ತುಮರಿ: ಗುರು ಯಾವತ್ತೂ ಜ್ಞಾನವನ್ನು ಧಾರೆ ಎರೆಯುತ್ತಾನೆ. ಅವನ ಕೃಪೆಯಿಂದ ಕಲಿತ ಜ್ಞಾನ ಸದ್ಬಳಕೆಯಾಗಿ ಜಗವ ಬೆಳಗಬೇಕು. ಹೀಗಾದಲ್ಲಿ ಲೋಕ ಕಲ್ಯಾಣವಾಗುತ್ತದೆ ಎಂದು ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮಾಧಿಕಾರಿ ಡಾ. ಎಸ್ ರಾಮಪ್ಪ ಹೇಳಿದರು.
ಸಿಗಂದೂರು ದೇವಸ್ಥಾನದಲ್ಲಿ ಸೋಮವಾರ “ಗುರು ಪೂರ್ಣಿಮೆ” ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು ಅವರು ಗುರುವಿನ ಮಹತ್ವವನ್ನು ಸಾರಿದರು.
ಮಾನವನ ಡಾಂಬಿಕತೆಯನ್ನು ಜ್ಞಾನದ ಅರಿವಿನಿಂದ ತೊಳೆದು ಹಾಕುವಲ್ಲಿ ಗುರುವಿನ ಪಾತ್ರ ಮಹತ್ವದ್ದು. ಸ್ವಜನ ಪಕ್ಷಪಾತ ಗುರುವಿನ ಸ್ಥಾನದಲ್ಲಿ ಬರಬಾರದು. ಗುರು ಯಾವತ್ತೂ ಶುದ್ಧ ವಿದ್ಯೆಯ ಭೋದಕನಾಗಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಗುರು ಪೂರ್ಣಿಮೆ ಹಿನ್ನೆಲೆಯಲ್ಲಿ ದೇವಸ್ಥಾನದ ಪ್ರಾಂಗಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು ಧರ್ಮಾಧಿಕಾರಿ ರಾಮಪ್ಪ ಪುಷ್ಪಾರ್ಚನೆ ಮಾಡಿ ಪ್ರಾರ್ಥನೆ ಸಲ್ಲಿಸಿದರು. ಗುರು ಪೂರ್ಣಿಮೆ ಅಂಗವಾಗಿ ಬೆಳಿಗ್ಗೆಯಿಂದಲೇ ಚೌಡೇಶ್ವರಿ ದೇವಿಗೆ ಮಹಾ ಮಂಗಳಾರತಿ, ಅಲಂಕಾರ ಪೂಜೆ, ಚಂಡಿಕಾ ಹವನ ವಿಶೇಷ ಪೂಜೆಗಳು ನೇರವೇರಿದವು. ಈ ವೇಳೆ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್ ಆರ್ ಸಿಬ್ಬಂದಿಗಳು ಇದ್ದರು.