರಕಕ್ಕೆ ಕಲ್ಲುತೂರಾಟ, ಕಾಲೇಜಿಗೆ ರಜೆ: ನಿಷೇಧಾಜ್ಞೆ ಹೇರಿಕೆ

Malenadu Mirror Desk

ಹಾಸ್ಟೆಲ್‌ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿನಿಯರ ಪ್ರತಿಭಟನೆ, ಆಡಳಿತ ವ್ಯವಸ್ಥೆ ವಿರುದ್ದ ಹರಿಹಾಯ್ದ ವಿದ್ಯಾರ್ಥಿನಿಯರು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.